ಕೋಳಿಕಟ್ಟ ಅಂದ್ರೆ ಕೋಳಿಅಂಕ – ಸಂಪೂರ್ಣ ಮಾಹಿತಿ

Posted by

·

ಇದು ಕೋಳಿ ಅಂಕದ ಕೇವಲ ಮಾಹಿತಿಯಾಗಿದೆ… ಹಲವು ಕಡೆಯಿಂದ ಮಾಹಿತಿ ಸಂಗ್ರಹಿಸಿ ಇದನ್ನು ಬರೆಯಲಾಗಿದೆ
ತುಳುನಾಡಿನ ಜಾನಪದ ಆಟಗಳಲ್ಲಿ ಕೋಳಿಕಟ್ಟ ಮುಖ್ಯವಾಗಿದೆ. ಕೋಳಿಕಟ್ಟಕ್ಕೆ ಭೂತ ದೈವಗಳೇ ಅಧಾರ. ಇದರೊಂದಿಗೆ ಕೋಳಿಕಟ್ಟ ಎಂಬ ಸ್ಪರ್ಧಾತ್ಮಕ ಆಟವೂ ನಡೆಯುತ್ತದೆ. ಊರಿನಲ್ಲಿ ಎಲ್ಲೆಲ್ಲಿ ಅಂಕ ಆಯನಗಳು ನಡೆಯುತ್ತಿವೆಯೋ ಅಲ್ಲಿ ಕೋಳಿಕಟ್ಟಗಳೂ ನಡೆಯುತ್ತಿವೆ. ಅಂಕ ಆಯನಗಳಿಗಿಂತ ಮೊದಲು ಕೋಳಿಕಟ್ಟ. ಕೋಳಿಕಟ್ಟಕ್ಕೆ ಕೆಲವು ಸ್ಥಳಗಳು ತುಂಬಾ ಹೆಸರು ಪಡೆದಿವೆ. ಅಂಬಿಲಡ್ಕ, ತೊರವೊಲು, ಬಲ್ಲಂಗುಡೆಲ್, ಬೆಜ್ಜ, ಮುಡಿಪು, ಬಪ್ಪನಾಡ್ ಹೀಗೆ ಸ್ಥಳಗಳಿವೆ. ಅಲ್ಲಿಂದಾ ಇದು ಭಟ್ಕಳ್, ಹೊನ್ನಾವರ, ಅಂಕೋಲಾ, ಕುಮಟಾ, ಅವರ್ಸಾ, ಚೆಂಡಿಯಾ, ಮಂಕಿ ಹೀಗೆ ಉತ್ತರ ಕನ್ನಡದ ಕರಾವಳಿಯಲ್ಲು ಹರಡಿತು. ಹಿಂದಿನ ಕಾಲದಲ್ಲಿ ಈ ಕೋಳಿ ಅಂಕದ ಆಟದಲ್ಲಿ ಯೋಧರು ಅನಿಸಿಕೊಂಡಿದ್ದ ಬಿಲ್ಲವರು ಮತ್ತು ಬಂಟರು ಬಹಳ ಹೆಸರು ಪಡೆದಿದ್ದರು. ಪ್ರತಿಯೊಬ್ಬ ಬಿಲ್ಲವ ಮತ್ತು ಬಂಟನ ಮನೆಯಲ್ಲಿಯೂ ಕೋಳಿಕಟ್ಟಕ್ಕಾಗಿ ವಿಶೇಷ ರೀತಿಯಲ್ಲಿ ಸಾಕಿದ ಹುಂಜಗಳು ಇರಲೇಬೇಕಿತ್ತು.

ಆಚರಣೆ:

ಈ ಕೋಳಿಅಂಕದ ಮಹತ್ವ ಹಾಗೂ ಔಚಿತ್ಯ ಏನು ಎಂಬುದನ್ನು ನಾವು ತಿಳಿದುಕೊಳ್ಳುವುದು ಒಳ್ಳೆಯದು. ಊರಿನ ಪ್ರತಿಯೊಂದು ದೈವಗುಡಿಗಳಲ್ಲೂ ಇನ್ನಿತರ ಭೂತ, ಗಣಗಳು ಇರುತ್ತವೆ. ಅವುಗಳಿಗೆ ಆಹಾರ ಕೊಡಬೇಕು. ಅಂಥ ಗಣಗಳಿಗೆ ಆಹಾರ ಕೊಡುವ ಸಲುವಾಗಿಯೆ ಈ ಕೋಳಿಕಟ್ಟ ಅದುವೇ ಮೂಲ ಉದ್ದೇಶ.

ಕೋಳಿ ಅಂಕಕ್ಕೆ ಹೊರಡುವಾಗ ಮತ್ತು ಕೋಳಿ ಅಂಕ ನಡೆಯುವ ರೀತಿ:

ಪ್ರತಿಷ್ಟಿತರ ಮನೆಯ ಅಂಗಳದಲ್ಲಿ, ಮರದಡಿಯ ನೆರಳಿನಲ್ಲಿ ಗೂಟಕ್ಕೆ ಕಟ್ಟಿ ಹಾಕಿದ ಮತ್ತು ಗೂಡಿನಲ್ಲಿ ಹಿಡಿದಿಟ್ಟ ಹುಂಜಗಳಿಗೆ ಮನೆಯ ಹೆಂಗಸರು ದಿನಾಲೂ ಸಮಯಕ್ಕೆ ಸರಿಯಾಗಿ ಭತ್ತದ ಕಾಳು ಮತ್ತು ನೀರು ಮರೆಯದೆ ಕೊಡುತ್ತಾರೆ. ಕೋಳಿಕಟ್ಟದ ದಿನ ಕಟ್ಟಿ ಹಾಕಿದ ಕೋಳಿಗಳ ಸ್ಥಳವನ್ನು ಗುಡಿಸುವುದಿಲ್ಲ. ಬೆಳಿಗ್ಗೆ ಗಂಜಿ ಊಟ ಮಾಡಿ ಕೋಳಿಕಟ್ಟಕ್ಕೆ ಹೊರಡುವುದು ಕ್ರಮ. ಹೋಗುವಾಗ ಕೈಯಲ್ಲೊಂದು ತೊಂಡು ಇರುತ್ತದೆ. ಅದು ಕೋಳಿಗೆ ನೀರು ಹಿಡಿಯಲಿಕ್ಕಾಗಿ ಬಳಸಲಾಗುತ್ತದೆ. ಮನೆಯ ಯಜಮಾನತಿ ತನ್ನ ಕೈಯಿಂದಲೇ ಕೋಳಿಗೆ ಅಕ್ಕಿ ತಿನ್ನಿಸುತ್ತಾಳೆ. ಕೆಲಸದವನು ಸ್ವಲ್ಪ ಅಕ್ಕಿಯನ್ನು ನೀರಿನ ತೊಂಡನ್ನು ಹಿಡಿದು ಕೊಳ್ಳುತ್ತಾನೆ. ಹೊರಡುವಾಗ ಮನೆಯ ಗುರಿಕಾರ ಒಳ್ಳೆಯ ರಟ್ಟೆಮುಳ್ಳೆಯ ಕೋಳಿಯನ್ನು ಮಗುವಿನಂತೆ ಎತ್ತಿಕೊಂಡು ಮುಂದಿನಿಂದ ಗತ್ತಿನಿಂದ ಹೋಗುತ್ತಾನೆ.

ಕೋಳಿಗಳ ಮೈಬಣ್ಣದಲ್ಲೂ ಹಲವಾರು ವಿಧಗಳಿವೆ. ಅದಕ್ಕೆ ಅನುಸಾರವಾಗಿ ಕೋಳಿಯ ಜಾತಿಯನ್ನು ಹೇಳುವ ಕ್ರಮವಿದೆ. ಉರಿಯೆ, ಮೈಪೆ, ಕೆಮ್ಮೈರೆ, ನೀಲೆ, ಪಂಚನಿ, ಬೊಳ್ಳೆ(ಕೊರುಂಗೆ), ಗಿದಿಯೆ(ಕಡ್ಲೆ), ಪೆರಡಿಂಗೆ, ಮಂಜೆಲೆ ಇತ್ಯಾದಿ. (ನಮ್ಮ ಅಂಕೋಲಾ ಭಾಷೆಯಲ್ಲಿ ಕರಿಕಾಡ್ಲಾ, ಬೂದ್ಘಾ, ಕರಿಕೆಂಪ, ಅರಿಶಿನ ಕೆಂಪ, ಬಿಲ್ವ, ಬಿಲ್ಕೆಂಪ, ಕಡ್ಲ,ಕಪ್ಪಂಚ ಇತ್ಯಾದಿ.)

ಕೋಳಿ ಹಿಡಿದುಕೊಂಡು ಕಟ್ಟಕ್ಕೆ ಹೋಗುವಾಗ ಯಾವುದೆ ಅಪಶಕುನವಾಗಬಾರದು. ಹಿಂದಿನ ಕೆಲವು ಅಂಧಶ್ರದ್ಧ್ಹೆಯ ಪ್ರಕಾರ ವಿಧವೆ ಹೆಂಗಸು, ಮಡಕೆಗಳ ಮೂಟೆ ಹೊತ್ತುಕೊಂಡು ಹೋಗುವ ಕುಂಬಾರ ಎದುರಾಗಲೇಬಾರದು. ಒಂದು ವೇಳೆ ಎದುರಾದರೆ ಅಂದು ತಮ್ಮ ಕೋಳಿಗಳಿಗೆ ಸೋಲುಂಟಾಗುತ್ತದೆ ಎಂಬಂತಹ ಕುರುಡು ನಂಬಿಕೆಗಳು ಹಿಂದೆ ಇದ್ದವು.

ಕೋಳಿ ಅಂಕ ಜರಗುವ ವಿಶಾಲ ಬಯಲನ್ನು ತಲುಪಿದ ಮೇಲೆ ಪ್ರತಿ ಮನೆಯವರು ತಮ್ಮ ಕೋಳಿಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಗೂಟ ಬಡಿದು ಕಟ್ಟಿ ಹಾಕುತ್ತಾರೆ. ಒಂದು ಬದಿಯಲ್ಲಿ ಒಬ್ಬ ತನ್ನ ಮನೆಯ ಕೋಳಿಗಳನ್ನು ನಿಲ್ಲಿಸುತ್ತಾನೆ. ನನ್ನ ಕೋಳಿಗಳಿಗೆ ಎದುರು ಕೋಳಿಗಳನ್ನು ನಿಲ್ಲಿಸುವವರಿದ್ದರೆ ಬರಬಹುದು ಅನ್ನುತ್ತಾನೆ. ಆಗ ಯಾರಾದರೊಬ್ಬರು ಮುಂದೆ ಬರುತ್ತಾರೆ. ಎರಡು ಕಡೆಯವರೂ ಅಯಾಯ ಕೋಳಿಗಳಿಗೆ ಎತ್ತರದಲ್ಲಿಯೋ ಮೈಭಾರದಲ್ಲಿಯೋ ಸರಿ ಹೊಂದುವ ಕೋಳಿಗಳನ್ನು ಜೋಡಿ ಮಾಡುತ್ತಾರೆ. ಹೀಗೆ ಜೋಡಿ ಮಾಡುವುದಕ್ಕೆ ಪತಿ ಮಾಡುವುದು ಎನ್ನುತ್ತಾರೆ.
ಇಕ್ಕೆಡೆಯವರೆಗೂ ಒಪ್ಪಿಗೆಯಾದರೆ ತಮ್ಮ ತಮ್ಮ ಕೋಳಿಯ ಕಾಲಿಗೆ ಹರಿತವಾದ ಕತ್ತಿ ಕಟ್ಟುತ್ತಾರೆ. ಕತ್ತಿಗಳಲ್ಲಿ ಎರಡು ವಿಧವಿರುತ್ತದೆ. ಕಾಲಿನ ಅರುವಾಯಿಗೆ ಬಟ್ಟೆ ಕಟ್ಟದೆ ಕಟ್ಟುವ ಕತ್ತಿ ಒಂದು ವಿಧವಾದರೆ ಬಟ್ಟೆ ಕಟ್ಟಿ ಆಮೇಲೆ ಕಟ್ಟುವ ಕತ್ತಿ ಇನ್ನೊಂದು ವಿಧದ್ದು.

ಕೋಳಿ ಅಂಕದ ಷರತ್ತುಗಳನ್ನು ಅಯಾಯಾ ಕೋಳಿಗಳ ಯಜಮಾನರು ಸೇರಿ ಮೊದಲೇ ನಿರ್ಧರಿಸುತ್ತಾರೆ. ಒಂದು ಕ್ರಮ ಪ್ರಕಾರ ಯಾರ ಎಷ್ಟೇ ಕೋಳಿಗಳು ಗೆಲ್ಲಲಿ ಸತ್ತ ಕೋಳಿಗಳಲ್ಲಿ (ಒಟ್ಟೆ ಕೋರಿ) ಸಮಪಾಲು ಮಾಡಬೇಕು. ಇದಕ್ಕೆ ಭಾಗದಲ್ಲಿ ಕೋಳಿಕಟ್ಟುವುದು ಎಂದೂ ಹೇಳುತ್ತಾರೆ.

ಕೋಳಿ ಕಾಳಗ ನಡೆಯುತ್ತಿರುವಾಗ ಗಾಯಗೊಂಡ ಕೋಳಿಗಳ ರಕ್ತ ನೆಲಕ್ಕೆ ಬೀಳುತ್ತದೆ. ಅದು ಅವರು ನಂಬಿದ ಭೂತಗಳಿಗೆ ಆಹಾರವಾಗುತ್ತದೆ ಎಂದು ಜನ ನಂಬುತ್ತಾರೆ.

ಮನೆ ತಲುಪಿದ ಮೇಲೆ ಮನೆಯೊಳಗಿನ ಮಹಿಳೆಯರಿಗೆ ಕೆಲಸ. ಮನೆಯ ಅಂಗಳದಲ್ಲಿ ನೆಂಟರ ಜೊತೆಯಲ್ಲಿ ಗಂಡಸರು ಮಾತನಾಡುತ್ತಾ ಕುಳಿತುಕೊಂಡರೆ ಒಳಗೆ ಹೆಂಗಸರು ಪಲ್ಯದ ತಯಾರಿಯಲ್ಲಿ ಮಗ್ನರಾಗಿರುತ್ತಾರೆ. ಸಾಧಾರಣ ಹನ್ನೊಂದು ಗಂಟೆಯ ಹೊತ್ತಿಗೆ ಅಡುಗೆ ತಯಾರಾಗುತ್ತದೆ. ಊಟಕ್ಕೆ ಏಳಿಎಂಬ ಸಂದೇಶ ಒಳಗಿನಿಂದ ಬರುತ್ತದೆ. ಅಂಗಳದಲ್ಲಿದ್ದ ಗಂಡಸರು ಊಟಕ್ಕೆ ಏಳುತ್ತಾರೆ. ಕಲಾಯಿ ಹಾಕಿದ ದೊಡ್ಡ ತಾಮ್ರದ ಹಂಡೆಯಲ್ಲಿ ಕೋಳಿಗಳ ಮಾಂಸದ ಬೇಯಿಸಿದ ಪಲ್ಯ ಸಿದ್ಧವಾಗಿದೆ. ಮನೆಯ ಹುಡುಗರು ಮಾಂಸ ಬೆಂದಿದೆಯೋ ಎಂದು ನೋಡುವ ನೆವದಿಂದ ಈ ಮೊದಲೆ ಕೆಲವು ತಿಂದು ರುಚಿ ನೋಡಿ ಆಗಿದೆ. ಆದರೂ ಬಂದ ನೆಂಟರಿಗೆಲ್ಲ ತಿಂದು ತಣಿಯುವಷ್ಟು ಕೋಳಿ ಮಾಂಸ ಹಂಡೆಯಲ್ಲಿರುತ್ತದೆ.
ಸುಮಾರು ೪೦-೫೦ ಜನರೂ ಮನೆಯ ಚಾವಡಿ-ಜಗಲಿ-ಅಂಗಳದಲ್ಲಿ ಊಟಮಾಡುತ್ತಾರೆ. ಇದೊಂದು ಸ್ಮರಣೀಯ ಸ್ನೇಹಕೂಟ ವಾಗುತ್ತದೆ. ಊಟ ಮಾಡುವಾಗಲೂ ಅಂದಿನ ಕೋಳಿ ಅಂಕದ ಸುದ್ದಿಯನ್ನು ವರ್ಣಿಸಿ ಮಾತಾಡುತ್ತಾ ಬಾಯಿ ಚಪ್ಪರಿಸುತ್ತಾರೆ. ಮರುದಿವಸವೂ ಕೋಳಿ ಅಂಕ ಮುಂದುವರಿಯುತ್ತದೆ. ಕೋಳಿಗಳಲ್ಲಿ ವಿವಿಧ ರಂಗಿನವಿರುತ್ತದೆ.
ಕೋಳಿಗಳ ಪಂಚಾಗವೂ ಇದೆ. ಯಾವ ರಂಗಿನ ಕೋಳಿಗೆ ಯಾವ ದಿನ ಹುಟ್ಟು, ಬಾಲ್ಯ, ಯೌವನ, ಮುಪ್ಪು, ಮರಣ ಎಂಬುದು ಕೋಳಿ ಶಾಸ್ತ್ರಜ್ಞ ರಿಗೆ ಗೊತ್ತಿರುತ್ತದೆ. ಇಲ್ಲಿ ಹುಣ್ಣಿಮೆ ಮತ್ತು ಅಮವಾಸ್ಯೆಗಳೂ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನೆಲ್ಲಾ ತಿಳಿದುಕೊಂಡೇ ಆ ಪ್ರಕಾರ ಕೋಳಿ ಅಂಕ ನಡೆಸುವವರಿದ್ದಾರೆ. ಯಾವ ಕೋಳಿ ಗೆಲ್ಲುತ್ತದೆ ಎಂದು ಪಂಥ ಹಾಕಿ ಜೂಜಾಡುವ ಪದ್ಧತಿ ಹಿಂದಿನಿಂದಲೂ ಇತ್ತು ಈಗ ಕೋಳಿಯ ದ್ಯೂತವನ್ನು ಸರಕಾರ ನಿಷೇಧಿಸಿರುತ್ತದೆ. ಆದರೂ ಬಂಧು ಬಳಗದವರೆಲ್ಲಾ ಒಟ್ಟಾಗುವ, ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಬೆಳೆಸುವ ಒಂದು ಒಳ್ಳೆಯ ಅವಕಾಶ ಈ ಕೋಳಿ ಅಂಕದಿಂದ ಜನತೆಗೆ ದೊರೆಯುತ್ತದೆ.

ಮಾಹಿತಿ ಮತ್ತು ರಚನೆ: ವಿನಾಯಕ ಅಂಕೋಲೆಕರ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading