ಅಂಕೋಲೆಯ ಸುಪ್ರಸಿದ್ದ ಬಂಡಿಹಬ್ಬದೊಂದಿಗೆ ನೆಣೆಯಲ್ಪಟ್ಟ ಐತಿಹಾಸಿಕ ಸತ್ಯ ಘಟನೆಯಿದು. ಹಿರಿಯ ತಲೆಮಾರನ್ನು ಬಿಟ್ಟರೆ, ಈ ಪವಾಡ ಕೇಳಿ ಬಲ್ಲವರು ಕಡಿಮೆ.ಇದು ಜರುಗಿದ ವರ್ಷ ಬರವಣಿಗೆಯಲ್ಲಿ ಇರದಿದ್ದರೂ, ಸುಮಾರು 100 -150 ವರ್ಷಗಳ ಹಿಂದಿನ ಅವಧಿಯಲ್ಲಿ ಘಟಿಸಿದ್ದು. ಇಂದಿನ ಟಿ ವಿ ಪ್ರಸಾರಕಾರ ಭಾಷೆಯಲ್ಲಿ..”ಇದು ಹೀಗೂ ಉಂಟೇ?”” ಅಥವಾ “”ಹೀಗೂ ಜರುಗಿತ್ತೇ ವಿಸ್ಮಯ?””
ನಮ್ಮೂರಿನ ಗ್ರಾಮದೇವತೆ ಶ್ರೀ ಶಾಂತಾದುರ್ಗೆ ಹಾಗೂ ಪರಿವಾರ ದೇವತೆಗಳ ಕೂಡುವಿಕೆಯಲ್ಲಿ, ಅಂದಿನ ಕಾಲದಲ್ಲಿ, ಊರಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬಂಧಿಸಲ್ಪಟ್ಟಿದ್ದವು. ಅಂದರೆ ಅಂಕೋಲೆಯಲ್ಲಿ ಈಗ ಇರುವಂತೆ ಹೆಚ್ಚಿನ ದೇವಸ್ಥಾನಗಳು ಇರಲಿಲ್ಲ. ಕೋಟೆಯ ಹಾಗೂ ಕೆಲವು ರಾಜ ವಂಶಸ್ಥರಿಂದ ನಿರ್ಮಿಸಲ್ಪಟ್ಟ ದೇವ ದೇಗುಲಗಳನ್ನು ಬಿಟ್ಟರೆ, ಇಂದು ಕಾಣುವ ಹೆಚ್ಚಿನ ದೇವಸ್ಥಾನಗಳು ಸಾಮಾನ್ಯವಾಗಿ ಪೋರ್ಚುಗೀಸರು ಗೋವಾ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರ ಇಲ್ಲಿ ಸ್ಥಾಯಿಯಾದವು.
ಎಲ್ಲಿಯೇ ಊರು ಸ್ಥಾಪನೆಯದಾಗ, ಗ್ರಾಮದೇವರ ಗುಡಿಯನ್ನು ಮೊಟ್ಟಮೊದಲು ನಿರ್ಮಿಸುವುದು ಪದ್ಧತಿಯಾಗಿತ್ತು. ಅಂಕೋಲೆಯ ಮೂಲ ಗ್ರಾಮದೇವಿ ಮತ್ತು ಆ ತಾಯಿಯ ಪರಿವಾರವೇ ಮೊದಲ ದೇವ ಸಂಕಿರ್ಣ ಎನ್ನಬಹುದು. ಹೀಗಾಗಿ ಶಾಂತಾದುರ್ಗೆ ಮತ್ತು ಕಲಶ ದೇವರ ಪರಿವಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಬ್ಬಹರಿದಿನಗಳು ಊರಿನಲ್ಲಿ ನಡೆದು ಬಂದಿವೆ. ಅಂಕೋಲೆಯ ಗಡಿಗಳಲ್ಲಿರುವ ಹಾಗೂ ಊರನ್ನು ಕಾಯುವ ನಿರ್ದಿಷ್ಟ ದೇವಗಣಗಳಿಂದ,ಆಗಿನ ಊರಿನ ಗಡಿ ನಿರ್ಧಾರವಾಗಿತ್ತು. ಇಂದು ನಾವು ಸಂಭ್ರಮಿಸುವ ಬಂಡಿ ಹಬ್ಬವು ಅಂದಿನ ಎಲ್ಲಾ ಸಮಾಜದವರು ಕೂಡಿಮಾಡುವ ಹಾಗೂ ಸಂಭ್ರಮಿಸುವ ದೊಡ್ಡ ಹಬ್ಬವಾಗಿತ್ತು. ಒಂದರ್ಥದಲ್ಲಿ ಪರ ಧರ್ಮೀಯ ಆಕ್ರಮಣಕಾರರು ಮತ್ತು ಬ್ರಿಟಿಷರ ಆಡಳಿತ ಬರುವ ಪೂರ್ವದಲ್ಲಿಯೇ, ಆಗ ಊರಿನಲ್ಲಿ ನೆಲೆಸಿದ ಎಲ್ಲ ವರ್ಗದವರು ದೈವವನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಗ್ರಾಮ ದೇವಿ ದೇವಸ್ಥಾನವು ಎಂದಿನಿಂದ ಸ್ಥಾಪಿಸಲ್ಪಟ್ಟಿದೆ ಎಂಬ ನಿಖರ ಮಾಹಿತಿ ಲಭ್ಯವಿಲ್ಲ.ಆದರೆ ಈ ಬಗ್ಗೆ ವರ್ಣನೆಗಳಿವೆ,ಕಥೆಗಳಿವೆ. ಗ್ರಾಮದೇವಿಯ ಮೂಲಸ್ಥಾನವು ಮೊದಲು ಇಂದಿನ ಶಿರಕುಳಿ ಗ್ರಾಮದಲ್ಲಿ ಶ್ರೀ ಕಾನನದೇವಿ ಪರಿಸರದಲ್ಲಿ ಇತ್ತೆಂದು ನಂಬಿಕೆ ಇದೆ. ಆಗಿನ ಕಾಲದಲ್ಲಿ ಮುಖ್ಯವಾಗಿ ಕೃಷಿ ಮತ್ತು ವ್ಯಾಪಾರ ಹಾಗೂ ಅವುಗಳಿಗೆ ಸಂಬಂಧಿಸಿದ ವ್ಯವಹಾರವೇ ಮುಖ್ಯವಾಗಿತ್ತು.
ಭೂಮಿತಾಯಿ ಹಾಗೂ ಅಮ್ಮನ ಪರಿವಾರ ದೇವತೆಗಳಪೈಕಿ,ಶ್ರೀ ಕಳಸ ದೇವರು ಮತ್ತು ಪ್ರಮುಖ ಬಂಟ ಶ್ರೀ ಹಿರೇ ಹೊನ್ನಪ್ಪ, ಬೀರ, ಬೊಮ್ಮಯ್ಯ್, ಮಾಣಿಬ್ರಹ್ಮ, ಸಣ್ಣ ಚೆಣಕಿ ಬೀರ, ದೊಡ್ಡ ಚೆಣಕಿ ಬೀರ, ಬೇಡ, ರಕ್ಕಸ, ಚಾಳಿ ಪಂಥಿ, ಹೊಲೆವಟರ, ಬಾಗಿಲು ಬಂಟ, ಹುಲಿದೇವ, ಮಹಾಸತಿ, ಕುಂಟನ ಬೇಡ್ತಿ, ದಂಡಿನ ಬೇಡ್ತಿ ವಗೈರೆ ಪರಿವಾರದ ಅವಿನಾಭಾವ ಸಂಬಂಧ ಇದ್ದು, ಅದೇ ಪರಂಪರೆಯಲ್ಲಿ ಕೃಷಿ ಆಧಾರಿತ ಜನರನ್ನು ಗಣನೆಯಲ್ಲಿಟ್ಟು, ಅವರ ಸಮಯಕ್ಕೆ ತಕ್ಕಂತೆ ಹಬ್ಬಗಳನ್ನು ನಿಗದಿಪಡಿಸಿ ಊರಿನ ಎಲ್ಲಾ ವರ್ಗದವರ ಸಮಗ್ರತೆಯ ದೃಷ್ಟಿಯಿಂದ ಪರಂಪರೆ ಹೆಣೆಯಲಾಗಿತ್ತು. ಕುಂಬಾರಕೇರಿಯಲ್ಲಿ ಕಲಶ ದೇವಸ್ಥಾನವಿದ್ದು, ಶ್ರೀ ಕಳಸ ದೇವರು ಸುಂದರವಾಗಿ ಶೃಂಗಾರಗೊಂಡು ಗಂಗಾವಳಿ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ತಾಯಿಯ ದರ್ಶನಕ್ಕೆ ಬಂದಂತೆ, ನಿಗದಿಪಧಿಸಿದ ಎಲ್ಲಾ ಕಾರ್ಯಗಳು ನಡೆಯುತ್ತವೆ. (ಪ್ರಮುಖವಾಗಿ ಬಂಡಿಹಬ್ಬ, ಹೊಸ್ತು ಹಬ್ಬ, ಅವಲಬ್ಬ ಇತ್ಯಾದಿ ). ಅಂಕೋಲೆಯ ಕಳಸದ ವಿಶೇಷವೆಂದರೆ ಕಳಶವು ಪೂರ್ಣ ಬಂಗಾರದ ಕೊಡವಾಗಿದ್ದು, ಅಲಂಕಾರದ ಎಲ್ಲಾ ಪತಾಕೆಗಳು ಸ್ವರ್ಣಮಯವಾಗಿವೆ.
ಶ್ರೀ ಕಳಶದೇವರು ತಿರುಗಾಡುವ ದಾರಿಯಲ್ಲಿ ಸಂಪೂರ್ಣ ರಸ್ತೆಯನ್ನು ಸ್ವಚ್ಛ ಮಾಡಿ, ತಮ್ಮ ತಮ್ಮ ಮನೆಯ ಎದುರು ಸೆಗಣಿಯನ್ನು ಸಾರಿಸಿ, ರಂಗೋಲಿಯನ್ನು ಹಾಕಿ, ಮಾವಿನ ಎಲೆಯ ಹಾಗೂ ಹೂವಿನ ತೋರಣವನ್ನು ಹಾಕಿ ಶೃಂಗರಿಸುವುದು ನಡೆದುಬಂದ ಸಂಪ್ರದಾಯ. ಆಯಾ ತೋರಣದ ಅಡಿಯಲ್ಲಿ ಆಯಾ ಮನೆಯವರು ಆರತಿ ಸಲ್ಲಿಸುವುದು ವಾಡಿಕೆ. ಹೀಗೆ ಶ್ರೀ ಕಲಶ ದೇವರು ನಡೆದಾಡುವ ಮಾರ್ಗದುದ್ದಕ್ಕೂ ಇರುವ ಮನೆಯವರು ತಮ್ಮ ಮನೆಯ ಎದುರು ತೋರಣ ಹಾಕುತ್ತಾರೆ. ಒಳ ಪ್ರದೇಶದಲ್ಲಿರುವ ಮನೆಯವರು ತಮ್ಮ ಅನುಕೂಲತೆಗೆ ತಕ್ಕಂತೆ ಮೂರು ರಸ್ತೆಗಳು ಸೇರುವ ಇಲ್ಲವೇ ನಾಲ್ಕು ರಸ್ತೆಗಳು ಸೇರುವ ಕವಲಿನಲ್ಲಿ ನಿಂತು ಆರತಿ ಹಾಗೂ ಹರಕೆ ನೀಡಿ ಧನ್ಯ ರಾಗುತ್ತಿದ್ದರು. ದೇವರಿಗೆ ತಮ್ಮ ಕಷ್ಟ ಸುಖದ ಪ್ರಶ್ನೆ ಕೇಳುವದು ಸಂಪ್ರದಾಯ. ಅನೇಕರು ಅಲ್ಲಿಯೇ ದೇವರಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಶ್ನೆ ರೂಪದಲ್ಲಿ ಕೇಳಿ ಪರಿಹಾರ ಪಡೆಯುತ್ತಿದ್ದಾರಲ್ಲದೇ, ತಮ್ಮ ಸಮಸ್ಯೆಗೆ ಪರಿಹಾರ ಪಡೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿದ್ದರು. ಹೀಗೆ ದೇವತಾಕಾರ್ಯಗಳು ನಿರ್ವಿಘ್ನವಾಗಿ ಸಂಪ್ರದಾಯದಂತೆ ನಡೆದು ಬರುತ್ತಿದ್ದವು. ನಂತರದ ಕಾಲದಲ್ಲಿ ಬಬ್ರುವಾಡ ಪ್ರದೇಶದಲ್ಲಿ ಸಾಕಷ್ಟು ಮುಸ್ಲಿಮರು ನೆಲೆಸಿದರು. ಆದರೆ ಈ ಸಮಾಜದವರೂ ಸಹ ಶಾಂತಿ ಪೂರ್ಣವಾಗಿ ದೇವರು ಸಾಗುವ ದಾರಿಯಲ್ಲಿ ಯಾವುದೇ ವಿಘ್ನಗಳು ಬಾರದಂತೆ ನಡೆದುಕೊಳ್ಳುತ್ತಿದ್ದರು.
ಈಗ ನಾನು ವಿವರಿಸುವ ಒಂದು ದುರ್ದೈವಿ ಘಟನೆಯನ್ನು ಬಿಟ್ಟರೆ, ಈ ಸೌಹಾರ್ದತೆಗೆ ಎಂದಿಗೂ ಭಂಗ ಬಂದಿದ್ದು ಇಲ್ಲ.ತಮ್ಮ ಮನೆಯ ಎದುರು ರಸ್ತೆಯಲ್ಲಿ ದೇವರು ಸಾಗುವಾಗ ಅಥವಾ ಆರತಿ ಸ್ವೀಕರಿಸಲು ನಿಂತಾಗ ಅನೇಕ ಮುಸ್ಲಿಂ ಕುಟುಂಬಗಳು ಇಂದಿಗೂ ಸಹ ಭಯ ಭಕ್ತಿಯಿಂದ ನಿಂತು,ತಮ್ಮಿಂದಾದ ಗೌರವವನ್ನು ಸಲ್ಲಿಸುತ್ತಾರೆ. ಈ ಭಾವನಾತ್ಮಕ ಸಂಬಂಧಕ್ಕೆ ಇಂದಿಗೂ ಸಹ ಕೊರತೆ ಇಲ್ಲ.
ಆದರೆ ಯಾವ ಕಾರಣಕ್ಕೋ ಅಥವಾ ಯಾವ ಪ್ರಚೋದನೆಗೋ ಏನೋ, ಓರ್ವ ಅನ್ಯಧರ್ಮಿಯನಿಗೆ ಶ್ರೀ ಕಳಶದೇವರ ತುಷ್ಟಿಕರಣ ಮಾಡುವ ಹಾಗೂ ಪರೀಕ್ಷೆ ಮಾಡುವ ದುರ್ಬುದ್ದಿ ಬಂತು. ನಾನೀಗಾಗಲೇ ಹೇಳಿದಂತೆ ಘಟನೆಯ ವರ್ಷ ಗೊತ್ತಿಲ್ಲದಿದ್ದರೂ, ಇಂದಿಗೂ ಆ “ನಿರ್ದಿಷ್ಟ ಪ್ರದೇಶಕ್ಕೆ” ಅಂದರೆ ಶಾಪಗ್ರಸ್ತ ಜಮೀನಿನ ಎದುರು (ಈಗಿನ ಪಿ ಎಂ ಪ್ರೌಢ ಶಾಲೆಯ ಪಕ್ಕದ ಶ್ರೀ ಅಲ್ಲಿಸಾಬ್ ಮನೆತನದ ಡ್ರೈವರ್ ಹಮೀದ್ ಸಾಬ್ /ಅಖಿಲ್ ಶೇಖ್ ಇವರ ಮನೆ ಎದುರಿನ ರಸ್ತೆಯ ಇನ್ನೊಂದು ಬದಿ )ದೇವರು ಬಂದಾಗ ದೇವರ ಹಿರಿಯ ಸಿಬ್ಬಂದಿಗಳು ಸಹಜವಾಗಿ ಆ ಕಹಿ ಘಟನೆ ನೆನಪಿಸುತ್ತಾರೆ.
ಆ ಹಿಂದಿನ ತಲೆಮಾರಿನ ವ್ಯಕ್ತಿಗೆ ದುರ್ಬುದ್ದಿಬಂದು ನಿಮ್ಮ ದೇವರನ್ನು ನಾನು ಪರೀಕ್ಷಿಸುತ್ತೇನೆ, ಆ ದೇವರು ಏನು ಮಾಡುತ್ತಾನೋ ನೋಡುವಾ ಎನ್ನುತ್ತಿದ್ದನಂತೆ. ಬಹುಷಃ ಆಗಿನ ಸಂದರ್ಭದಲ್ಲಿ ಇತರ ಸಮಾಜದವರೂ ಸಹ ದೇವರಿಗೆ ಹೂವನ್ನು ಅರ್ಪಿಸುವ ರೂಢಿ ಇತ್ತು. (ಇಂದಿಗೂ ಕೆಲವು ಕುಟುಂಬದವರಿಂದ ಮುಂದುವರಿದಿದೆ ). ಹೀಗೆ ಕಳಶದೇವರು ಆರತಿ ಸ್ವೀಕರಿಸಲು ಅವನ ಮನೆ ಎದುರಿನ ರಸ್ತೆಯಲ್ಲಿ ನಿಂತಾಗ, “ಅವ” ಅಲ್ಲಿಗೆ ಬಂದು ಒಂದು ಬಟ್ಟೆಯಿಂದ ಮುಚ್ಚಿದ ತಟ್ಟೆಯನ್ನು ದೇವರ ಮುಂದೆ ತಂದು ತೋರಿಸಿ , ಇದನ್ನು ಅರ್ಪಿಸುತ್ತಿದ್ದೇನೆ,ತನ್ನ ತಾಟಿನಲ್ಲಿ ಎನಿದೆ ಎಂಬ ವಿಚಾರ ಕೇಳಿದನಂತೆ (ಕೆಲವರು ಅವನು ಬಾಳೆ ಹಾಗೂ ಸಾಗುವಾನಿ ಗಿಡದ ಎಲೆಯಲ್ಲಿ ಕಟ್ಟಿದ ಎರಡು ಪೊಟ್ಟಣ ತಂದಿದ್ದನೆಂದು ಹೇಳುತ್ತಾರೆ )
ಈ ವಿಚಿತ್ರ ಪ್ರಶ್ನೆಯಿಂದ ಹಾಗೂ ಘಟನೆಯಿಂದ, ಕಳಶದ ಸಿಬ್ಬಂದಿಗಳು ಹಾಗೂ ಸೇರಿದ ಜನರು ಕ್ಷಣಕಾಲ ವಿಚಲಿತರಾದರೂ, ಕಲಶ ಹೊತ್ತ ಮುಖ್ಯ ಗುನುಗರು ಕ್ಷಣಮಾತ್ರದಲ್ಲಿ, ಮೈಮೇಲೆ ಭಾರ ಬಂದು, ಅಷ್ಟೇ ತಾಳ್ಮೆಯಿಂದ, ನಿನ್ನ ಕಾಣಿಕೆ ಸ್ವೀಕರಿಸಿದ್ದೇನೆ, ನಿನ್ನ ತಾಟಿನಲ್ಲಿ ಹೂವಿದೆ ಎಂದು ನುಡಿದರಂತೆ. ಆಗ ಗಹಗಹಿಸಿ ನಕ್ಕ, ಆ ವ್ಯಕ್ತಿ, ತಾನು ದೇವರ ಪರೀಕ್ಷೆಗೆ ಮಾಂಸವನ್ನು ಮುಚ್ಚಿಕೊಂಡು ತಂದಿದ್ದೇ… ಎಂದು ವದರುತ್ತಾ,ತಾಟಿನ ಮೇಲೆ ಮುಚ್ಚಿದ ಬಟ್ಟೆಯನ್ನು ಮೇಲಕ್ಕೆತ್ತಿದಾಗ, ತಾಟು ಸಂಪೂರ್ಣವಾಗಿ ಸಂಪಿಗೆ ಹೂವಿನಿಂದ ತುಂಬಿತ್ತಂತೆ. ಇತನ ಕಪಿಚೇಷ್ಟೆಯಿಂದ, ನೆರೆದಿದ್ದ ಎಲ್ಲರಿಗೂ ಶ್ರೀ ಕಲಶ ದೇವರ ಪವಾಡ ಪ್ರತ್ಯಕ್ಷಿಸುವಂತಾಯಿತು. ತಕ್ಷಣ, ದೇವರು ತನ್ನ ಮಾರ್ಗವು ಮೈಲಿಗೆ ಆಯಿತೆಂದು, ಆದಿನ ತನ್ನ ಮಾರ್ಗವನ್ನೇ ಬದಲಿಸಿ ಕನಸಿಗದ್ದೆಯ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ಸಾಗಿತು.
ಈ ಪವಾಡ ನಡೆದ ರಾತ್ರಿಯೇ, ಆ ದೊಡ್ಡ ಮನೆತನದ ಅಂದರೆ ದೇವರ ಕುಚೇಷ್ಟೆ ಮಾಡಲು ಹೊರಟ ವ್ಯಕ್ತಿಯ ಎರಡು ಅಂತಸ್ತಿನ ಬೃಹತ್ ಮನೆ, ಬೆಂಕಿಗೆ ಆಹುತಿಯಾಗಿ ನೆಲಸಮವಾಯಿತು. ( ಈ ಬಿದ್ದ ಕಟ್ಟಡವನ್ನು ನಾವು ಪಿ. ಎಂ. ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದಾಗ ರಸ್ತೆಯ ಪಕ್ಕದಿಂದ ನೋಡುತ್ತಿದ್ದೆವು. ಮನೆಯ ದೊಡ್ಡ ತೊಲೆಗಳು ಜೋತಾಡುತ್ತಿದ್ದುದನ್ನು, ಕುಸಿದು ನೆಲಸಮವಾದ ಅವಶೇಷಗಳನ್ನು ನಾವು ಕಾಣುತ್ತಿದ್ದೆವು.) ಪಾಪ,ಅವನ ಕುಟುಂಬದವರೆಲ್ಲರೂ ಬೀದಿಗೆ ಬಂದರು. ಇದು ಕಳಶದ ಶಾಪದ ಮನೆ ಎಂದು ಜನ ತೋರಿಸುತ್ತಿದ್ದರು. ಪುನಃ ಅದೇ ಸ್ಥಳದಲ್ಲಿ ಅವನ ವಂಶಸ್ಥರಿಗೂ ಮನೆ ಕಟ್ಟಲು ಸಾಧ್ಯವಾಗಲಿಲ್ಲ. ಈ ಮನೆತನದ ಕೊನೆಯ ವಂಶಸ್ತ ವಸೂಲಿ ಯಾನೆ ಮೋವಾಲಿ ಇಬ್ರಾಹಿಂನನ್ನು ನಾನು ನೋಡಿ ಮಾತನಾಡಿಸಿದ್ದು ಇದೆ. ಅವನು ತನ್ನ ಅಂದಿನ ಜಾಗೀರ್ ಮನೆತನದ ಮತ್ತು ಹಣೆಬರಹದ ವಿಚಾರ ಹೇಳುತ್ತಿದ್ದ.
ನಂತರ, ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪಪಟ್ಟು “ಆ” ವ್ಯಕ್ತಿ, ಕುಟುಂಬಸಮೇತ ಶ್ರೀ ಶಾಂತಾದುರ್ಗೆ ಹಾಗೂ ಶ್ರೀ ಕಲಶ ದೇವರಲ್ಲಿ ಬಂದು, ತನ್ನ ತಪ್ಪಿಗೆ ಕ್ಷಮಿಸಬೇಕೆಂದು ಪ್ರಾರ್ಥನೆ ಸಲ್ಲಿಸಿದನಂತೆ. ಹಾಗೂ ತನ್ನ ಅಕ್ಷಮ್ಯ ಪ್ರಮಾದಕ್ಕೆ “”ತಪ್ಪು ಕಾಣಿಕೆ “”ಇಟ್ಟನಂತೆ. ದೇವರ ಆದೇಶದಂತೆ ಆನಂತರದ ವರ್ಷದಿಂದ “ಅವನು ” ಪರೀಕ್ಷೆವೊಡ್ಡಲು ಬಂದ ಸ್ಥಳದಲ್ಲಿಯೇ ತೋರಣಹಾಕಿ ಶೃಂಗಾರಗೊಂಡು ಬರುವ ಕಳಸ ದೇವರನ್ನು ನಿಲ್ಲಿಸಿ,ದೇವಸ್ಥಾನದ ವತಿಯಿಂದ (ತಪ್ಪು ಒಪ್ಪಿಗೆ ಕಾಣಿಕೆ ನೀಡಿದ ಹಣದಿಂದಲೇ ) ಶಾಲುಹಾಕಿ ಬರಮಾಡಿಕೊಳ್ಳುವ ಸಂಪ್ರದಾಯ ಆರಂಭವಾಯಿತು.ಹಾಗೂ ನಂತರದ ದಿನಗಳಲ್ಲಿ, ಊರಿನ ಪ್ರಮುಖರಾದ, ನಾರಾಯಣ ದೇವಸ್ಥಾನದ ಎದುರಿನ ಹಾಗೂ ದೇವಸ್ಥಾನದ “ಗಾ0ವ್ಕಾರ ಕುಟುಂಬದವರು” ಸುಂದರ ಶಾಲನ್ನು ಹೊದಿಸಿ ಸ್ವಾಗತಿಸುವ ಸಂಪ್ರದಾಯಿಕ ಪದ್ಧತಿ ಇಂದಿಗೂ ಮುಂದುವರಿದಿದೆ.
ನಾನು ಕೇಳಿದಂತೆ ಈ ಶಾಪಗ್ರಸ್ಥ ಆಸ್ತಿಯನ್ನು, ಹಿಂದಿನ ಇತಿಹಾಸ ಗೊತ್ತಿಲ್ಲದೇ ನಂತರದಲ್ಲಿ ಖರೀದಿಸಿದ ಕೆಲ ವ್ಯಕ್ತಿಗಳೂಸಹ ಅಸೌಖ್ಯ ಇಲ್ಲವೇ ವಿವಿಧ ತೊಂದರೆಗೆ ಒಳಗಾಗಿ, ಪರಿಣಾಮ,ಗ್ರಾಮದೇವತೆ ಹಾಗೂ ಕಲಶ ದೇವರಿಗೆ ಮೊರೆಹೋಗಿ ಹರಿಕೆಸಲ್ಲಿಸಿ ಪರಿಹಾರ ಪಡೆದಿದ್ದುoಟು.
ಹೀಗೆ ಶ್ರದ್ಧೆ , ನಂಬಿಕೆಗಳೇ ಕಡಿಮೆಯಾಗುತ್ತಿರುವ ಇಂದಿನ ಪೀಳಿಗೆಗೆ ಮತ್ತು ಈಗಿನ ವ್ಯವಸ್ಥೆಗೆ ಇದೊಂದು ಐತಿಹಾಸಿಕ ಕನ್ನಡಿ. ಸುದೈವದಿಂದ ನಾನು ಚಿಕ್ಕವನಿದ್ದಾಗಿನಿಂದ ಕುತೂಹಲದ ಕಾರಣ ಈಗಿನ ಕಲಶ ಹೊರುವ ಶ್ರೀ ಉದಯ ಗುನಗ, ಅವರ ತಂದೆ ಶ್ರೀ ಗಣಪತಿ ಗುನಗ, ಅವರ ತಂದೆ ಶ್ರೀ ನಾರಾಯಣ ಗುನಗ (ಮೂರು ತಲೆಮಾರು )ಮತ್ತು ಪ್ರಮುಖ ಬಿಡುಗುನಗರಾದ ಶ್ರೀ ನೀಲಪ್ಪ ಗುನಗ, ಅವರ ಪುತ್ರ ಶ್ರೀ ವಾಸುದೇವ ಗುನಗ, ಹಿರಿಯ ಅರ್ಚಕರಾದ ಶ್ರೀ ತಮ್ಮಣ್ಣ ಭಟ್, ಶ್ರೀ ಶಾಂತಾರಾಮ್ ಭಟ್, ಶ್ರೀ ನಾಗೇಶ್ ಭಟ್, ಇವರೊಂದಿಗೆ ಅನ್ಯೋನ್ಯತೆಯಿಂದಿರುವಾಗ ಕೇಳಿ ತಿಳಿದ ಇಂಥಹ ನೂರಾರು ದೈವಿಶಕ್ತಿಯ ಘಟನೆಗಳು ಮನದಾಳಲ್ಲಿ ನೆಲೆಸಿವೆ.
ಮಾಹಿತಿ: ನೆನಪಿನಂಗಳದಿ, ಸುಭಾಸ ನಾರ್ವೇಕರ್, ANKOLA- CULTURE HISTORY AND ECOLOGY



Leave a Reply