ಯಲ್ಲಾಪುರದ ಶಕ್ತಿಪೀಠ | ಗ್ರಾಮದೇವಿ

Posted by

·

ಶ್ರೀ ದೇವೀ ಭುವನೇಶ್ವರೀ | ವಿಜಯತೇs ಯಲ್ಲಾಪುರ ವಾಸಿನೀ ||
ಸರ್ವೇಶಾದಿ ಕುಟುಂಬಿನೀ | ಶುಭಕರೀ ವಾಮೇಲ ಸತ್ಕಾಲಿಕಾ ||
ಕಾಲೀ ದಕ್ಷಿಣಪಾರ್ಶ್ವರಾಜಿತಾ | ಶಿವಾ ಸಂಶೋಭಿತೇ ಯಾ ಸದಾ ||
ಸಾ ಸಂರಕ್ಷತು ಸರ್ವಜನನೀ | ಪ್ರಾಣಾ ಅಹಿಂಸಾತ್ಮಕಾ ||

ಶ್ರೀಮಾರಿಕಾಂಬೆಯ ಶ್ರೇಷ್ಠತೆ ಇದು. ಶ್ರೀದೇವಿ, ಮಹಾಲಕ್ಷ್ಮೀ, ಮಹಾದೇವಿ ಹೀಗೆ ಅನೇಕತೆರನಾಗಿ “ಶ್ರೀದೇವೀಪುರಾಣ” ಮತ್ತು “ಶ್ರೀದೇವೀಭಾಗವತ”ದಲ್ಲಿ ಹೊಗಳಲ್ಪಟ್ಟಿದೆ. ತಾಯಿ ತನ್ನ ಮಗುವನ್ನು ಎಷ್ಟು ಪ್ರೀತಿಯಿಂದ ಲಾಲಿಸಿ-ಪೋಷಿಸುವುದೋ… ತನ್ನ ಕುಟುಂಬವನ್ನು ಪ್ರ್ರೀತಿಸುವುದೋ… ಹಾಗೆಯೇ ಮಾರಿಕಾಂಬೆಯೂ ಸಕಲ ಜೀವ-ಜಂತುಗಳನ್ನೂ ಪರಿಪಾಲಿಸುವುದು. ನಂಬಿದವರ ಕೈಬಿಡದ ತಾಯಿ ಕರುಣಾಮಯಿ. ಸಕಲ ಜೀವಪೋಷಾಂಶಗಳನ್ನು ನೀಡುವ ಜಗದಂಬೆ. ಎಲ್ಲರನ್ನೂ ರಕ್ಷಿಸುವ ’ಸರ್ವ-ಜನನಿ’ ತನ್ನಮಕ್ಕಳಿಗೆ ಏನಾದರೂ ತೊಂದರೆ ಬಂದರೆ ಅವರನ್ನು ಉಳಿಸಿಕೊಳ್ಳಲು ಅಹಿಂಸೆಯೇ ಅವಳ ತತ್ತ್ವ. ಸಿದ್ಧಾಂತ. ಅಹಿಂಸೆಯಿಂದ ಸಾಧ್ಯವಿಲ್ಲದಿರುವುದನ್ನು ಹಿಂಸೆಯಿಂದಲಾದರೂ ರಕ್ಷಿಸುವುದು!! ದೇವತೆಗಳು ರಾಕ್ಷಸರನ್ನು ಕೊಂದಂತೆ!

ಯಲ್ಲಾಪುರದಲ್ಲಿ ನೆಲೆಸಿರುವ ಗ್ರಾಮದೇವಿಗೆ ಇದು ಅಕ್ಷರಸಹ ಅನ್ವಯವಾಗುವುದು. ಶ್ರೀರಾಮಕೃಷ್ಣ ಪರಮಹಂಸರು ಪೂಜಿಸುವ ದಕ್ಷಿಣದ ಶ್ರೀಕಾಳಿಯೇ ಇಲ್ಲಿ ಪ್ರತ್ಯಕ್ಷವಾಗಿ ನೆಲೆಸಿರುವುದೆಂದು ಜನರು ಹೇಳುವರು. ಯಲ್ಲಾಪುರದ ಮತ್ತು ಭಕ್ತಕೋಟಿಯ ಅಭಿವೃದ್ಧಿಗೆ ಇದೇ ಕಾರಣವೆಂದು ಯಲ್ಲಾಪುರ ವಾಸಿಗಳ ಪರಮ ನಂಬಿಕೆ.

ಮಲೆನಾಡಿನಲ್ಲಿ ಗ್ರಾಮದೇವಿಯರ ಪಟ್ಟಿ ದೊಡ್ಡದಾಗಿದೆ… ಶಿರಸಿಯಲ್ಲಿ ಮಾರಿಕಾಂಬೆಯ ಒಂದೇ ಮೂರ್ತಿ. ಗ್ರಾಮದೇವಿ ಯಲ್ಲಾಪುರದ ಶ್ರೀಮಾರಿಕೆಂಬೆಗೆ ಎರಡು ಮೂರ್ತಿಗಳು. ಹುತ್ಕಂಡದಲ್ಲಿ ಗ್ರಾಮದೇವಿಯ ಒಂದೇ ಮೂರ್ತಿ. ಗ್ರಾಮದೇವಿ ಚಿಕ್ಕಮಾವಳ್ಳಿಯಲ್ಲಿ ಮಾರಿಕಾಂಬೆಯ ಎರಡು ಮೂರ್ತಿಗಳು. ಸಾಗರದಲ್ಲಿ ಮಾರಿಕಾಂಬೆಯ ಒಂದು ಮೂರ್ತಿ.

ತಾಲೂಕಿನ ಹಿಂದುಳಿದ ಗ್ರಾಮವಾದ ‘ನಾರಾಯಣಗೆರೆ’ ಎನ್ನುವಲ್ಲಿ ಒಬ್ಬ ಶೂದ್ರನಿಗೆ ಹೊಲದ ಕೆಲಸವನ್ನು ಮಾಡುತ್ತಿರುವಾಗ ಸವಕಲು ಪ್ರತಿಮೆಗಳು ಸಿಕ್ಕಿದ್ದವು. ಅದನ್ನು ನವೀಕರಿಸಿ ‘ಶಿವಣಿ’ ಕಟ್ಟಿಗೆಯಿಂದ ಎರಡು ಮರದ ಪ್ರತಿಮೆಗಳನ್ನು ಹೊಸದಾಗಿ ಮಾಡಲ್ಪಟ್ಟಿತು. ಆಕಾಶಬಣ್ಣದ ಪ್ರತಿಮೆ ‘ಕಾಳಮ್ಮ’. ಅದರ ವಾಹನ ‘ಕೋಣ’! ಕೆಂಪು ಬಣ್ಣದ ಪ್ರತಿಮೆ ‘ದುರ್ಗಮ್ಮ’. ಅದರ ವಾಹನ ‘ಸಿಂಹ’. ಅವುಗಳಿಗೆ ಜೋಡಿಪ್ರತಿಮೆಯೊಂದಿಗೆ ದೇವಾಲಯವನ್ನು ಕಟ್ಟಲಾಯಿತು. ದೇವಿಗಳ ಪೂಜೆ ಮಾಡುವವರು ಬ್ರಾಹ್ಮಣರಲ್ಲ! ದೇವಿಗಳ ಮುಂದೆ ಜಾತಿಭೇದವಿಲ್ಲದೆಯೇ ಭಕ್ತರು ತಮ್ಮ ಸಂಕಷ್ಟಗಳನ್ನು ನೀಗಿಸಿಕೊಳ್ಳುವರು.

ನಿತ್ಯಪೂಜೆ, ಅನ್ನನೈವೇದ್ಯ, ಕುಂಕುಮಾರ್ಚನೆ, ಉಡಿತುಂಬುವುದು, ದೇವೀಪಾರಾಯಣವನ್ನು ಪಠಿಸುವುದು, ಪ್ರತಿನವರಾತ್ರಿಗೆ ಒಂಬತ್ತು ದಿವಸ ಕೀರ್ತನೆಯನ್ನು ಜರುಗಿಸುವುದು, ಆದ್ದೂರಿಯಿಂದ ಜಾತ್ರೆಯನ್ನು ನಡೆಸುವುದು ರೂಢಿಗೆ ಬಂದಿತು. ಜಾತ್ರೆ ಸುಂದರ ಹಾಗೂ ಆಕರ್ಷಕ.

ಸುಂದರ ದೇವಾಲಯ

ಯಲ್ಲಾಪುರದಲ್ಲಿ ಇಷ್ಟು ಸುಂದರವಾದ ದೇವಾಲಯ ಇನ್ನೊಂದಿಲ್ಲ! ಇಲ್ಲಿಯ ದೇವಾಲಯದ ಅಂದವನ್ನು ನೋಡಿಯೇ ಸವಿಯಬೇಕು. ಉಮೇಶಗುಡಿಗಾರ ಮನೆತನದವರು ನಿರ್ಮಿಸಿದ ಪ್ರವೇಶದ್ವಾರ ಕಲಾತ್ಮಕವಾಗಿದೆ. ದೇವಿಯ ಗರ್ಭಗುಡಿಯಲ್ಲಿ …. ಅಷ್ಟಲಕ್ಷ್ಮಿಯರ ಮೂರ್ತಿಯನ್ನು ಸೃಷ್ಟಿಸಲಾಗಿದೆ. ಪ್ರವೇಶದ್ವಾರದ ಅತ್ತ-ಇತ್ತ ಶಾಕಿನಿ-ಡಾಕಿನಿಯರ ಚಿತ್ರಣವಿದೆ. ದ್ರಾವಿಡಕಲೆಯ ಪ್ರಬುದ್ಧತೆ ಎದ್ದು ಕಾಣುವುದು.

ಉಳ್ಳವರು ಶಿವಾಲಯ ಕಟ್ಟುವರು ಎನ್ನುವುದಕ್ಕಿಂತಲೂ ಹಣ ಮಾಡಲು ದೇವಾಲಯವ ಕಟ್ಟುವರು ಎನ್ನುವುದೇ ಪ್ರಸಿದ್ಧಿಗೆ ಬಂದಿದೆ. ಅಹಂಕಾರಿಗಳನ್ನು ದೇವಿ ಕಿಂಚಿತ್ತೂ ಸಹಿಸುವುದೂ ಇಲ್ಲ. ಭಕ್ತರು ಸೇರಿ ಅನ್ನಸಂತರ್ಪಣೆಯನ್ನು ನೆರವೇರಿಸುವರು.

ಶ್ರೀಚಕ್ರ ಆರಾಧಕರು ಇಲ್ಲಿ ಬಂದು ಸಾಧಿಸಿಕೊಂಡು ಹೋದ ಹಲವರಿದ್ದಾರೆ. ಹೆಸರು ವಾಸಿಯಾಗಿದ್ದಾರೆ. ಅಮ್ಮ ಬಂದವರು, ರೋಗಿಷ್ಠರು, ಭೂತ – ಪ್ರೇತಗಳು ಆವರಿಸಿಕೊಂಡವರು ಇಲ್ಲಿ ಗುಣ ಮುಖರಾಗಿದ್ದಾರೆ.

ಭಕ್ತಿ ಮತ್ತು ಶಾಕ್ತ ಸಂಪ್ರದಾಯದಂತೆ ‘ನವರಾತ್ರಿಗಳು’ ವಿಶೇಷವಾದುದು. ಪೂಜಾವಿನಿಯೋಗದಲ್ಲಿ ಕಿಂಚಿತ್ತ ದೋಷವಾದರೂ ಅದು ಯಜಮಾನ, ಪೂಜಾರಿ, ಭಕ್ತರ ಮೇಲೆ ದುಃಷ್ಪರಿಣಾಮ ಆಗುವುದು ಎನ್ನುವುದನ್ನು ಹಲವರು ಮರೆಯುತ್ತಾರೆ. ಸಂಸ್ಕೃತಿ-ಸಂಸ್ಕಾರವನ್ನೇ ಮರೆಯುವರು!! ಯಲ್ಲಾಪುರದ ಶಕ್ತಿದೇವತೆಯು ಸುಂದರ ಆವರಣ ಹೊಂದಿದೆ. ಈ ದೇವಾಲಯ ಆದಿಕಾಲದಿಂದಲೂ ನಡೆದು ಬಂದಿದೆ. ನವರಾತ್ರಿಯಲ್ಲಿ ಹೆಸರಾಂತ ಕೀರ್ತನಾಕಾರರಿಂದ ಕೀರ್ತನೆ ನಡೆಯುವುದು. ಕೀರ್ತನಾಕೇಸರಿ ಅಚ್ಯುತ ದಾಸರಂಥವರು ಕೀರ್ತನೆ ಮಾಡಿದ ಇತಿಹಾಸವಿದೆ.

ಯಲ್ಲಾಪುರವು ಸುಂದರ ನಿಸರ್ಗತಾಣಗಳಿಂದ ಒಡಗೂಡಿದೆ. ಅಂಕೋಲಾದ ಕಡೆಯಿಂದ ಬಂದರೆ ಹುಲ್ಲರ ಮನೆಯ ಹನುಮಂತ-ಗಣಪತಿರ ದೇವಾಲಯ ಇದೆ. ಕೊನೆಯಲ್ಲೂ ಜೋಡಕೆರೆಯ ಹನುಮಂತನ ಗುಡಿ ಇದೆ. ಇವೆರಡೂ ಪ್ರಸಿದ್ಧ ದೇವಾಲಯಗಳು. ನಾಯ್ಕನಕೆರೆಯಲ್ಲಿ ಶಾರದಾಂಬಾ ದೇವಸ್ಥಾನವಿದೆ. ಪೇಟೆಯ ನಡುವೆ ಸುಂದರವಾದ ವೆಂಕಟ್ರಮಣ ದೇವಾಲಯವಿದೆ.

ಈ ಶ್ಲೋಕಗಳನ್ನು ದಿನ ನಿತ್ಯ ಪಠಿಸಿರಿ

ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೆ |
ಶರಣ್ಯೇ ತ್ರಯಂಬಿಕೇ ದೇವಿ ನಾರಾಯಣಿ ನಮೋಸ್ತುತೇ ||
ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ತ್ಯೈ ನಮಸ್ತಸ್ಯೈ ನಮೋ ನಮಃ ||
ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ತ್ಯೈ ನಮಸ್ತಸ್ಯೈ ನಮೋ ನಮಃ ||
ಯಾ ದೇವೀ ಸರ್ವಭೂತೇಷು ಕಾಂತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ತ್ಯೈ ನಮಸ್ತಸ್ಯೈ ನಮೋ ನಮಃ ||

ಭಕ್ತಿಯಿಂದ ಬನ್ನಿ…. ಯಲ್ಲಾಪುರದ ಶಕ್ತಿದೇವತೆಯ ಸನ್ನಿಧಿಗೆ. ನವರಾತ್ರಿಗೆ…. ಕೀರ್ತನೆ ಆಸ್ವಾದನಕ್ಕೆ…. ನಿಮ್ಮ ಶ್ರೇಯೋಭಿವೃದ್ಧಿಗೆ… ನಿಸರ್ಗ ಸುಂದರತೆಯ ದರ್ಶನಕ್ಕೆ….

ರಚನೆ: ಅನಂತ್ ವೈದ್ಯ

ಫೋಟೋಕೃಪೆ: ವರ್ಷಾ ಸ್ಟುಡಿಯೋ ಯಲ್ಲಾಪುರ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading