ಗೋಕರ್ಣದಲ್ಲಿ ಹೋಳ್ಕರ್ ವಾಡಾ ಎಂಬ ಸ್ಥಳವಿದೆ ಇದರ ಒಳಗೆ ರೇವಳೇಶ್ವರ ಮಹಾದೇವನ ದೇವಸ್ಥಾನ ಮತ್ತು ಹಿಂದೆ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆ ಇದೆ. ಆವರಣವು ಹಣ್ಣಿನ ತೋಟ ಮತ್ತು ಗರೀಬ್ಖಾನವನ್ನು ಹೊಂದಿದೆ.

ಗೋಕರ್ಣದ ಹೋಳಕರ ವಾಡಾದಲ್ಲಿ ಮರಾಟರಲ್ಲಿ ರಾಜಪಾಲಿ (ಕುರುಬ ದೊರೆಗಳು) ಪಂಗಡಕ್ಕೆ ಸೇರಿದ ಇಂದೋರ್ ಸಂಸ್ಥಾನದ ಲಾಂಛನವು ಪ್ರವೇಶ ದ್ವಾರದ ಬಲಭಾಗದಲ್ಲಿದೆ (ಕುರುಬ-ಹಟ್ಟಿಕಾರರ ಲಾಂಛನಗಳಲ್ಲಿ ಟಗರು, ಎತ್ತುಗಳ ಚಿತ್ರವಿರುತ್ತದೆ).


ಶಾಂತಿ, ಸುವ್ಯವಸ್ಥೆಗೆ ಹೆಸರಾಗಿದ್ದ ಇಂದೋರ ರಾಣಿ ಅಹಲ್ಯಾಬಾಯಿ ಹೋಳ್ಕರ ಯುದ್ಧಗಳಲ್ಲಿ ಸೇನೆಯ ಮುಂದಾಳತ್ವವನ್ನು ಸ್ವತಃ ವಹಿಸುವ ಧೀರೆಯೆಂಬ ಹೆಸರು ಪಡೆದಿರುವಂತೆ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ, ಛತ್ರಗಳ ನಿರ್ಮಾತೃ, ಪರಮ ಭಕ್ತೆ ಎಂದೂ ಇತಿಹಾಸದಲ್ಲಿ ಸ್ಥಾನ ಪಡೆದ ಅಸಾಮಾನ್ಯ ಮಹಿಳೆ. ದ್ವಾರಕೆ, ಕಾಶಿ, ಉಜ್ಜಯನಿ, ಗಯೆ, ನಾಸಿಕ ಮುಂತಾದ ಅನೇಕ ಸ್ಥಳಗಳಲ್ಲಿ ಆಕೆ ಕಟ್ಟಿಸಿದ ಗುಡಿಗಳಿವೆ. ಗೋಕರ್ಣದ ರಥದ ಮನೆಯ ಬಳಿಯೇ ಇರುವ ಹೋಳ್ಕರವಾಡಾದ ರೇವಾಳೇಶ್ವರ ಮಂದಿರದಲ್ಲಿ ಶಿವಲಿಂಗದ ಹಿಂದೆ ಆಕೆಯ ಪ್ರತಿಮೆಯಿದೆ. ह्या बघा संयुक्ताताई यशवंतरावांसोबत ಎಂದು ಹೆಮ್ಮೆಯಿಂದ ಅಲ್ಲಿಯ ಉಸ್ತುವಾರಿಯವರು ಇಂದೋರ ಸಂಸ್ಥಾನದ ಕೊನೆಯ ದೊರೆ ಇಮ್ಮಡಿ ಯಶ್ವಂತರಾವ ಮತ್ತು ರಾಣಿ ಸಂಯೋಗಿತಾದೇವಿಯರ ಚಿತ್ರಪಟವನ್ನು ತೋರಿಸುತ್ತಾರೆ.

ಇವರಿಬ್ಬರೂ ಲಂಡನ್ನಿನಲ್ಲಿ ಉಚ್ಛ ಶಿಕ್ಷಣ ಪಡೆದವರು. ಅಗಸ್ಟ 11, 1947 ರಂದು ತನ್ನ ರಾಜ್ಯವನ್ನು ಸ್ವತಂತ್ರವಾಗಲಿರುವ ಭಾರತದಲ್ಲಿ ಲೀನಗೊಳಿಸುವ ಮುಚ್ಚಳಿಕೆ ಬರೆದುಕೊಟ್ಟದ್ದೇ ಅಲ್ಲದೆ ವಿಲೀನಕ್ಕೆ ಇತರ ಸಂಸ್ಥಾನಗಳ ಮನವೊಲಿಸಿದ ಮಹನೀಯ ಈತ. ಮಧ್ಯಭಾರತ ಹೆಸರಿನ ಈ ರಾಜ್ಯ ಮೇ 1948 ರಲ್ಲಿ ಭಾರತದೊಂದಿಗೆ ವಿಲೀನವಾಯಿತು. ಕೆಲಕಾಲ ಮಧ್ಯಭಾರತದ ರಾಜಪ್ರಮುಖರೆಂದು ನೇಮಕರಾಗಿದ್ದ ಇಮ್ಮಡಿ ಯಶ್ವಂತರಾವ್ ನಂತರ ವಿಶ್ವಸಂಸ್ಥೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಮಹಾರಾಷ್ಟ್ರ ಕಡೆಯಿಂದ ಬರುವ ಯಾತ್ರಿಕರು ಇಲ್ಲಿ ತಂಗುತ್ತಾರೆ. ಇಲ್ಲಿ ಭೇಟಿಯಿತ್ತರೆ ಅಪ್ಪಟ ಮರಾಟಿ ರುಚಿಯ साबूदाणा खिचडी (ಸಾಬಕ್ಕಿಯ ಖಿಚಡಿ) ಮೆಲ್ಲುವ ಯೋಗವೂ ಕೆಲವೊಮ್ಮೆ ಲಭಿಸುತ್ತದೆ.

✍️ ನಂದನ್ ಐಗಲ್, Facebook Group – ANKOLA – CULTURE HISTORY AND ECOLOGY


Leave a Reply