ಅಂಕೋಲಾ ಮಾರುಗದ್ದೆಯ ಮಾಳಿಗೆ ದೇವಸ್ಥಾನದ ವಿಷಕನ್ಯೆ ಶಿಲ್ಪ

Posted by

·

ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪ ಲಕ್ಷಣಗಳಿರುವ ಈ ಸುಂದರವಾದ ಶಿಲ್ಪದಲ್ಲಿ ನಗ್ನ ಸ್ತ್ರೀಯೊಬ್ಬಳು ಕೈಗಳನ್ನು ಮೇಲಕ್ಕೆತ್ತಿಕೊಂಡು ತ್ರಿಭಂಗಿ ಶೈಲಿಯಲ್ಲಿ ನಿಂತಿದ್ದಾಳೆ. ಆಕೆಯ ಕಾಲುಗಳಿಗೆ ಮತ್ತು ಕುತ್ತಿಗೆಗೆ ಸರ್ಪಗಳು ಸುತ್ತಿಕೊಂಡಿವೆ. ಇದನ್ನು ‘ವಿಷಕನ್ಯೆ ಶಿಲ್ಪ’ ಎಂದು ಗುರುತಿಸಲಾಗಿದೆ. ಅಂಕೋಲಾ ತಾಲೂಕಿನ ಮಾರುಗದ್ದೆಯಲ್ಲಿರುವ ಮಾಳಿಗೆ ದೇವಾಲಯದ ಹಿಂಭಾಗದ ಹೊರ ಭಿತ್ತಿಯಲ್ಲಿರುವ ಪ್ರಸ್ತುತ ಶಿಲ್ಪದ ಕೈಯ ಭಾಗಗಳು ಮುರಿದಿವೆ. ಸುಮಾರು ಕ್ರಿ.ಶ. 1150 ರಿಂದ 1200ರ ಆಸುಪಾಸಿನ ವರ್ಷಗಳಲ್ಲಿ ಇದರ ರಚನೆಯಾಗಿರಬಹುದು.
ವಿಷಕನ್ಯೆ ಎಂದರೆ ವಿಷಪೂರಿತವಾದ ದೇಹದ ಸುಂದರ ಸ್ತ್ರೀ. ಇತಿಹಾಸ ಕಾಲದಲ್ಲಿ ಸುಂದರವಾದ ಹೆಣ್ಣು ಶಿಶುಗಳನ್ನು ರಾಜರು ದತ್ತು ತೆಗೆದುಕೊಂಡು ಅವರಿಗೆ ನಿಯಮಿತ ಪ್ರಮಾಣದಲ್ಲಿ ಪಾದರಸ ಅಥವಾ ಹಾವಿನ ವಿಷವನ್ನು ದೇಹಕ್ಕೆ ಸೇರಿಸುತ್ತಿದ್ದರಂತೆ. ಈ ಶಿಶುಗಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಅವರ ದೇಹ ವಿಷಪೂರಿತವಾಗುತ್ತಿತ್ತು. ರಾಜರು ತಮ್ಮ ಎದುರಾಳಿಗಳನ್ನು ಕೊಲ್ಲಲು ಇವರನ್ನ ಕಳುಹಿಸುತ್ತಿದ್ದರು. ಶತ್ರು ಪಾಳಯದಲ್ಲಿ ಈ ವಿಷಕನ್ಯೆಯರ ದಂಡನ್ನು ಕಳುಹಿಸಿದಾಗ ಇವರೊಡನೆ ಸೇರಿದ ಪುರುಷರು ಕ್ಷಣಮಾತ್ರದಲ್ಲಿ ಸಾಯುತ್ತಿದ್ದರಂತೆ. ಇದು ಇಂದಿನ ಹನಿಟ್ರ್ಯಾಪನ ಪ್ರಾಚೀನ ರೂಪ ಎನ್ನಬಹುದು.
ರಾಷ್ಟ್ರಕೂಟರ ಕಾಲದಿಂದ ವಿಷಕನ್ಯೆಯರ ಶಿಲ್ಪಗಳು ದೇವಾಲಯಗಳ ಭಿತ್ತಿಯ ಅಲಂಕರಣದಲ್ಲಿ ಕಾಣಬಹುದು. ರಾಜರುಗಳ ಕುಟಿಲ ತಂತ್ರಗಳ ಭಾಗಗಳಾಗಿ, ಶತ್ರು ರಾಜರುಗಳ ಮೇಲೆ ವಿಜಯ ಸಾಧಿಸುವಲ್ಲಿ ಮಹತ್ತರ ಭೂಮಿಕೆ ನಿಭಾಯಿಸುತ್ತಿದ್ದ ವಿಷಕನ್ಯೆಯರನ್ನು ಗೌರವಿಸುವ ಮಾಧ್ಯಮವಾಗಿ ರಚನೆಯಾದ ಇಂಥ ಶಿಲ್ಪಗಳನ್ನು ಹೊಯ್ಸಳರ ಕಾಲದಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಕಾಣಬಹುದು. ಬೇಲೂರಿನ ಚನ್ನಕೇಶವ ದೇವಾಲಯದ ಭಿತ್ತಿಯಲ್ಲಿ ವೈವಿಧ್ಯಮಯ ವಿಷಕನ್ನೆಯರ ಶಿಲ್ಪಗಳು ನೋಡಲು ಸಿಗುತ್ತವೆ.
ಈ ವಿಷಕನ್ಯೆಯರ ಕಲ್ಪನೆಯ ಉಗಮದ ಕುರಿತು ಅನೇಕ ಅಭಿಪ್ರಾಯಗಳಿವೆ. ಭಾರತೀಯ ಪುರಾಣ ಕಾವ್ಯಗಳಲ್ಲಿ ವಿಷಕನ್ಯೆಯರ ಅನೇಕ ಕಥೆಗಳಿವೆ. ಕೇವಲ ದೃಷ್ಟಿಮಾತ್ರದಿಂದಲೇ ಮನುಷ್ಯರನ್ನ ಕೊಲ್ಲಬಲ್ಲ ಸಾಮರ್ಥ್ಯವಿರುವ ವಿಷಕನ್ಯೆಯರ ಬಗ್ಗೆ ಕಲ್ಕಿಪುರಾಣದಲ್ಲಿ ವಿವರಗಳಿವೆ. ಚಿತ್ರಗ್ರೀವ ಗಂಧರ್ವನ ಹೆಂಡತಿ ಸುಲೋಚನ ವಿಷಕನ್ಯೆ ಆಗಿದ್ದಳಂತೆ. ಚಾಣಕ್ಯನ ಅರ್ಥಶಾಸ್ತ್ರದಲ್ಲಿಯೂ ವಿಷಕನ್ಯೆಯರ ಉಲ್ಲೇಖವಿದೆ. ಕೃಷ್ಣನನ್ನು ಕೊಲ್ಲಲು ಕಂಸ ಕಳುಹಿಸಿದ ಪೂತನಿಯೂ ಒಬ್ಬಳು ವಿಷಕನ್ಯೆಯೇ ಆಗಿರಬೇಕು.

✍️ ಶ್ಯಾಮಸುಂದರ ಗೌಡ, ಅಂಕೋಲಾ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading