2012 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕಾರಕುಂಡಿ ಗೌಳಿ ವನವಾಸಿ ಹಿರಿಯ ಬಾಗು ಪಿಂಗಳೆ ಭೇಟಿಯಾಗಿದ್ದೆ. ಸುಮಾರು 1925-32 ರ ಸಮಯದಲ್ಲಿ ಅಜ್ಜ ಮಹಾರಾಷ್ಟ್ರ ಆಜರ ಪ್ರದೇಶದಿಂದ ಕರ್ನಾಟಕದ ಬೆಳಗಾವಿ, ಧಾರವಾಡ ಮೂಲಕ ಯಲ್ಲಾಪುರದ ಕಾಡಿಗೆ ವಲಸೆ ಬಂದವರು. ಗೌಳಿ ವಲಸೆಯ ಕಾರಣಗಳಲ್ಲಿ ಅಂದಿನ ಹವಾಮಾನದ ಪರಿಣಾಮವು ಇತ್ತು ಎಂಬುದು ಇವರ ಜೊತೆಗೆ ಮಾತಾಡಿದ ಬಳಿಕ ತಿಳಿಯಿತು. ಒಂದು ವರ್ಷ ಮಳೆ ಇಲ್ಲದೇ ಬೆಳೆ ಕೈಗೆ ಬರುತ್ತಿರಲಿಲ್ಲ, ಇನ್ನೊಂದು ವರ್ಷ ಅಕಾಲಿಕ ಮಳೆ ಬಂದು ಬೆಳೆ ಸಂಪೂರ್ಣ ನಾಶವಾಗಿ ದನಕರುಗಳಿಗೆ ಮೇವು ಸಿಗುತ್ತಿರಲಲ್ಲ. ಅಂದು ಹಳಿಯಾಳ, ಯಲ್ಲಾಪುರ ಕಾಡುಗಳಲ್ಲಿ ಬಿದಿರು ಹೂ ಅರಳಿಸಿ ಪುನಃ ಹೊಸ ಸಸಿ ಹುಟ್ಟಿದ್ದು ಇವರಿಗೆ ಅನುಕೂಲ ಆಯ್ತು. ಅವರು ತಮ್ಮ ಎಮ್ಮೆಗಳನ್ನು ಇಲ್ಲಿ ಮೇಯಿಸಿ ಬದುಕು ಕಂಡರು. ಮರದ ಕೆಳಗಡೆ ಭತ್ತ ಬೆಳೆಯುವ ವಿಧಾನ ಅನುಸರಿಸಿದರು. ಭತ್ತಕ್ಕೆ ಆನೆಗಳು ದಾಳಿ ಮಾಡಿದ ಬಳಿಕ ಹತ್ತಿ ಬೆಳೆಯಲು ಹೋಗಿ ಸೋತರು. ಈಗ ಗೋವಾ ವಲಸೆ ಹೋಗಿ ಹಲವರು ಕೂಲಿ ಮಾಡಿ ಬದುಕುತ್ತಿದ್ದಾರೆ.

ಕೊಲ್ಲಾಪುರ ಮುಂಗೊಳಿಯ ಜನ್ನಬಾಯಿ ತೊಟ್ಟಿಲ ಶಿಶು ಆಗಿದ್ದಾಗ ತೊಟ್ಟಿಲಿಗೆ ಬಾಸಿಂಗ ಕಟ್ಟಿ ಮದುವೆ ಆದವರು ಈ ಬಾಗು… ನಾನು ಬಾಗು ಭೇಟಿಯಾಗುವ ಹೊತ್ತಿಗೆ ಇವರ ಹೆಂಡತಿ ಜನ್ನರಿಗೆ 86 ವರ್ಷ ಆಗಿತ್ತು. ಹಾಗಾದ್ರೆ ಬಾಗು ವಯಸ್ಸು ಅಂದಾಜಿಸಲು ಹೋದರೆ ನೂರು ವರ್ಷ ದಾಟಿತ್ತು. ಇವರು ಯಲ್ಲಾಪುರ ಕಿರವತ್ತಿ ಬಂದಾಗ ಅಲ್ಲಿ ಆರೆಂಟು ಮನೆ ಇದ್ದವು, ಯಲ್ಲಾಪುರ ಆರೇಳು ಅಂಗಡಿ ಹೊಂದಿತ್ತು. ಹುಬ್ಬಳ್ಳಿ ಯಲ್ಲಾಪುರ ರಸ್ತೆ ಮಣ್ಣಿನ ರಸ್ತೆ ಆಗಿತ್ತಂತೆ!
ಈಗ ಬಾಗು ಏಕೆ ನೆನಪಾದರು? ಕೇಳಿದಿರಾ…. ಇವತ್ತು ಸುರಿಯುವ ಮಳೆ , ಕೃಷಿ ನಷ್ಟ ನೋಡಿ ಕಾಲದ ಘಟನೆ ನೆನಪಾಯ್ತು.


Leave a Reply