ಕಾರವಾರ ತನ್ನ ಹೆಸರನ್ನು ಹತ್ತಿರದ ಗ್ರಾಮದ ಕಡವಾಡದಿಂದ ಪಡೆದುಕೊಂಡಿದೆ ಎಂದು ನಂಬಲಾಗಿದೆ (ಕಡೆ ವಡ, ಕಡೆಯ ವಾಡೊ). ಕೊಂಕಣಿಯಲ್ಲಿ ಕಡೆ ಎಂದರೆ ಕೊನೆಯದು ಮತ್ತು ವಾಡೋ ಎಂದರೆ ಪ್ರದೇಶ. ಬೈತ್ ಕೋಲ್ ಎಂಬ ಹೆಸರು ಅರೇಬಿಕ್ ಭಾಷೆಯ ಪದವಾಗಿದೆ. ಬೈತ್ ಎ ಕೋಲ್ ಅಂದರೆ ಸುರಕ್ಷತೆಯ ಕೊಲ್ಲಿ. ಬ್ರಿಟಿಷರು ಈಗಿನ Karwar ಅನ್ನು Carwar ಎಂದು ಬರೆಯುತ್ತಿದ್ದರು.
ಕಾರವಾರದ ಮೂಲ ನಾಮ ಕಡೇವಾಡ ಎಂಬುದಂತೂ ಸರಿಯೆ. ಅಂಕೋಲಾ ಕಡೆಯಿಂದ ಉತ್ತರಕ್ಕೆ ನೀವು ಬರುತ್ತಿದ್ದರೆ ಕಾಳೀ ನದಿಯು ನಿಮ್ಮ ಮಾರ್ಗಕ್ಕೆ ಅಡ್ಡಲಾಗಿ ಪಶ್ಚಿಮಕ್ಕೆ ಹರಿಯುತ್ತಾ ನಾಡಿನ ಗಡಿಯನ್ನು ಕೊರೆದಂತೆ ಭಾಸವಾಗುವ ಕಾರಣಕ್ಕೆ ಈ ಹೆಸರು ಬಂದಿರಬಹುದು. ಇದಕ್ಕೆ ಕಾರಣವೂ ಇಲ್ಲದಿಲ್ಲ.
ಆದರೆ
ಕನ್ನಡದ ಊರುಗಳ ಹೆಸರುಗಳನ್ನು ಗಮನಿಸಿದರೆ; ಉದಾಹರಣೆಗೆ, ಕಾರವಾರಕ್ಕೆ ಸಮೀಪದ ಹೊನ್ನಾವರ, “ಆವರ” ಎಂಬ ಪದವಿರುವುದು ಕಾಣುತ್ತದೆಯಲ್ಲವೆ?
ಹಳಗನ್ನಡದಲ್ಲಿ ಆವರ ಎಂದರೆ “ಅಲ್ಲಿಯವರೆಗೆ” ಎಂಬರ್ಥ. ಅಂದರೆ ಇದೊಂದು ಗಡಿ ಸೂಚಕ ಅಥವಾ ಯಾವುದೋ ಒಂದು ವ್ಯಾಪ್ತಿಯಲ್ಲಿ ಬರುವ ಜಾಗವನ್ನು ಸೂಚಿಸುವ ಶಬ್ದ. ಹೊನ್+ಆವರ = ಹೊನ್ನಿನವರೆಗೆ, (ಪೊನ್ ಎಂಬ ಶರಾವತಿ ನದಿಯವರೆಗಿನ ಪ್ರದೇಶ? ಅಥವಾ ಹೊನ್ನಿನ ಆವಾರ? ಹಿಂದೆ ಹೊನ್ನಾವರವು ದೂರದೇಶಗಳಿಂದ ಹೊನ್ನು ಹೊತ್ತು ತರುತ್ತಿದ್ದ ಖ್ಯಾತ ಬಂದರು ಪ್ರದೇಶವಾಗಿತ್ತು)
ಹೀಗೆ ಕರಾವಳಿಯ ಉದ್ದಕ್ಕೂ ಸುಮಾರು ಊರುಗಳಿವೆ- ಬ್ರಹ್ಮಾವರ, ಪೇಜಾವರ, ಉದ್ಯಾವರ, ಕಾಂತಾವರ ಇತ್ಯಾದಿ. ಈ ಊರುಗಳ ಹೆಸರುಗಳು ರೂಪುಗೊಂಡ ಹಾಗೆಯೇ ಕಾರವಾರವೂ ರೂಪಿಗೊಂಡಿದೆ ಎಂದು ಸಕಾರಣವಾಗಿ ವಾದಿಸಬಹುದು.
ಇದೇ ದಾರಿಯಲ್ಲೇ ಹೋದರೆ, ಕಾಳ ಎಂಬುದಕ್ಕೆ ಅಪಭ್ರಂಶ ಆಗಬಹುದಾದ ಕಾಱ – ವನ್ನು ಗಮನದಲ್ಲಿ ಇಟ್ಟುಕೊಂಡು, ಇದು 4–10 ನೆ ಶತಮಾನದ ಕಾಲದಲ್ಲಿ, ಬಹುಶಃ ಕಾಳೀ ನದಿಯ ವ್ಯಾಪ್ತಿಯನ್ನು ಸೂಚಿಸುವ ಕಾಱ-ಆವರ > ಕಾರಾವರ> ಕಾರವಾರ ಆಗಿದ್ದಿರಲು ಸಾಧ್ಯವಿದೆ ಎಂದು ಊಹಿಸಬಹುದು.
ಕನ್ನಡದಲ್ಲಿ ಕರೈ (ಕಱೈ) > ಕಱೆ ಎಂದರೆ, ಕಡಲಿನ ಅಂಚು ಅಥವಾ ತೀರಪ್ರದೇಶ. (ಕರಾವಳಿ ಎಂಬ ಪದದ ಮೂಲ ಇದುವೇ! ಕರೈ + ಆವಲೀ : ಕಡಲತೀರದ ಮಾಲಿಕೆ = ಕರಾವಲೀ)
ಕರೆವಾರ ಎಂಬುದು ಕಡಲ್ದೀರದವರೆಗಿನ ಪ್ರದೇಶ ಎಂಬುದಾಗಿ “ಕರೆ”ಯಲ್ಪಡುತ್ತ ಕರೇವಾರ —> ಕಾರೇವಾರ —> ಕಾರವಾರ ಆಗಿದೆಯೆಂದು ಸತರ್ಕವಾಗಿ ಯೋಚಿಸಬಹುದು.
ಇದು ಕೊಂಕಣಿ- ಕನ್ನಡದ ಸೀಮೆಯನ್ನು ಸೂಚಿಸುವ ಭಾಷಿಕ ಗಡಿಯ ಶಬ್ದವೇ ಎಂಬುದು ಕೊಂಚ ಯೋಚಿಸಬೇಕಾದ ವಿಷಯ…. ಏಕೆಂದರೆ ತುಂಬಾ ಹಳೆಯ ದಿನಗಳಿಂದಲೂ ಕಾಳೀ ನದಿಯ ಆಚೆಗಿನ ಗೋವಾ ರಾಜ್ಯದ ಭಾಗವು ಕನ್ನಡದ ರಾಜ್ಯಗಳಿಗೇ ಸೇರಿದ್ದು, ಕಡೆವಾಡ ಎಂಬುದು ಹದಿಮೂರು- ಹದಿನೈದನೇ ಶತಮಾನದಿಂದ ಇತ್ತೀಚೆಗೆ ಶುರುವಾದ ಬಳಕೆಯಿದ್ದಿರಬಹುದು. ಕನ್ನಡ ರಾಜ್ಯದ ಕೊನೆಯ ಭಾಗ ಎಂಬತಕ್ಕಂತಹ ರಾಜಕೀಯ ಪ್ರಜ್ಞೆಯಿಂದ ಮೂಡಿದ ಪದವಲ್ಲ ಇದು ಎನಿಸುತ್ತದೆ.
ಅದಿರಲಿ, ಇದನ್ನು ಬಿಟ್ಟು ಬೇರೆ ಏನಾದರೂ ಹೇಳಬಹುದೋ ನೋಡೋಣ.
ಉರ್ದುವಿನಲ್ಲಿ ಅಥವಾ ಅರೇಬಿಕ್ ನಲ್ಲಿ ಖಾರಿ ಎಂಬ ಪದವನ್ನು ಎಲ್ಲರೂ ಬಲ್ಲರು. ಭೂಪ್ರದೇಶವನ್ನು ಆಕ್ರಮಿಸಿ, ಕಮಾನಿನ ಆಕಾರದಲ್ಲಿ ಕಡಲು ಒಳಗೆ ನುಗ್ಗಿರುವ ಜಾಗವನ್ನು ಖಾರಿ ಎನ್ನುತ್ತಾರೆ.
ಕಾರವಾರದ ಇತಿಹಾಸ ಪ್ರಸಿದ್ಧ ಕಡಲತೀರವು ಒಂದು ಸಣ್ಣ ಖಾರಿಯನ್ನು ನಿರ್ಮಿಸಿರುವುದು ಎಲ್ಲರೂ ನೋಡಬಹುದು. ಅಲ್ಲದೇ, ಕಾರವಾರ ಜಿಲ್ಲೆಯಲ್ಲಿ ಖಾರ್ವಿ ಎಂಬ ಪದವನ್ನು ಹೊಂದಿದ ಹಲವಾರು ಸ್ಥಳಗಳನ್ನು ಕಾಣಬಹುದು (ಉದಾ; ಖಾರ್ವಿಕೇರಿ)
ಖಾರಿ-ವಾಡ ಅಥವಾ ಖಾರಿ-ವಾರವು, ಕಾರಿವಾರ/ಕಾರವಾರ ಆಗಿರಬಹುದೋ? ಏಕೆಂದರೆ ಕಾರವಾರದ ಬಂದರು ಅರೇಬಿಯನ್ ದೇಶಗಳ ಜೊತೆಗೆ ನಂಟು ಹೊಂದಿರುವುದು ನಿನ್ನೆ ಮೊನ್ನೆಯಿಂದಲ್ಲ. ಟಿಪ್ಪು ಸುಲ್ತಾನನೂ ಸಹ ಇಲ್ಲಿಂದ ತನ್ನ ವ್ಯಾಪಾರ ಬೆಳೆಸಿದವನೇ ಆಗಿದ್ದಾನೆ.
ಇನ್ನೂ ಒಂದು ವೆರೈಟಿಯಲ್ಲಿ ಹೇಳುವುದಾದರೆ, ನದಿ ಅಥವಾ ಸಮುದ್ರದಂಡೆಯ ಜಾಗಗಳನ್ನು ಸೂಚಿಸುವಾಗ ನಮ್ಮಲ್ಲಿ ಕಾರ್ಮುಕ ಕ್ಷೇತ್ರ ಎಂಬ ಮಾತು ಬರುತ್ತದೆ. (ಅಯೋಧ್ಯೆ, ವಾರಣಾಸಿ, ಹರಿದ್ವಾರ ಇವು ಪುರಾಣ ಪ್ರಸಿದ್ಧ ಕಾರ್ಮುಕ ಕ್ಷೇತ್ರಗಳು.)
ಕಾರ್ ಎಂದರೆ ಬಿಲ್ಲು, ಕಾರ್ಮುಕ ಎಂದರೆ ಬಿಲ್ಲಿನಂತೆ ಕಮಾನಿನ ಆಕಾರವುಳ್ಳ ಎಂಬ ಅರ್ಥ. ಬಿಲ್ಲಿನಾಕಾರದ ತೀರವುಳ್ಳ ಕ್ಷೇತ್ರಗಳು ಎಂದು ತಿಳಿದುಕೊಳ್ಳಬೇಕು. ಈಗ ಮತ್ತೊಮ್ಮೆ ಕಾರವಾರ ತೀರದ ಬಾಗುಸಾಲನ್ನು ನೋಡಿ. ಬಿಲ್ಲಿನಾಕಾರ ಕಾಣುತ್ತಿದೆಯಲ್ಲವೇ?
ಕಾರ್ ಎಂದರೆ ಬಿಲ್ಲು ಎಂಬುದನ್ನು ಗಣಿಸಿಕೊಂಡು, ವಾರ ಎಂಬುದಕ್ಕೆ ವಾರಿ = ನೀರು ಎಂದುಕೊಂಡು ಕೊಂಚ ತಲೆ ತುರಿಸಿದರೆ, ಬಿಲ್ಲಿನಾಕಾರದ ನೀರು/ಕಡಲು ಎಂಬ ಸೂಚನೆ ಹೊರಡುತ್ತದೆ. ಬಹುಶಃ ಇದಕ್ಕೇ ಕಾರವಾರಿ/ಕಾರವಾರ ಎಂದರೊ ಏನೋ?
ಇದರಿಂದ ಏನಾದರೂ ಉತ್ತರ ಸಿಕ್ಕಿತೋ ಅಥವಾ ಮತ್ತಷ್ಟು ಗೊಂದಲರಾಡಿಯೆದ್ದಿತೋ ಓದಿದವರೇ ಹೇಳಬೇಕು.
ಮಾಹಿತಿ: ಗುರುಬಸವೇಶ್ವರ ಸ್ವಾಮಿ ಜಿ. ಎಂ.


Leave a Reply