ರಂಗೋಲಿಯ ಮಹತ್ವ

Posted by

·

“ರಂಗೋಲಿ” ಎಂಬುದು ರಂಗವಲ್ಲಿ ಎಂಬ ಪದದ ತದ್ಭವ. ಅದು ಭಾರತೀಯ ಸಂಪ್ರದಾಯಕ್ಕೆ ಸೇರಿದ ಗೃಹಾಲಂಕಾರದ ಒಂದು ಜಾನಪದ ಕಲೆ. ಹಳ್ಳಿಗಳಲ್ಲಿ ಇದನ್ನು ಹಸೆ, ಹಲಿ ಎಂದು ಹೇಳುತ್ತಾರೆ. ಕಾವ್ಯಗಳಲ್ಲಿ ಕಡೆ, ಕಡೆಯ, ಪೂವರಿ ಎಂಬ ಶಬ್ದಗಳಿಂದ ನಿರೂಪಿಸಿರುವುದು ಕಂಡು ಬರುತ್ತದೆ. ಇದಕ್ಕೆ ತಮಿಳರಲ್ಲಿ ಕೋಲಂ ಎಂದೂ ಬಂಗಾಲದಲ್ಲಿ ಆಲ್ಪನಾ ಎಂದೂ ಬೇರೆ ಬೇರೆ ಹೆಸರುಗಳಿವೆ. ಅಕ್ಕಿಹಿಟ್ಟು ಅಥವಾ ಬೆಣಚುಕಲ್ಲಿನ ಪುಡಿಯಿಂದ ನಾನಾತರದ ಬಳ್ಳಿ, ಅಲಂಕಾರಿಕ ನಕ್ಷೆ, ಮರ, ಪಕ್ಷಿಗಳನ್ನು ಮನೆಯ ಮುಂದೆ ರಂಗೋಲಿಯಾಗಿ ಬಿಡಿಸುತ್ತಾರೆ. ಬಣ್ಣ ಹಾಕುವುದೂ ಉಂಟು, ದೇವಾಲಯಗಳಲ್ಲಿ ನಿತ್ಯವೂ ರಂಗೋಲಿ ಹಾಕಲು ಉಂಬಳಿ ಬಿಟ್ಟಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಮನೆಯ ಮುಂದೆ ರಂಗೋಲಿ ಹಾಕದಿದ್ದರೆ ಆ ದಿನ ಆ ಮನೆಯಲ್ಲಿ ಏನೋ ಅಮಂಗಲ ಸಂಭವಿಸಿದೆ ಎಂದು ಭಾವಿಸಿ ಭಿಕ್ಷುಕರು ಅಂದು ಆ ಮನೆಗೆ ಭಿಕ್ಷೆಗಾಗಿ ಹೋಗುತ್ತಿರಲಿಲ್ಲ. ರಂಗೋಲಿ ಮನೆಗೆ ಮಹಾತ್ಮರನ್ನು ಸ್ವಾಗತಿಸುವ ಚಿಹ್ನೆಯೂ ಆಗಿದೆ.

ಮಹಿಳೆಯರು ನಿತ್ಯವೂ ಮುಂಜಾವಿನಲ್ಲಿ ಎದ್ದು ಶುಚಿರ್ಭೂತೆಯರಾಗಿ ಸೆಗಣಿ ನೀರನ್ನು ಚಿಮುಕಿಸಿ ಮನೆಯನ್ನು ಶುಚಿಮಾಡಿ ಉತ್ಸಾಹದಿಂದ ಒಬ್ಬರಿಗಿಂತ ಮತ್ತೊಬ್ಬರು ಅಂದ ಚಂದದ ರಂಗೋಲಿ ಹಾಕುತ್ತಿದ್ದರು. ಆದುದರಿಂದಲೇ ಮಹಿಳೆಯನ್ನು ‘ಮನೆಗೆ ಮಂಗಲವ ಬರೆಯುವಾಕೆ’ ಎಂದು ಹೇಳುತ್ತಿದ್ದರು. ಹೀಗೆ ರಂಗೋಲಿಯು ಭಾರತೀಯ ಸಂಸ್ಕೃತಿಯಲ್ಲಿ ಮಾಂಗಲ್ಯದ ಕುರುಹು, ನೈರ್ಮಲ್ಯದ ಸಂಕೇತ, ಕಲಾಭಿರುಚಿಯ ಕೈಗನ್ನಡಿಯಾಗಿದೆ.


ವಿಶೇಷ ದಿನಗಳಲ್ಲಿ ಕಲಾತಕ್ಮ ರಂಗೋಲಿ ರಚಿಸಿ ಅದರ ಮೇಲೆ ಮಣೆಗಳನ್ನಿಟ್ಟು ವಸ್ತ್ರ ಹಾಸಿ ಮದುಮಕ್ಕಳಿಗೆ ಬಂದು ಕೂಡಲು ಹೇಳುತ್ತಿದ್ದರು. ಅದಕ್ಕೆ “ಹಸೆಮಣೆ’ ಎಂದು ಹೆಸರು, ಆರತಿ ರಂಗೋಲಿ, ನಾಗಮಂಡಲ, ಮದುವೆ ರಂಗೋಲಿ, ವ್ಯಾಧಿ ನಿವಾರಣಾ ರಂಗೋಲಿ ಹಾಗೂ ಇತರ ಪೂಜೆ, ವ್ರತಗಳಿಗೆ ಹೇಳಿಸಿದ ರಂಗೋಲಿಗಳೇ ಇವೆ. ಹಿಂದೆ ಹಾಡು ಹಸೆ ಹೆಚ್ಚಾಗಿ ತಿಳಿದವಳೆಂದರೆ ಆ ವಧುವನ್ನು ಇತರರಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದರು. ಈ ಆಧುನಿಕ ಯುಗದಲ್ಲಿ ಈ ಜಾನಪದ ಕಲೆಯು ನಶಿಸುತ್ತಿದೆ. ಇದನ್ನು ಉಳಿಸುವ ಕೆಲಸ ಮಾಡುವುದು ಸುಸಂಸ್ಕೃತರ ಕರ್ತವ್ಯವಾಗಿದೆ.

ಮಾಹಿತಿ: ಕಲಾಕೋಶ, ಪ್ರಧಾನ ಸಂಪಾದಕರು – ಪಿ. ಆರ್. ತಿಪ್ಪೇಸ್ವಾಮಿ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading