ಕೊಂಕಣ ಕರಾವಳಿಯನ್ನು ಆಕ್ರಮಿಸುವ ಪ್ರಯತ್ನವನ್ನು ಶಿವಾಜಿಯು 1654 ರಿಂದಲೇ ಆರಂಭಿಸಿದನು. ಕರಾವಳಿಯ ಭಿವಂಡಿ ಹಾಗೂ ಕಲ್ಯಾಣಗಳನ್ನು ಮೊಘಲರಿಂದ ಗೆದ್ದ ಬಳಿಕ ಕುಲಾಬಾ, ಸುರಗಡ, ಕಾಂಗೋರಿ ಹಾಗೂ ರಾಯಗಡಗಳನ್ನು ವಶಪಡಿಸಿಕೊಂಡನು. ಕಲ್ಯಾಣದ ಆಖಾತದಲ್ಲಿ ಹಡಗು ಕಟ್ಟಿಸುವ ನೌಕಾಂಗಣಗಳಿದ್ದವು. ಉತ್ತರ ಕೊಂಕಣದ (ಕರಾವಳಿಯ) ಬಹುಭಾಗವನ್ನು ಗೆದ್ದುಕೊಂಡ ನಂತರ ಬಂದರುಗಳ ಹಾಗೂ ಹಡಗುಗಳನ್ನು ಕಟ್ಟಿಸುವ ಮಹತ್ವವನ್ನು ಮನಗಂಡನು. 1657ರಲ್ಲಿ ಕಲ್ಯಾಣ ಬಂದರಿನಲ್ಲೇ ನೌಕಾಸೇನೆಯನ್ನು ಕಟ್ಟುವ ಕೆಲಸವನ್ನು ಶಿವಾಜಿಯು ಆರಂಭಿಸಿದ್ದನು. ದಾಭೋಲ ಹಾಗೂ ರಾಜಾಪುರವನ್ನು ಗೆದ್ದ ಬಳಿಕ 1663ರಲ್ಲಿ ಕುಡಾಳ ಹಾಗೂ ವೆಂಗುರ್ಲೆಗಳನ್ನು ಜಯಿಸಿದನು.
ಪುಣೆಯ ಬಳಿ ಕೇವಲ 400 ಸೈನಿಕರೊಂದಿಗೆ 5 ಎಪ್ರಿಲ್ 1663ರ ರಾತ್ರಿ ನಡೆಸಿದ ದಾಳಿಯಲ್ಲಿ ಶಿವಾಜಿಯು ಶಾಯಿಸ್ತೇಖಾನನ ಕೈಬೆರಳುಗಳನ್ನು ತುಂಡರಿಸಿದ್ದ, ಧಾಳಿಯಲ್ಲಿ ಶಾಯಿಸ್ತೇಖಾನನ ಮಗ ಹಾಗೂ ಅಳಿಯ ಜೀವ ಕಳೆದುಕೊಂಡಿದ್ದರು. ಮೊಗಲರ ಪ್ರತಿಷ್ಠೆಗೆ ಭಾರಿ ಆಘಾತ ನೀಡಿದ ಈ ಘಟನೆಯಿಂದ ಶಿವಾಜಿಯ ವರ್ಚಸ್ಸು ಹೆಚ್ಚಿತ್ತು. ಈ ಭಾರೀ ಸೋಲಿನಿಂದ ಅವಮಾನಿತನಾದ ಔರಂಗಜೇಬನು ಶಾಯಿಸ್ತೇಖಾನನ್ನು ಬಂಗಾಲಕ್ಕೆ ವರ್ಗಾಯಿಸಿ ತನ್ನ ಮಗ ಮುವಾಜ್ಜಮನನ್ನು ದಖನದ ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಿದನು. ಈ ಅಧಿಕಾರದ ಬದಲಾವಣೆಗಳು ನಡೆಯುತ್ತಿರುವಾಗಲೇ ಶಿವಾಜಿಯು 1964 ಜನವರಿ 6 ರಿಂದ 10ರ ತನಕ ಸತತ ನಾಲ್ಕು ದಿನಗಳವರೆಗೆ ಮೊಘಲರ ಹಾಗೂ ಈಸ್ಟ ಇಂಡಿಯ ಕಂಪನಿಯ ದೊಡ್ಡ ಕೇಂದ್ರವಾದ ಸೂರತ ಪಟ್ಟಣವನ್ನು ಸೂರೆಗೊಂಡನು. ಇದರಿಂದ ಶಿವಾಜಿಯ ಹೆಸರು ಕೇಳಿದರೇ ದಕ್ಷಿಣ ಹಾಗೂ ಪಶ್ಚಿಮ ಭಾರತದ ವ್ಯಾಪಾರ ಮಳಿಗೆಗಳಲ್ಲಿ ಸಡುಕ ಹುಟ್ಟಿಸುವಂತಾಯಿತು.
ಸೂರತ ಲೂಟಿಯ ಭಾರಿ ಮೊತ್ತದಿಂದ ಶಿವಾಜಿ ಕಡಲ ತೀರದ ಕೋಟೆಗಳನ್ನು ಕಟ್ಟಿಸಿದನು. ದಾಪೋಲಿ ಕಡಲತೀರದ ಸುವರ್ಣದುರ್ಗವನ್ನು ದುರುಸ್ತಿಗೊಳಿಸಿದನು. ಮಾಲವಣ ಬಂದರಿನಿಂದ ಅರ್ಧ ಕಿಲೋಮೀಟರ ದೂರದ ಬಂಡೆಗಳ ನಡುಗಡ್ಡೆಯಲ್ಲಿ ಸಿಂಧುದುರ್ಗ ಹೆಸರಿನ ಕೋಟೆಯನ್ನು ಕಟ್ಟಲು 25 ನವೆಂಬರ 1664 ರಂದು ಅಡಿಗಲ್ಲು ಹಾಕಲಾಯಿತು (ಕೆಲವು ಮೂಲಗಳಲ್ಲಿ ಡಿಸೆಂಬರ್ 5 ). ಹಿರುಜಿ ಇಂದುಲ್ಕರ ಅದರ ಉಸ್ತುವಾರಿಯಲ್ಲಿದ್ದನು. ಕುಂಬಾರಜುವೆಯ (ಗೋವೆ) ಗೋವಿಂದ ವಿಶ್ವನಾಥ ಪ್ರಭು ಅಲ್ಲಿಯ ಬಂದರನಿವಿಸ್ ಹಾಗೂ ಜಹಾಜನಿವಿಸ್ (ಬಂದರು ಹಾಗೂ ಹಡಗು ಮೇಲ್ವಿಚಾರಕ) ಆಗಿದ್ದನು. ಈ ಕೋಟೆಯನ್ನು ಕಟ್ಟಿಸಲು ಪೋರ್ತುಗೀಸ್ ತಂತ್ರಜ್ಞರನ್ನು ಮತ್ತು ಗೋವೆಯಿಂದ ಕರೆತಂದ ಗಾರೆಕೆಲಸದವರನ್ನು ನೇಮಿಸಿಕೊಂಡಿದ್ದರು. ಲೂಯಿ ಲೆಂತಿವ್ ವಯಗಸ್ ಹಾಗೂ ಆತನ ಪುತ್ರ ಫೆರ್ನೆವ್ ವಯಗಸ್ ಹೆಸರಿನವರು ಹಡಗು ಕಟ್ಟಿಸುವ ಕೆಲಸಕ್ಕೆ ಬಂದಿದ್ದರು. ಹನ್ನೆರಡು ಅಡಿ ಅಗಲ, ಮುವತ್ತು ಅಡಿ ಎತ್ತರ ಹಾಗೂ ಮೂರು ಕಿ.ಮಿ. ಉದ್ದಳತೆಯ ಗೋಡೆಯ ಕೋಟೆಗೆ ಅದಮ್ಯವಾದ ಹೆಬ್ಬಾಗಿಲನ್ನು ಹೊಂದಿದೆ.
ಕೆನರಾ ಕಡಲತೀರದ ಸ್ಥಿತಿ ಗತಿಗಳನ್ನು ಅರಿತುಕೊಳ್ಳಲು ಶಿವಾಜಿಯು ನವೆಂಬರ ತಿಂಗಳಲ್ಲೇ ನಾಲ್ಕು ನೌಕೆಗಳನ್ನು ಭಟಕಳದವರೆಗೂ ಕಳುಹಿಸಿದ್ದನು. ಈ ಸಂಗತಿಯನ್ನು ತಿಳಿದ ಕರಾವಳಿಯ ಭಾರತೀಯ ಹಾಗೂ ಐರೋಪ್ಯ ವರ್ತಕವರ್ಗ ಆತಂಕದಲ್ಲಿದ್ದಾಲೇ ಆತನು ಹುಬ್ಬಳ್ಳಿಯ ಈಸ್ಟ ಇಂಡಿಯ ಕಂಪನಿಯ ಮಳಿಗೆಗಳ ಮೇಲೆ ಧಾಳಿ ಮಾಡಿದನು. ಶಿವಾಜಿಗೆ ತಮ್ಮ ಮೇಲೆ ದಾಳಿ ಮಾಡಲು ಆಸಕ್ತಿ ಇರಲಿಕ್ಕಿಲ್ಲವೆಂದು ಕಡಲತೀರದವರು ನಿರಾತಂಕವಾಗಿದ್ದರು.
ಫಾಲ್ಗುಣ ಮಾಸದಲ್ಲಿ, 8 ಫೆಬ್ರುವರಿ 1665ರಂದು 85 ಚಿಕ್ಕ ನೌಕೆಗಳು ಹಾಗೂ ಮೂರು ದೊಡ್ಡ ಹಡಗುಗಳ ನೌಸೇನೆಯು ಸಿಂಧುದುರ್ಗದ ಬಳಿ ಸೇರಿತು. ಶಿವಾಜಿಯ ನೌಕಾದಳಕ್ಕೆ ದರಿಯಸಾರಂಗ ಮಯನಾಕ್ ಭಂಡಾರಿ, ವೆಂಟಾಜಿ ಸಾರಂಗ ಮತ್ತು ದೌಲತ್ ಖಾನ ಇವರುಗಳು ಮಂಚೂಣಿಯ ನಾಯಕರಾಗಿದ್ದರು. ಮಾಲಂಡ ಬಂದರಿನಿಂದ ಶಿವಾಜಿಯೂ ಸಮುದ್ರಕ್ಕೆ ಇಳಿದನು. ಆ ನೌಕಾ ಸೇನೆಯು ಡಚ್ಚರು ವ್ಯಾಪಾರ ಮಳಿಗೆಯಿಟ್ಟುಕೊಂಡಿದ್ದ ವೆಂಗುರ್ಲೆಯ ತೀರವನ್ನು ಸುತ್ತುವರಿದು ಗೋವೆಯ ತೀರದಿಂದ ಸ್ವಲ್ಪ ದೂರದಿಂದಲೇ ದಕ್ಷಿಣದಿಕ್ಕಿನತ್ತ ಹೊರಟು ಕುಂದಾಪುರ ಬಳಿಯ ಗಂಗೊಳ್ಳಿಯ ಆಖಾತವನ್ನು ತಲುಪಿತು. ಅಕ್ಕಿ ಮತ್ತು ಮೆಣಸಿನಕಾಳಿನ ವ್ಯಾಪಾರಕ್ಕೆ ಹೆಸರಾದ ಬಸರೂರು ಕೆಳದಿಯ ರಾಜ್ಯದಲ್ಲಿದ್ದರೂ ಪೋರ್ತುಗೀಸರ ಹಿಡಿತದಲ್ಲಿತ್ತು.
ಐವತ್ತು ಯುದ್ಧನೌಕೆಗಳು, ಮೂರು ಕಾವಲುಹಡಗುಗಳು ನಾಲ್ಕು ಸಾವಿರ ಸೈನಿಕರಿದ್ದ ಶಿವಾಜಿಯ ನೌಕಾಬಲವು ಫೆಬ್ರುವರಿ 14ರ ಬೆಳಗಿನ ಜಾವದಲ್ಲಿ ಬಸರೂರು ತೀರದಲ್ಲಿ ಇಳಿದು ಭಾರಿಪ್ರಮಾಣದಲ್ಲಿ ಹಣ, ಚಿನ್ನಬೆಳ್ಳಿ ಹಾಗೂ ಬೆಲೆಬಾಳುವ ಇತರ ವಸ್ತುಗಳನ್ನು ಎರಡು ದಿನಗಳವರೆಗೆ ಲೂಟಿ ಮಾಡಿತು. ಮಾರನೆಯ ದಿನ ಈ ನೌಕಾಸೇನೆಯು ಉತ್ತರದಿಕ್ಕಿನತ್ತ ಪ್ರಯಾಣ ಬೆಳೆಸಿತು. ಪಶ್ಚಿಮ ತೀರದ ಗೋಕರ್ಣವನ್ನು ತಲುಪಿದಾಗ 12 ಯುದ್ಧಹಡಗುಗಳು ಹಾಗೂ 400 ಸೈನಿಕರನ್ನು ತನ್ನ ಜೊತೆಯಲ್ಲಿರಿಸಿ ಉಳಿದ ಹಡಗುಗಳನ್ನು ಹಾಗೂ ಸೈನ್ಯವನ್ನು ಮುಂದಕ್ಕೆ ಕಳುಹಿಸಿದನು. ಬಸರೂರನ್ನು ಬಿಟ್ಟುಕೊಟ್ಟಿದ್ದಾಗಿ ಕೆಳದಿಯ ಅರಸು ಸೋಮಶೇಖರನಾಯಕನಿಗೆ ಸುದ್ದಿ ಕಳುಹಿಸಿದನು. ಗೋಕರ್ಣದಲ್ಲಿ ಶಿವರಾತ್ರಿ ಜಾತ್ರೆಯ ಕೆಲವು ಅಂಗಡಿಗಳನ್ನು ಸೈನಿಕರು ಲೂಟಿಗೈದರು.
ಗೋಕರ್ಣದಲ್ಲಿ ಮಹಾಬಳೇಶ್ವರ ದೇವರ ಅಭಿಷೇಕ ಪೂಜೆ ಮುಂತಾದ ಆಚರಣೆಗಳನ್ನು ಪೋರೈಸಿದ ಮರುದಿನ ಭೂಮಾರ್ಗದಲ್ಲಿ ಅಂಕೋಲೆಯನ್ನು ತಲುಪಿದನು. ಆಗ ಅಂಕೋಲೆಯು ಆದಿಲಶಾಹಿ ರಾಜ್ಯದ ವ್ಯಾಪಾರ ಕೇಂದ್ರವಾಗಿದ್ದು ಹಲವು ಮಳಿಗೆಗಳನ್ನೊಳಗೊಂಡ ಪೇಟೆಯನ್ನು ಹೊಂದಿತ್ತು. ಶಿವಾಜಿಯ ಸೈನಿಕರು 21 ಫೆಬ್ರುವರಿ 1665ರಂದು ಅಂಕೋಲೆಯ ಪೇಟೆಯಲ್ಲಿ ಲೋಟಿ ನಡೆಸಿ ಅಂಗಡಿಮುಂಗಟ್ಟುಗಳಿಗೆ ಬೆಂಕಿಯಿಟ್ಟರು.
22 ಫೆಬ್ರುವರಿ 1665 ರಂದು ಹನ್ನೆರಡು ಹಡಗುಗಳ ಶಿವಾಜಿಯ ನೌಕಾಸೇನೆಯು ಕಾರವಾರದ ನದಿಮುಖವನ್ನು ತಲುಪಿತು. ಒಮಾನ್ ದೇಶದ ಇಮಾಮನಿಗೆ ಕಳುಹಿಸಲು ಸರಕು ತುಂಬಿದ ಒಂದು ಹಡಗು ಎಮಾನ್ಯುವೆಲ್ ದೊನ್ನವದೊ ಹೆಸರಿನ ನಾವಿಕನ ನೇತೃತ್ವದಲ್ಲಿ ಕಡವಾಡ ಆಖಾತಿನಲ್ಲಿ ಹೊರಡಲು ಅನುವಾಗಿದ್ದಿತ್ತು. ತಮ್ಮ ಮೇಲೆ ಧಾಳಿ ಮಾಡಬಾರದೆಂಬ ವಿನಂತಿಯೊಂದಿಗೆ ಕಡವಾಡ ಪೇಟೆಯ ವರ್ತಕರು ಹಾಗೂ ಇಂಗ್ಲಿಷರ ಮಳಿಗೆಯವರು ಪ್ರತಿನಿಧಿಗಳ ಮೂಲಕ ಕಡಲತೀರದಲ್ಲೇ ಲಂಗರು ಹಾಕಿದ್ದ ಆತನಿಗೆ ದೊಡ್ಡ ಮೊತ್ತದ ಕಪ್ಪವನ್ನು ಕಳುಹಿಸಿಕೊಟ್ಟರು. ಅಷ್ಟೇ ಅಲ್ಲದೆ ಬಿಜಾಪುರ ಆದಿಲಶಾಹಿ ದಂಡನಾಯಕ ಬಹಲೊಲ್ಲಖಾನನ ತಾಯಿಯನ್ನು ಮಕ್ಕಾಯಾತ್ರೆಗಾಗಿ ಕಳುಹಿಸಲು ಆತನ ಸಹಾಯಕ ಸೈನ್ಯಾಧಿಕಾರಿ ಶೇರಖಾನನು ಭಾರೀ ಸೈನ್ಯದೊಂದಿಗೆ ಕಾರವಾರದತ್ತ ಪ್ರಯಾಣದಲ್ಲಿದ್ದ ಸುದ್ದಿಯನ್ನು ತಿಳಿದು ಶಿವಾಜಿಯು ತನ್ನ ನೌಕಾಸೇನೆಯೊಂದಿಗೆ ಮುಂದಕ್ಕೆ ಸಾಗಿದನು. ಈ ಸಲದ ತನ್ನ ಹೋಳಿಹಬ್ಬದ ಆಚರಣೆಯನ್ನು ಈ ಶೇರಖಾನನು ಹಾಳುಗೆಡವಿದನಲ್ಲಾ ಅಂತ ಆತನು ಗೊಣಗಿಕೊಂಡನಂತೆ. ಹೋಳಿಹಬ್ಬದ ಕಾಲದಲ್ಲೇ ವ್ಯಾಪಾರ ಪಟ್ಟಣಗಳ ಮೇಲೆ ಧಾಳಿಯಿಡುವ ಪರಿಪಾಠ ಆತನದ್ದಾಗಿತ್ತು. ಫೆಬ್ರುವರಿ 23ರ ರಾತ್ರಿ ಶೇರಖಾನನು ಕಾರವಾರ (ಕಡವಾಡ) ತಲುಪಿದನು. ಆತನಿಗೆ ಶಿವಾಜಿಯ ಆಗಮನದ ಯಾವುದೇ ಮಾಹಿತಿ ಇರಲಿಲ್ಲ. ಶಿವಾಜಿಯು ಪಡೆದ ಮಾಹಿತಿಯಂತೆ ಆತನ ಬಳಿ 200 ಅಶ್ವ 300 ಕಾಲ್ದಳದ ಬಲವೂ ಇದ್ದಿರಲಿಲ್ಲ! ಕ್ರಿ.ಶ 1665ರ ಶಿವರಾತ್ರಿಯಿಂದ ಹೋಳಿಹುಣ್ಣಿವೆಯ ಕಾಲವನ್ನು ಶಿವಾಜಿಯು ಈ ನೌಕಾ ದಂಡಯಾತ್ರೆಯಲ್ಲಿ ಗೋಕರ್ಣ ಅಂಕೋಲೆ ಕಾರವಾರದ ಕಡಲತೀರದಲ್ಲಿ ಕಳೆದಿದ್ದನು.
ಶಿವಾಜಿಯ ಈ ದಂಡಯಾತ್ರೆಯ ವಿವರಗಳು ಪೋರ್ಚುಗೀಸ್, ಇಂಗ್ಲಿಷ ಹಾಗೂ ಡಚ್ಚರ ವರದಿಗಳಿಂದ ಸಾಕಷ್ಟು ನಿಖರವಾಗಿ ತಿಳಿದುಬರುತ್ತದೆ. ಅಲ್ಲದೆ ಆತನ ಕಾಲದ ಬಖೈರುಗಳೂ ಅದರ ಸಾಕ್ಷ್ಯ ಕೊಡುತ್ತವೆ. ಈ ಘಟನೆಗೆ ಮುನ್ನ ನೌಕಾಸೇನೆಯನ್ನು ಸಜ್ಜುಗೊಳಿಸಿ ಆಕ್ರಮಣಗೈದ ಭಾರತೀಯ ದೊರೆಯ ದಾಖಲೆಯಿಲ್ಲ. ಆದ್ದರಿಂದ ಅರಬಿ ಸಮುದ್ರದಲ್ಲಿ ಇಂಗ್ಲೀಷ, ಡಚ್, ಪೋರ್ಚುಗೀಸ ಹಾಗೂ ಹಬಶಿ ವರ್ತಕರ ಚಲನವಲನಗಳ ನಿಯಂತ್ರಣಕ್ಕೆ ಕಾರಣವಾದ ಶಿವಾಜಿಯನ್ನು ಭಾರತೀಯ ನೌಕಾಪಡೆಯ ಜನಕ ಎಂದು ಕರೆಯುತ್ತಾರೆ.




Leave a Reply