ಉತ್ತರ ಕನ್ನಡ ಜಿಲ್ಲೆಯ ಪಂಚಲಿಂಗ ದರ್ಶನ – ಶಿವರಾತ್ರಿ ವಿಶೇಷ

Posted by

·

ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಮಾಹಾ‌ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇಡೀ ದಿನ ಉಪವಾಸ ಜಾಗರಣೆಗಳನ್ನು ಮಾಡಿ, ೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ.
ನಾಡಿನಾದ್ಯಂತ ಇರುವ‌ ಶಿವನ ದೇಗುಲಗಳಲ್ಲಿ ಅತಿ ವಿಶಿಷ್ಟ ಹಾಗೂ ಪ್ರಸಿದ್ಧಿ ಪಡೆದು ಸಾವಿರಾರು ಭಕ್ತವೃಂದವನ್ನು ಸೆಳೆಯುವ ಕ್ಷೇತ್ರಗಳು ಕೆಲವೇ ಕೆಲವು. ಮಹಾನ್‌ ಋಷಿ ಮುನಿಗಳಿಂದ, ನಾರದಾದಿ ದೇವತೆಗಳಿಂದ ನಿರ್ಮಿಸಲಾಗಿರುವ ದೇಗುಲಗಳು ಎಷ್ಟು ಖ್ಯಾತವಾಗಿದೆಯೋ ಅಂತೆಯೇ ರಾವಣನಂತಹ ದಾನವರಿಂದ ನಿರ್ಮಾಣವಾಗಿರುವ ಶಿವನ ಕ್ಷೇತ್ರವು ನಮ್ಮಲ್ಲಿ ಭಕ್ತಿ ಹಾಗೂ ಶ್ರದ್ದೆಯ ಕೇಂದ್ರವಾಗಿದೆ‌. ಶಿವನ ವಿಗ್ರಹಗಳು, ಲಿಂಗಗಳು ಇರುವ ದೇವಾಲಯಗಳಿರುವಂತೆ ಶಿವನ ಆತ್ಮಲಿಂಗ ಇರುವ ಪಂಚಕ್ಷೇತ್ರಗಳು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದ ಅರಬ್ಬೀ ಸಮುದ್ರದ ಕಿನಾರೆಯಲ್ಲಿ ಕಾಣಬಹುದಾಗಿದೆ. ಇದನ್ನೇ ಪಂಚಲಿಂಗ ಕ್ಷೇತ್ರಗಳು ಎಂದು ಕರೆಯುತ್ತೇವೆ. ಶಿವರಾತ್ರಿಯ ಈ ಶುಭದಿನದಂದು ಅಂತಹ ಪಂಚಲಿಂಗಗಳ ಕುರಿತು ಕಿರು ಪರಿಚಯ ಇಂತಿದೆ……

೧. ಮಹಾಬಲೇಶ್ವರ ದೇವಾಲಯ, ಗೋಕರ್ಣ.

ಶಿವನ ಆತ್ಮಲಿಂಗವೇ ಇರುವ ಶ್ರೀ ಮಹಾಬಲೇಶ್ವರ ದೇವಾಲಯ ಭಾರತದ ಪಶ್ಚಿಮ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿದೆ. ಭೂ ಕೈಲಾಸ, ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಈ ಪ್ರದೇಶ ಹೊಂದಿದೆ. ಈ ದೇವಾಲಯವನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ಗ್ರಾನೈಟ್ ನಿಂದ ನಿರ್ಮಿಸಲಾಗಿದೆ. ಆತ್ಮಲಿಂಗವನ್ನು ದೇವಾಲಯದಲ್ಲಿ ಚೌಕಾಕಾರದ ಸಾಲಿಗ್ರಾಮ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪೀಠವು ಅದರ ಮಧ್ಯಭಾಗದಲ್ಲಿ ಒಂದು ರಂಧ್ರವನ್ನು ಹೊಂದಿದೆ. ಇದರಿಂದ ಭಕ್ತರು ಆತ್ಮಲಿಂಗದ ಮೇಲ್ಭಾಗವನ್ನು ನೋಡಬಹುದು.

ಶಿವನಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳು ಇವೆ. ಅಂತಹ ವಿಶೇಷ ಕಥೆ ಪುರಾಣಗಳಿಂದ ಸ್ಥಾಪಿಸಲಾದ ದೇವಾಲಯವೇ ಗೋಕರ್ಣದ ಮಹಾಬಲೇಶ್ವರ ದೇವಾಲಯ. ರಾವಣ ಗುಣದಲ್ಲಿ ದುಷ್ಟನಾದರು ಶಿವನ ಭಕ್ತನಾಗಿದ್ದ. ತಾಯಿಯ ಆಸೆ ಈಡೇರಿಸಲು ಕಠೋರ ತಪಸ್ಸನ್ನು ಮಾಡಿ ಶಿವನಿಂದ ಆತ್ಮಲಿಂಗ ಪಡೆದುಕೊಂಡ. ಖುಷಿಯಿಂದ ಮನೆಗೆ ಸಾಗುವಾಗ ಸಂಧ್ಯಾಕಾಲವಾಗಿತ್ತು. ಆ ಪವಿತ್ರ ಸಮಯದಲ್ಲಿ ಅಘ್ರ್ಯವನ್ನು ನೀಡುವ ಸಲುವಾಗಿ ಅಲ್ಲಿಯೇ ಇದ್ದ ಹುಡುಗನ ಕೈಯಲ್ಲಿ ಆತ್ಮಲಿಂಗವನ್ನು ನೀಡಿ ಸಂಧ್ಯಾವಂದನೆ ಮುಗಿಸಿ ಹಿಂತಿರುಗಿದಾಗ ಬಾಲಕನ ರೂಪದಲ್ಲಿದ್ದ ಗಣೇಶನು ಆತ್ಮಲಿಂಗವನ್ನು ಭೂಮಿಯ ಮೇಲೆ ಇಟ್ಟನು. ಅದನ್ನು ಕಂಡು ರಾವಣ ಕೋಪದಿಂದ ಲಿಂಗವನ್ನು ನೆಲದಿಂದ ಮೇಲೆತ್ತಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಲಿಂಗದ ಚೂರು ಚೂರು ರಾವಣನ ಕೈಗೆ ಸಿಕ್ಕಿತು. ಸಿಟ್ಟಿನಿಂದ ಅದನ್ನು ದೂರ ದೂರದ ಸ್ಥಳಗಳಿಗೆ ಎಸೆದನು. ಆ ಚೂರುಗಳು ಬಿದ್ದ ಸ್ಥಳಗಳಲ್ಲಿ ಶಿವನ ಮಂದಿರ ನಿರ್ಮಿಸಲಾಯಿತು. ಇದು ಮಹಾಬಲೇಶ್ವರ ಮಂದಿರಕ್ಕಿರುವ ಹಿನ್ನೆಲೆ. ದಕ್ಷಿಣ ಕಾಶಿ ಎಂದು ಕರೆಯುವ ಈ ಸ್ಥಳವು ಒಂದು ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಆತ್ಮಲಿಂಗವನ್ನು ಸಹ ಸ್ಪರ್ಶಿಸಬಹುದು. ಶಿವರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಈ ಪವಿತ್ರ ಆತ್ಮಲಿಂಗದ ದರ್ಶನ ಮಾಡಿ ಜೀವನ ಪಾವನವಾಗಿಸಿಕೊಳ್ಳೋಣ.

೨. ಸೆಜ್ಜೇಶ್ವರ ದೇವಾಲಯ, ಕಾರವಾರ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ೧೦ಕಿ.ಮೀ. ದೂರದಲ್ಲಿರುವ ಶೇಜವಾಡ ಎಂಬಲ್ಲಿ ಸೆಜ್ಜೇಶ್ವರ ದೇವಾಲಯವಿದೆ. ಈ ಸ್ಥಳ ಪುರಾಣವೇನೆಂದರೆ ರಾವಣನ ತಪಸ್ಸಿಗೆ ಮೆಚ್ಚಿದ ಶಿವನು ತನ್ನ ಆತ್ಮಲಿಂಗವನ್ನು ನೀಡುತ್ತಾನೆ. ಅದನ್ನು ತೆಗೆದುಕೊಂಡು ಬರುತ್ತಿದ್ದಾಗ ಎಲ್ಲಾ ದೇವತೆಗಳು ಗಣೇಶನ ಬಳಿ ಬಂದು ಬೇಡಿಕೊಳ್ಳುತ್ತಾರೆ. ಹೇಗಾದರೂ ಮಾಡಿ ನೀನು ರಾವಣನಿಂದ ಆತ್ಮಲಿಂಗವನ್ನು ತಡೆಯಬೇಕು ಎಂದಾಗ, ಗಣಪತಿಯು ರಾವಣನ ಕೈಯಲ್ಲಿದ್ದ ಆತ್ಮಲಿಂಗವನ್ನು ಕೆಳಗೆ ಇಡುವಂತೆ ಮಾಡುತ್ತಾನೆ. ರಾವಣ ಎಷ್ಟೇ ಕಷ್ಟಪಟ್ಟರು ಕೂಡ ಶಿವಲಿಂಗವನ್ನು ಮೇಲಕ್ಕೆ ಎತ್ತಲು‌ ಸಾಧ್ಯವಾಗಲಿಲ್ಲ. ಈ ಪ್ರಯತ್ನದಲ್ಲಿ ಬಂದ ಲಿಂಗದ ಚೂರುಗಳನ್ನು ೫ ಕಡೆ ಎಸೆಯುತ್ತಾನೆ. ಅದೇ ಈಗ ಪಂಚಲಿಂಗಗಳಾಗಿದ್ದು ಶಿವಲಿಂಗದ ಮೊದಲನೇ ಭಾಗವಾದ ಕಾರಣ ಅಲ್ಲಿ ಸೆಜ್ಜೇಶ್ವರ ಎಂದು ಪೂಜೆ ಮಾಡಲಾಯಿತು. ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಂಕರನ ದರ್ಶನಮಾಡಿ ಪಾವನರಾಗೋಣ.

೩. ಶ್ರೀ ಶಂಭುಲಿಂಗೇಶ್ವರ, ಗುಣವಂತೆ, ಹೊನ್ನಾವರ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಿಂದ ೧೦ ಕಿ.ಮೀ. ಸಮೀಪದಲ್ಲಿ ಗುಣವಂತೆ ಗ್ರಾಮದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನ ಗುಣವಂತೇಶ್ವರ ಎಂದೂ ಪ್ರಸಿದ್ಧಿ ಪಡೆದಿವೆ.
ರಾವಣನು ಆತ್ಮಲಿಂಗದ ಚೂರುಗಳನ್ನು ಎಸೆದು ಬಿದ್ದ ೫ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವೇ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ಎಂಬ ಪುರಾಣ ಪ್ರತೀತಿ ಇದೆ. ಗುಣವಂತೆಯ ಶಂಭುಲಿಂಗೇಶ್ವರ ಅಭಿಷೇಕ ಪ್ರೀಯ. ದೇವರಿಗೆ ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತ ವಲಯದಲ್ಲಿದೆ. ಮನೋಭಿಲಾಷೆಗಳ ಈಡೇರಿಕೆಗೆ ಅಭಿಷೇಕದ ಹರಕೆ ಸಲ್ಲಿಸುವ ಸಂಪ್ರದಾಯ ನಡೆದುಬಂದಿದೆ. ದೇವಾಲಯದ ಮುಂಭಾಗದಲ್ಲಿ ಕೊಳವಿದ್ದು , ಇಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಗುಣವಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಶಿವರಾತ್ರಿಯಂದು ನಾನಾಭಾಗಗಳಿಂದ ಭಕ್ತರು ಆಗಮಿಸಿ ದೇವರಿಗೆ ಅಭಿಷೇಕ ಮಾಡಿ ಕೃತಾರ್ಥರಾಗುತ್ತಾರೆ. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ, ರುದ್ರಪಾರಾಯಣ, ಅಭಿಷೇಕ, ಕಾರ್ತೀಕದಲ್ಲಿ ನಿತ್ಯವೂ ಭಕ್ತರಿಂದ ದೀಪೋತ್ಸವ, ರುದ್ರಪಾರಾಯಣ, ನವರಾತ್ರಿಯಲ್ಲಿ ಒಂಭತ್ತು ದಿನವೂ ವಿಶೇಷ ಪೂಜೆ, ವಿಜಯ ದಶಮಿಯಂದು ಪಲ್ಲಕ್ಕಿ ಉತ್ಸವ, ದೀಪಾವಳಿ ಬಲಿ ಪಾಡ್ಯಕ್ಕೆ ವಿಶೇಷ ಉತ್ಸವ, ಬಲಿಕಾರ್ಯಕ್ರಮಗಳು ನಡೆಯುತ್ತದೆ. ಪ್ರತಿ ವರ್ಷ ಚೈತ್ರ ಮಾಸದ ಮೇಷ ಸಂಕ್ರಮಣದಂದು ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ.

೪. ಧಾರೇಶ್ವರದ ಧಾರಾನಾಥ ದೇವಾಲಯ, ಕುಮಟಾ.

ಧಾರೇಶ್ವರದ ಧಾರಾನಾಥ ದೇವಾಲಯ ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ೮ ಕಿ.ಮೀ. ದೂರದಲ್ಲಿದ್ದು ಇದು ಶಿವನ ದೇವಾಲಯ ಗೋಕರ್ಣದ ಆತ್ಮಲಿಂಗದ ಒಂದು ಭಾಗ ಎಂದು ಹೇಳಲಾಗುತ್ತದೆ. ಪಾಂಡವರು ಒಂದೇ ರಾತ್ರಿಯಲ್ಲಿ ಕಟ್ಟಿದ ದೇವಾಲಯಗಳಲ್ಲಿ ಇದು ಕೂಡ ಒಂದು ಎಂದು ಹೇಳಲಾಗುತ್ತದೆ.
ಪ್ರಾಚೀನ ಕಾಲದ ಸಾಂಪ್ರದಾಯಿಕ ಶಿಲ್ಪದ ಮಾದರಿಯನ್ನು ಅಭ್ಯಾಸ ಮಾಡುವವರಿಗೆ ಇಲ್ಲಿಯ ವಿಗ್ರಹಗಳ ರಚನೆ ಸ್ವಾರಸ್ಯಕರ ಮಾಹಿತಿಯನ್ನು ಒದಗಿಸಬಹುದು. ಧಾರೇಶ್ವರ ದೇಗುಲದ ಆವರಣದಲ್ಲಿ ಒಂದು ಕೊಳವು ಇದೆ. ಇಲ್ಲೇ ಬದಿಯಲ್ಲಿ ಹಲವು ಶಾಸನಗಳನ್ನು ವೀರಗಲ್ಲುಗಳನ್ನು ಇರಿಸಿದ್ದು, ಇದು ಅಧ್ಯಯನಾಸಕ್ತರಿಗೆ ಉಪಯುಕ್ತ ಮಾದರಿಗಳಾಗಿವೆ. ದೇಗುಲದ ನವರಂಗಕ್ಕೆ ಮೂರು ಕಡೆಯಿಂದಲೂ ಪ್ರವೇಶಿಸಲು ಅನುಕೂಲವಾಗುವಂತೆ ಬಾಗಿಲುಗಳಿವೆ. ಒರಗಿಕೊಳ್ಳಲು ಕಕ್ಷಾಸನ. ಅದನ್ನು ಆಧರಿಸಿದ ಕಿರುಕಂಬಗಳೂ ನವರಂಗವನ್ನು ಅಲಂಕರಿಸಿದ ದೊಡ್ಡ ಕಂಬಗಳು ಸೊಗಸಾದ ಕೆತ್ತನೆಯಿಂದ ಕೂಡಿದೆ. ಗರ್ಭಗುಡಿಯಲ್ಲಿ ಶಿವಲಿಂಗ. •ಸುಗ್ಗಿಸಂಪದ• ಇದುವೇ ಧಾರೇಶ್ವರನೆಂದು ಹೆಸರು ಪಡೆದ ರೂಪ. ಒಳಗುಡಿಯಲ್ಲಿ ಶಿವನಿಗೆ ಅಭಿಮುಖವಾಗಿರುವ ನಂದಿಯಿದೆ. ಇಲ್ಲಿ ಹಲವು ಪ್ರಾಚೀನ ವಿಗ್ರಹಗಳು ಇದೆ. ಧಾರೇಶ್ವರನ ವಾರ್ಷಿಕ ರಥೋತ್ಸವಕ್ಕಾಗಿ ಇತ್ತೀಚೆಗೆ ನಿರ್ಮಿಸಿರುವ ರಥದ ಮೇಲಿನ ಕಾಷ್ಠಶಿಲ್ಪಗಳು ಗಮನಸೆಳೆಯುವಂತಿದೆ. ಶಿವರಾತ್ರಿಯ ಸಂದರ್ಭದಲ್ಲಿ ಅನೇಕಾನೇಕ ಭಕ್ತ ಸಮೂಹ ಇಲ್ಲಿಗೆ ಬಂದು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

೫. ಮುರುಡೇಶ್ವರ ದೇವಾಲಯ, ಭಟ್ಕಳ.

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಪಟ್ಟಣವಾಗಿದ್ದು, ಪರಶಿವನ ಇನ್ನೊಂದು ಹೆಸರು ಕೂಡ ಆಗಿದೆ. ಕಂಡುಕಾಗಿರಿ ಶಿಖರದಲ್ಲಿ ನೆಲೆಆಗಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ಭಕ್ತಾಧಿಗಳನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪುರಾಣದ ಪ್ರಕಾರ ಗೋಕರ್ಣದಲ್ಲಿ ರಾವಣನು ಎಸೆದ ಆತ್ಮಲಿಂಗದ ಒಂದು ಚೂರು ಕಂಡುಕಾ ಗಿರಿಯ ಮೃದೇಶ್ವರದಲ್ಲಿ ಬಂದು ಬಿದ್ದು ಮೃದೇಶ್ವರವು ಮುಂದೆ ಮುರುಡೇಶ್ವ ಎಂದು ಮರು ನಾಮಕರಣಗೊಂಡು ಶಿವನ ಯಾತ್ರಾಸ್ಥಳವಾಗಿ ಜನಪ್ರಿಯವಾಗಿದೆ. ಮುರುಡೇಶ್ವರದಲ್ಲಿರುವ ಶಿವನ ಎತ್ತರದ ವಿಗ್ರಹವು ಅತ್ಯಂತ ಜನಪ್ರಿಯವಾಗಿದೆ. ಅಂಕಿ ಅಂಶಗಳ ಪ್ರಕಾರ ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಇದು ಎಂದು ಹೇಳಲಾಗುತ್ತದೆ.

ಮುರುಡೇಶ್ವರದಲ್ಲಿನ ಕಂಡುಕಾ ಬೆಟ್ಟವು ಒಂದು ಪರ್ಯಾಯ ದ್ವೀಪವಾಗಿದೆ. ಪವಿತ್ರ ಮುರುಡೇಶ್ವರ ದೇವಾಲಯ ಇರುವುದು ಇದೇ ಬೆಟ್ಟದಲ್ಲಿ. ಮುರುಡೇಶ್ವರನನ್ನು ಹೊತ್ತಿರುವ ಈ ಕಂಡುಕಾ ಬೆಟ್ಟವು ೩ ದಿಕ್ಕಿನಿಂದಲೂ ಅರಬ್ಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ಹೀಗಾಗಿ ಸಮುದ್ರದ ಸುಮಧುರ ನೋಟವನ್ನು ಕೂಡ ನಮ್ಮ ಕಣ್ಣುಗಳಿಗೆ ಉಣಬಡಿಸುತ್ತದೆ. ಗೋಕರ್ಣದ ಸುತ್ತಮುತ್ತಲಿನ ಪಂಚಲಿಂಗ ದೇವಾಲಯಗಳಲ್ಲಿ ಮುರುಡೇಶ್ವರ ಕೂಡ ಒಂದಾಗಿದ್ದು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ಪಾವನರಾಗಿ.

ದಶಕಂಠ ರಾವಣನು ಶಿವ-ಪಾರ್ವತಿಯರಿಂದಲೇ ಆತ್ಮಲಿಂಗವನ್ನು ಪಡೆದು ಆತ್ಮಲಿಂಗವನ್ನು ಪಶ್ಚಿಮ ಕರಾವಳಿಯ ತೀರದ ಉದ್ದಕ್ಕೂ ಶಿವ ಮಂದಿರಗಳ ಕ್ಷೇತ್ರ ನಿರ್ಮಾಣವಾಗಲು ಕಾರಣಕರ್ತನಾಗುತ್ತಾನೆ. ಈ ಪಂಚಶಿವ ಕ್ಷೇತ್ರದಲ್ಲಿ ಸಾಕ್ಷಾತ್ ಶಿವನ ಆತ್ಮಲಿಂಗದ ತುಣುಕುಗಳೇ ಇರುವುದರಿಂದ ಈ ಐದು ಕ್ಷೇತ್ರಗಳನ್ನು ಪಂಚಲಿಂಗ ಕ್ಷೇತ್ರ ಎಂದು ಕರೆಯಲಾಗುತ್ತದೆ. ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗದ ದರ್ಶನ ಮಾಡಿದವರು ಅದೇ ದಿನ ಸಂಜೆಯೊಳಗೆ ಕಾರವಾರದ ಸೆಜ್ಜೇಶ್ವರ, ಕುಮಟಾದ ಧಾರೇಶ್ವರ, ಹೊನ್ನಾವರದ ಗುಣವಂತೇಶ್ವರ, ಭಟ್ಕಳದ ಮುರುಡೇಶ್ವರ ಈ ಪಂಚಲಿಂಗವಿರುವ ಪಂಚ ಕ್ಷೇತ್ರದ ದರ್ಶನ ಪಡೆದರೆ ಸಿದ್ದಿ ಲಭಿಸುತ್ತದೆ ಎಂದು ಭಕ್ತರು ನಂಬುತ್ತಾರೆ. ಶಿವರಾತ್ರಿಯಂದು ಶಿವನನ್ನು ನೆನೆಯುತ್ತ ಶಿವನ ಆರಾಧನೆಯೊಂದಿಗೆ ಪಂಚಲಿಂಗ ದರ್ಶನ ಮಾಡಿ ಕೃತಾರ್ಥರಾಗೋಣ.

ಮಾಹಿತಿ ಸಂಗ್ರಹಣೆ, ರಚನೆ: ಅಕ್ಷತಾ ಜಗದೀಶ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading