“ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ಜಿಷ್ಣುನುತೆ, ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ” ಎಂಬ ಹಾಡು ದೇವಿಯ ಮಹತ್ವವನ್ನೂ ಹಾಗೂ ದೇವಿ ಧರಿಸುವ ಒಂಬತ್ತು ರೂಪಗಳು ವಿಶ್ವಕ್ಕೆ ತಾಯಿಯಾದ ಮಾತೆಯ ಮಹಿಮೆಯನ್ನೂ ಅರಿತುಕೊಳ್ಳುವಂತೆ ಮಾಡುತ್ತದೆ. ಒಂಬತ್ತು ದಿನಗಳ ಕಾಲ ದೇವಿಗೆ ಅಲಂಕಾರ ಮಾಡಿ, ಒಂಭತ್ತು ರೂಪಗಳಲ್ಲಿ ದೇವಿಯನ್ನು ಪೂಜಿಸುವ ವಿಧಾನವನ್ನೇ ನವರಾತ್ರಿ ಎಂದು ಕರೆಯುತ್ತಾರೆ. ದೇಶ-ವಿದೇಶಗಳಲ್ಲಿ ವಿವಿಧ ರೂಪಗಳಲ್ಲಿ ಪೂಜಿಸಲ್ಪಡುವ ದುರ್ಗಾಮಾತೆಗೆ, ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾಕಾರ್ಯಗಳು ನೆರವೇರುತ್ತವೆ.
ಈ ನವರಾತ್ರಿಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ದೇವಿ ಮಂದಿರಗಳನ್ನೊಮ್ಮೆ ಭಕ್ತಿಯಿಂದ ಸ್ಮರಿಸೋಣ.
೧. ಶ್ರೀ ಮಾರಿಕಾಂಬಾ ದೇವಾಲಯ, ಶಿರಸಿ.


ಮಲೆನಾಡಿನ ಸೊಬಗನ್ನು ತನ್ನೊಳಗೆ ಸಿಂಗರಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಶ್ರೀ ಮಾರಿಕಾಂಬಾ ದೇವಾಲಯದಿಂದ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಶ್ರೀ ಮಾರಿಕಾಂಬಾ ದೇವಾಲಯವು ಒಂದಾಗಿದ್ದು, ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಪ್ರವೇಶದ್ವಾರದಲ್ಲಿ ದೊಡ್ಡದಾದ ಎರಡು ಆನೆಗಳ ಶಿಲ್ಪಗಳಿದ್ದು, ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ವಿಶಾಲವಾದ ಸಭಾಭವನವು ಗೋಚರಿಸುತ್ತದೆ. ಮುಂದೆ ಸಾಗಿದಾಗ ದೇವಿಯು ಆಸೀನರಾಗಿರುವ ಗರ್ಭಗುಡಿಯು ಕಾಣುತ್ತದೆ.
ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ೧೬೮೮ರಲ್ಲಿ ನಿರ್ಮಿಸಲಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಬಹಳ ವಿಜೃಂಭಣೆಯಿಂದ ದೇವಿಯ ಜಾತ್ರಾ ಉತ್ಸವವು ಜರುಗುತ್ತದೆ. ಇದು ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾತ್ರೆ ಆಗಿದ್ದು, ಒಂಬತ್ತು ದಿನಗಳ ಕಾಲ ನಡೆಯುತ್ತದೆ.. ದೇಶದ ವಿವಿಧ ಪ್ರದೇಶಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ. ಈ ದೇಗುಲಕ್ಕೆ “ದೊಡ್ಡಮ್ಮನ ದೇವಸ್ಥಾನ” ಎಂದು ಸಹ ಕರೆಯುತ್ತಾರೆ.
ದೇವಾಲಯದ ಗೋಡೆಯ ಮೇಲೆ ಸುಂದರವಾದ ವರ್ಣಚಿತ್ರಗಳಿದ್ದು, ರಾಮಾಯಣ ಮತ್ತು ಮಹಾಭಾರತದ ಘಟನೆಗಳನ್ನು ವರ್ಣಿಸುವ ಚಿತ್ರಗಳು ಸಹ ಇವೆ. ದಸರಾ ಸಮಯದಲ್ಲಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆಗಳು ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಜರುಗುತ್ತವೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಾರಿಕಾಂಬಾ ದೇವಿಗೆ ಅನಂತ ಕೋಟಿ ನಮನಗಳು.
೨. ಗ್ರಾಮ ದೇವಿ ದೇವಸ್ಥಾನ, ಯಲ್ಲಾಪುರ.


ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಪ್ರಕೃತಿ ಸೌಂದರ್ಯದ ತವರೂರು. ಇಲ್ಲಿರುವ ಗ್ರಾಮ ದೇವಿ ದೇವಸ್ಥಾನವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು ೬೦೦ ವರ್ಷಗಳ ಹಿಂದೆ, ಯಲ್ಲಾಪುರ ತಾಲೂಕಿನ ನಾರಾಯಣಗೆರೆ ಗ್ರಾಮದಲ್ಲಿ ಹೊಲ ಉಳುಮೆ ಮಾಡುತ್ತಿರುವ ಸಂದರ್ಭದಲ್ಲಿ, ಒಬ್ಬ ರೈತರಿಗೆ ಎರಡು ಪ್ರತಿಮೆಗಳು ಸಿಕ್ಕವು. ಅವುಗಳನ್ನು ತಂದು ಕಾಳಮ್ಮ ಮತ್ತು ದುರ್ಗಮ್ಮ ಎಂಬ ಹೆಸರಿನೊಂದಿಗೆ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಕಾಲಾಂತರದಲ್ಲಿ ಈ ಇಬ್ಬರು ದೇವಿಯರು ಗ್ರಾಮದೇವತೆಯಾಗಿ ಒಂದೇ ಸ್ಥಳದಲ್ಲಿ ಪೂಜಿಸಲ್ಪಡುತ್ತಿದ್ದಾರೆ.
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಈ ಗ್ರಾಮದೇವಿಯರ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಜರುಗುತ್ತದೆ. ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಈ ಉತ್ಸವವು ಒಂಭತ್ತು ದಿನಗಳ ಕಾಲ ನಡೆಯುತ್ತದೆ.
ಈ ಜಾತ್ರೆಯ ಪ್ರಮುಖ ಆಚರಣೆಗಳಲ್ಲಿ ಹೊರ ಮಂಗಳವಾರ, ದೇವಿಯರ ಲಗ್ನ, ಅನ್ನಬಲಿಯ ಬೇಲಿ, ಮತ್ತು ಕಾಳರಾತ್ರಿಯಲ್ಲಿ ಉತ್ಸವದ ವಿಸರ್ಜನೆ ಮೊದಲಾದವು ಜರುಗುತ್ತವೆ. ಹೊರ ಮಂಗಳವಾರದಂದು ದೇವಿಯರು ಭಕ್ತರ ಮನೆಗೆ ಬಂದು ಹೋಗುವರು ಎಂಬ ನಂಬಿಕೆ ಇರುವುದರಿಂದ, ಆ ದಿನ ತಾಲ್ಲೂಕಿನ ಜನ ತಮ್ಮ ಮನೆಯ ದೇವರ ಮುಂದೆ ದೀಪ ಹಚ್ಚಿ, ನೈವೇದ್ಯ ಇಟ್ಟು ಊರಾಚೆ ಬಂದು ಕಾಲ ಕಳೆಯುವುದೇ ವಿಶೇಷ.
ದಸರಾ ಸಂದರ್ಭದಲ್ಲಿ ಒಂಭತ್ತು ದಿನವೂ ವಿಶೇಷ ಪೂಜಾಕಾರ್ಯಗಳು ಜರುಗುತ್ತವೆ. ಈ ಸಂದರ್ಭದಲ್ಲಿ ಸರ್ವಾಲಂಕಾರ ಭೂಷಿತೆಯಾದ ದೇವಿಯರನ್ನು ನೋಡುವುದೇ ಒಂದು ಸಡಗರ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಯಲ್ಲಾಪುರದ ಗ್ರಾಮದೇವಿಗೆ ಕೋಟಿ ಕೋಟಿ ನಮನಗಳು.
೩. ಶ್ರೀ ಮಹಾಲಸಾ ನಾರಾಯಣಿ ದೇವಾಲಯ, ಕುಮಟಾ.


ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಅನೇಕ ಪುರಾತನ ಮಂದಿರಗಳಿದ್ದು, ಅವುಗಳಲ್ಲಿ ಶ್ರೀ ಮಹಾಲಸಾ ನಾರಾಯಣಿ ಮಂದಿರವೂ ಸಹ ಒಂದಾಗಿದೆ. ಈ ದೇವಾಲಯವು ೧೫೬೫ರಲ್ಲಿ ನಿರ್ಮಾಣಗೊಂಡಿದ್ದು, ದೇವಾಲಯದಲ್ಲಿನ ಪಂಚಲೋಹದ ವಿಗ್ರಹವು ಹಿಂದೂ ಧರ್ಮದ ಪ್ರಾಚೀನ ವೈಭವವನ್ನು ನೆನಪಿಸುವಂತಿದೆ. ಶ್ರೀ ನಾರಾಯಣಿ ದೇವಿಯ ಉತ್ಸವ ಕವಚವು ಮನೋಹರವಾಗಿದ್ದು, ಶ್ರೀ ದೇವಿಯ ದರ್ಶನ ಮಾತ್ರದಿಂದಲೇ ಭಕ್ತರು ಮೈಮರೆತು ಅಲ್ಲಿಯೇ ಧ್ಯಾನಸ್ಥರಾಗುವರು.
ಭಕ್ತರ ಅಭಿಲಾಷೆ, ಇಷ್ಟಾರ್ಥಗಳನ್ನು ಪೂರೈಸುವ ಶ್ರೀ ಮಹಾಲಸಾ ನಾರಾಯಣಿ ದೇವಿಯ ಪಲ್ಲಕ್ಕಿ ಉತ್ಸವವು ಪ್ರತಿ ತಿಂಗಳು ಅಮಾವಾಸ್ಯೆಯ ನಂತರ ಬರುವ ಪ್ರಥಮ ರವಿವಾರದಂದು ನಡೆಯುತ್ತದೆ. ಆದರೆ, ಚಾತುರ್ಮಾಸದ ಸಮಯದಲ್ಲಿ ಈ ಉತ್ಸವವು ಇರುವುದಿಲ್ಲ. ಪ್ರತಿ ರವಿವಾರ ಹೊರ ಊರಿನಿಂದ ಬರುವ ಭಕ್ತಾದಿಗಳಿಗೆ ಮಧ್ಯಾಹ್ನದ ಅವಧಿಯಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ.
ಎಲ್ಲರನ್ನೂ ಸಲಹುವ ತಾಯಿ ಶ್ರೀ ಮಹಾಲಸಾ ನಾರಾಯಣಿ ದೇವಿಗೆ ಶಿರ ಸಾಷ್ಟಾಂಗ ನಮನಗಳು.
೪. ಭದ್ರಕಾಳಿ ದೇವಸ್ಥಾನ, ಗೋಕರ್ಣ.


ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಗೋಕರ್ಣ ಪಟ್ಟಣವು ಹಲವು ಪ್ರಾಚೀನ ದೇವಾಲಯಗಳ ನೆಲೆಬೀಡಾಗಿದೆ. ಪುರಾಣ ಪ್ರಸಿದ್ಧವಾದ ಹಲವಾರು ದೇವಾಲಯಗಳು ಗೋಕರ್ಣದಲ್ಲಿವೆ. ಗೋಕರ್ಣದ ರಕ್ಷಾ ದೇವತೆ ಎಂದೇ ಕರೆಯಲ್ಪಡುವ ಭದ್ರಕಾಳಿ ದೇಗುಲವು ಗೋಕರ್ಣ ಪಟ್ಟಣದಿಂದ ಒಂದು ಕಿಲೋಮೀಟರ್ ಅಂತರದಲ್ಲಿದೆ. ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಈ ದೇವಾಲಯವು ಮಹಾಬಲೇಶ್ವರ ದೇವಾಲಯದ ಸಂಕೀರ್ಣದ ಭಾಗವಾಗಿದೆ.
ಪುರಾಣಗಳ ಪ್ರಕಾರ, ಈಶ್ವರನ ಪತ್ನಿ ಉಮೆಯನ್ನು ರಾವಣನು ಇಲ್ಲಿ ತ್ಯಜಿಸಿ ಹೋದಾಗ, ವಿಷ್ಣುವು ಆಕೆಗೆ ಗೋಕರ್ಣದಲ್ಲಿ ಉಳಿದುಕೊಳ್ಳುವಂತೆ ಹೇಳುತ್ತಾನೆ ಎಂದು ಹೇಳಲಾಗುತ್ತದೆ. ದೇವತೆ ಉಮೆಗೆ ಮೀಸಲಾಗಿರುವ ಈ ಭದ್ರಕಾಳಿ ದೇವಾಲಯವು ಜನಪ್ರಿಯ ಯಾತ್ರಾ ಆಕರ್ಷಣೆಯಾಗಿದ್ದು, ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ತಾಯಿ ಉಮೆಯನ್ನು ಭದ್ರಕಾಳಿ ದೇವಿಯ ರೂಪದಲ್ಲಿ ಪೂಜಿಸುವರು.
ಗೋಕರ್ಣಕ್ಕೆ ಭೇಟಿ ನೀಡಿದಾಗ ಜಗತ್ತನ್ನೇ ಸಲಹುವ ತಾಯಿ ಭದ್ರಕಾಳಿ ದೇವಿಯ ದರ್ಶನ ಪಡೆಯಲು ಮರೆಯದಿರಿ.
೫. ಶಾಂತಾ ದುರ್ಗಾ ದೇವಸ್ಥಾನ, ಅಂಕೋಲಾ.


ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕು ಹಲವು ದೇವಾಲಯಗಳನ್ನು ಹೊಂದಿದೆ. ಅವುಗಳಲ್ಲಿ ಶಾಂತಾದುರ್ಗಾ ದೇವಾಲಯವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಾಂತಾದುರ್ಗಾ ದೇವಿಯನ್ನು ಸ್ಥಳೀಯವಾಗಿ ಭೂಮಿತಾಯಿ (ಭೂತಾಯಿ) ಎಂದು ಕರೆಯಲಾಗುತ್ತದೆ.
ಬೇಸಿಗೆ ಸಮಯದಲ್ಲಿ ಈ ದೇಗುಲದಲ್ಲಿ ನಡೆಯುವ ಬಂಡಿಹಬ್ಬವು ಹೆಸರುವಾಸಿಯಾಗಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಹರಕೆಯನ್ನು ತೀರಿಸಿ ಧನ್ಯರಾಗುತ್ತಾರೆ. ಕಾರ್ತಿಕೋತ್ಸವದ ಸಂದರ್ಭದಲ್ಲಿ ದೇವಿಯ ಭವ್ಯ ಮೆರವಣಿಗೆಯು ನಡೆಯುತ್ತದೆ. ವಿವಿಧ ಮೂಲೆಗಳಿಂದ ಭಕ್ತಾದಿಗಳು ಬಂದು ಶ್ರೀ ದೇವಿಯ ಕೃಪೆಗೆ ಪಾತ್ರರಾಗುವರು.
ತನ್ನ ನಂಬಿದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಪರಿಪಾಲಿಸುತ್ತಿರುವ ಶ್ರೀ ಶಾಂತಾದುರ್ಗಾ ದೇವಿಗೆ ಕೋಟಿ ನಮನಗಳು.

೬. ದುರ್ಗಾದೇವಿ ದೇವಸ್ಥಾನ, ಸದಾಶಿವಗಡ, ಕಾರವಾರ.


ನವರಾತ್ರಿಯ ಸಂದರ್ಭದಲ್ಲಿ ಸದಾಶಿವಗಡದ ದುರ್ಗಾದೇವಿ ಮಂದಿರದಲ್ಲಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಗಳು ನಡೆಯುತ್ತವೆ. ಶಿವಾಜಿ ಮಹಾರಾಜರಿಗೆ ಕೃಪಾಶೀರ್ವಾದ ನೀಡಿದ ತುಳಜಾ ಭವಾನಿಯೇ ಕಾರವಾರ ತಾಲ್ಲೂಕಿನ ಸದಾಶಿವಗಡ ಕೋಟೆಯಲ್ಲಿ ದುರ್ಗಾದೇವಿಯಾಗಿ ನೆಲೆಸಿದ್ದಾಳೆ.
ಕೋಟೆಯ ಜೊತೆಗೆ ದುರ್ಗಾದೇವಿ ದೇವಾಲಯ ಕೂಡ ಜನಪ್ರಿಯವಾಗಿದೆ. ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಶಿವಾಜಿ ಮಹಾರಾಜರು ತಮ್ಮ ರಾಜ್ಯದ ಗಡಿ ರಕ್ಷಣೆಗೋಸ್ಕರ ಈ ಕೋಟೆಯನ್ನು ಭದ್ರವಾಗಿ ಕಟ್ಟಲು ಎರಡು ಬಾರಿ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಕೋಟೆಯ ಆವರಣದೊಳಗೆ ದುರ್ಗಾದೇವಿಯು ಸಣ್ಣ ಗುಡಿಯಲ್ಲಿ ನೆಲೆಸಿದ್ದಳು. ದೇವಿಯ ಭಕ್ತರಾಗಿದ್ದ ಶಿವಾಜಿ ಮಹಾರಾಜರು ಈ ಗುಡಿಯನ್ನು ಜೀರ್ಣೋದ್ಧಾರಗೊಳಿಸಿ, ಮಂದಿರವನ್ನು ಕಟ್ಟಿಸಿದರೆಂಬ ಉಲ್ಲೇಖವಿದೆ.
ದೇವಿಯ ಸನ್ನಿಧಾನದಲ್ಲಿ ದಸರಾ ಸಂದರ್ಭದಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ತುಲಾಭಾರ, ದೇವಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯುತ್ತವೆ. ಮಾತೆಯ ಮೆರವಣಿಗೆ ಕೂಡ ಜರುಗುತ್ತದೆ. ಈ ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರು ದುರ್ಗಾದೇವಿಯ ದರ್ಶನ ಪಡೆಯದೇ ಹೋಗುವುದಿಲ್ಲ.
೭. ಆರ್ಯದುರ್ಗಾ ದೇವಸ್ಥಾನ, ಅಂಕೋಲಾ.


ಆರ್ಯದುರ್ಗಾ ದೇವಸ್ಥಾನವು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಒಂದು ಕಿಲೋಮೀಟರ್ ದೂರದಲ್ಲಿ, ದಕ್ಷಿಣ ದಿಕ್ಕಿನಲ್ಲಿರುವ ವಂದಿಗೆ ಗ್ರಾಮದ ಹನುಮಟ್ಟೆಯಲ್ಲಿದೆ. ಇದು ಸುಮಾರು ೩೦೦ ವರ್ಷಗಳ ಹಿಂದೆ ಸಂತರಿಂದ ಸ್ಥಾಪಿಸಲ್ಪಟ್ಟ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಈ ದೇವಾಲಯವನ್ನು ನವೀಕರಿಸಲಾಗಿದೆ.
ಗೋವಾ, ಮಹಾರಾಷ್ಟ್ರ, ಗುಜರಾತ್ ಹಾಗೂ ಇನ್ನಿತರ ಅನೇಕ ಕಡೆಗಳಿಂದ ಅಪಾರ ಪ್ರಮಾಣದ ಭಕ್ತಾದಿಗಳನ್ನು ಹೊಂದಿರುವ ಈ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ ದೇವತೆಯಾಗಿದ್ದಾಳೆ. ಹರಕೆಯನ್ನು ಹೊತ್ತ ಭಕ್ತರು ಇಲ್ಲಿಗೆ ಬಂದು ಕಾಣಿಕೆಯನ್ನು ಸಲ್ಲಿಸುತ್ತಾರೆ.
೮. ಕಾತ್ಯಾಯಿನಿ ಬಾಣೇಶ್ವರ ದೇವಾಲಯ, ಅವರ್ಸಾ.


ಅಂಕೋಲಾ ತಾಲ್ಲೂಕಿನಿಂದ ೧೬ ಕಿಲೋಮೀಟರ್ ಅಂತರದಲ್ಲಿರುವ ಅವರ್ಸಾ, ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಪಡೆದ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಪುರಾತನ ಕಾತ್ಯಾಯಿನಿ-ಬಾಣೇಶ್ವರ ದೇವಿಯ ಭವ್ಯ ಮಂದಿರವಿದೆ.
ಈ ದೇವಾಲಯದ ಪದ್ಧತಿಯ ಪ್ರಕಾರ, ಪೂಜೆಯನ್ನು ಮೊದಲು ಶ್ರೀ ಕಾತ್ಯಾಯಿನಿ ದೇವಿಗೆ, ನಂತರ ಶ್ರೀ ಬಾಣೇಶ್ವರನಿಗೆ, ತದನಂತರ ಶ್ರೀ ಗಣಪತಿಗೆ ನಡೆಸಲಾಗುತ್ತದೆ. ಶ್ರೀ ಗ್ರಾಮ ಪುರುಷ, ಶ್ರೀ ರಾಮ ಪುರುಷ, ಶ್ರೀ ನಿರಾಕರ, ಶ್ರೀ ಕಾಲ ಭೈರವ ಮತ್ತು ಶ್ರೀ ದಾದ್ ಇಲ್ಲಿಯ ಇತರೆ ಆರಾಧ್ಯ ದೈವಗಳು. ಶ್ರೀ ಗಣಪತಿಯ ವಿಗ್ರಹವು ಶ್ರೀ ಬಾಣೇಶ್ವರ ದೇಗುಲದ ಪ್ರವೇಶ ದ್ವಾರದಲ್ಲಿದೆ.
ಹಡಗಿನ ಸಂರಕ್ಷಣೆಯ ಕಥೆಯಿಂದ ನಿರ್ಮಾಣಗೊಂಡ ದೇವಾಲಯ ಇದಾಗಿರುವುದರಿಂದ, ಗುಡಿಯ ಛಾವಣಿಯು ಹಡಗಿನಂತೆ ಕಂಡುಬರುತ್ತದೆ. ದೇವಿಯ ಮೂರ್ತಿಯನ್ನು ಗೋವಾದಿಂದ ತಂದು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಆದುದರಿಂದ ಇಲ್ಲಿಯ ಪೂಜಾ ವಿಧಾನಗಳು ಗೋವಾದಲ್ಲಿರುವ ಆಚರಣೆಗಳಂತೆಯೇ ಕಂಡುಬರುತ್ತದೆ.
೯. ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಸ್ಥಾನ , ಅಂಕೋಲಾ.


ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹನುಮಟ್ಟೆಯಲ್ಲಿ ಸುಂದರವಾದ ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯಾ ದೇವಸ್ಥಾನವನ್ನು ಕಾಣಬಹುದು. ಈ ದೇಗುಲದ ಚಿನ್ನದ ವಿಗ್ರಹವನ್ನು ಹತ್ತು ಹದಿನೈದು ವರ್ಷಗಳಿಗೊಮ್ಮೆ ಪೂಜೆಗೆ ತೆಗೆಯಲಾಗುತ್ತದೆ.
೧೫೧೦ರಲ್ಲಿ ಜಿ.ಎಸ್.ಬಿ. (ಗೌಡ ಸಾರಸ್ವತ ಬ್ರಾಹ್ಮಣ) ಬ್ರಾಹ್ಮಣರು ಗೋವಾದಿಂದ ಅಂಕೋಲಾಕ್ಕೆ ಬಂದು ನೆಲೆಸುವಾಗ, ತಮ್ಮೊಂದಿಗೆ ತಮ್ಮ ಕುಲದೇವರನ್ನು ಕರೆತಂದು ಇಲ್ಲಿ ಸ್ಥಾಪಿಸಿದರು ಎನ್ನಲಾಗುತ್ತದೆ. ದೇವಾಲಯದ ಪುನರ್ ಪ್ರತಿಷ್ಠಾಪನೆಯು ೧೯೭೫ರಲ್ಲಿ ನಡೆಯಿತು.
ಈ ದೇವಾಲಯಕ್ಕೆ ತನ್ನದೇ ಆದ ಕಥೆಯಿದೆ. ಅದರ ಪ್ರಕಾರ, ಗೋವಾದಲ್ಲಿದ್ದ ಹಿಂದೂ ದೇವಾಲಯಗಳನ್ನು ಹಾಗೂ ಹಿಂದೂ ಧರ್ಮವನ್ನು ಪೋರ್ಚುಗೀಸರು ನಾಶಪಡಿಸಲು ಆರಂಭಿಸಿದಾಗ, ಈ ಕಿರುಕುಳ ತಾಳಲಾರದೆ ಅನೇಕ ಹಿಂದೂ ಕುಟುಂಬಗಳು ವಲಸೆ ಹೋದವು. ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯೆಯ ಭಕ್ತರು ಕೂಡ ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ನಾಗ್ವೆಯಿಂದ ಶ್ರೀ ಲಕ್ಷ್ಮೀ ನಾರಾಯಣನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅವರಿಗೆ ಸುಲಭವಾಗಿತ್ತು. ಆದರೆ, ಮಹಾಮಾಯೆಯು ರೋಹಿಣಿಯ ರೂಪದಲ್ಲಿ ವ್ಯಕ್ತವಾಗಿದ್ದರಿಂದ, ಭಕ್ತರಿಗೆ ಗೋವಾದಿಂದ ಆಕೆಯನ್ನು ಕರೆದುಕೊಂಡು ಹೋಗಲು ಸಮಸ್ಯೆ ಉಂಟಾಯಿತು. ಆದರೆ, ಮಹಾಮಾಯೆಯು ತಾನು ಅವರೊಂದಿಗೆ ತೆಂಗಿನಕಾಯಿ ರೂಪದಲ್ಲಿ ಹೋಗುವುದಾಗಿ ಭರವಸೆ ನೀಡಿದರು. ಹೀಗಾಗಿ, ಭಕ್ತರು ೧೫೧೦ರಲ್ಲಿ ತೆಂಗಿನಕಾಯಿ ಮತ್ತು ಶ್ರೀ ಲಕ್ಷ್ಮೀ ನಾರಾಯಣರ ವಿಗ್ರಹದೊಂದಿಗೆ ಗೋವಾ ತೊರೆದು ಹನುಮಟ್ಟ ಪ್ರದೇಶಕ್ಕೆ ಬಂದು ನೆಲೆಸಿದರು. ಈ ರೀತಿ ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯಾ ದೇವರು ಇಲ್ಲಿಯೇ ಶಾಶ್ವತವಾಗಿ ನೆಲೆನಿಂತರು.

ಹೀಗೆ ಹಿಂದೂ ಧರ್ಮದಲ್ಲಿ ದುರ್ಗಾದೇವಿಯ ಒಂಭತ್ತು ಅಭಿವ್ಯಕ್ತಿಗಳು ವಿಶೇಷವಾಗಿ ನವರಾತ್ರಿ ಹಬ್ಬದ ಸಮಯದಲ್ಲಿ ಪೂಜಿಸಲ್ಪಡುತ್ತವೆ. ದುರ್ಗೆಯ ಪ್ರತಿಯೊಂದು ಅಭಿವ್ಯಕ್ತಿಯನ್ನು ಆಯಾ ಹೆಸರು, ಆಹ್ವಾನಕ್ಕಾಗಿ ಮಂತ್ರ, ನವರಾತ್ರಿಯಂದು ಅರ್ಪಣೆ ಮಾಡುವ ದಿನ ಮತ್ತು ಆಯಾ ಪ್ರಾರ್ಥನೆಗಳಿಂದ ಕರೆಯಲಾಗುತ್ತದೆ. ದುರ್ಗೆಯ ಅವತಾರವಾದ ನವದುರ್ಗೆಯರು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ.
ಮಾಹಿತಿ ಸಂಗ್ರಹಣೆ ಮತ್ತು ರಚನೆ: ಅಕ್ಷತಾ ಜಗದೀಶ್ (ಸಮಯಾ)


Leave a Reply