“ಅಂಕೋಲಾ” ಇದು ಸತ್ಯಾಗ್ರಹಿಗಳ ತವರೂರು. ಕರ್ನಾಟಕದ ಬಾರ್ಡೋಲಿ ಎಂದೇ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕಾ ಕೇಂದ್ರ. ಕರಾವಳಿ ಭಾಗದ ಮಾವಿನಹಣ್ಣು ಅಂದರೆ ಮೊದಲು ನೆನಪಾಗುವುದೇ ಅಂಕೋಲಾ. ಮನಮೋಹಕ ಸುವಾಸನೆ ಹಾಗೂ ವಿಶೇಷ ರುಚಿ ಇಂದ ಪ್ರಸಿದ್ಧಿ ಹೊಂದಿರುವ “ಇಸಾಡ” ಹಣ್ಣಿಗೂ ಅಂಕೋಲಾ ಮಣ್ಣಿಗೂ ಏನೋ ಒಂದು ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಈ ತಳಿಯು ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯುವುದಿಲ್ಲ. ಮಳೆಗಾಲದ ಪೂರ್ವದಲ್ಲಿ ಸಿಗುವ ಈ “ಇಶಾಡು ” ಹಣ್ಣನ್ನು ಕರಾವಳಿ ತಾಲೂಕುಗಳಾದ ಕಾರವಾರ,ಅಂಕೋಲಾ, ಕುಮಟಾದಲ್ಲಿ ಬೆಳೆಯುತ್ತಾರಾದರೂ, ಅಂಕೋಲಾದ “ಕರಿ ಇಶಾಡು ” ಬಲು ಜನಪ್ರಿಯ. ಬೇಸಿಗೆಯ ತಿಂಗಳಿನಲ್ಲಿ ಮನೆಗೆ ಹೋದ ಸಂದರ್ಭ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಬಿದಿರಿನ ಚೂಳಿಯನ್ನಾವರಿಸಿ ಭತ್ತದ ಒಣ ಹುಲ್ಲಿನಲ್ಲಿ ಅಡಗಿ ಕೂತು ರಾರಾಜಿಸುತ್ತಿರುವ ಮಾವಿನ ಹಣ್ಣಿನ ಸುಗಂಧ ನನ್ನನ್ನು ಸ್ವಾಗತಿಸುತ್ತಿತ್ತು. ಆಹಾ!! ಅದೆಂತಹ ಪರಿಮಳ. ಆಸ್ವಾದಿಸಿದೊಡನೆ ಬಾಯಲ್ಲಿ ನೀರು ಚಪ್ಪರಿಸುತ್ತಿತ್ತು. ಕರಾವಳಿಗರಿಗೆ ಅದರಲ್ಲೂ ಪ್ರಮುಖವಾಗಿ ಅಂಕೋಲೆ ಸೀಮೆಯವರಿಗೆ ಮಾವು “ಬದುಕಿನಲ್ಲಿ ಬೆರೆತ ಬೆಳೆ”. ಮಂಗಳಕಾರ್ಯದ ತೋರಣದಿಂದ ಹಿಡಿದು ಹುಸ್ತಿನ ಕದಿರ ಮಾಲೆಯವರೆಗೂ,ಯಜ್ಞದ ಚಕ್ಕೆಯಿಂದ ಪಾತಿ ದೋಣಿಯವರೆಗೂ, ಅಷ್ಟೇ ಏಕೆ ಕುರಸಿದ ಕಾಯ ಚಟ್ನಿಯಿಂದ ಹಿಡಿದು ಇಂದಿನ ಆಧುನಿಕ ಮಿಲ್ಕ್ ಶೇಕ್, ಐಸ್ ಕ್ರೀಮ್ ವರೆಗೆ ಮಾವು ಸರ್ವ ಜನರಿಂದ ಸಂಪ್ರೀತವಾದ ಬೆಳೆ.


ಅಂಕೋಲಾದ ಮಾವಿನ ತಳಿಯ ಹಿನ್ನೆಲೆಯನ್ನು ಸ್ವಲ್ಪ ಅವಲೋಕಿಸುವುದಾದರೆ ಚಾಲ್ತಿ, ಗೋಟು, ಸಾಂಬಾರ್ ಮರ , ಮಿಡಿ ಮರ, ಕರಿ ಇಸಾಡ, ಬಿಳಿ ಇಸಾಡ,ಗೂಯ್ಟ ಇಸಾಡ,ಪರ್ನಲ ಮರ, ಇತ್ಯಾದಿ ಹಳೆಯ ಕಾಲದ ಮಾವಿನ ತಳಿಗಳು. ಇತ್ತೀಚಿಗೆ ಕಸಿಕಟ್ಟುವ ಪದ್ಧತಿ ಚಾಲ್ತಿಯಲ್ಲಿ ಬಂದಮೇಲೆ ಮಾವಿನ ತಳಿಗಳು ಲೆಕ್ಕವಿಲ್ಲದಷ್ಟು. ಬಹುದಿನಗಳ ಕಾಲ ಉಳಿಯಬಲ್ಲ ನಾನಾ ಜಾತಿಯ ಮಲ್ಲಿಕಾ, ರಸ್ಪುರಿ, ತೋತಾಪುರಿ, ಮಾಲಗೋವ, ನೀಲಂ, ರತ್ನಗಿರಿ ,ಆಪೂಸ್, ಅನೇಕ ತಳಿಗಳನ್ನು ನಾವಿಂದು ಕಾಣಬಹುದು.



ಆದರೆ ಹಿಂದಿನ ಕಾಲದ ಕರಿ ಇಸಾಡ, ಬಿಳಿ ಇಸಾಡ, ಗೂಯ್ಟ ಇಸಾಡ, ಪರ್ನಲ ಮರಗಳು ಇಂದು ಕಡಿಮೆಯಾಗಿವೆ. ನೈಸರ್ಗಿಕವಾಗಿಯೇ ಬೆಳೆದು ಫಲ ಕೊಡುವ ಕರಿ ಇಸಾಡಿಗೆ ಸರಿಸಾಟಿಯಾದುದು ಇಂದಿನ ಯಾವ ತಳಿಯ ಹಣ್ಣು ಇಲ್ಲವೆಂದರೆ ತಪ್ಪಾಗಲಿಕ್ಕಿಲ್ಲ. ಕೆಲವು ಚಾಲ್ತಿ ಮರದ ಹಣ್ಣುಗಳು ವಿಶೇಷವಾದ ರುಚಿಯನ್ನು ಕೊಡುತ್ತಿದ್ದವು. ಆಧುನಿಕ ಪದ್ಧತಿಗೆ ಹೊಂದಿಕೊಂಡ ರೈತ, ವ್ಯಾಪಾರಿ ಮನೋಭಾವದಿಂದ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಾರುಹೋಗಿ ನೈಸರ್ಗಿಕ ಹಣ್ಣುಗಳನ್ನು ಬೆಳೆಸುವ ಗೋಜಿಗೆ ಹೋಗದೆ ಕಶಿ ಕಟ್ಟುವ ಪದ್ಧತಿಯೊಂದಿಗೆ ಬದಲಾಗುತ್ತಿದ್ದಾನೆ. ಜೊತೆಗೆ ತನ್ನ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ನಾವು ಹಳ್ಳಿಯತ್ತ ಮುಖ ಮಾಡಿದಾಗ ಇಂದಿಗೂ ಅಲ್ಲಲ್ಲಿ ದೊಡ್ಡದಾದ ಕರಿ ಇಸಾಡ, ಬಿಳಿ ಇಸಾಡ, ಗೂಯ್ಟ ಇಸಾಡ, ಪರ್ನಲ ಮರ ಗಳನ್ನು ಕಾಣಬಹುದು. ಈ ಸ್ವರ್ಗ ಭೂಮಿಯುಲ್ಲಿ ಹುಟ್ಟಿರುವ ನಾವೇ ಧನ್ಯ.





Leave a Reply