ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರುಮಠದಲ್ಲಿ 11 ನೇ ಶತಮಾನದ ಅಪೂರ್ವ ಶಿಲ್ಪವೊಂದು ಪತ್ತೆಯಾಗಿದೆ.
ಉಳ್ಳೂರು ಮಠ ಎಂದು ಕರೆಯಲ್ಪಡುವ ಜಾಗದಲ್ಲಿ ಈಗ ಗಣಪತಿ ದೇವಾಲಯವಿದ್ದು, ದೇವಾಲಯದ ಪಕ್ಕದಲ್ಲಿ ಭಗ್ನಗೊಂಡ ಶಿಲ್ಪದ ಅವಶೇಷಗಳು, ದೇವಾಲಯದ ಅವಶೇಷಗಳು ಮತ್ತು ಒಂದು ಶಾಸನ ಕಂಡು ಬಂದಿದೆ.
ಭಗ್ನಗೊಂಡ ಶಿಲ್ಪವೊಂದನ್ನು ಸ್ಥಳೀಯವಾಗಿ ಮಹಾವಿಷ್ಣು ಎಂದು ಕರೆಯಲಾಗುತ್ತದೆ. ಆದರೆ ಶಿಲ್ಪಶಾಸ್ತ್ರದ ಪ್ರಕಾರ ಅದು ಜನಾರ್ಧನನ ಶಿಲ್ಪವಾಗಿದೆ ಎನ್ನಲಾಗಿದೆ. ಸಮಭಂಗಿಯಲ್ಲಿ ಪದ್ಮಪೀಠದ ಮೇಲೆ ನಿಂತಿರುವ ಶಿಲ್ಪವು, ತನ್ನ ಮುಂದಿನ ಬಲಗೈಯಲ್ಲಿ ಪಿಂಡ, ಎಡಗೈಯಲ್ಲಿ ಗಧೆ, ಹಿಂದಿನ ಎಡಗೈ ಮತ್ತು ಬಲಗೈಯಲ್ಲಿ ಚಕ್ರವನ್ನು ಹಿಡಿದಿರುವುದು ಕಂಡು ಬಂದಿದೆ. ತಲೆಯ ಮೇಲೆ ಉದ್ದನೆಯ ಕರಂಡ ಮುಕುಟವಿದೆ. ತಲೆಯ ಹಿಂಭಾಗದಲ್ಲಿ ಆಕರ್ಷಕವಾದ ಪ್ರಭಾವಳಿಯ ಪಟ್ಟಿಕೆಯಿದೆ. ಆ ಪಟ್ಟಿಕೆಯ ಅಂಚಿನಲ್ಲಿ ಜ್ವಾಲೆಯ ಚಿತ್ರಣವಿದೆ. ಶಿಲ್ಪದ ತಲೆಯ ಎಡ-ಬಲಗಳಲ್ಲಿ ಇಳಿಬಿದ್ದ ಸುರುಳಿಯಾಕಾರದ ಕೇಶರಾಶಿಯ ರಚನೆ ಶಿಲ್ಪ ಸೌಂದರ್ಯದ ಉತ್ತುಂಗತೆಗೆ ಸಾಕ್ಷಿಯಾಗಿದೆ. ಕಿವಿಗಳಲ್ಲಿ ಮಕರಕುಂಡಲಗಳಿವೆ, ನೀಳಮೂಗು, ಮಂದಸ್ಮಿತ ತುಟಿ, ಅಂದವಾದ ಕಣ್ಣುಗಳು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಕೊರಳಲ್ಲಿ ಕಂಠಾಭರಣ, ಕೊರಳಹಾರ, ಕೇಯೂರ, ಕೌಸ್ತುಭಹಾರ, ಭುಜಕೀರ್ತಿ, ತೋಳಬಂದಿ ಮುತ್ತು ಕಂಕಣಗಳಿಂದ ಅಲಂಕೃತವಾಗಿದೆ. ಸೊಂಟದ ಕೆಳಗೆ ವಸ್ತವಿದೆ, ನಡುಪಟ್ಟಯಲ್ಲಿ ಸಿಂಹಕೀರ್ತಿಯಿದೆ. ಶಿಲ್ಪವನ್ನು ಮೃದುವಾದ ಬಳಪದ ಕಲ್ಲಿನಲ್ಲಿ ಮಾಡಲಾಗಿದೆ. ಇದು ದಕ್ಷಿಣ ಭಾರತದ ಅಪೂರ್ವ ಶಿಲ್ಪಗಳಲ್ಲಿ ಒಂದಾಗಿದ್ದು, ಕಲ್ಯಾಣಿ ಚಾಲುಕ್ಯ ಶೈಲಿಯಲ್ಲಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿಯವರು ಅವರು ಮಾಹಿತಿ ನೀಡಿದ್ದಾರೆ.
ಭಾಗವತ ಪಂಥವು ಉತ್ತರ ಭಾರತದ ಪಶ್ಚಿಮ ಕರಾವಳಿಯಲ್ಲಿ ಆರಂಭವಾಗಿ ಕ್ರಿ.ಶ. 5ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಪಸರಿಸಿತು. ಕರ್ನಾಟಕ ಕರಾವಳಿಯ ಗೋಕರ್ಣ ಮತ್ತು ಐಗುಂದಗಳಲ್ಲಿ ಕ್ರಿ.ಶ. 7ನೇ ಶತಮಾನದ ಮಹಾವಿಷ್ಣುವಿನ ಶಿಲ್ಪಗಳು ಕಂಡುಬಂದಿವೆ. ಗಣಪತಿ ದೇವಾಲಯದ ಹಿಂಭಾಗದಲ್ಲಿ ಒಂದು ಶಾಸನದ ಶಿಲಾಫಲಕವಿದ್ದು, ಶಾಸನವನ್ನು ತಿಗಳಾರಿ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ.
ಶಾಸನದಲ್ಲಿ ಕಾಮದೇವರಸ ಮತ್ತು ಬಸವಯ್ಯ ಎಂಬ ಉಲ್ಲೇಖವಿದ್ದು, ಅವರು ಈಗಿನ ಹೊನ್ನಾವರ ತಾಲೂಕಿನ ಚಂದಾವರದ ಆಡಳಿತಾಧಿಕಾರಿಗಳಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಚಂದಾವರ, ದಕ್ಷಿಣ ಕನ್ನಡ ಜಿಲ್ಲೆಯ ಆಳುಪರ ಒಂದು ಉಪರಾಜಧಾನಿಯಾಗಿತ್ತು. ಶಾಸನವನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ ಎಂದು ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.
Source: ಕರಾವಳಿ ಮುಂಜಾವು ದಿನಪತ್ರಿಕೆ, karavalimunjavu.com


Leave a Reply