ಸಾತನಬಯಲಿನ ಸಿದ್ದಿನಾಸ

Posted by

·

ಸಿದ್ದಿ ಜನಾಂಗ ನಮ್ಮ ಜಿಲ್ಲೆಯ ಒಂದು ಬುಡಕಟ್ಟು ಎಂದು ಪರಿಗಣಿಸಲ್ಪಟ್ಟ ಸಮುದಾಯ. ಅಂಕೋಲೆ, ಹಳಿಯಾಳ, ಯಲ್ಲಾಪುರ ತಾಲೂಕುಗಳಲ್ಲಿ ವಾಸವಾಗಿರುವ ಸಿದ್ದಿಗಳು ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರಾದರೂ ಅಂಕೋಲೆಯ ಸಾತನಬಯಲಿನ ಸಿದ್ದಿನಾಸ ದೇವರಿಗೆ ನಡೆದುಕೊಳ್ಳುತ್ತಾರೆ. ಅಂಕೋಲೆ ತಾಲೂಕಿನ ಹಳವಳ್ಳಿ ಗ್ರಾಮದ ಮಜರೆ ಮಳಲಗಾಂವದಲ್ಲಿ ಹಸೆಹಳ್ಳವು ಗಂಗಾವಳಿ ನದಿಯನ್ನು ಕೂಡುವ ಸ್ಥಳದಲ್ಲಿ ಈ ಸಾತ್ತನಬಯಲು ಇದೆ.

ಮಳಲಗಾಂವದವರೇ ಆದ ಸಾಣು ಶಿವಾ ಸಿದ್ದಿ ಇಲ್ಲಿಯ ಅರ್ಚಕರು. ಇಲ್ಲಿ ಕಾಡಿನ ನಡುವೆಯೇ ಬೃಹತ್ತಾದ ಸಿದ್ದಿ ಸಮುದಾಯ ಭವನವು ಇದೇ ವರ್ಷ ಸಂಪೂರ್ಣಗೊಂಡಿದೆ. ವರ್ಷಕ್ಕೊಮ್ಮೆ ಬೇಸಗೆಯಲ್ಲಿ ಸಿದ್ದಿನಾಸನ ಆರಾಧನಾ ಉತ್ಸವದಲ್ಲಿ ದೇವರಲ್ಲಿ ಹರಕೆ ಹೊತ್ತವರು ತಮ್ಮ ಸೇವೆಗಳನ್ನು ಸಲ್ಲಿಸಲು ಮೂರೂ ತಾಲೂಕುಗಳಿಂದ ಬರುತ್ತಾರೆ. ವ್ಯಾಧಿಗಳಿಂದ ಗುಣಮುಕ್ತರಾದವರು, ಮಕ್ಕಳ ಹರಕೆ ಹೊತ್ತವರು ಮುಂತಾಗಿ ತಾವು ಭಕ್ತಿಯಿಂದ ಬೇಡಿದ್ದನ್ನು ಸಿದ್ದಿನಾಸ ದೇವರು ದಯಪಾಲಿಸುತ್ತಾನೆ ಎಂದು ಗಟ್ಟಿಯಾಗಿ ನಂಬಿದ್ದಾರೆ ಈ ಸಿದ್ದಿಗಳು. ಹಿಂದೆ ಮೃತಪಟ್ಟು ಇಂದಿಗೂ ಸಮುದಾಯವನ್ನು ಕಾಪಾಡುತ್ತಿರುವ ಚೇತನವನ್ನು ನಾಸ ಎಂದು ಕರೆಯುತ್ತಾರೆ. ಪಶ್ಚಿಮ ಮಹಾರಾಷ್ಟ್ರ, ಗೋವೆ ರಾಜ್ಯಗಳ ಕರಾವಳಿಯಲ್ಲಿ ನಾಸ ಒಂದು ಜಾನಪದ ದೈವತ.

ಬೆಳಗ್ಗೆಯಿಂದ ಪ್ರಾರಂಭವಾದ ಉತ್ಸವವು ರಾತ್ರಿಯಿಡೀ ಜರುಗುವ ಸಿದ್ದಿಗಳ ನೃತ್ಯ, ಹಾಡುಗಳ ಮನರಂಜನಾ ಕಾರ್ಯಕ್ರಮಗಳ ಮುಕ್ತಾಯದೊಂದಿಗೆ ಪರಿಸಮಾಪ್ತಿಯಾಗುತ್ತದೆ.

ಜಿಲ್ಲೆಯ ಸಿದ್ದಿಗಳ ಪೂರ್ವಜರು ಗುಲಾಮರಾಗಿ ಪೂರ್ತುಗೀಜ ಹಾಗೂ ಅರಬ್ಬರಿಂದ ಇಲ್ಲಿಗೆ ತಂದು ತೋಟಗದ್ದೆಗಳ ಒಡೆಯರಿಗೆ ಮಾರಲ್ಪಟ್ಟವರು. ಗೋವೆಯ ಮೂಲಕ ಇಲ್ಲಿಗೆ ಬಂದಿದ್ದರಿಂದ ಕೊಂಕಣಿ ಇವರಿಗೆ ಮಾತೃಭಾಷೆ. ಕನ್ನಡ, ಮರಾಠಿ, ಉರ್ದುಗಳಲ್ಲೂ ಸಲೀಸಾಗಿ ವ್ಯವಹರಿಸಲು ಬಲ್ಲವರು. ಕಾಡಿನ ನಡುವೆ ಶತಮಾನಗಳಿಂದ ವಾಸವಾಗಿದ್ದ ಸಿದ್ದಿಗಳು ಈಗ ಕಲಿಯುವದರಲ್ಲೂ ಆಸಕ್ತರಾಗಿ ಸರಕಾರಿ ಇಲಾಖೆಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ; ಶಿಕ್ಷಕರಾಗಿ, ಅಧ್ಯಾಪಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ; ರಾಜಕಾರಣದಲ್ಲೂ ಕ್ರೀಡೆಯಲ್ಲೂ ಹೆಸರು ಮಾಡುತ್ತಿದ್ದಾರೆ.

ಮೂಲ ಲೇಖಕರು: ನಂದನ್ ಐಗಳ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading