ಅಪರೂಪದ “ಆಲಿವ್ ರಿಡ್ಲೆ” ಕಡಲಾಮೆಗಳು ಭಾರತದ ಪೂರ್ವ ಕರಾವಳಿಯ ಒರಿಸ್ಸಾದ ಕಡಲತೀರದಲ್ಲಿ ಹಗಲಿನ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದರೆ ಡಿಸೆಂಬರ್ ನಿಂದ ಪಶ್ಚಿಮ ಕರಾವಳಿಯಲ್ಲಿ ರಾತ್ರಿ ಸಮಯದಲ್ಲಿ ಮೊಟ್ಟೆ ಇಡುತ್ತಿದ್ದ ಕಡಲಾಮೆಗಳು ಇತ್ತೀಚಿಗೆ ಹಗಲಿನಲ್ಲಿ ಮೊಟ್ಟೆಗಳನ್ನು ಇಡಲು ಪಶ್ಚಿಮ ಕರಾವಳಿ ತೀರಗಳಿಗೆ ಬರುತ್ತಲಿವೆ. ಈ ಕಡಲಾಮೆಗಳು ಪಶ್ಚಿಮ ಕರಾವಳಿ ತೀರದಲ್ಲಿ ಮೊಟ್ಟೆ ಇಡುವ ಸಾಂಪ್ರದಾಯಿಕ ಸಮಯ ಬದಲಾಯಿಸಿದ್ದು, ಪ್ರಸ್ತುತ ಹಗಲಿನ ವೇಳೆ ಸಹ ಮೊಟ್ಟೆ ಇಡುತ್ತಿರುವುದು ಕುತೂಹಲವನ್ನು ಮೂಡಿಸಿದೆ.

ಸುಮಾರು ೧೪೦ ಕಿ.ಮೀ. ವಿಸ್ತಾರ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳ ಸಂತಾನೋತ್ಪತ್ತಿ ಸ್ಥಳವಾಗಿದೆ. ಜಿಲ್ಲೆಯ ಕಾರವಾರದ ದೇವಭಾಗ, ಅಂಕೋಲಾದ ಕೇಣಿ, ಹೊನ್ನಾವರದ ಕಾಸರಗೋಡು, ಟೊಂಕಾ ಹೀಗೆ ಹಲವು ಭಾಗಗಳಲ್ಲಿ ಆಮೆ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಈ ಕಡಲ ತೀರದಲ್ಲಿ ಕಡಲಾಮೆಗಳಿಟ್ಟ ಮೊಟ್ಟೆಗಳಿಂದ ಹೊರ ಬಂದ ಮರಿಗಳ ಸಂಖ್ಯೆ ಸುಮಾರು ೪೦ ಸಾವಿರದಷ್ಟಿರಬಹುದೆಂದು ಹೇಳಲಾಗುತ್ತದೆ.
ಈ ಕಡಲ ದಡದಲ್ಲಿ ಕತ್ತಲಲ್ಲಿ ಸಾಲು ಸಾಲಾಗಿ ಗರ್ಭಧರಿಸಿದ ಕಡಲಾಮೆಗಳು ಬಂದು ಮರಳಿನಲ್ಲಿ ಹೊಂಡ ತೆಗೆದು ಮೊಟ್ಟೆ ಇರಿಸಿ ಮರಳು ಮುಚ್ಚಿ ಮರಳಿ ಸಮುದ್ರಕ್ಕೆ ತೆರಳುತ್ತವೆ. ಈ ಆಮೆಗಳು ೧೫-೧೬ ವರ್ಷಗಳ ಹಿಂದೆ ಇಲ್ಲೇ ಹುಟ್ಟಿ ಸಮುದ್ರವನ್ನು ಸೇರಿದರು ಮತ್ತೆಂದೂ ಒಣ ಮರಳಿಗೆ ಮರಳಿದ್ದೆ ಇಲ್ಲ. ಹುಟ್ಟುವಾಗ ಚಿಕ್ಕಗಾತ್ರದಲ್ಲಿದ್ದ ಈ ಆಮೆಗಳು ಆಳ ಕಡಲಿನಲ್ಲಿ ಸಾವಿರಾರು ಕಿಲೋಮೀಟರ್ ಓಡಾಡುತ್ತ ೪೦-೪೫ ಕಿಲೋಗ್ರಾಂ ತೂಗುವಷ್ಟು ದೊಡ್ಡದಾಗಿ ಬೆಳೆಯುತ್ತದೆ. ಇಷ್ಟು ಗಾತ್ರದ ಆಮೆ ಮೊಟ್ಟೆ ಇಡಲು ಮರಳಿಗೆ ಬಂದಾಗ ಮರಳಿನಲ್ಲಿ ತೆವಳುವುದು ಭಾರಿ ಪ್ರಯಾಸದ ಕೆಲಸವೇ ಸರಿ. ಗರ್ಭಧಾರಣೆ ಆಗಿ ತೀರಕ್ಕೆ ಬಂದು ಮೊಟ್ಟೆ ಇಡುವವರೆಗೂ ಅವು ಆಹಾರ ಸೇವನೆ ಮಾಡಿರುವುದಿಲ್ಲ. ಹೀಗೆ ಕಡಲಾಮೆ ಇರಿಸಿದ ಮೊಟ್ಟಗಳ ಮೇಲೆ ನೀರು ಬೀಳಬಾರದು. ಆ ರೀತಿ ನೀರು ಬಿದ್ದರೆ ಮೊಟ್ಟೆ ಗಟ್ಟಿಯಾಗಿ ಹಾಳಾಗುತ್ತದೆ. ೫೦-೬೦ ಸೆಂಟಿಮೀಟರ್ ಆಳದ ಗುಂಡಿ ತೋಡಿ, ಹಿಂಭಾಗದ ರೆಕ್ಕೆಯಿಂದ ಮರಳನ್ನು ಎತ್ತಿ ಹಾಕಿದ ಹಾಗೆ ಮರಳು ಮತ್ತೆ ಗುಂಡಿಗೆ ಜಾರಿ ಬಿಳುತ್ತದೆ. ೨ ರಿಂದ ೩ ಗಂಟೆ ಕಾಲ ಗುಂಡಿ ತೋಡಿ ೮೦-೧೦೦-೧೨೦ ಮೊಟ್ಟೆಗಳನ್ನು ಪ್ರಸವಿಸುತ್ತದೆ. ಬಿಳಿ ಬಣ್ಣದಲ್ಲಿ ಇದರ ಮೊಟ್ಟೆ ಇರುವುದು. ಮೊಟ್ಟೆ ಹಾಕಿದ ನಂತರ ಆ ಗುಂಡಿಗಳನ್ನು ಮುಚ್ಚುವುದಷ್ಟೇ ಅಲ್ಲ ಬೇರೆಯವರಿಗೆ ತಿಳಿಯದ ಹಾಗೆ ತನ್ನ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕುತ್ತವೆ. ಸೋಜಿಗದ ಇನ್ನೊಂದು ಸಂಗತಿ ಎಂದರೆ ಈ ಆಮೆಗಳು ಕಳ್ಳಕಾಕರಿಂದ, ನಾಯಿ, ಹಾವುಗಳಿಂದ ಮೊಟ್ಟೆಗಳನ್ನು ರಕ್ಷಿಸಲು ಸುಳ್ಳು ಗುಂಡಿಗಳನ್ನು ತೋಡುತ್ತವೆ. ಅದನ್ನು ಮುಚ್ಚಿ ಹೆಜ್ಜೆ ಗುರುತನ್ನು ಕೆಲಮಟ್ಟಿಗೆ ಅಳಿಸಿ ಮತ್ತೆ ಹಿಂದೆ ತಿರುಗಿ ನೋಡದೆ ಕಡಲನ್ನು ಸೇರತ್ತದೆ.

೪೮-೫೫ ದಿನಗಳ ಕಾಲ ಶಾಖ ಪಡೆದ ಮೊಟ್ಟೆ ಮರಿಯಾಗಿ ಹೊರ ಬರುತ್ತದೆ. ಮಳೆಗಾಲದ ಆರಂಭಕ್ಕೂ ೫೫ ದಿನಗಳ ಮೊದಲೇ ಈ ಕಡಲಾಮೆಗಳು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತದೆ. ಇದು ಇವುಗಳಿಗೆ ನೈಸರ್ಗಿಕವಾಗಿ ಬಂದ ಬಳುವಳಿ. ಕಾವು ಮುಗಿದ ಮೇಲೆ ಏಕಕಾಲಕ್ಕೆ ಸುರಕ್ಷಿತವಾಗಿ ಒಟ್ಟಾಗಿಯೇ ಮೇಲಕ್ಕೆದ್ದು ಬರುವಾಗ ಅವು ಪರಸ್ಪರ ಸಿಗ್ನಲ್ ಕೊಡುತ್ತವೆಂದೂ ಜಾಸ್ತಿ ಮೊಟ್ಟೆಯಿಡುವ ಗೂಡುಗಳೇ ಬಹು ಬೇಗ ಖಾಲಿ ಆಗುತ್ತವೆಂದೂ, ಕಡಿಮೆ ಮೊಟ್ಟೆಗಳಿರುವ ಗೂಡುಗಳಿಂದ ಮರಿಗಳು ನಿಧಾನಕ್ಕೆ ಹೊರಬರುತ್ತವೆಂದೂ ಪ್ರಯೋಗಗಳ ಮೂಲಕ ಪತ್ತೆ ಹಚ್ಚಿದ್ದಾರೆ. ಹೀಗೆ ಹೊರಬಂದ ಮರಿಗಳು ೨೦-೩೦ ನಿಮಿಷಗಳಲ್ಲಿ ಸಮುದ್ರವನ್ನು ಸೇರಿಬಿಡುತ್ತದೆ.


ಕಡಲಾಮೆಗಳು ಅದರಲ್ಲಿಯೂ ಈ ತಿಳಿ ಹಸಿರು ಬಣ್ಣದ ಆಲಿವ್ ರಿಡ್ಲೆ ಗಳು ವಿನಾಶದ ಅಂಚಿಗೆ ಬಂದಿರುವುದರಿಂದ ಇವುಗಳ ರಕ್ಷಣೆಗೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಹೊನ್ನಾವರದ ಬೀಚಿನಲ್ಲಿ ಅರಣ್ಯ ಇಲಾಖೆ ಮೀನುಗಾರರ ಸಹಕಾರದಿಂದ ೨ ಕಿ.ಮಿ. ಉದ್ದಕ್ಕೂ ೭೮ ಮೊಟ್ಟೆಗಳನ್ನು ಗುರುತಿಸಿ ಅವಕ್ಕೆ ಬೇಲಿ ನಿರ್ಮಿಸಿ ಕ್ರಮಸಂಖ್ಯೆ ಕೊಟ್ಟಿದೆ.
ನಿಸರ್ಗದ ಅದೆಷ್ಟೋ ರಹಸ್ಯವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಪ್ರಸವಕ್ಕೆ ಬರುವ ಕಡಲಾಮೆಗಳ ರಕ್ಷಣೆಯಲ್ಲಿಯೇ ಮಾನವನ ಬದುಕಿನ ರಕ್ಷಣೆಯ ದಾರಿ ಹುದುಗಿದೆ ಎಂಬ ಪ್ರಕೃತಿಯ ಸತ್ಯ ಅರಿತಾಗಲೇ ನಿಸರ್ಗದೊಡನೆ ಮಾನವನ ನಡೆಯ ಸಹಬಾಳ್ವೆಯ ಲೋಕ ಅನಾವರಣಗೊಳ್ಳುವುದು.


Leave a Reply