ಸೌಂದರ್ಯದ ಕಣಜ ಜೇನುಕಲ್ಲು ಗುಡ್ಡ

Posted by

·

ನಿಸರ್ಗದ ಒಡಲು ತಾಯಿಯ ಮಡಿಲಿನಂತೆ ನೆಮ್ಮದಿ ನೀಡುವ ತಾಣ. ಪ್ರಕೃತಿಯ ಕೊಡುಗೆ ವರ್ಣಿಸಲು ಯಾವ ಪದಗಳೇ ಸಾಲದು. ಭೂಮಿಯು ಸ್ವರ್ಗದಂತೆ ಕಾಣಲು ಪ್ರಕೃತಿಯ ಕೊಡುಗೆ ಅಪಾರವಾಗಿದೆ. ನೈಸರ್ಗಿಕವಾಗಿ ಹಲವಾರು ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ಕೀರ್ತಿ ಉತ್ತರ ಕನ್ನಡ ಜಿಲ್ಲೆಗೆ ಸಲ್ಲುತ್ತದೆ.ಇದೊಂದು ಪ್ರಕೃತಿ ಸೋಜಿಗದ ತವರೂರು ಎಂದರೆ ಅತಿಶಯೋಕ್ತಿ ಆಗಲಾರದು.

ಜೇನು ಕಲ್ಲು ಗುಡ್ಡ

ಅಪಾರ ನಿಸರ್ಗ ಸಂಪತ್ತು ಹೊಂದಿರುವ ಯಲ್ಲಾಪುರ ತಾಲ್ಲೂಕು ಕೇಂದ್ರದಿಂದ ಕೇವಲ 15-20 ಕಿ.ಮೀ. ಅಂತರದಲ್ಲಿದೆ ಕಣ್ಮನ ಸೆಳೆಯುವ ಜೇನುಕಲ್ಲು ಗುಡ್ಡ. ನಿಸರ್ಗದ ಸೌಂದರ್ಯವೆಲ್ಲಾ ಇಲ್ಲಿಯೇ ಸಮಾಗಮವಾಗಿದೆಯೋ ಎಂಬ ಕಲ್ಪನೆ ಮೂಡಿಸುವ ತಾಣ ಜೇನುಕಲ್ಲು ಗುಡ್ಡ. ಪಶ್ಚಿಮ ಘಟ್ಟಗಳ ಇಳಿಜಾರಿನಲ್ಲಿ ಕಾಣುವ ಈ ಪ್ರದೇಶ ಪ್ರಕೃತಿಯ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿದೆ. ಗುಡ್ಡದ ಕೆಳ ಭಾಗದಲ್ಲಿ ಹರಿದು ಹೋಗುವ ನದಿ ನಿಸರ್ಗಕ್ಕೆ ಬೆಳ್ಳಿ ಕಾಲ್ಗೆಜ್ಜೆ ಹಾಕಿದಂತೆ ಭಾಸವಾಗುತ್ತದೆ.

ಜೇನು ಕಲ್ಲು ಗುಡ್ಡ ಚಾರಣ

ಜೇನುಹುಳುಗಳಿಗೆ ಪೂರಕವಾದ ವಾತಾವರಣ ಇದಾದುದರಿಂದ ಈ ಪ್ರದೇಶದಲ್ಲಿ ಜೇನುಗೂಡುಗಳು ಕಾಣಸಾಗುತ್ತದೆ. ಅದೇ ಕಾರಣಕ್ಕೆ ಈ ಸ್ಥಳವನ್ನು “ಜೇನುಕಲ್ಲು ಗುಡ್ಡ” ಎಂದು ಕರೆಯುತ್ತಾರೆ ಎಂಬ ಪ್ರತೀತಿ ಇದೆ.

ಭೂಮಿ ಬಾನು ಒಂದಾದಂತೆ ಕಾಣುವ ಸುಂದರ ದ್ರಶ್ಯ

ಹಸಿರುಡುಗೆಯಲ್ಲಿ ಕಂಗೋಳಿಸುವ ಪ್ರಕೃತಿ ಮಾತೆ, ಆಗಸವನ್ನು ಚುಂಬಿಸುವಂತೆ ಕಾಣುವ ಬೆಟ್ಟ-ಗುಡ್ಡಗಳ ಸಾಲುಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಗುಡ್ಡಗಳ ಸಾಲಿನ ಅಂಚಿನಲ್ಲಿ ದಿನಕರನು ಅಸ್ತಂಗತನಾಗುವ ದೃಶ್ಯವಂತು ನಯನ ಮನೋಹರ.. ಅನೇಕ ಬಗೆಯ ಪಕ್ಷಿಸಂಕುಲ, ಸಸ್ಯ ಪ್ರಭೇದಗಳು, ಅಪರೂಪದ ಜೀವ ವೈವಿಧ್ಯಗಳ ತಾಣವಾದ ಜೇನುಕಲ್ಲು ಗುಡ್ಡ ತನ್ನ ಸಹಜ ಸೌಂದರ್ಯದಿಂದ ಅನೇಕ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಪದಗಳಿಗೆ ನಿಲುಕದ ಜೇನುಕಲ್ಲು ಗುಡ್ಡದ ಸೊಬಗನ್ನು‌ ಒಮ್ಮೆ ಆ ತಾಣಕ್ಕೆ ಭೇಟಿ ನೀಡಿಯೇ ಕಣ್ತುಂಬಿಕೊಳ್ಳಬೇಕು.

ಲೇಖನ: ಅಕ್ಷತಾ ಜಗದೀಶ್ (ಸಮಯಾ)


Discover more from Suggi Sampada

Subscribe to get the latest posts sent to your email.

One response to “ಸೌಂದರ್ಯದ ಕಣಜ ಜೇನುಕಲ್ಲು ಗುಡ್ಡ
  1. Tippusultan Naikwadi

    ಲೇಖನ‌ ತುಂಬ ಸೊಗಸಾಗಿ‌ ಮೂಡಿ ಬಂದಿದೆ. ನಿಮ್ಮ‌ ಲೇಖನಿಯಿಂದ ಇನ್ನಷ್ಟು ಲೇಖನಗಳು ಮೂಡಿ‌ ಬರಲಿ.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading