ದೇವರಿಗೆ ಹೂವನ್ನು ಅರ್ಪಿಸುವುದು, ಅಲಂಕರಿಸಿ ಶ್ರಂಗರಿಸುವುದು, ಪೂಜೆಯ ನಂತರ ಹೂವನ್ನು ಪ್ರಸಾದ ರೂಪದಲ್ಲಿ ಭಕ್ತರು ಪಡೆಯುವುದು ಇತ್ಯಾದಿ ಎಲ್ಲವೂ ಅನಾದಿಕಾಲದಿಂದ ನಡೆದುಬಂದ ಸಂಪ್ರದಾಯ.

ಕೆಲವು ಕಡೆ ದೇವರ ಮೂರ್ತಿಗೆ ಅಲಂಕಾರದ ಪೂರ್ವದಲ್ಲಿ ಚಿಕ್ಕ ತುಂಬೆ ಹೂವುಗಳನ್ನು ಹಚ್ಚಿಸಿ, ಅರ್ಚಕರಿಂದ ಅವುಗಳು ಉದುರಿ ಬೀಳುವದರ ಆಧಾರದ ಮೇಲೆ ಅಥವಾ ಕೆಳಗೆ ಬೀಳದೇ ಇದ್ದಾಗ , ತಮ್ಮ ಮನೋಭಿಸ್ಟ ಪೂರ್ತಿಗೋಳ್ಳುವುದೋ ಹೇಗೆ ಎಂದು ಕೇಳಿಕೊಳ್ಳುವ “ಪ್ರಸಾದ ಹಚ್ಚುವದು” ಎಂಬ ವಿಶಿಷ್ಟ ಸಂಪ್ರದಾಯವಿದೆ. ಅಂಕೋಲೆಯ ಶ್ರೀ ಆರ್ಯಾದುರ್ಗಾ ದೇವಿ ಸಂಸ್ಥಾನದ ವಿಶಾಲ ಪ್ರಾoಗಣದಲ್ಲಿ ಭಕ್ತರಿಗೆ “ಪ್ರಸಾದ ಹಚ್ಚುವ “
ವಿಶಿಷ್ಟ, ಭಾರೀ ಗಾತ್ರದ ಆಕರ್ಷಕ ಕಟ್ಟಿಗೆಯ ಕಂಭವಿದ್ದು, ಇವು ಷಟ್ ಭೂಜಾಕೃತಿಯಲ್ಲಿದ್ದು, ಇಲ್ಲಿ ಪ್ರಸಾದ ಹಚ್ಚಿ ಪರಿಹಾರ ಕೇಳುಗರ ದೊಡ್ಡ ಭಕ್ತರ ಸಮೂಹವಿದೆ.
ಅರ್ಚಕರು ಬಿಳಿ ತುಂಬೆ ಹೂವಿನಿಂದ ಶಾಸ್ತ್ರದಂತೆ ದೈವ ಕಂಭವನ್ನು ನಿರ್ದಿಷ್ಟ ಪದ್ಧತಿಯಲ್ಲಿ ಅಲಂಕರಿಸುವರು. ಅನಂತರ ಅವರವರ ಅಭೀಷ್ಟೇಯಂತೆ ಹೂವನ್ನು ಹಚ್ಚಿದನಂತರ ಸುತ್ತಲೂ ನೆರೆದ ಭಕ್ತರ ಪ್ರಶ್ನೆಗೆ ಹೂವುಗಳ ನೆಲಸ್ಪರ್ಶಮಾಡುವ ಇಲ್ಲವೇ ಧೃಡವಾಗಿ ನಿಲ್ಲುವುದರಿಂದ ಉತ್ತರ ಅಲ್ಲಿಯೇ ಸ್ಥಿರವಾಗಿ ಕುಳಿತ ಅರ್ಚಕರಿಂದ ಸಿಗುತ್ತದೆ. ಕೆಲ ಸಂದರ್ಭದಲ್ಲಿ ಗಂಟೆಗಟ್ಟಲೆ ಸಮಯವಾದರೂ ಉತ್ತರ ಸಿಗದ ಸಾಧ್ಯತೆ ಇದೆ. ಭಕ್ತರು ತಮ್ಮ ಅಭಿಲಾಷೆ ಈಡೇರಲೆಂದು, ಪ್ರಸಾದ ಕಂಭದ ಎದುರು ಪಿಳಿ ಪಿಳಿ ಕಣ್ಣನ್ನು ಗುರಿಯಿಟ್ಟು ದೇವರನ್ನು ಸ್ಮರಿಸುತ್ತ ಕಾಯುತ್ತಲೇ ಇರುತ್ತಾರೆ. ಅಲ್ಲಿದ್ದ ಅರ್ಚಕರು ದೇವರ ಪ್ರಸಾದವಾದರೆ ನೆರೆದ ಭಕ್ತರಿಗೆ ಮುಂದಿನ ಕಾರ್ಯದ ಬಗ್ಗೆ ವಿವರಿಸುತ್ತಾರೆ. ಹೀಗೆ ಏಕಕಾಲಕ್ಕೆ ಹನ್ನೆರಡು ಜನ ಪ್ರಸಾದ ಕೇಳಬಹುದು. ಇಷ್ಟು ಭಕ್ತರ ಮನೋಭಿಷ್ಟ ಈಡೇರಿಸುವ ಪ್ರಸಾದ ಖoಬ ಇನ್ನೇಲ್ಲೂ ಕಾಣಸಿಗದು. ಇದು ಅಪಾರ ಭಕ್ತರ ಆಕರ್ಷಣೆಯ ಕೇಂದ್ರ.
ಹಿಂದೊಂದು ಕಾಲದಲ್ಲಿ ಈ ಸಂಸ್ಥಾನದಲ್ಲಿ ಇಂಥಹ ಹನ್ನೆರಡು ಪ್ರಸಾದ ಹಚ್ಚುವ ಕಂಭಗಳಿದ್ದು, ಈಗ ಕೇವಲ ಒಂದು ಮಾತ್ರ ಇದೆ ಎಂದು ಹೇಳುತ್ತಾರೆ.
ಮಾಹಿತಿ: ಸುಭಾಶ ನಾರ್ವೇಕರ, ವಕೀಲರು, ಅಂಕೋಲಾ


Leave a Reply