ಕಣ್ಮರೆಯಾಗುತ್ತಿರುವ  ಒಲೆ ಮತ್ತು ಪಿಂತೊಲೆ (ಹಿತ್ತೊಲೆ)

Posted by

·

“ಒಲೆ ಬದಲಾಗಬಹುದು, ಆದರೆ ಉರಿ ಎಂದಿಗೂ ಬದಲಾಗಲಾರದು”. ಅಡುಗೆ ಮನೆ ಎಂಬುದು ಹಸಿವನ್ನು ನಿವಾರಿಸುವ ಮನೆಯ ಮುಖ್ಯ ಭಾಗ. ಮಾನವನಿಗೆ ತನ್ನ ಬೆಳವಣಿಗೆಗೆ ಶಕ್ತಿ ನೀಡುವ ಶಕ್ತಿ ಕೇಂದ್ರವೇ ಅಡುಗೆ ಮನೆ ಎಂದರೆ ತಪ್ಪಾಗಲಾರದು.

ಅಡುಗೆ ಮನೆಯ ಒಂದು ಮೂಲೆಯಲ್ಲಿ ಮಣ್ಣಿನಿಂದ ಮಾಡಿದ ಒಲೆಗಳು ಇರುತ್ತಿದ್ದವು. ಕಟ್ಟಿಗೆ ಒಲೆ ಬಳಸುವ ಕಾಲದಲ್ಲಿ ಪ್ರತಿ ಮನೆಯಲ್ಲೂ ಒಲೆಯ ಹಿಂದೆ ಸ್ವಲ್ಪ ಸ್ಥಳ ಮೀಸಲಿಡಲಾಗಿತ್ತು. ಒಲೆಯ ಹಿಂದಿರುವ ಸ್ಥಳಕ್ಕೆ ಪಿಂತೊಲೆ ಎಂದು ಕರೆಯಲಾಗುತ್ತದೆ. ಈ ಪಿಂತೊಲೆಯನ್ನು ಆಡುಮಾತಿನಲ್ಲಿ ಹಿತ್ತೊಲೆ ಎಂದು ಕರೆಯುವುದುಂಟು. ಅನುಕೂಲಕ್ಕೆ ತಕ್ಕಂತೆ ಪಿಂತೊಲೆ ಅಥವಾ ಹಿತ್ತೊಲೆಯ ನಿರ್ಮಾಣವಾಗುತ್ತಿತ್ತು. ಕೆಲವರು ದೊಡ್ಡದಾದ ಎರಡು ಮೆಟ್ಟಿಲಿನಲ್ಲಿ ಹಿತ್ತೊಲೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಎರಡು ಅಥವಾ ಮೂರು ಒಲೆಗಳಿಗನುಗುಣವಾಗಿ ಹಿತ್ತೊಲೆ ಆಕಾರ ಪಡೆದುಕೊಳುತ್ತಿತ್ತು.

ಹಿತ್ತೊಲೆಯು ಅನೇಕ ಬಗೆಯಲ್ಲಿ ಪ್ರಯೋಜನಕಾರಿ ಆಗಿತ್ತು. ಮಡಿಕೆ ಅಥವಾ ಪಾತ್ರೆ ಇಡಲು, ಉಪ್ಪನಕಾಯಿ ಭರಣಿ ಇಡಲು, ದೀಪದ ಗುಟ್ನ ಇಡಲು ಬಳಕೆ ಮಾಡುತ್ತಿದ್ದರು. ಕೆಲವೊಮ್ಮೆ ಒಲೆಯಲ್ಲಿ ಮಲಗಿದ್ದ ಬೆಕ್ಕನ್ನು ಓಡಿಸಲು ಬಳಸುತ್ತಿದ್ದ ಕೋಲನ್ನು ಇದೆ ಸ್ಥಳದಲ್ಲಿ ಇಡಲಾಗುತ್ತಿತ್ತು. ಕಾರಣ ತಕ್ಷಣ ಕೈಗೆ ಎಟಕುತ್ತಿತ್ತು. ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ಹಂಚಿರೊಟ್ಟಿ ಬೇಯಿಸಿದ ನಂತರ ಈ ಹಿತ್ತೊಲೆ ಮೇಲೆ ನಿಲ್ಲಿಸಿ ಇಡಲಾಗುತ್ತಿತ್ತು. ಆಧುನಿಕತೆಯ ಓಟದಲ್ಲಿ ಅದೇಷ್ಟೇ ಆಧುನಿಕ ಪರಿಕರಗಳು ಬಂದರು ಒಲೆಯ ಮೇಲಿನ ಅಡುಗೆ ರುಚಿಗೆ ಸರಿಸಾಟಿ ಆಗಲಾರದು.

ಹಿಂದಿನ ಕಾಲದ ಒಲೆ ಹಾಗೂ ಹಿತ್ತೊಲೆ ಎರಡು ಅನೇಕ ಬಗೆಯಲ್ಲಿ ಉಪಯೋಗವಾಗುತ್ತಿತ್ತು. ಮಳೆಗಾಲದಲ್ಲಿ ಹಸಿ ಕಂಬಳಿ ಒಣಗಿಸಲು, ಹಲಸಿನ ಬೀಜ ಒಣಗಿಸಲು ಹಿತ್ತೊಲೆ ಬಳಕೆ ಆಗುತ್ತಿತ್ತು. ಶಾಲೆಯಿಂದ ಬರುವಾಗ ಮಳೆಗೆ ಪುಸ್ತಕ ಒದ್ದೆಯಾದರು ನೆನಪಾಗುತ್ತಿದ್ದದ್ದು ಈ ಹಿತ್ತೊಲೆ.
ಒಲೆಯನ್ನು, ಹಿತ್ತೊಲೆಯನ್ನು ಸರಣಿಯಿಂದ ಸಾರಿಸಿ ಒಲೆಯ ಗೋಡೆಯ ಮೇಲೆ ಚಂದದ ರಂಗೋಲಿ ಹಾಕಿ ಅಡುಗೆ ಕಾರ್ಯ ಪ್ರಾರಂಭವಾಗುತ್ತಿತ್ತು. ಮನೆ ತಂಬಾ ಜನ ಇರ್ತಾ ಇದ್ದ ಅಂದಿನ ಕಾಲದಲ್ಲಿ ಬೆಳಿಗ್ಗೆ ಹಚ್ಚಿದ ಒಲೆ ರಾತ್ರಿಯೇ ತಣ್ಣಗಾಗುತ್ತಿತ್ತು. ಇಂತಹ ಒಲೆಯನ್ನು ನೋಡುವ ಸೊಗಸೆ ಬೇರೆ.
ಕಾಲದೊಂದಿಗೆ ಬಳಸುವ ಪರಿಕರ ಗಳು ಬದಲಾಗಿದೆ. ಆಧುನಿಕತೆಯ ಜಗತ್ತಿನಲ್ಲಿ ಒಲೆಯ ಸ್ಥಳವನ್ನು ಗ್ಯಾಸ್ ಸ್ಟೋವ್ ಆಕ್ರಮಿಸಿದೆ. ಇನ್ನೂ ಹಿತ್ತೊಲೆಗೆ ಸ್ಥಳವೆಲ್ಲಿದೇ? ಕಟ್ಟಿಗೆ ಸಿಗುವುದೇ ಕಷ್ಟಕರವಾದ ಕಾಲದಲ್ಲಿ ಕಟ್ಟಿಗೆ ಒಲೆಗಳನ್ನು ಕಾಣುವುದಾದರೂ ಹೇಗೆ?
ಆದರೂ ಹಳ್ಳಿಗಳಲ್ಲಿ ಇಂದಿಗೂ ಕೆಲವೊಂದು ಮನೆಗಳಲ್ಲಿ ನಾವು ಕಟ್ಟಿಗೆ ಒಲೆ ಹಾಗೂ ಹಿತ್ತೊಲೆಗಳನ್ನು ಕಾಣಬಹುದಾಗಿದೆ. ಅದು ಇತ್ತೀಚಿನ ದಿನಗಳಲ್ಲಿ ಕಣ್ಮರೆ ಆಗುತ್ತ ಸಾಗಿದೆ.

✍🏻ಅಕ್ಷತಾ ಜಗದೀಶ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading