ಉಮ್ಮಳ್ ಜೂಗ್ – ಒಂದು ಸುಂದರ ದ್ವೀಪ

Posted by

·

ಒಂದೆಡೆ ಮನೋಲ್ಲಾಸಗೊಳಿಸುವ ಕಡಲ ಅಲೆಗಳ ನೀನಾದ, ಇನ್ನೊಂದೆಡೆ ಕಣ್ಮನ ಸೆಳೆಯುವ ಸಹ್ಯಾದ್ರಿಯ ಸಾಲುಗಳ ಸರಮಾಲೆ, ಅದೆಷ್ಟೋ ಪ್ರೇಕ್ಷಣೀಯ ಸ್ಥಳಗಳ ನೆಲೆ ಬೀಡು, ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪ್ರವಾಸಿ ತಾಣಗಳು, ಯಾತ್ರಾ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡ.

ಪ್ರಕೃತಿ ಸೌಂದರ್ಯಕ್ಕೆ ಹೆಸರು ವಾಸಿಯಾಗಿರುವ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ದ್ವೀಪಗಳಿವೆ‌. ಸುತ್ತಲೂ ನೀರು ಒಂದೆಡೆ ನೆಲದಿಂದ ಕೂಡಿರುವ ಹಲವಾರು ಪ್ರದೇಶಗಳು ಇಲ್ಲಿ ಕಾಣಸಿಗುತ್ತವೆ. ಕೂರ್ವೆ ದ್ವೀಪ, ನೇತ್ರಾಣಿ ದ್ವೀಪ, ದೇವಗಡ, ಬಸವರಾಜ ದುರ್ಗ ಹೀಗೆ ಹಲವು ದ್ವೀಪಗಳನ್ನು ಇಲ್ಲಿ ಕಾಣಬಹುದು.

ಹೀಗೆ ಪ್ರಕೃತಿ ಸಹಜವಾಗಿ ರೂಪಗೊಂಡ ಅಷ್ಟಾಗಿ ಪ್ರಚಲಿತವಿಲ್ಲದ ಜನವಸತಿ ಇರುವ ದ್ವೀಪವೆಂದರೆ ಅದುವೇ *”ಉಮ್ಮಳ್ ಜೂಗ್”*. ಈ ಪ್ರದೇಶ ಕಾರವಾರದಿಂದ ಕೈಗಾ ಹೋಗುವ ಮಾರ್ಗಮಧ್ಯದಲ್ಲಿ ಕಾಣಸಿಗುತ್ತದೆ. ಉಮ್ಮಳ್ ಜೂಗ್ ಸುತ್ತಲೂ ಕಾಳಿ ನದಿಯಿಂದ ಆವೃತವಾಗಿರುವ ಒಂದು ಸುಂದರ ದ್ವೀಪ. ಕಿನ್ನರ ಎಂಬ ಊರಿನಿಂದ ಈ ದ್ವೀಪಕ್ಕೆ ಹೋಗಬಹುದು. ಇನ್ನುಳಿದಂತೆ ಈ ಪ್ರದೇಶದ ಜನರಿಗೆ ತಿಳಿದ ಕೇಲವು ಮಾರ್ಗದ ಮೂಲಕವು ದೋಣಿಯ ಸಹಾಯದಿಂದ ಹೋಗಬಹುದು. ಹಲವು ವರ್ಷದ ಹಿಂದೆ ಈ ದ್ವೀಪಕ್ಕೆ ನಾನು ಹೋದಾಗ ಕೇವಲ ದೋಣಿಯ ಮೂಲಕವೇ ಕಾಳಿನದಿ ದಾಟಿ ಹೋಗಬೇಕಾಗಿತ್ತು. ಆದರೆ ಈಗ ಅಲ್ಲಿಗೆ ಹೋಗಲು ಸೇತುವೆ ನಿರ್ಮಾಣ ಮಾಡಲಾಗಿದೆ. ಕೇವಲ ‌೧೫-೧೬ ಮನೆಗಳನ್ನು ಹೊಂದಿರುವ ಈ ಪುಟ್ಟ ದ್ವೀಪ ಮನಮೋಹಕ ತಾಣ. ಈ ದ್ವೀಪದಲ್ಲಿ ಬ್ರಹ್ಮ ದೇವರ ದೇವಾಲಯವಿದೆ. ಕೃಷಿ ಗಾಗಿ ಜಾನುವಾರುಗಳನ್ನು ಸಾಕಲಾಗಿದೆ. ಮೀನುಗಾರಿಕೆಯು ಇಲ್ಲಿನ ಒಂದು ಉದ್ಯೋಗವಾಗಿದೆ.

ಹಲವು ವರ್ಷಗಳ ಹಿಂದೆ ಇಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಒಂದು ದೋಣಿ ಇತ್ತು. ದೋಣಿಯ ಮೂಲಕವೇ ಜನರು ಸಂಚರಿಸಬೇಕಾಗಿತ್ತು. ಶಾಲಾ ಕಾಲೇಜು ಗಳಿಗೆ ತೆರಳಲು ದೋಣಿಯೇ ಆಧಾರವಾಗಿತ್ತು. ಕಾರವಾರದಲ್ಲಿ ಕಾಲೇಜಿಗೆ ಹೋಗುವ ಸಮಯದಲ್ಲಿ ನನ್ನ ಗೆಳತಿ ಈ ದ್ವೀಪದ ನಿವಾಸಿ ಸವಿತಾ ಕೊಳಂಬಕರ ದೋಣಿಯನ್ನು ಅವಳೇ ಸಾಗಿಸಿಕೊಂಡು ಬಂರುತ್ತಿದ್ದಳು. ಈ ಸುಂದರ ದ್ವೀಪಕ್ಕೆ ನನ್ನನ್ನು ಅವಳ ದೋಣಿಯಲ್ಲಿ ಕರೆದುಕೊಂಡು ಹೋಗಿದ್ದು ಇಂದಿಗೂ ಚಿರಸ್ಮರಣೀಯ. ಈ ದ್ವೀಪದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತ ಅವಕಾಶ ನೀಡಿದ ಹಾಗೂ ಈ ಸುಂದರ ಅಪರೂಪದ ದ್ವೀಪದ ಬಗ್ಗೆ ಮಾಹಿತಿ ನೀಡಿದ ಗೆಳತಿ‌ ಸವಿತಾಳಿಗೆ ಧನ್ಯವಾದಗಳು.

ಮಳೆಗಾಲದಲ್ಲಿ ನೀರಿನ ಏರಿಳಿತದ ಭಯವಿದ್ದರೂ ಅಲ್ಲಿಯೇ ನೆಲೆಕೈಗೊಂಡು ವಾಸವಿರುವ ಅಲ್ಲಿಯ ಜನರು ನಿಜಕ್ಕೂ ಸಾಹಸಿಗರೆ ಸರಿ. ಪ್ರತಿಯೊಬ್ಬರೂ ಈಜು ಬಲ್ಲವರಾಗಿದ್ದು, ದೋಣಿ ಚಾಲನೆ ಬಲ್ಲವರಾಗಿದ್ದಾರೆ. ಆದರೆ ಇತ್ತೀಚಿನ ‌ದಿನಗಳಲ್ಲಿ ಈ ದ್ವೀಪದಲ್ಲಿ ವಾಸಿಸುವವರ ಸಂಖ್ಯೆ ಇಳಿಮುಖವಾಗಿದೆ‌. ವಿದ್ಯಾಭ್ಯಾಸ, ಉದ್ಯೋಗ ಹೀಗೆ ನಾನಾ ಕಾರಣಗಳಿಂದ ಪಟ್ಟಣದತ್ತ ಇಂದಿನ ಪಿಳಿಗೆ ಮುಖ ಮಾಡಿದೆ.

ಅದೇನೆ ಇರಲಿ ಉತ್ತರ ಕನ್ನಡ ಜಿಲ್ಲೆಯ ಈ ಉಮ್ಮಳ್ ಜೂಗ್ ಎಂಬ ದ್ವೀಪ ನಿಸರ್ಗ ರೂಪಿಸಿದ ಸುಂದರ ದ್ವೀಪಗಳಲ್ಲಿ ಒಂದು. ನಿಸರ್ಗ ‌ಪ್ರೀಯರಿಗೆ ನೆಚ್ಚಿನ ತಾಣ. ಪ್ರಕೃತಿ ಮಡಿಲಿನ ಈ ಪುಟ್ಟ ದ್ವೀಪ ನಿಜಕ್ಕೂ ಒಂದು ಮನಮೋಹಕ ಸ್ಥಳ ವೆಂದರೆ ತಪ್ಪಾಗಲಾರದು.

✍🏻 ಅಕ್ಷತಾ ಜಗದೀಶ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading