ಅಂಕೋಲಾದ ಸುಂಕಸಾಳದಲ್ಲಿ ಮೂರು ನಿಸಿಧಿ ಶಾಸನ ಶಿಲ್ಪಗಳು ಪತ್ತೆ

Posted by

·

ಅಂಕೋಲಾ : ತಾಲೂಕಿನ ಸುಂಕಸಾಳ ಗ್ರಾಮದಲ್ಲಿ ಹನ್ನೆರಡನೇ ಶತಮಾನದ ಮೂರು ನಿಸಿಧಿ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಈ ಶಾಸನ ಸಿಗುವ ಒಂದು ವರ್ಷದ ಕೆಳಗೆ ಇದೇ ಗ್ರಾಮದಲ್ಲಿ ಗೋವೆಯ ಕಾದಂಬರ ಶಾಸನ ಶೋಧಿಸಿದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಕೈಗೊಂಡ ಇನ್ನೊಂದು ಕ್ಷೇತ್ರಕಾರ್ಯದಲ್ಲಿ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಎದುರಲ್ಲಿ ಈ ನಿಸಿಧಿ ಶಾಸನಗಳು ಪತ್ತೆಯಾಗಿವೆ. ಈ ಶಾಸನ ಶಿಲ್ಪಗಳು ಅಂಕೋಲಾ ತಾಲೂಕಿನಲ್ಲಿ ಜೈನಧರ್ಮದ ಪ್ರಾಬಲ್ಯದ ಕುರಿತು ಇನ್ನಷ್ಟು ಹೊಸ ಬೆಳಕು ಚೆಲ್ಲುತ್ತವೆ ಎಂದು ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,ಸಲ್ಲೇಖನ ಅಥವಾ ಸನ್ಯಸನ ವ್ರತಾಚರಣೆಯ ಮೂಲಕ ಬದುಕನ್ನು ಕೊನೆಗಾಣಿಸಿಕೊಂಡವರ ಸ್ಮಾರಕಗಳನ್ನು ನಿಸಿಧಿಗಳೆಂದು ಕರೆಯುವರು. ನಿಸಿಧಿಗಳನ್ನು ಸ್ತಂಭ, ಕಂಬ, ಮಾನಸ್ತಂಭ, ಜಯಸ್ತಂಭ, ಚಾಗದಕಂಬ ಶಿಲಾಸ್ತಂಭ, ಶಿಲಾಕೂಟ, ಕಲ್ಲದಾನಶಾಲ, ಪಟ್ಟಸಾಲೆ, ಶಾಸನ ಅಥವಾ ಜಿನಶಾಸನ ಎಂದೂ ಕರೆಯುವರು. ಸಲ್ಲೇಖನ ಅಥವಾ ಸಮಾಧಿ ಮರಣವು ಜೈನರು ಅಪೇಕ್ಷಿಸುವ ಆದರ್ಶ ಮರಣವಾಗಿದೆ. ಜೈನ ಶಾಸ್ತ್ರಗ್ರಂಥಗಳು ಸಲ್ಲೇಖನದ ಮರಣವನ್ನು ಮೃತ್ಯುಮಹೋತ್ಸವವೆಂದೆ ಕೊಂಡಾಡಿವೆ’ ಎಂದು ವಿವರಿಸಿದ ಅವರು ಮುಂದುವರೆದು ಸಮಂತ ಭದ್ರರು `ರತ್ನಕರಂಡಕ’ ಶ್ರಾವಕಾಚಾರದಲ್ಲಿ “ಉಸಸರ್ಗೇ ಧುಭಿಕ್ಷೇ ಜರಸಿ ರುಜಾಯಾಂ ಚ ನಿಃಪ್ರತಿಕಾರೇ|| ಧರ್ಮಾಯ ತನು ವಿಮೋಚನ ಮಾಹುಃ ಸಲ್ಲೇಖನಾಮ್ನಾರ್ಯಾ|| ಅಂದರೆ ಉಪಸರ್ಗ, ದುರ್ಭಿಕ್ಷೆ, ವೃದ್ಧಾಪ್ಯ, ಕೈಮೀರಿದ ರೋಗಗಳಲ್ಲಿ ಆತ್ಮ ಪವಿತ್ರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಶರೀರವನ್ನು ತ್ಯಾಗಮಾಡುವುದು ಸಲ್ಲೇಖನ ಎನಿಸುವುದು ಎಂದು ವಿವರಿಸಿದರು.

ಪತ್ರಿಕಾ ವರದಿಗಳು

ಸುಂಕಸಾಳದಲ್ಲಿ ದೊರೆತ ಈ ಶಿಲ್ಪಗಳು ಶಾಸನಿತ ನಿಸಿಧಿಗಳಾಗಿವೆ. ಆದರೆ ಇವುಗಳ ಸಂರಕ್ಷಣೆಯ ಭರದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಕಾಂಕ್ರೀಟಿನಲ್ಲಿ ಹೂತು ನಿಲ್ಲಿಸಿರುವುದರಿಂದ ಶಾಸನಗಳ ಬಹುಭಾಗ ನಷ್ಟವಾಗಿದೆ. ಮೊದಲನೆ ಶಾಸನದ ಎರಡು ಸಾಲುಗಳು ಕಾಣುತ್ತಿದ್ದು ” ಶ್ರೀಮತು ಪರಮ ಗಂಭೀರ ಸ್ಯಾದ್ವಾಧಮೋಘ ಲಾಂಛನ ಜೀಯಾ ತ್ರೈಳೋಕ್ಯ ನಾಥಸ್ಯ ಶಾಸನಂ ಜಿನಶಾಸನಂ” ಎಂಬ ಪಾಠ ಸಿಗುತ್ತದೆ. ಮಧ್ಯದ ಶಾಸನ ಜೀರ್ಣವಾಗಿದ್ದು ಅಲ್ಲಲ್ಲಿ ಕೆಲವು ಅಕ್ಷರಗಳು ಮಾತ್ರ ಕಾಣಿಸುತ್ತಿದ್ದು ಪಾಠ ಅಸ್ಪಷ್ಟವಾಗಿದೆ. ಮೂರನೇ ಶಾಸನದ ಎರಡುಸಾಲುಗಳು ಭಾಗಶಃ ಕಾಣುತ್ತಿದ್ದು ” ಸ್ವಸ್ತಿ ಶ್ರೀ ಜಯಾ……………… ಜಿನಾಲಯ ಮೂಲಸಂಘದ ಬಸದಿಗಿವರು..” ಎಂಬ ಪಾಠ ದೊರೆಯುತ್ತದೆ. ಲಿಪಿ ಮತ್ತು ಶಿಲ್ಪ ಲಕ್ಷಣಗಳಿಂದ ಇವು ಹನ್ನೆರಡನೇ ಶತಮಾನದ ಶಾಸನಶಿಲ್ಪಗಳೆಂದು ಗುರುತಿಸಲಾಗಿದೆ. ಆ ಕಾಲದಲ್ಲಿ ಈ ಪ್ರದೇಶ ಗೋವೆಯ ಕಾದಂಬರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಇದೇ ಗ್ರಾಮದಲ್ಲಿ ದೊರೆತ ಕ್ರಿ.ಶ. ೧೧೯೨ರ ಪೆರ್ಮಾಡಿದೇವನ ವೀರಗಲ್ಲು ಶಾಸನದಿಂದ ತಿಳಿದುಬರುತ್ತದೆ ಹಾಗೂ ಆತನ ಕಾಲದಲ್ಲಿ ಜೈನಧರ್ಮ ಸಾಕಷ್ಟು ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದು ಇನ್ನುಳಿದ ಶಾಸನಗಳ ಅಧ್ಯಯನದಿಂದ ನಮಗೆ ತಿಳಿಯುತ್ತದೆ ಎಂದು ತಿಳಿಸಿದರು.

ನಿಸಿಧಿಯಲ್ಲಿ ಒಂದು, ಎರಡು ಮತ್ತು ಮೂರು ಹಂತದ ನಿಸಿಧಿ ಶಿಲ್ಪಗಳಿರುತ್ತವೆ. ಇಲ್ಲಿ ದೊರೆತಿರುವ ಮೂರೂ ನಿಸಿಧಿಗಳು ಒಂದು ಹಂತದ ನಿಸಿಧಿಗಳಾಗಿವೆ. ಮಧ್ಯದಲ್ಲಿ ಜಿನ ಕುಳಿತಿದ್ದು ಅಕ್ಕ ಪಕ್ಕದಲ್ಲಿ ಭಕ್ತರು ಕುಳಿತಿದ್ದಾರೆ. ಜಿನನ ಸನ್ನಿಧಿಯಲ್ಲಿರುವ ವ್ಯಕ್ತಿಗಳನ್ನು ಶ್ರಾವಕ ಮತ್ತು ಶ್ರಾವಕಿಯರ ರೂಪದಲ್ಲಿ ತೋರಿಸಲಾಗಿದೆ. ಇವರು ಪರ್ಯಾಂಕಾಸನದಲ್ಲಿ ಕುಳಿತು ಅಂಜಲಿ ಹಸ್ತರಾಗಿ ಆರಾಧನಾ ವ್ಯಾಖ್ಯಾನ ಮುದ್ರೆಯಲ್ಲಿದ್ದಾರೆ. ಮಧ್ಯಜಿನನ ಮೇಲೆ ಮುಕ್ಕೊಡೆ ಚಿತ್ರಿಸಲಾಗಿದೆ. ಅಕ್ಕಪಕ್ಕ ಚಾಮರಧಾರಿಣಿಯರು ಸೊಂಟವನ್ನು ತುಸು ಭಾಗಿಸಿ ಜಿನನಿಗೆ ಗಾಳಿ ಬೀಸುತ್ತಿದ್ದಾರೆ. ಈ ಹಂತದ ಮೇಲ್ಗಡೆ ಮೂರು ಸ್ತರದ ಗೋಪುರಾಕೃತಿಯನ್ನು ಚಿತ್ರಿಸಲಾಗಿದೆ. ಮೂರು ನಿಸಿಧಿ ಶಿಲ್ಪಗಳನ್ನು ಒಂದೇ ಬಗೆಯ ಸಾಂಪ್ರದಾಯಿಕ ಸೂತ್ರಗಳನ್ನನ್ನುಸರಿಸಿ ಸಿದ್ಧಗೊಳಿಸಿರುವದರಿಂದ ನಿಸಿಧಿ ಸ್ಮಾರಕಗಳ ಕಲಾ ವೈವಿಧ್ಯ ಸೀಮಿತಮಟ್ಟದ್ದಾಗಿದೆ. ಜೀನ ಶಿಲ್ಪದ ಮುಖಭಾವದಲ್ಲಿ ತುಸು ಬದಲಾವಣೆಯೊಂದಿಗೆ ಮೂರೂ ನಿಸಿಧಿ ಶಿಲ್ಪಗಳು ಒಂದೇ ರೀತಿಯಲ್ಲಿ ಕೆತ್ತಲ್ಪಟ್ಟಿದ್ದು, ಪ್ರತಿಯೊಂದರ ಮಧ್ಯೆ ಅಲ್ಪ ಕಾಲದ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ ಎಂದು ಶ್ಯಾಮಸುಂದರ ಗೌಡ ವಿವರಿಸಿದರು. ಇದೇ ವೇಳೆ ಈ ನಿಸಿಧಿ ಶಿಲ್ಪಗಳ ಅಧ್ಯಯನದ ಸಂದರ್ಭದಲ್ಲಿ ಅಗತ್ಯ ಮಾರ್ಗದರ್ಶನ ಮಾಡಿದ ಡಾ. ರವಿಕುಮಾರ ಕೆ. ನವಲಗುಂದ ಹರಿಹರ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಮೂಲ ಮಾಹಿತಿ: ಶ್ಯಾಮಸುಂದರ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading