ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧
ಗ್ರಂಥಾಲಯ ಎಂಬ ಜ್ಞಾನದ ಆಲಯ
ಗೋಕರ್ಣದ ಅಪೂರ್ವ ಗ್ರಂಥಪಾಲಕ, ಜಿ. ಎಂ. ವೇದೇಶ್ವರ
ಸುಪ್ರಸಿದ್ಧ ಗ್ರಂಥಾಲಯ ವಿಜ್ಞಾನಿ ಮತ್ತು ಗಣಿತ ಶಾಸ್ತ್ರಜ್ಞ ಕನ್ನಡಿಗ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ, ಇನ್ನೋರ್ವ ಅದ್ಭುತ ಗ್ರಂಥಪಾಲಕ ಗೋಕರ್ಣದ ದಿವಂಗತ ಗಣಪತಿ ಮಂಜುನಾಥ ವೇದೇಶ್ವರ ಅವರನ್ನು ಕೂಡಾ ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದ ಈ ಮಹಾನುಭಾವರ ಅದ್ಭುತ ಸಾಧನೆಯ ವಿವರ ತಿಳಿದರೆ ನೀವು ದಂಗು ಬಡಿದು ಹೋಗುತ್ತೀರಿ!
ಹೌದು, ಇವರೇ ಗೋಕರ್ಣದ 76 ವರ್ಷ ಹಳೆಯದಾದ ‘ಗೋಕರ್ಣ ಸ್ಟಡಿ ಸರ್ಕಲ್ ಗ್ರಂಥಾಲಯ’ದ ಸ್ಥಾಪಕ ಜಿ.ಎಂ. ವೇದೇಶ್ವರ್. ತಮ್ಮ 18 ನೇ ವಯಸ್ಸಿನಲ್ಲಿ ಪುಸ್ತಕ ಓದುವ ಆಸಕ್ತಿಯಿಂದ 1948 ರಲ್ಲಿ ಆರಂಭಿಸಿದ ಈ ಏಕವ್ಯಕ್ತಿ ಸಾಹಸದ ಗ್ರಂಥಾಲಯದಲ್ಲಿ 38 ಭಾಷೆಗಳ 70 ಸಾವಿರಕ್ಕೂ ಅಧಿಕ ಪುಸ್ತಕಗಳು, ತಾಳೆಗರಿ ಗ್ರಂಥಗಳು, ಹಳೆಯ ಪೇಂಟಿಂಗ್ಸ್‌ಗಳು, ಅಪರೂಪದ ಸ್ಟಾಂಪುಗಳು ಮತ್ತು ನಾಣ್ಯಗಳಿವೆ!
ಹಾಗೆಂದು, ವೇದೇಶ್ವರ ಶ್ರೀಮಂತರೇನೂ ಇರಲಿಲ್ಲ. ಸ್ವತಃ ಕಲಾವಿದನಾಗಿ ಗಣಪತಿ ಮೂರ್ತಿ ಮಾಡಿ, ನಾಟಕಗಳಿಗೆ ವೇಷಭೂಷಣ ಸಿದ್ಧಪಡಿಸಿ, ಮದುವೆ ಮಂಟಪ ತಯಾರಿಸಿ ಬಂದ ಹಣದಲ್ಲೇ ಜೀವನ ಸಾಗಿಸುವುದರ ಜೊತೆಗೆ, ತಮ್ಮ ಪರಮ ಆಸಕ್ತಿಯಾದ ಗ್ರಂಥಾಲಯವನ್ನೂ ಕಟ್ಟಿದರು!
52 ವರ್ಷಗಳ ಕಾಲ ಗ್ರಂಥಾಲಯ ನಡೆಸಿದ ನಂತರ, ವೃದ್ಧಾಪ್ಯದ ಕಾರಣದಿಂದ ಇನ್ನು ನಡೆಸಲು ಸಾಧ್ಯವಿಲ್ಲವೆಂದು ಹತಾಶರಾಗಿದ್ದಾಗ, 2001 ರಲ್ಲಿ ಆಪದ್ಬಾಂಧವನಂತೇ ಬಂದವರು ಓರ್ವ ಫ್ರೆಂಚ್ ನಾಟಕ ನಿರ್ದೇಶಕರಾದ ಇಲಿಯಾಸ್ ಟೆಬೆಟ್ (Elias Tabet). ಪ್ರವಾಸಿಯಾಗಿ ಗೋಕರ್ಣ ನೋಡಲು ಬಂದ ಅವರು, ಅಪರೂಪದ ಗ್ರಂಥಗಳ ಬೃಹತ್ ಸಂಗ್ರಹದ ಈ ಗ್ರಂಥಾಲಯ ನೋಡಿ ಆಶ್ಚರ್ಯಚಕಿತರಾದರು. ತೀರಾ ಜೀರ್ಣಾವಸ್ಥೆಗೆ ತಲುಪಿದ್ದ ಗ್ರಂಥಾಲಯಕ್ಕೆ ಕಾಯಕಲ್ಪ ನೀಡುವ ಪಣ ತೊಟ್ಟರು.
ತಮ್ಮ ಪತ್ನಿ ಡಾಫ್ನ್ ಪಿಕೆಟ್ (Daphne Piquet) ಅವರ ಜೊತೆಗೂಡಿ, ಫ್ರೆಂಚ್ ಸರ್ಕಾರದ ನೆರವಿನೊಂದಿಗೆ ಪ್ಯಾರಿಸ್‌ನಲ್ಲಿ ಇದಕ್ಕಾಗಿ 45 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ, ವೇದೇಶ್ವರರ ‘ಗೋಕರ್ಣ ಸ್ಟಡಿ ಸರ್ಕಲ್’ ಗ್ರಂಥಾಲಯವನ್ನು ವಿಶಾಲವಾದ ಸುಸಜ್ಜಿತ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ನೆರವಾದರು! ನಂತರ ಗ್ರಂಥಾಲಯದ ಖ್ಯಾತಿ ಎಲ್ಲೆಡೆ ಹಬ್ಬಿತು. ದೇಶ ವಿದೇಶಗಳ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಯಿತು ಮತ್ತು ಬಿಬಿಸಿ (BBC) ಕೂಡ ಈ ಗ್ರಂಥಾಲಯದ ಕುರಿತು ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು.
ಬೇಂದ್ರೆ, ಕಾರಂತ, ಅಡಿಗ, ಅನಕೃ, ಮೊಕಾಶಿ, ಚಿತ್ತಾಲ, ತರಾಸು, ವೀ.ಸೀ, ಗೋಕಾಕ್, ಮಾಸ್ತಿ ಮುಂತಾದ ದಿಗ್ಗಜ ಸಾಹಿತಿಗಳು ಈ ಗ್ರಂಥಾಲಯ ನೋಡಲೆಂದೇ ಗೋಕರ್ಣಕ್ಕೆ ಬರುತ್ತಿದ್ದರಂತೆ. ಗೋಕರ್ಣದಲ್ಲೇ ಇದ್ದ ಗೌರೀಶ ಕಾಯ್ಕಿಣಿಯವರಂತೂ ಪ್ರತಿದಿನವೂ ಭೇಟಿ ನೀಡುತ್ತಿದ್ದರು.
ಗ್ರಂಥಾಲಯದ ಪುಸ್ತಕಗಳನ್ನೇ ತಮ್ಮ ಕರುಳಬಳ್ಳಿಗಳಂತೆ ನೋಡಿಕೊಳ್ಳುತ್ತಿದ್ದ ವೇದೇಶ್ವರರು, 85 ನೇ ವಯಸ್ಸಿನಲ್ಲಿಯೂ ದಿನಕ್ಕೆ 12 ತಾಸು ಈ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು ಎಂದರೆ ಅವರ ಅಗಾಧ ಪುಸ್ತಕ ಪ್ರೇಮದ ಅರಿವಾದೀತು!
ಇಂತಹ ಅದ್ಭುತ ಪುಸ್ತಕ ಪ್ರೇಮಿ ಕಟ್ಟಿ ಬೆಳೆಸಿದ ಅಪರೂಪದ ಗ್ರಂಥಲೋಕವನ್ನು ಗೋಕರ್ಣಕ್ಕೆ ಹೋಗುವವರು ಒಮ್ಮೆಯಾದರೂ ನೋಡಿಬನ್ನಿ.
ಅಪರೂಪದ ಗ್ರಂಥಲೋಕ ಕಟ್ಟಿದ ವೇದೇಶ್ವರ ಅವರಿಗೆ ಗೌರವಪೂರ್ವಕ ನಮನಗಳು.
ಗೋಕರ್ಣದಲ್ಲಿರುವ ವೇದೇಶ್ವರರ ಮೂಲ ಗ್ರಂಥಾಲಯ (ಗೋಕರ್ಣ ಸ್ಟಡಿ ಸರ್ಕಲ್):












ಇಲಿಯಾಸ್ ಟೆಬೆಟ್ ಅವರಿಂದ ಹೊಸ ರೂಪ ಪಡೆದ ಗೋಕರ್ಣ ಸ್ಟಡಿ ಸರ್ಕಲ್:














✍️ ಗಿರಿಧರ ಕಾರ್ಕಳ


Leave a Reply