ಗಡದಗುಡ್ಡದ ಚಾರಣವೂ… ಕೋಟೆಯ ಹುಡುಕಾಟವೂ…

Posted by

·

‘ಬಹದೂರಕಾನ ಹಿಮಾಮಕಾನಾ ಅಂಬೋರೋ| ದಂಡೇ ಬರುವದಾ ಸುದ್ದೀ ತೆಳದಾರಲ್ಲ | ಅವರೇ ದಂಡೇ ಬರತೀದಂಬೂ ಸುದ್ದಿ ತಿಳದಾರಲ್ಲ | ಅಲ್ಲಿಂದನೆಲಮಾಲೂಗೀಯನೇ ಕಡದಾರಲ್ಲ | ಕ್ವೊಟೆಬ್ಯೆಣದಲ್ ನೆಲಮಾಳುಗಿ ಕಡದಾರಲ್ಲ | ಅಲ್ಲಿಂದೇ ಎಲ್ಲೀಗ್ ಕಡದಾರಯ್ಯ | ಅಲ್ಲಿಂದ ಕ್ವೊಟೆ ಗುಡ್ಡದವರೆಗೂ ಕಡದಾರಯ್ಯ…’

ಇವು ಅಂಕೋಲೆಯ ಹಾಲಕ್ಕಿಗಳ ಗುಮಟೆಯ ದೀರ್ಘ ಹಾಡಿನ ಕೆಲವು ಸಾಲುಗಳು. ಬಹದ್ದೂರಖಾನ ಹಾಗೂ ಇಮಾಮಖಾನ ಎನ್ನುವವರು ಸೈನ್ಯ ಕಾಂಗಳಶೀ ಹೊಳೆ(ಕಾಳೀನದಿ) ದಂಡೆಯಲ್ಲಿ ಬೀಡುಬಿಟ್ಟಿದೆ ಮತ್ತದು ಅಂಕೋಲೆಯತ್ತ ದಾಳಿಗೆ ಬರುತ್ತಿದೆ ಎನ್ನುವ ಸುದ್ದಿ ತಿಳಿದ ಕೋಟೆಯ ಕಾವಲುಗಾರರು ತಾವು ಕೇವಲ ಐದು ಜನರಿದ್ದೇವೆ ಕೋಟೆಯನ್ನು ಕಾಯ್ದುಕೊಳ್ಳುವುದು ಹೇಗೆ ಎಂದು ಯೋಚಿಸಿ ಉಪಾಯಮಾಡಿ ಕೋಟೆಬ್ಯಾಣದಿಂದ ಕೋಟೆ ಗುಡ್ದದವರಗೆ ನೆಲಮಾಳಿಗೆಯನ್ನೇ ಕೊರೆದು ದಾಳಿಕೋರರನ್ನು ಎದುರಿಸಿದ ಸಾಹಸಗಾಥೆ ಈ ಪದ್ಯದ ಸಾರಾಂಶ.

ಈ ಗುಮಟೆ ಹಾಡಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಇದರ ಚಾರಿತ್ರಿಕ ಸತ್ಯ ತಿಳಿಯುವ ಕುತೂಹಲದಿಂದ ಅಂಕೋಲಾ ನಗರಮಧ್ಯದಲ್ಲಿಯೇ ಇರುವ ಕೋಟೆಯನ್ನು ಅದೆಷ್ಟುಬಾರಿ ಪರಶೀಲಿಸಿದ್ದೇನೋ ಲೆಕ್ಕವಿಲ್ಲ.

ಅಂಕೋಲೆಯ ಕೋಟೆಯ ಆವರಣ ನಾನು ಬಾಲ್ಯದಿಂದ ಆಡಿ ಬೆಳೆದ ಜಾಗ. ಪೋಸ್ಟ್ ಮಾಸ್ಟರ್ ಅಜ್ಜಾ(ಎಮ್. ಆರ್. ನಾಯ್ಕ), ಶ್ರೀಪಾದ ನಾಡಕರ್ಣಿ ಅವರ ಜೊತೆಯಲ್ಲಿ ಪ್ರತಿವಾರ ಒಂದೋ, ಎರಡೋ ಬಾರಿ ಕೋಟೆಗೆ ಭೇಟಿ ನೀಡುವುದು ಖಾಯಂ ಆಗಿತ್ತು. ನನ್ನ ಪ್ರೀತಿಯ ಗೋರೆಲಮ್ಮ (ಸುಂದರಿಬಾಯಿ ನಾಡಕರ್ಣಿ) ಅವರಿಂದ ಕೋಟೆಗೆ ಸಂಬಂಧಿಸಿದ ಸರ್ಪಮಲ್ಲಿಕನ ಕಥೆಯನ್ನು ಹಲವು ಬಾರಿ ಕೇಳಿದ್ದಿದೆ. ಕೋಟೆಯ ದಕ್ಷಿಣ ಗೋಡೆಯಲ್ಲಿರುವ ದ್ವಾರದಿಂದ ಸುರಂಗ ಮಾರ್ಗವಿದ್ದು ಅದು ಮಿರ್ಜಾನ ಕೋಟೆಗೆ ಸಂಪರ್ಕ ಕಲ್ಪಿಸುತ್ತದೆ ಎನ್ನುವ ಐತಿಹ್ಯವೂ ಇದೆ. ವಾಸ್ತವದಲ್ಲಿ ಆ ದ್ವಾರ ಕೋಟೆಯಿಂದ ಹೊರ-ಒಳ ಹೋಗುವ ಬಾಗಿಲಾಗಿತ್ತು. ಕೋಟೆಯ ಹೊರ ಆವರಣದ ಪೂರ್ವದಿಕ್ಕಿನ ಬಯಲನ್ನು ಕೋಟೆಬೇಣ ಎಂದು ಕರೆದರೂ ಅಲ್ಲಿ ಯಾವುದೇ ಸುರಂಗ ಅಥವಾ ನೆಲಮಾಳಿಗೆಯ ಕುರುಹುಗಳೂ ಇಲ್ಲ.

ಗುಮಟೆ ಪದ್ಯದ ವಿವರಗಳಿಗೂ ಅಂಕೋಲೆಯ ಕೋಟೆಗೂ ತಾಳೆಯಾಗುತ್ತಿರಲಿಲ್ಲ. ಆದರೆ ಅದರ ಹುಡುಕಾಟ ನಿರಂತರವಾಗಿತ್ತು. ಅದೃಷ್ಟವೋ ಎಂಬಂತೆ ಉರುವಲು ಕಟ್ಟಿಗೆ ಮಾರಲು ಬಂದ ಬೆಳಸೆಯ ಗೌಡತಿಯೊಬ್ಬಳಿಂದ ತಳಗದ್ದೆ-ಅಡ್ಲೂರು ನಡುವಿನ ಬೆಟ್ಟದ ಮೇಲೆ ಹಳೆಯ ಕೋಟೆಯಿದ್ದ ಬಗ್ಗೆ ಅವರ ಹಿರಿಯರು ಹೇಳುತ್ತಿದ್ದುದಾಗಿ ತಿಳಿಯಿತು. ತಳಗದ್ದೆಗೆ ಹೋಗಿ ನೋಡಿದಾಗ ಅಲ್ಲಿ ಕೋಟೆಬೇಣ ಎನ್ನುವ ಸ್ಥಳ ಇತ್ತು. ಸ್ಥಳೀಯರಿಗೆ ವಿಚಾರಿಸಿದಾಗ ಕೋಟೆಬೇಣಕ್ಕೆ ಹೊಂದಿಕೊಂಡಿರುವ ಗುಡ್ಡದ ತುದಿಯಲ್ಲಿ ಕೋಟೆಯ ಅವಶೇಷಗಳಿರುವುದು ಸ್ಪಷ್ಟವಾಯಿತು. ಇನ್ನೇನು ಕೋಟೆ ಸಿಕ್ಕೇ ಬಿಡ್ತು ಅಂದುಕೊಳ್ಳುವಾಗಲೇ ಮತ್ತೆ ಮರೀಚಿಕೆಯಾಗಿಬಿಡ್ತು. ಕಾರಣ ದಟ್ಟ ಅಡವಿಯಲ್ಲಿ ಕೋಟೆ ತಲುಪುವ ದಾರಿ ಗೊತ್ತಿದ್ದವರು ಯಾರೂ ಇರಲಿಲ್ಲ. ತಿಂಗಳುಗಳು ವರ್ಷಗಳಾಗಿ ಪರಿವರ್ತಿತವಾಗಿದ್ದವು. ನಡುವೆ ಒಂದಿಬ್ಬರು ಕಾಡಲ್ಲಿ ದಾರಿ ತೋರಿಸುವುದಾಗಿ ಭರವಸೆ ನೀಡಿದರೂ ಉಪಯೋಗವಾಗಲಿಲ್ಲ. ಅರಣ್ಯ ಇಲಾಖೆಯ ಅನೇಕ ಸಿಬ್ಬಂದಿಗಳಿಗೆ ಈ ಬಗ್ಗೆ ವಿಚಾರಿಸಿದರೂ ಅವರಿಗೆ ಅದರ ಸುಳಿವೇ ಇರಲಿಲ್ಲ.

ಎಂಟು ವರ್ಷಗಳು ಕಳೆದಿದ್ದವು. ಗುಮಟೆಯ ಪದ್ಯದಲ್ಲಿನ ಕೋಟೆ ಇನ್ನು ಶಾಶ್ವತವಾಗಿ ಮರೀಚಿಕೆ ಅಂದುಕೊಂಡಿದ್ದಾಗ ಪರಿಚಿತರಾದವರು ಕೃಷ್ಣಾಪುರದ ವೆಂಕಟರಮಣ ಗೌಡರು. ಅವರ ಬಳಿ ವಿಷಯ ತಿಳಿಸಿದಾಗ `ಅಯ್ಯೋ ಅದ ನಂಗೊತ್ತಿದ್. ನಾ ಕಾಣ್ಸತಿ ಬರಿ. ಈ ಆಯ್ತಾರ್ ಹೋಗೆ ಬರ್ವಾ ‘ ಅಂದರು. ಅವರಂದಂತೆ ರವಿವಾರ ಬೆಳಿಗ್ಗೆಯೇ ಕೃಷ್ಣಾಪುರದಿಂದ ಬೆಟ್ಟ ಹತ್ತಲು ಶುರುವಿಟ್ಟೆವು. ಸುಮಾರು ಆರು ಮೈಲು ಗುಡ್ಡ ಹತ್ತಬೇಕು. ಜಿಂಕೆ, ಕಡವೆಗಳಿಂದ ಹಿಡಿದು ಹುಲಿ, ಕರಡಿಯಂತ ಎಲ್ಲ ಬಗೆಯ ಪ್ರಾಣಿಗಳೂ ಅಲ್ಲಿವೆ. ಮೂರು ಗುಡ್ಡಗಳನ್ನು ದಾಟಿದ ಮೇಲೆ ಕೋಟೆ ಆವರಣ ಸಿಗುತ್ತದೆ. ಇದು ಮೇ ತಿಂಗಳಾದ್ದರಿಂದ ಗುಡ್ಡದಲ್ಲಿನ ತೊರೆಗಳೆಲ್ಲ ಬಹುತೇಕ ಬತ್ತಿರುತ್ತವೆ. ಇತ್ಯಾದಿ ವಿಷಯಗಳನ್ನೆಲ್ಲ ಅವರು ಮೊದಲೇ ತಿಳಿಸಿದ್ದರಿಂದ ಸಾಕಷ್ಟು ಕುಡಿಯುವ ನೀರು, ತಿಂಡಿ, ಶೋಧಕಾರ್ಯಕ್ಕೆ ಬೇಕಾಗುವ ಪರಿಕರಗಳನ್ನೆಲ್ಲ ತೆಗೆದುಕೊಂಡು, ಮೂವರು ಸಹಾಯಕರನ್ನೂ ಜೊತೆಗಿಟ್ಟುಕೊಂಡು ನಮ್ಮ ಚಾರಣ ಸಾಗಿತು.

ಬೆಟ್ಟದ ಘಟ್ಟಗಳು ನಿರೀಕ್ಷೆಗಿಂತ ತುಸು ಜಾಸ್ತಿಯೇ ಏರುಮುಖವಾಗಿದ್ದವು. ಒಂದಿಷ್ಟು ಬೆಟ್ಟ ಏರುವಷ್ಟರಲ್ಲಿಯೇ ಬೆವರಧಾರೆ ಮೈಯಿಂದ ಹರಿಯಲಾರಂಭಿಸಿತ್ತು. ಉಸಿರು ಉಬ್ಬಸವಾಗಿ ರೂಪಾಂತರಗೊಂಡಿತ್ತು. ಆದರೆ ಅದಾವುದೂ ಗಮನಕ್ಕೆ ಬಾರದ ರೀತಿಯಲ್ಲಿ ವೆಂಕಟರಮಣ ಗೌಡರು ನಮ್ಮನ್ನು ನಡೆಸುತ್ತಿದ್ದರು. ಆಗಲೇ ನನ್ನ ಗಮನಕ್ಕೆ ಬಂದಿದ್ದು ನಿಜಕ್ಕೂ ಈ ಮನುಷ್ಯ ಕಾಡಿನ ವಿಶ್ವಕೋಶ ಎನ್ನುವುದು. ನಾವು ನಡೆಯುವ ದಾರಿಯಲ್ಲಿ ಸಿಗುವ ಪ್ರತಿ ಸಸ್ಯದ ಕುರಿತು ಮಾಹಿತಿ ನೀಡುತ್ತಿದ್ದರು. ಗಿಡದ ಬೇರು, ತೊಗಟೆ, ಎಲೆ, ಕಾಯಿ, ಹೂ ಯಾವ ಯಾವ ರೋಗಗಳಿಗೆ ಉಪಯೋಗವಾಗುತ್ತವೆ ಎಂದು ವಿವರಿಸುತ್ತ ಅದರ ಸಂಪೂರ್ಣ ಔಷಧಿಯ ಗುಣಗಳ ಪರಿಚಯ ನೀಡುತ್ತಿದ್ದರು. ಗೆದ್ದಲಿನ ಹುತ್ತದ ಮಣ್ಣು, ಇರುವೆ ಗೂಡುಗಳು ಮೊದಲಾದವು ಸೌಂದರ್ಯ ವರ್ಧಕಗಳಾಗಿ ಹೇಗೆ ಬಳಸುತ್ತಾರೆ ಎನ್ನುವುದೆಲ್ಲ ತಿಳಿಸುತ್ತಿದ್ದರು. ದಾರಿಯಲ್ಲಿ ಕಾಣುವ ಪ್ರಾಣಿಗಳ ಹೆಜ್ಜೆಗಳನ್ನು ತೋರಿಸಿ ಅದು ಯಾವ ಪ್ರಾಣಿ, ಯಾವ ದಿಕ್ಕಿಗೆ ಹೋಗಿದೆ ಇತ್ಯಾದಿ ಮಾಹಿತಿಗಳನ್ನು ತಿಳಿಸುತ್ತಿದ್ದರು. ಮಧ್ಯದಲ್ಲಿ ಒಂದು ಕಡೆ ಪ್ರಾಣಿಯೊಂದರ ಮಲ ತೋರಿಸಿ `ಇದು ಹುಲಿಯ ಹಿಕ್ಕೆ’ ಎಂದು ಅದನ್ನು ಕೋಲಿನಿಂದ ಕೆದರಿ ನೋಡಿ `ಅದು ನಿನ್ನೆ ಮಂಗನನ್ನು ಬೇಟೆಯಾಡಿ ತಿಂದಿದೆ’ ಅಂದಾಗ ಆ ಮನುಷ್ಯನ ಜ್ಞಾನದ ಆಳ ವಿಸ್ತಾರ ಅಂದಾಜಿಸುವುದೇ ಸಾಧ್ಯವಾಗದ ಮಾತಾಯಿತು. ವೆಂಕಟರಮಣಗೌಡರು ನಮಗೆ ತಿಳಿಸುತ್ತಿದ್ದ ವಿಷಯಗಳು ಯಾವುದೇ ವಿಶ್ವವಿದ್ಯಾಯಲದಲ್ಲಿ ಕುಳಿತು ಕಲಿಯಲು ಸಿಗುವ ವಿಷಯಗಳಾಗಿರಲಿಲ್ಲ. ಆ ಬಗ್ಗೆ ಯಾರೂ ಯಾವ ಪುಸ್ತಕಗಳನ್ನೂ ಬರೆದಿಟ್ಟಿಲ್ಲ. ಕೇವಲ ಕಾಡುಗಳನ್ನು ಸುತ್ತುತ್ತಗಳಿಸಿಕೊಂಡ ಅನುಭವದ ಜ್ಞಾನ ಅದು. ತಾನು ಗಳಿಸಿಕೊಂಡ ಅರಿವಿನ ಬಗ್ಗೆ ಒಂದಿಷ್ಟೂ ಅಹಂ ತೋರಿಸದೇ ಮುಗ್ದತೆಯಿಂದ ತನ್ನ ಜ್ಞಾನವನ್ನೂ, ಅನುಭವನ್ನೂ ನಮಗೆ ತಿಳಿಸುತ್ತಿದ್ದರು.

ನಮ್ಮ ಜೊತೆ ಮಾತನಾಡುತ್ತ ಸುಮಾರು ನಾಲ್ಕುವರೆ ತಾಸುಗಳ ನಿರಂತರ ನಡಿಗೆಯ ನಂತರ ಗುಡ್ಡದ ಬೃಹತ್ ಹುಟ್ಟು ಬಂಡೆಯ ಮೇಲೆ ಕಾಡಿನ ಗುಂಡುಗಲ್ಲುಗಳನ್ನು ಬಳಸಿ ಮನುಷ್ಯ ಕಟ್ಟಿದ ಐದಾರು ನೂರು ವರ್ಷಗಳಷ್ಟು ಹಳೆಯ ಪಾಳುಬಿದ್ದ ಜಗುಲಿಯ ಮೇಲೆ ನಿಲ್ಲಿಸಿ `ಇದು ಗಡದಗುಡ್ಡ ಇಲ್ಲಿಂದ ನಿಮ್ಮ ಕೋಟೆ ಶುರುವಾಗುತ್ತದೆ ನೋಡಿ’ ಎಂದು ಗೌಡರು ಅಂದಾಗ ಹೊಸ ಜಗತ್ತೊಂದರಲ್ಲಿ ಪ್ರವೇಶಿಸಿದ ಅನುಭವ ನನ್ನದಾಗಿತ್ತು. ಸುಮಾರು 50 ಮೀಟರಿಗಿಂತ ಉದ್ದವಾದ ಆ ಜಗುಲಿಯ ಮೇಲಿಂದ ಪಶ್ಚಿಮಕ್ಕೆ ನೋಡಿದರೆ ಹಾರವಾಡದಿಂದ ಗೋಕರ್ಣದವರೆಗಿನ ಸುಮಾರು 25ಕಿ.ಮೀ. ಉದ್ದದ ಸಮುದ್ರ ತೀರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಊರುಗಳು ಒಂದೇ ಸ್ಥಳದಿಂದ ಕಾಣಿಸುತ್ತಿದ್ದವು. ಬೇಲೇಕೇರಿ, ಬೇಳಾ ಮತ್ತು ಮಂಜುಗುಣಿಯಂತ ಬಂದರುಗಳ ಮೇಲೆ, ಹಾಗೂ ಬಹುದೂರದವರೆಗೂ ಸಮುದ್ರ ಮತ್ತು ಭೂ ಭಾಗಗಳಲ್ಲಿ ಸೈನಿಕ ಚಲನವಲನಗಳ ಮೇಲೆ ನಿಗಾ ಇಡಲು ಆಯಕಟ್ಟಿನ ಸ್ಥಳವಾಗಿ ಕಂಡಿದ್ದರಿಂದ ಮತ್ತು ಯಥೇಚ್ಛವಾದ ನೀರಿನ ಅನುಕೂಲವು ಇಲ್ಲಿರುವುದರಿಂದ, ಅಂಕೋಲೆಯ ಕರಾವಳಿಯಿಂದ ನಡೆಯುವ ವ್ಯಾಪಾರ ವ್ಯವಹಾರದ ಮೇಲೆ ನಿಗಾ ಇಡಲು ಮತ್ತು ಅದರ ಸುರಕ್ಷತೆಗಾಗಿ ಸದಾ ಸುಸಜ್ಜಿತವಾದ ಒಂದು ಸೈನ್ಯ ತುಕಡಿಯನ್ನು ಇಡಲು ಇಲ್ಲಿ ಕೋಟೆ ಕಟ್ಟಿರುವುದು ಮನದಟ್ಟಾಯಿತು.

ಗಡದಗುಡ್ಡ ತುದಿಯಲ್ಲಿ ನಿಂತು ಜಿಪಿಎಸ್ ತೆರೆದರೆ ನಾವು ಸಮುದ್ರ ಮಟ್ಟದಿಂದ 1360 ಅಡಿಗಳಷ್ಟು ಎತ್ತರದಲ್ಲಿದ್ದಿದ್ದು ತೋರಿಸುತ್ತಿತ್ತು. ಗುಡ್ಡದ ಸುಮಾರು ನೂರು ಎಕರೆಗೂ ವಿಸ್ತಾರವಾದ ಪ್ರದೇಶಕ್ಕೆ ದೊಡ್ಡ ದೊಡ್ಡ ಬಂಡೆಗಳಿಂದ ರಕ್ಷಣಾಗೋಡೆ ಕಟ್ಟಿರುವುದು, ಅದರ ನಡುವೆ ನೂರಾರು ಗೋಡೆ ಕುಸಿದುಬಿದ್ದ ಸಾಮಾನ್ಯ ಮನೆಗಳ ಅಡಿಪಾಯಗಳು, ಮಧ್ಯದಲ್ಲಿ 60 ಅಡಿ 40 ಅಡಿ ಉದ್ದಗಲದ ಅರಮನೆ ಎನ್ನಬಹುದಾದಂತಹ ಕಟ್ಟಡದ ಅಡಿಪಾಯ, 40 ಅಡಿ ಉದ್ದ ಹಾಗೂ 20 ಅಡಿ ಅಗಲದ ದೇವಾಲಯದ ಅಡಿಪಾಯ ಮತ್ತು ಶಿವಲಿಂಗದ ಪಾಣಿಪೀಠ ಕಾಣಿಸಿತು. ಎತ್ತರದ ಜಾಗದಲ್ಲಿ 60 ಅಡಿಯ ವೇದಿಕೆಯಂತಹ ರಚನೆ, ಅಲ್ಲಲ್ಲಿ ನಾಗರ ಶಿಲೆಗಳು, ಶಿಲಾ ಕಂಬ-ಮಂಟಪಗಳ ಒಡೆದ ಭಾಗಗಳು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಗೋದಾಮಿನಂತಹ ರಚನೆಗಳು, ಗುಡ್ಡದ ಮಧ್ಯದ ಶೋಲೆಯಲ್ಲಿ ಸುಮಾರು ಒಂದು ಎಕರೆ ವಿಸ್ತಾರದ ಒಡ್ಡು ಕಟ್ಟಿದ ಕೆರೆಯ ಅವಶೇಷ ಜೊತೆಯಲ್ಲಿ ಕಂಬದ ಬೋದಿಗೆಯೊಂದರ ಮೇಲೆ ವಿಜಯ ನಗರ ಕಾಲದ ಲಿಪಿಯಲ್ಲಿ ಬರೆದ ತೃಟಿತ ಶಾಸನವೂ ನಮಗೆ ದೊರೆಯಿತು.

ದಟ್ಟವಾಗಿ ಬೆಳೆದ ಕಾಡಿನ ಮಧ್ಯೆ ಅವಶೇಷವಾಗಿ ಉಳಿದಿರುವ ಕೋಟೆಯ ಪರಿಸರದ ಒಂದಿಷ್ಟು ಭಾಗ ಪರಿಶೀಲಿಸುವಷ್ಟರಲ್ಲಿಯೇ ಸೂರ್ಯ ಪಶ್ಚಿಮದತ್ತ ಇಳಿಯಲಾರಂಭಿಸಿದ್ದ. ಕತ್ತಲಾಗುವ ಮೊದಲೇ ಊರು ಮುಟ್ಟಬೇಕೆಂಬ ಅವಸರದಲ್ಲೇ ಮರಳಿದೆವು. ಒಂದಿಷ್ಟು ಕಾಲ ವೈಭವದಿಂದ ಮೆರೆದ ಈ ಸ್ಥಳ ಹೀಗೆ ನಾಶವಾಗಲು ಕಾರಣಗಳೇನು ಎನ್ನುವ ಪ್ರಶ್ನೆ ಹುಟ್ಟುತ್ತಿರುವಾಗಲೇ ಅದಕ್ಕೆ ಉತ್ತರದ ಸುಳಿವನ್ನು ನೀಡಿದ್ದೂ ಅದೇ ಗುಮಟೆಯ ಪದದ ಈ ಸಾಲುಗಳು

“ಬಂಡಿಗೆ ಮದ್ದೂ ಗುಂಡೂ ತುಂಬಾರಯ್ಯಾ| ಮದ್ದೂ ಗುಂಡೂ ಶಮನಾಗ್ ಶೈವಾಗ ಅವರೇ| ನೆಲಮಾಳುಗಿಯಲ್ಲೇ ಕದ್ದೇಬಿದ್ದಾರಯ್ಯಾ| ದುರ್ಬಿನು ಹಿಡದೇ ಅಲ್ಲೇ ಕುಳತಾರಯ್ಯಾ| ಕೂಡೇ ಕೂಡೆ ದಂಡು ಬಂದವಯ್ಯಾ| ಕೊಣವುತೇ ಮರದಾಡುತ ದಂಡೇ ಬರತೀದಯ್ಯಾ| ಬಾಂಡಿ ಬಯಿಣ್ ಬೆಂಕಿಗೋಲಾ ಹಚ್ಚಿದರಯ್ಯಾ| ದಂಡೇ ಶುಟ್ಟೇ ಶರ್ಯಾಯಗೇ ಬಿದ್ದವಯ್ಯಾ|…”

ಮೂಲ ಲೇಖಕರು: ಶ್ಯಾಮಸುಂದರ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading