ಹೊಸ್ತಿಲ ಹಬ್ಬದ ಮಹತ್ವ – ಆಚರಣೆ, ಸಂಪ್ರದಾಯ

Posted by

·

ರೈತ ಮತ್ತು ಭೂಮಿಯ ಸಂಭದವನ್ನು ಸಾರುವ ಹಬ್ಬ ಹೊಸ್ತು

ಈ ಹಬ್ಬವನ್ನು ಅಶ್ವಯುಜ ಪ್ರತಿಪದೆಯೆಂದು, ಇಲ್ಲವೇ ನವರಾತ್ರಿಯಂದು ಆಚರಿಸುವರು. ಅಂದು ಮನೆ ಮತ್ತು ತುಳಸಿಯ ಒಳಹೊರಗೆಲ್ಲಾ ಸಾರಿಸಿ ಹಲಿ ಹೊಯ್ದು, ವ್ಯವಸಾಯ ಉಪಕರಣಗಳನ್ನು ತೊಳೆದು, ಸೇಡಿಯ ಪಟ್ಟೆ ತೆಗಿಯುತ್ತಾರೆ. ಪಾಂಡವರ ಸಂಕೇತವೆಂದು ತುಳಸಿಯ ಮುಂದೆ ಆಯ್ದು ಸಗಣಿಯ ಮುದ್ದೆಗಳನಿಟ್ಟು, ಅವಕ್ಕೆ ಸೋರೆ, ಕುಂಬಳ ಹೂ ಪೇರಿಸುತ್ತಾರೆ. ಮಧ್ಯಾಹ್ನ ಮನೆಯಜಮಾನ ಮಿಂದು ಮುಡಿಯುಟ್ಟು ಮನೆ ಮಕ್ಕಳೊಡನೆ ಮನೆಯ ಪಕ್ಕದ ಗದ್ದೆಗೆ ಹೋಗಿ ತೆನೆಗೂಡಿ ತೊನೆಯುತ್ತಿರುವ ಕೆಯ್ಸಸಿಗಳನ್ನು ಒಟ್ಟಿಗೆ ಸೇರಿಸಿ ಎರಡು ಪೊಟ್ಟೆ ಕಟ್ಟುತ್ತಾನೆ; ಹೂಗಂಧ ಹಾಕಿ ಪೂಜಿಸಿ, ಧ್ಯಾನ ಸಮೃದ್ಧಿಯಾಗಲೆಂದು ಬೇಡಿಕೊಳ್ಳುತ್ತಾನೆ. ಅನಂತರ ಪೂಜಿಸಿದ ಪೊತ್ತೆಯನ್ನು ಬಿಟ್ಟು, ಅದರ ಸುತ್ತಲಿನ ಸ್ವಲ್ಪ ಕದಿರಗಳನ್ನು ಕೊಯ್ದು ಪಿಂಡಿಕಟ್ಟಿ ತಲೆಯ ಮೇಲಿಟ್ಟುಕೊಂಡು ಮನೆಗೆ ಬರುತ್ತಾನೆ. ಅನಂತರ ಕದಿರನ್ನು ಮಾವಿನೆಲೆ, ಪಾಂಡವರ ಹರಿಗೆ, ಕವಳೆ ಹೂ ಇಲ್ಲವೇ ಹಿಂಗಾರ ಸೇರಿಸಿ ಕವರಿಗೆ ನಾರಿನಲ್ಲಿ ತೋರಣದಂತೆ ಕಟ್ಟಿ ಗಂಧದ ಬೊಟ್ಟಿಟ್ಟು ತುಳಸಿಗೆ, ಮನೆಯ ಬಾಗಿಲಿಗೆ, ಕೋಳುಕಂಬಕ್ಕೆ, ಕೊಟ್ಟಿಗೆಗೆ ಹಾಗು ವ್ಯವಸಾಯ ಉಪಕರಣಗಳಿಗೆ, ತೆಂಗಿನ ಮರಕ್ಕೆ ಕಟ್ಟಿ ತುಳಸಿ ಪೂಜೆ, ಮನೆದೇವರ ಪೂಜೆ ಮಾಡಿ, ಬೆಲ್ಲ ಹಾಕದೆ ಅಕ್ಕಿ ಕಾಯಿ ಹಾಲನ್ನು ಬೆರಸಿ ಮಡಿದ ಪಾಯಸವನ್ನು ನೈವೇದ್ಯ ಮಾಡಿ, ಹಬ್ಬದೂಟ ಮಾಡುತ್ತಾರೆ.

ಕದಿರನ್ನು ಪೂಜಿಸಿ, ತೆನೆ ಕೊಯ್ದಲ್ಲಿ, ಧಾನ್ಯದೇವತೆ ಹೊಲದಲ್ಲಿ ನೆಲಸಿ ಧಾನ್ಯ ಸಮೃದ್ಧಿಯಾಗುವುದೆಂಬ ನಂಬಿಕೆ ರೈತರದ್ದು. “ಧಾನ್ಯ ಮಾತೃವನ್ನು ಹೊರಗೆ ಹೋಗದಂತೆ ಸಾಯಿಸಿದರೆ, ಅದರ ಶಕ್ತಿ ಹೊಲದಲ್ಲಿಯೇ ಉಳಿದು, ಮುಂದೆ ಬೆಳೆ ಬೆಳೆಯಲು ಸುಗಮವಾಗುತ್ತದೆ ಎಂಬ ನಂಬಿಕೆಯಿದೆ.

ಹೊಸತಿನ ಮಾರನೇ ದಿನ ಕೆಲವರು ‘ಕಿರಿ ಹೊಸತನ್ನು’ ಆಚರಿಸಿ, ಮೊಗೆಕಾಯಿ ಕಡಬು ಮಾಡಿ, ಕಾಯಿ ಹಾಲು ಬೆಲ್ಲ ಬೆರಸಿದ ಹಾಲಿನೊಡನೆ ತಿನ್ನುತ್ತಾರೆ.

ಹೊಸ್ತಿಲ ಹಬ್ಬ ಆಚರಣೆಯ ಕೆಲವು ಆಯ್ದ ಚಿತ್ರಗಳು

ಹೊಸತಿನ ದಿನವೇ ಹೊಸಬೆಳೆಯಿಂದ ಹೊಸಕ್ಕಿಯನ್ನು ಸಿದ್ದಗೊಳಿಸಿ ಕೆಲವೆಡೆ “ಹೊಸಕ್ಕಿ ಉಣ್ಣು”ವುದೂ ಇದೆ. ಇದಕ್ಕೆ ‘ಹೊಸಕ್ಕಿ ಉಪಾರ’ವೆಂದು ಕರೆಯುತ್ತಾರೆ. ಕೊಡಗಿನ ಹುತ್ತುರಿ, ಕೇರಳದ ಓಣಮ್ ಹಬ್ಬಗಳನ್ನು ಹೊಸತು-ಹೊಸಕ್ಕಿಯ ಹಬ್ಬ ನೆನಪಿಸುತ್ತದೆ.

ಮಾಹಿತಿ: ಹಾಲಕ್ಕಿ ಒಕ್ಕಲಿಗರು – ಒಂದು ಸಾಂಸ್ಕೃತಿಕ ಅಧ್ಯಯನ

ಸಂಪಾದಕರು: ಡಾ. ಎನ್. ಆರ್. ನಾಯಕ

ಚಿತ್ರ ಕೃಪೆ: ಸುಪ್ರಿಯಾ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading