ಕಾರವಾರ ಸುತ್ತಮುತ್ತಲಿನ ಮಹಾಸತಿಕಲ್ಲು (ಮಾಸ್ತಿಕಲ್ಲು)ಗಳಲ್ಲೇ ಕುಂಬಾರವಾಡದಲ್ಲಿರುವ ವೀರಗಲ್ಲುಗಳು ನನಗೆ ವಿಶಿಷ್ಟವಾಗಿ ಕಂಡವು. ಇಲ್ಲಿರುವ ಉಬ್ಬು ಶಿಲ್ಪಗಳ ಕಲಾತ್ಮಕತೆ ಹಾಗೂ ಮಹಿಳೆಯ ಒಂದು ಕೈಯುಳ್ಳ ಕಲ್ಲುಗಳು ಬೇರೆಯಲ್ಲಿಯೂ ನನಗೆ ಕಂಡಿರಲಿಲ್ಲ. ಅವುಗಳು ಇದೇ ಏನೂ ಒಂದೆರಡು ವರುಷಗಳ ಹಿಂದೆಯೇ ರಚಿಸಿರುವ ಶಿಲ್ಪಗಳಂತೆ ಕಾಣುತ್ತವೆ. ಆದರೆ ಅಲ್ಲಿಯೇ ಪಕ್ಕದಲ್ಲಿರುವ ಮನೆಯೊಂದರಲ್ಲಿದ್ದ ತಾಯಿಯನ್ನು ನಾನು ವಿಚಾರಿಸಿದಾಗ; ಇವು ಅವಳು ಮದುವೆಯಾಗಿ ಬರುವ ಮುಂಚೆಯೇ ಇಲ್ಲಿ ಇದ್ದವು ಅಂದಳು. “ಆಯಿ,ನಿನ್ನ ವಯಸ್ಸೆಷ್ಟು” ಅಂತ ನಾನು ಕೇಳಿದೆ. ಆಯಿ ಮರದಲ್ಲಿರುವ ಹಲಸಿನ ಹಣ್ಣುಗಳನ್ನು ಕೋಲಿನಿಂದ ಕಿತ್ತು ನನಗೆ ಕೊಡುತ್ತಾ “ಎಪ್ಪತ್ತೈದು” ಅಂದಳು.
ಈ ಕಲ್ಲುಗಳ ಕುರಿತು ಇತಿಹಾಸಕರ ಹಾಗೂ ಲಿಪಿತಜ್ಞ ಅಂಕೋಲೆಯ ಶ್ಯಾಮಸುಂದರವರಲ್ಲಿ ವಿಚಾರಿಸಿದಾಗ, ಇವುಗಳು ಸುಮಾರು 500 ವರುಷಗಳ ಹಿಂದಿನ ವಿಜಯನಗರಕಾಲದ ಮಾಸ್ತಿಕಲ್ಲುಗಳಾಗಿರಬಹುದು ಹಾಗೂ ಬಳಪದ ಕಲ್ಲುಗಳಿಂದ ಮಾಡಲಾಗಿದೆ ಅಂತ ತಿಳಿಸಿದರು. ಆದ್ದರಿಂದಲೇ ಕುಂಬಾರವಾಡದಲ್ಲಿರುವ ಈ ಕಲ್ಲುಗಳು ಅತ್ಯುತ್ತಮ ಸ್ಥಿತಿಯಲ್ಲಿವೆ , ಅವುಗಳನ್ನು ಅಚ್ಚುಕಟ್ಟಾಗಿ ರಕ್ಷಿಸಿರುವ ಗ್ರಾಮದ ಜನತೆಯ ಕಾರ್ಯವು ಶ್ಲಾಘನೀಯ ಎಂದರು. ಅಲ್ಲದೆ ಬೇಲೂರು ಹಳೇಬೀಡಿನ ಶಿಲ್ಪಗಳನ್ನು ಬಳಪದ ಕಲ್ಲಿನಿಂದ ಮಾಡಿದ್ದರಿಂದ ಅಷ್ಟೊಂದು ಸುಂದರವಾಗಿ ಅಲ್ಲಿನ ಶಿಲ್ಪಗಳು ಕಾಣುತ್ತವೆ. ಕುಂಬಾರವಾಡದಲ್ಲಿರುವ ಐತಿಹಾಸಿಕವಾಗಿ ಅತ್ಯಂತ ಮಹತ್ವವುಳ್ಳ ವೀರಮಾಸ್ತಿ ಹಾಗೂ ಓಕ್ಕೈ ಮಾಸ್ತಿಕಲ್ಲುಗಳ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಬೇಕಿದೆ ಎನ್ನುವ ಅತ್ಯಂತ ಜರೂರಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಹಿತಿ: ಮಹಂತೇಶ್ ಒಶಿಮಟ್


Leave a Reply