ಶರಾವತಿ ಕಾಂಡ್ಲಾವನ (ಮ್ಯಾಂಗ್ರೋವ್), ನಿಸರ್ಗದ ಸೌಂದರ್ಯ ಮತ್ತು ಪರಿಸರ ಸಮತೋಲನ

Posted by

·

“ನಿಸರ್ಗದ ಸೃಷ್ಟಿಯ ಮುಂದೆ ಸರಿಸಮನಾಗಿ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ, ನಿಸರ್ಗಕ್ಕೆ ನಿಸರ್ಗವೇ ಸಾಟಿ”. ಪರಿಸರ ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ವಿಶಿಷ್ಠವಾದ ಕೊಡುಗೆಯನ್ನು ನೀಡಿದೆ. ಆ ವಿಶಿಷ್ಟವಾದ ಕೊಡುಗೆಗಳು ಮಾನವನಿಗೆ ವಿಶಿಷ್ಟವಾದ ಸ್ಥಳಗಳಾಗಿ ಗೋಚರಿಸುತ್ತದೆ. ಅಂತಹ ಒಂದು ತಾಣ ಪರಿಸರ ಸಮತೋಲನಕ್ಕೆ ಸಹಕಾರಿ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾದ ಹೊನ್ನಾವರದ ಪ್ರೇಕ್ಷಣೀಯ ಸ್ಥಳ ಕಾಂಡ್ಲಾವನ.

ಶರಾವತಿ ಕಾಂಡ್ಲಾವನದ ಸಂಪೂರ್ಣ ಮಾಹಿತಿ

ಮ್ಯಾಂಗ್ರೋವ್ ಎಂದರೆ ನೀರಿನಲ್ಲಿ ಇರುವಂತ ಕಾಡು. ಕಡಲ ತೀರದ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ ಒತ್ತಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷವಾದ ಕಾಡುಗಳಿಗೆ ಮ್ಯಾಂಗ್ರೋವ್ ಎಂದು ಕರೆಯುವರು. ಈ ಕಾಡುಗಳು ಶಾಶ್ವತವಾಗಿ ನೀರಿನಲ್ಲಿ ಮುಳುಗಿರುವುದರಿಂದ ಅವುಗಳ ಆವಾಸಸ್ಥಾನದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿರುತ್ತದೆ. ಹಾಗಾಗಿ ಹೊರಚಾಚಿರುವ ಬೇರುಗಳ ಸಹಾಯದಿಂದ ಅನಿಲವನ್ನು ಹೀರಿಕೊಂಡು ಅವು ಬದುಕುತ್ತವೆ. ಆ ಅನಿಲಗಳನ್ನು ಬೇರುಗಳಲ್ಲೇ ಹಿಡಿದಿಟ್ಟುಕೊಳ್ಳುವ ಈ ಮರಗಳು ಪ್ರವಾಹದ ಸಂದರ್ಭದಲ್ಲಿ ಮತ್ತೆ ಬಳಸಿಕೊಳ್ಳುತ್ತವೆ. ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವಿನ ಕರಾವಳಿ ಪ್ರದೇಶದಲ್ಲಿ ಅಲ್ಲಲ್ಲಿ ಈ‌ ಕಾಂಡ್ಲಾವನ ಕಾಣಸಿಗುತ್ತವೆ. ಹೊನ್ನಾವರ, ಭಟ್ಕಳ, ಕುಮಟಾ ತಾಲ್ಲೂಕುಗಳು ಒಳಗೊಂಡಂತೆ ಹೊನ್ನಾವರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ೪ ಚ.ಕಿ.ಮೀ. ವ್ಯಾಪ್ತಿಯಲ್ಲಿ ಕಾಂಡ್ಲಾವನ ಇದ್ದು, ಹಲವಾರು ಜೀವ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ. ಸಮುದ್ರ ಹಾಗೂ ನದಿ ಮಧ್ಯದ ಮುಖಜ ಭೂಮಿಯ ಉಪ್ಪು ಹಾಗೂ ಸಿಹಿ ನೀರಿನ ಸಂಗಮದ ಕೆಸರಿನ ನಡುವೆ ವಿಸ್ತಾರವಾಗಿ ಹರಡುವ‌ ದಪ್ಪನೆಯ ಸಸ್ಯರಾಶಿಯೇ ಈ ಕಾಂಡ್ಲಾವನ. ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಇಂದು ಬಹುತೇಕವಾಗಿ ವಿನಾಶದ ಅಂಚಿನಲ್ಲಿದೆ ಎಂಬುದೇ ವಿಷಾದನೀಯ.

ನದಿಯು ಸಮುದ್ರ ಸೇರುವ ಸುಮಾರು ೬ ರಿಂದ ೮ ಕಿ.ಮೀ. ವ್ಯಾಪ್ತಿಯಲ್ಲಿ ಕಾಂಡ್ಲಾವನ ಬೆಳೆಯುತ್ತದೆ. ಅಲೆಗಳಿಲ್ಲದ ಹಾಗೂ ದೊಡ್ಡ ಮೀನು ಬಾರದ ಹಿನ್ನೆಲೆಯಲ್ಲಿ ಕಾಂಡ್ಲಾ ಸಸ್ಯಗಳಿರುವಲ್ಲಿ ಮೀನುಗಳ ಸಂತಾನೋತ್ಪತ್ತಿಗೆ ಇದು ಸುರಕ್ಷಿತ ತಾಣವಾಗಿದೆ. ಇಲ್ಲಿ ಸರ್ಬೆರಾ, ಡೆರಿಸ್ ಪ್ರಭೇದದ ಕಾಂಡ್ಲಾಗಳನ್ನು ನೋಡಬಹುದಾಗಿದ್ದು, ನೋಡಲು ತೆಂಗಿನ ಮರದ ಬೇರುಗಳಂತೆ ದಪ್ಪ ಕಾಂಡಗಳನ್ನು ಹೊಂದಿರುತ್ತವೆ. ಸುನಾಮಿ, ಭೂಸವಕಳಿ, ಚಂಡಮಾರುತ ಇವೆಲ್ಲವನ್ನೂ ತಡೆಗಟ್ಟುವಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ. ವಿವಿಧ ಬಗೆಯ ಪಕ್ಷಿ ಸಂಕುಲವನ್ನು ಇಲ್ಲಿ ನೋಡಬಹುದಾಗಿದ್ದು ವಿದೇಶದ ಹಕ್ಕಿಗಳು ಇಲ್ಲಿ ಬಂದು ತಮ್ಮ ಸಂತಾನೋತ್ಪತ್ತಿ ‌ಕಾರ್ಯವನ್ನು ಮಾಡುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೇಟೆಯಿಂದ ೩-೪ ಕಿ.ಮೀ . ಸಾಗಿದಾಗ ಎಡಕ್ಕೆ ಕಾಂಡ್ಲಾವಾಕ್ ಗೆ ದಾರಿ ಕಾಣಸಿಗುತ್ತವೆ. ಸ್ವಲ್ಪ ದೂರ ಕ್ರಮಿಸಿದರೆ ಶರಾವತಿ ಕಾಂಡ್ಲಾವನ ( ಮ್ಯಾಂಗ್ರೋವ್) ಎಂಬ ದೊಡ್ಡದಾದ ಫಲಕ ಗೋಚರವಾಗುವುದು. ಮರದ ಹಲಗೆಯಿಂದ ಮಾಡಿದ‌ ಹಾದಿ, ಹಾದಿಯುದ್ದಕ್ಕೂ ಕಾಣುವ ಮಾಹಿತಿ ಫಲಕಗಳು ಮ್ಯಾಂಗ್ರೋವ್ ಕಾಡುಗಳ ಬಗ್ಗೆ ಸಾಕಷ್ಟು ಜ್ಞಾನ ಒದಗಿಸುತ್ತದೆ. ಆಗಾಗ ಕೇಳುವ ಹಕ್ಕಿಗಳ ಚಿಲಿಪಿಲಿ ಹಕ್ಕಿಗಳ ನಾದ, ಬಣ್ಣದ ಚಿಟ್ಟೆಗಳ ನೋಟ ಮನಮೋಹಕವಾಗಿದೆ. ಇಕ್ಕೆಲಗಳಲ್ಲಿ ಹಬ್ಬಿದ ಕಾಂಡ್ಲಾ ಗಿಡಗಳನ್ನು ನೋಡುವುದೇ ಒಂದು ಸುಂದರ ಅನುಭವ. ಸ್ವಲ್ಪ ದೂರ ಸಾಗಿದ ಮೇಲೆ ಮಣ್ಣಿನ ಹಾದಿ ಪ್ರಾರಂಭವಾಗುತ್ತದೆ. ಸುಂದರವಾದ ಮ್ಯಾಂಗ್ರೋವ್ ದ್ವೀಪದ ದರ್ಶನವಾಗುತ್ತದೆ. ಮುಂದೆ ಸಾಗಿತ್ತಿದ್ದಂತೆ ಒಂದು ಪುಟ್ಟ ಸೇತುವೆ. ಮ್ಯಾಂಗ್ರೋವ್ ನಿರ್ಮಿಸಿದ ಈ ದ್ವೀಪದ ಹಾದಿ ಕಡಿದಾಗಿದ್ದು , ಸ್ವಲ್ಪ ಎಚ್ಚರಿಕೆಯಿಂದಲೇ ಸೇತುವೆ ಮೇಲೆ ಸಾಗಬೇಕಾಗುತ್ತದೆ. ದ್ವೀಪ ಸುತ್ತಿ ಬಂದ ಮೇಲೆ ವಿಶ್ರಾಂತಿಗೆಂದು ಪುಟ್ಟ ಕುಟೀರದ ವ್ಯವಸ್ಥೆ ಇದೆ. ಇಲ್ಲಿಂದ ೧೦ ನಿಮಿಷದ ನಡಿಗೆಯಲ್ಲಿ ಕಾಸರಗೋಡು ಬೀಚ್ ತಲುಪಬಹುದಾಗಿದೆ.

ನಿಸರ್ಗದೊಡನೆ ಸುಂದರ ಕ್ಷಣಗಳನ್ನು ಕಳೆಯಲು ಇಚ್ಚಿಸುವವರು ಒಮ್ಮೆಯಾದರೂ ಈ ಕಾಂಡ್ಲಾವನಕ್ಕೆ ಭೇಟಿ ನೀಡಲೇಬೇಕು. ಅರಣ್ಯ ಇಲಾಖೆಯವರ ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಿದ್ದು ಪ್ರವಾಸಿಗರಿಗೂ ಸಹ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರೇರೆಪಿಸುತ್ತದೆ. ಹೊನ್ನಾವರ ಪೇಟೆಯಿಂದ ೩-೪ ಕಿ.ಮೀ. ದೂರದಲ್ಲಿ ಇಲ್ಲಿಗೆ ಬಂದು ತಲುಪಬಹುದಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಪುಟ್ಟ ಕ್ಯಾಂಟೀನ್ ವ್ಯವಸ್ಥೆ ಇದ್ದು ಪ್ರವೇಶ ದರ‌ ಒಬ್ಬರಿಗೆ ಹತ್ತು ರೂಪಾಯಿ. ಸುಂದರವಾದ ನಿಸರ್ಗದ ನಡುವೆ ನಿಮ್ಮ ಸುಂದರವಾದ ಛಾಯಾಚಿತ್ರ ತೆಗೆಯಲು‌ ಯಾವುದೇ ನಿರ್ಬಂಧವಿಲ್ಲ.

ನಿಸರ್ಗದ ಸೌಂದರ್ಯಕ್ಕೆ ಕನ್ನಡಿಹಿಡಿದಂತಿರುವ ಶರಾವತಿ ಕಾಂಡ್ಲಾವನ ( ಮ್ಯಾಂಗ್ರೋವ್) ನಿಜಕ್ಕೂ ಒಂದು ಅವಿಸ್ಮರಣೀಯ ಮತ್ತು ಸುಂದರ ಅನುಭವ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಪ್ರಕೃತಿಯು ಮಧುರ ಕ್ಷಣಗಳನ್ನು ನೆನಪುಗಳನ್ನು ಉಣಬಡಿಸುವುದೆಂದರೆ ಅತಿಶಯೋಕ್ತಿ ಆಗಲಾರದು.

ಮಾಹಿತಿ: ಅಕ್ಷತಾ ಜಗದೀಶ್ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading