ಜನಪದ ಚಿತ್ರಕಲೆ – ಹಲಿ ಕಲಾವಿದೆ ಪದ್ಮಾವತಿ ಸೊಮಾ ಗೌಡ

Posted by

·

ಅಂಕೋಲಾ ತಾಲೂಕಿನಲ್ಲಿ ರಂಗೋಲಿಯನ್ನು ಹಲಿ ಎನ್ನುತ್ತಾರೆ. ಇಲ್ಲಿಯೂ ಜಾತಿಗೊಂದು ಬಗೆಯ ಹಲಿಯನ್ನು ಕಾಣಬಹುದು. ಸಾಮಾನ್ಯವಾಗಿ ಹಾಲಕ್ಕಿಒಕ್ಕಲ ನೆಲೆಗಳ ಪ್ರತಿ ಮನೆಮನೆಗಳಲ್ಲಿ ಹಲಿ ಬಲ್ಲವರಿರುತ್ತಾರೆ. ಯಾಕೆಂದರೆ ಮನೆಯನ್ನು ಅಂದರೆ ಮನೆಯ ನೆಲ ಅಂಗಳ ಮತ್ತು ತುಳಸಿಮನೆಯನ್ನು ಸೆಗಣಿಯಿದ ಸಾರಿಸಿದಾಗ ಆ ಸ್ಥಳದ ನಿರ್ದಿಷ್ಟ ಜಾಗದಲ್ಲಿ ಚಿಕ್ಕದಾದರೂ ಪರವಾಗಿಲ್ಲ, ಹಲಿ ಇರಬೇಕು ಎಂಬ ಪರಂಪಾರಿಕ ವಿಧಿ ಇಲ್ಲಿಯೂ ಜಾರಿಯಲ್ಲಿದೆ. ಆದ್ದರಿಂದ ಪ್ರತಿಮನೆಯ ಗೃಹಿಣಿಯು ಇಂಥ ಸಂದರ್ಭಕ್ಕೆ ಅಗತ್ಯವಾದ ಒಂದೆರಡು ಹಲಿಯನ್ನಾದರೂ ರಚಿಸಲು ತಿಳಿದಿರುತ್ತಾಳೆ. ಆದರೆ ವಿಶೇಷ ಸಂದರ್ಭಗಳಲ್ಲಿ ರಚನೆಗೊಳ್ಳುವ ಹಲಿಯನ್ನು ಬಲ್ಲವರು ವಿರಳವಾಗಿರುತ್ತಾರೆ. ಆದರೂ ಹೆಚ್ಚಿನ ಹಲಿಯನ್ನು ಬಲ್ಲ ಕಲಾವಿದರು ಒಂದು ಕೇರಿಯ ಪ್ರತಿ ತುಂಡಿನಲ್ಲಿ ಒಬ್ಬರಾದರೂ ಇರುವದು ಕಂಡುಬರುತ್ತದೆ. ಏಕೆಂದರೆ ಜೀವನಾವರ್ತನ ಮತ್ತು ವಾರ್ಷಿಕಾವರ್ತನಕ್ಕೆ ಸಂಬಂಧ ಪಟ್ಟ ಆಚರಣೆಗಳಲ್ಲಿ ಆಯಾ ಆಚರಣೆಗೆ ಸಂಬಂಧ ಪಟ್ಟ ಹಲಿಯ ಅನುಪಸ್ಥಿತಿಯುಂಟಾದರೆ ಆಚರಣೆ ಪರಿಪೂರ್ಣಗೊಳ್ಳುವದಿಲ್ಲವೆಂಬ ನಂಬಿಕೆಯಿದ್ದು ಬಲ್ಲವರನ್ನು ಇವರು ಕರೆಸಿ ಆಯಾ ಸಂದರ್ಭದ ಹಲಿಯನ್ನು ನಿಗದಿತ ಸ್ಥಳದಲ್ಲಿ ಬರೆಸಿಕೊಳ್ಳುತ್ತಾರೆ.

 • ಇಂತಹ ವಿಶೇಷ ಹಲಿಗಳನ್ನು ಬಲ್ಲವರ ಸಾಲಿನಲ್ಲಿ ನಿಲ್ಲಬಲ್ಲವರಲ್ಲಿ ಪದ್ಮಾವತಿ ಸೋಮಾ ಗೌಡ ಒಬ್ಬರು. ಇವರು ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದವರು. ಇವರ ತಾಯಿ ತುಳಸಿಯು ಹಲಿ ಕಲಾವಿದೆಯಾಗಿದ್ದರು. ಸುಮಾರು ಐವತ್ತೆಂಟು ವರ್ಷ ವಯಸ್ಸಿನ ಪದ್ಮಾವತಿ ಬಾಲ್ಯದಿಂದಲೂ ಜನಪದ ಗೀತೆ ಕಥೆ ಹಲಿಗಳ ಬಗ್ಗೆ ಆಸಕ್ತಿ ತಳೆದವರು. ಈ ಆಸಕ್ತಿಯ ಕಾರಣದಿಂದಾಗಿ ಇವರು ತಮ್ಮ ಬಾಲ್ಯದಲ್ಲಿ ತಮ್ಮ ಸರೀಕರ ಜೊತೆ ಇರದೆ ತಮಗೆ ದೊರೆತ ಬಿಡುವಿನ ಹೆಚ್ಚಿನ ವೇಳೆಯನ್ನು ತಮ್ಮ ಕೇರಿಯ ಈ ಮುದುಕಿಯರ ಬಳಿ ಕಳೆಯುತ್ತಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಮತ್ತು ಆಮೂಲಕ ತಮ್ಮ ಮೇಲೆ ಪ್ರಭಾವ ಬೀರಿದ ಸುಮಾರು ಹತ್ತು ಜನ ಹಿರಿಯರನ್ನು ನೆನಪಿಸಿಕೊಳ್ಳುತ್ತಾರೆ. ಈ ಕಾರಣದಿಂದ ಇವರ ಕೇರಿಯ ಹಿರಿಯರ ಹಾಡು ಹಲಿ ಇವರ ಪಾಲಾದವು. ಆಚರಣೆಗಳ ಪ್ರತ್ಯಕ್ಷ ಜ್ಞಾನ ಇವರಿಗೆ ದೊರೆಯಿತು. ಆದ್ದರಿಂದ ಇವರ ಹಲಿಗೆ ಆಚರಣೆ ಮತ್ತು ಹಾಡಿನ ಮೆರಗು ಕೂಡಿಕೊಂಡಿತು. ಇವರು ಪ್ರತಿ ಹಲಿಗೆ ಸಂಬಂಧಿಸಿದಂತೆ ಹಲವಾರು ಹಾಡುಗಳನ್ನು ಕಥೆ ಪುರಾಣ ಐತಿಹ್ಯಗಳನ್ನು ಜೋಡಿಸಿಕೊಳ್ಳಬಲ್ಲರು.

ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲ ಗಂಡಸರ ಸುಗ್ಗಿ ನೃತ್ಯಕಲೆ ಕರಾವಳಿಯಲ್ಲಿ ಪ್ರಸಿದ್ಧವಾದದ್ದು. ಈ ಕುಣಿತದಲ್ಲಿ ಹಾಲಕ್ಕಿ ಒಕ್ಕಲ ಮಹಿಳೆಯರು ಪಾಲ್ಗೊಳ್ಳುವದಿಲ್ಲವಾದರೂ ಸುಗ್ಗಿ ಆಚರಣೆಯ ಸುಮಾರು ಹದಿನೈದು ದಿನ ಹಲಿ ಬರೆಯುವ ಆಚರಣೆಗೆ ಸುಗ್ಗಿಕಾಲ ಬರುತ್ತದೆ. ಸುಗ್ಗಿ ಕುಣಿತದವರು ಪಾಲ್ಗೊಳ್ಳುವ ಅಂಗಳದಲ್ಲಿ ಸುಗ್ಗಿಯ ಸಲಕರಣೆಗಳು ಮತ್ತು ಸುಗ್ಗಿಯ ಸಂಪ್ರದಾಯಗಳು ಹಾಲಕ್ಕಿ ಒಕ್ಕಲ ಮಹಿಳೆಯರ ಹಲಿಯ ರೂಪವನ್ನು ತಳೆಯುತ್ತವೆ.[ಚಿತ್ರ1]

ಹಲಿ ಹೊಯ್ಯುತ್ತಲೇ ಪದ್ಮಾವತಿ ಕೋಲು ತರುವ ಸಂಪ್ರದಾಯವನ್ನು ಹಾಲಕ್ಕಿ ಒಕ್ಕಲಿಗೆ ಕೋಲು ದೊರೆತ ಬಗೆಯನ್ನು ಹಾಡುಗಳ ಮೂಲಕ ವಿವರಿಸುತ್ತಾರೆ. ಸುಗ್ಗಿಯ ಕೋಲುಗಳು ದೇವತೆಗಳ ಮೂಲಕ ದೊರೆತವು ಎಂಬುದು ಈ ಹಲಿ ಕಲಾವಿದೆಯ ಅಭಿಪ್ರಾಯವಾಗಿದೆ. ಸುಗ್ಗಿಯ ಕೋಲುಗಳನ್ನು ಸಿದ್ಧ ಪಡಿಸಲು ಸಿಕ್ಕ ಸಿಕ್ಕ ಮರಗಳನ್ನು ಬಳಸಕೂಡದು. ಯಾಕೆಂದರೆ ಎಲ್ಲ ಮರಗಳ ಕೋಲುಗಳು ಉತ್ತಮ ದನಿಯನ್ನು ಹೊರಡಿಸಲಾರವು. ಸುಗ್ಗಿ ಕೋಲುಗಳಿಗಾಗಿ ಸೆಣ್ಗೋಳಿ ಮರದ ಕೋಲುಗಳು ಉತ್ತಮ. ಇವು ಉತ್ತಮ ಅವಾಜ [ದನಿ] ನೀಡ ಬಲ್ಲವು. ಸಣ್ಗೋಳಿ ಮರಗಳು ಬಿಲ್ಕಂಬಿ ಮರಗಳನ್ನು ಹೋಲುತ್ತವೆ. ಸುಗ್ಗಿಯ ಕೋಲುಗಳನ್ನು ಇಲ್ಲಿಯ ಹಾಲಕ್ಕಿ ಒಕ್ಕಲು ತಮ್ಮ ಮೂಲ ನೆಲೆಯಾದ ಮಚ್ಚೋಳಿಯಿಂದ ತರುತ್ತಾರೆ. ಅಲ್ಲಿ ತಮ್ಮ ಮೂಲ ದೇವರಿದೆ ಎನ್ನುತ್ತಾರೆ, ಪ್ರತಿವರ್ಷ ಸಂಕ್ರಾಂತಿಯ ದಿನ ಆಯಾ ಊರಿನವರು ಅಲ್ಲಿಗೆ ಹೋಗಿ ಹಸಿ ಕೋಲುಗಳನ್ನು ಸಿದ್ದಪಡಿಸಿ ಕೊಳ್ಳುತ್ತಾರೆ. ಅಲ್ಲಿಯ ದೇವರ ಬಳಿ ಕೋಲುಗಳನ್ನಿಟ್ಟು ಹೇಳಿಕೆ ಮಾಡಿ ಪ್ರಸಾದ ಪಡೆಯುತ್ತಾರೆ. ಅಲ್ಲಿಂದ ತಂದ ಕೋಲುಗಳನ್ನು ಭಾವಿಕೇರಿಯ ಗಯ್ಡ[ ಗರಡಿ ]ಮಾಸ್ತಿಯ ಬಳಿಯಿಟ್ಟು ಅಲ್ಲಿಯ ಬಾವಿಯ ನೀರನ್ನು ಸಿಂಪಡಿಸಿ ತಮ್ಮ ಕೇರಿಯಲ್ಲಿರುವ ಬಟ್ಟೆ ಬೀರ ದೇವರ ಬಳಿ ಇಡುತ್ತಾರೆ. ಅಲ್ಲಿ ಕೋಲಾಡಿದ ಬಳಿಕ ಕೋಲಾಟದ ತಾಲೀಮು ನಡೆಸುವವರಿಗೆ ಅನುಮತಿಯಿರುತ್ತದೆ.

ಕೋಲಾಟದ ಹಲಿಯಲ್ಲಿ ಕೋಲಾಡುತ್ತಿರುವ ಮನುಷ್ಯರಿಬ್ಬರನ್ನು ಕಾಣಬಹುದು. [ಚಿತ್ರ 4 ]ಇಲ್ಲಿಯ ಹಲಿಯಲ್ಲಿಯ ಮನುಷ್ಯರು ಎತ್ತರವಲ್ಲ ಕುಳ್ಳರು. ಹೊನ್ನಾವರದ ಸುಗ್ಗಿ ಹಲಿಯಲ್ಲಿಯ ಮನುಷ್ಯರು ಎತ್ತರ ನಿಲುವಿನವರು. ಹಾಗೆಂದು ವಾಸ್ತವ ಪ್ರಪಂಚದಲ್ಲಿ ಅಂಕೋಲೆಯ ಸುಗ್ಗಿ ಕಲಾವಿದರು ಕುಳ್ಳರು ಮತ್ತು ಹೊನ್ನಾವರದ ಸುಗ್ಗಿ ಕಲವಿದರು ಎತ್ತರ ನಿಲುವಿನವರೆಂದು ಅರ್ಥೈಸಬೇಕಾಗಿಲ್ಲ. ಅಂಕೋಲೆಯ ಸುಗ್ಗಿ ಕಲಾವಿದರು ಹೊನ್ನಾವರದ ಸುಗ್ಗಿ ಕಲಾವಿದರಿಗಿಂತ ಹೆಚ್ಚು ಎತ್ತರ ನಿಲುವಿನವರಾಗಿರುತ್ತಾರೆ. ಆದರೆ ಹಲಿಯಲ್ಲಿ ನಿಲುವಿನ ವ್ಯತ್ಯಾಸ ಕಂಡುಬರುತ್ತದೆ, ಇದು ಹಲಿಪ್ರಪಂಚ, ಕಲಾಪ್ರಪಂಚ. ಗುಮಟೆ ಹಲಿಯಲ್ಲಿ ಗುಮಟೆ ಬಾರಿಸುತ್ತಿರುವ ಕಲಾವಿದರ ಕೈಗಳನ್ನು ಗುಮಟೆಗೆ ಕಟ್ಟಿದ ದಾರವನ್ನು ಸ್ಪಷ್ಟವಾಗಿ ಕಾಣಬಹುದು. ಅವರ ತಲೆಯ ಭಾಗವನ್ನು ಅಯ್ದು ಶಂಖ್ವಾಕೃತಿಯ ಗುಮ್ಮಟಗಳ ಮೂಲಕ ತೋರಿಸಲಾಗಿದೆ. ಇಲ್ಲಿಯೂ ಇವರ ದೇಹದ ಆಕಾರವು ಗಿಡ್ಡವಾಗಿದೆ.[ಚಿತ್ರ 1]
ಹಾಲಕ್ಕಿ ಒಕ್ಕಲಿಗೆ ದೀಪಾವಳಿಯು ದೊಡ್ಡ ಹಬ್ಬ. ಈ ಹಬ್ಬದಲ್ಲಿ ಹಿಂಡ್ಲೆ ಕಾಯಿಯಿಂದ ಹಣತೆ ತಯಾರಿಸಿ ದೀಪ ಉರಿಸುತ್ತಾರೆ. ಚಿತ್ರ 11 ಹಲಿಯು ನೆಲದಮೇಲೆ ದೀಪಗಳನ್ನಿಡುವ ದೀಪಸ್ಥಾನವಾಗಿದೆ. ಚಿತ್ರ 6 ಇದು ಬಾಗಿಲ ಮೆಟ್ಟಿಲ ಬಳಿಯ ಹಲಿ. ಮೆಟ್ಟಿಲ ಕಟ್ಟೆಯನ್ನು ಇಲ್ಲಿ ಕಾಣಬಹುದು. ಚಿತ್ರ 3 ಇದು ಹಳ್ಳಾಟದ ಮನೆ.

ಚಿತ್ರ 2 ಇವರು ಹಲಿ ಕಲಾವಿದೆ ಪದ್ಮಾವತಿ ಸೊಮಾ ಗೌಡಾ. ಸುಮಾರು ನಾಲ್ಕು ವರ್ಷಗಳಿಂದ ಹೊನ್ನಾವರದ ಜಾನಪದ ಅಧ್ಯಯನ ಕೇಂದ್ರದಲ್ಲಿ ಸಂಪನ್ಮೂಲ ಕಲಾವಿದೆಯಾಗಿ ಆಗಮಿಸಿ ಇಲ್ಲಿಗೆ ಜಾನಪದ ಅಧ್ಯಯನಕ್ಕಾಗಿ ಬರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಲಿಯ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ.

ಚಿತ್ರಗಳು:

1) ಸುಗ್ಗಿ ಗುಮಟೆ ಕಲಾವಿದ
2) ಹಲಿ ಕಲಾವಿದೆ ಪದ್ಮಾವತಿ
3) ಹಳ್ಳಾಟದ ಮಣೆ
4) ಕೋಲಾಟ
5) ಗೊಡೆ ಹಲಿ
6) ಬಾಗಿಲಲ್ಲಿ ಹಲಿ
7) ಬಾಗಿಲ ಅಂಚು
8) ಅಚ್ಚು
9) ನೆಲಗೊಡೆಯ ಚಿತ್ರ
10) ಗೊಡೆಯ ಹಲಿ
11) ದೀಪವಿಡುವ ಸ್ಥಳ

ಮಾಹಿತಿ: Folk Knowledge


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading