ಕಡಲನಗರಿ ಕಾರವಾರದ ಜ್ಞಾನ ಮಂದಿರ, ಬೈತಖೋಲ್

Posted by

·

ನಯನ ಮನೋಹರ ಕಾಳಿ ಸಂಗಮ, ಸುಂದರ ಕಡಲ ಕಿನಾರೆಗಳು, ದ್ವೀಪಗಳು ಹಾಗೂ ಸಹ್ಯಾದ್ರಿ ಗಿರಿಶಿಖರಗಳಿಂದ ಆವ್ರತ ಕಾರವಾರದ ಪರಿಸರ ಸದಾ ಮನಸ್ಸುಗಳನ್ನು ಪುಳುಕಿತಗೊಳಿಸುವಂತದ್ದು. ರಾಷ್ಟ್ರಕವಿ ಟ್ಯಾಗೋರ್ ರವರ ಮನವನ್ನೂ ಅರಳಿಸಿದ ಕಾರವಾರದಲ್ಲಿ ನವನಾಥ ಪಂಥದ ಜ್ಞಾನ ಮಂದಿರ ಒಂದಿದೆ ಅನ್ನುವುದು ನನಗೆ ತಿಳಿದೇ ಇರಲಿಲ್ಲ. ಕರ್ನಾಟಕದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ವಿಶಿಷ್ಟ ಕೊಡುಗೆ ನೀಡಿರುವ ಅಂಕೋಲೆಗೆ ಹೋಗುವ ದಾರಿಯಲ್ಲಿ ಬೈತಖೋಲ್ ಬೆಟ್ಟದ ತಿರುವಿನಲ್ಲಿರುವ ಈ ಸ್ಥಳವನ್ನು ನೋಡುವ ಸದಾವಕಾಶ ನನಗೆ ಇತ್ತೀಚೆಗೆ ಒದಗಿ ಬಂದಿತ್ತು.

ಪ್ರಾಚೀನ ನಾಥ ಪಂಥದ ಆಧುನಿಕ ಪರಂಪರೆಯಾದ ನವನಾಥ ಪಂಥವನ್ನು ಶ್ರೀ. ಸದ್ಗುರು ಬಾವುಸಾಹೇಬ್ ಮಹಾರಾಜರ ಪರಮ ಶಿಷ್ಯರಾದ ಶ್ರೀ. ಸದ್ಗುರುನಾಥ ಸಿದ್ದರಾಮೇಶ್ವರ ಮಹಾರಾಜರು ಪ್ರಾರಂಭಿಸಿದೆರನ್ನಲಾಗಿದೆ. ಕೇವಲ 45 ನೆಯ ವಯಸ್ಸಿನಲ್ಲೇ ಸಮಾಧಿಸ್ತರಾದ ಸಿದ್ದರಾಮೇಶ್ವರರು “ಆತ್ಮವಿದ್ಯಾ” ಎನ್ನುವ ಸ್ವಜ್ಞಾನ ಧ್ಯಾನದ ಮಾರ್ಗವನ್ನು ಉಪದೇಶಿಸಿದ್ದರು. ಇವರು ಸಾಕ್ಷಾತ್ಕಾರಕ್ಕಾಗಿ ವೇಗದ ಮಾರ್ಗವಾದ “ಹಕ್ಕಿಗಳ ಪಥ”ವನ್ನು ಅನುಸರಿಸಿದ್ದರು ಎನ್ನುವ ಉಲ್ಲೇಖಗಳಿವೆ. “ನಿಮ್ಮ ಪರಿಕಲ್ಪನೆಯಂತೆ ನೀವು ನೋಡುತ್ತಿರಿ” ಎನ್ನುತ್ತಿದ್ದ ಸಿದ್ದರಾಮೇಶ್ವರರು ವಿಜಯಪುರದ ಇಂಚಗೇರಿಯಲ್ಲಿ ತಮ್ಮ ಜ್ಞಾನ ಮಂದಿರವನ್ನು ಹೊಂದಿದ್ದರು. ಸನ್. 1936 ರಲ್ಲಿ ಕಾಲವಾದ ಸಿದ್ದಾರಾಮೇಶ್ವರರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಶ್ರೀ. ಸದ್ಗುರು ಸಮರ್ಥ ರಣಛೋಡರಾಯ ಮಹಾರಾಜರು ಸನ್. 1945 ರಿಂದ 1978 ರವರೆಗೆ ಕಾರವಾರದಲ್ಲಿ ನೆಲೆಸಿದ್ದರು. ಗುರುಗಳಾಗುವ ಮುನ್ನ ವ್ಯಾಪಾರಿಯಾಗಿದ್ದ ರಣಛೋಡರಾಯರ ಸಮಾಧಿಯು ಬೈತಖೋಲದ ಶ್ರೀ. ಸದ್ಗುರುನಾಥ ಸಿದ್ದರಾಮೇಶ್ವರ ಮಹಾರಾಜರ ಜ್ಞಾನಮಂದಿರದಲ್ಲಿದೆ.

ಎರಡು ಗೋಪುರಗಳಿರುವ ಜ್ಞಾನಮಂದಿರದ ಆವರಣದಲ್ಲಿರುವ ರುದ್ರಾಕ್ಷಿ ಕಾಯಿ ಹಾಗೂ ಪಾರಿಜಾತ ಪುಷ್ಪದ ಮರಗಳು ಅತಿಥಿಗಳನ್ನು ಆವ್ಹಾನಿಸುತ್ತವೆ. ಒಂದು ಗೋಪುರದ ಮೇಲೆ ಅಪೂರ್ವ ಸಾಧಕರಾದ ಸಂತ ಜ್ಞಾನೇಶ್ವರ, ಸಂತ ನಾಮದೇವ, ಸಂತ ತುಕಾರಾಮ, ಸಂತ ರಾಮದಾಸ, ಸಂತ ಕಬೀರ, ಸಂತ ಮೀರಾಬಾಯಿ, ಶರಣ ಬಸವೇಶ್ವರ ಹಾಗೂ ಆದಿ ಶಂಕರಾಚಾರ್ಯರ ಸುಂದರ ಮೂರ್ತಿಗಳನ್ನು ಜೋಡಿಸಲಾಗಿದೆ. ಸಹ್ಯಾದ್ರಿಯ ಬೆಟ್ಟದಲ್ಲಿರುವ ಈ ಮಂದಿರದಲ್ಲಿ ಶ್ರೀರಾಮ ನವಮಿಯಂದು ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.

✍️ ಮಹಾಂತೇಶ, ಕೈಗಾ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading