ಮರೆಯಾಗುತ್ತಿರುವ ಉತ್ತರ ಕನ್ನಡದ ಚಂದಾವರ ಕೋಟೆ

Posted by

·

ಉತ್ತರಕನ್ನಡದ ಅಸ್ಮಿತೆ ಆಗಬೇಕಿದ್ದ ಚಂದಾವರ ಹಾಗು ಅಲ್ಲಿಯ ಐತಿಹಾಸಿಕ ಕೋಟೆ ಇಂದಿಗೆ ಕೇವಲ ಕಥೆ ಮಾತ್ರ. ಇದೊಂದು ದುರಂತವೇ ಸರಿ. ಪಾಂಡ್ಯರು, ಕದಂಬರು ಕಟ್ಟಿ ಆಳಿದ ಚಂದಾವರ ಇಂದು ಇತಿಹಾಸ ತಜ್ಞರ ಬಾರಿ ನಿರ್ಲಕ್ಷಕ್ಕೊಳಗಾಗಿದೆ. ಇಲ್ಲಿಯ ಗಲ್ಲಿ ಗಲ್ಲಿಗಳಲ್ಲಿ ಐತಿಹಾಸಿಕ ಶಾಸನಗಳು ದೇವಾಲಯಗಳು ಮಾರುದಕ್ಕೂ ಸುಂಕದ ಕಟ್ಟೆಗಳಿವೆ. ಸ್ಥಳೀಯರು ಇಷ್ಟು ವರುಷ ಹೇಳಿಕೊಂಡು ಬಂದಂತೆ ಕೋಟೆಯ ಸ್ಥಳಕ್ಕೆ ಕಷ್ಟಪಟ್ಟು ತೆರಳಿ ಇಂದು ಒಂದೆರೆಡು ಅವಶೇಷಗಳನ್ನ ಪತ್ತೆ ಹಚ್ಚಿದ್ದೇನೆ. ಚಿತ್ರ 1 2 3 4 5 ಕೋಟೆಯ ಭೂಮಿ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ಸುತ್ತಲೂ ಆಳವಾದ ಕಂದಕವನ್ನ ಅಗೆಯಲಾಗಿದೆ, ಹಾಗೆಯೇ ಅದಕ್ಕೆ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ. ಪುರಾತನ ಮೆಟ್ಟಿಲುಗಳಿವೆ, ಒಂದು ಬಾವಿಯೂ ಇದೆಯಂತೆ ಪತ್ತೆಮಾಡಲಾಗಲಿಲ್ಲ. ಎತ್ತ ಕಣ್ಣು ಹಾಯಿಸಿದರೂ ಕಟ್ಟಡದ ಕಲ್ಲುಗಳ ರಾಶಿ. ಕೋಟೆಯ ಎದುರು ಒಂದು ಗುಡ್ಡವಿದ್ದು ಸ್ಥಳೀಯರು ಆ ಗುಡ್ಡಕ್ಕೆ ಸಮರಬೋಳೇ ಎನ್ನುತ್ತಾರೆ (ಯುದ್ಧ ಗುಡ್ಡ ) ಆ ಗುಡ್ಡದ ಕೆಳಗೆ ಚಂದಾವರದ ಗ್ರಾಮ ದೇವತೆ ರಣ ಮಾಸ್ತಿ ದೇವಿಯ ದೇವಾಲಯವಿದೆ. (ರಣರಂಗದ ಮಾಸ್ತಿ) ಅದರ ಪಕ್ಕದಲ್ಲಿ ಕಪಾಲಿ ವೀರನ ದೇವಾಲಯ ಇದೆ. ಸ್ವಲ್ಪ ಮುಂದಕ್ಕೆ ಶೂಲಬಿರ ಎಂಬ ವೀರಗಲ್ಲು ಇದೆ. ಉತ್ತರಕನ್ನಡದಲ್ಲಿನ ಬಹುತೇಕ ಹಳೆಪೈಕರ, ಚಮಗಾರರ, ಗುಡಿಗಾರರ ಗ್ರಾಮ ದೇವತೆ ಚಂದಾವರದ ರಣಮಾಸ್ತಿಯಾಗಿದೆ. ಚಂದಾವರವು ಹಳೆಪೈಕರ ಮಾತೃ ಕೂಟ (ತಾಯಿ ಸ್ಥಳ).

ಇಲ್ಲಿ ಕುಮಾರರಾಮನ ಕಥೆಗಳು ಜನಮಾನಸದಲ್ಲಿ ಬೆರೆತು ಆಚರಣೆಯ ಮೂಲಕ ಇಂದಿಗೂ ಜೀವಂತವಿದೆ. ಚಂದಾವರದಲ್ಲಿ ವಡಗೇರಿ ಎಂಬ ಹಾಲಕ್ಕಿ ಗೌಡರ ಪುಟ್ಟ ಹಳ್ಳಿಯಿದೆ, ಬಹುಷಃ ಅದು ಅಂದಿಗೇ ಒಡೆಯರು ದಾನ ಕೊಟ್ಟ ಕೇರಿ ಆಗಿರಬೇಕು. ಹಾಗೆ ಮುಂದಕ್ಕೆ ಸಾಗಿದರೆ ದೀವಳ್ಳಿ ಎಂಬ ಪುಟ್ಟ ಹಳ್ಳಿಯಿದೆ ಅದರ ಮೂಲ ಹೆಸರು ದೀವರ ಹಳ್ಳಿಯೇ ಆಗಿರಬೇಕು ಕಾರಣ ಅಲ್ಲಿ ಈಗಲೂ ಹಳೆಪೈಕರದ್ದೇ ಪ್ರಾಬಲ್ಯ, ಹಳೆಪೈಕರನ್ನ ದೀವರು ಎಂತಲೂ ಕರೆಯುತ್ತಾರೆ. ಚಂದಾವರದ ಸುತ್ತಮುತ್ತಲಿನ ಗುಡ್ಡಕ್ಕೆ ತೆರಳಿದರೆ ಈಗಲೂ ಸೀಸದ ಚೂರುಗಳು ಸಿಗುತ್ತವೆ (ಸೀಡಿ ಗುಂಡು ) ಸಮರಬೋಳೇಯ ಮೇಲೆ ಮೂರು ಪಿರಂಗಿಗಳಿದ್ದವು ಆದರೆ ಈಗ ಅದಿಲ್ಲ. ಅಲ್ಲಿಯ ಕೆಲ ಸ್ಥಳೀಯರು ಅದನ್ನ ಒಡೆದು ಗುಜರಿಗೆ ಮಾರಿದ್ದಾರೆ. ಇಲ್ಲಿನ ಯುದ್ಧದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಿಡಿಮದ್ದಿನ ಸ್ಫೋಟಕಗಳು ಬಳಕೆಯಲ್ಲಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಚಂದಾವರದ ಕ್ಷಾತ್ರ ಇತಿಹಾಸ ಇಂದಿಗೂ ನಿಗೂಢ.
ಆಸಕ್ತರು ಚಂದಾವರದ ಇತಿಹಾಸದಮೇಲೆ ಬೆಳಕು ಚಲ್ಲಬೇಕಾಗಿ ವಿನಂತಿ 🙏

ಸ್ಥಳ: ಚಂದಾವರ, ಹೊನ್ನಾವರ, ಉತ್ತರ ಕನ್ನಡ

ಮಾಹಿತಿ: ಎಸ್. ಕೆ. ಸುಕುಮಾರ್ (ಗುಡ್ಡಿಮನೆ), ANKOLA- HISTORY CULTURE AND ECOLOGY


Discover more from Suggi Sampada

Subscribe to get the latest posts sent to your email.

One response to “ಮರೆಯಾಗುತ್ತಿರುವ ಉತ್ತರ ಕನ್ನಡದ ಚಂದಾವರ ಕೋಟೆ”
  1. Lokesh Mesta Hosad

    Good

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading