ಪರಶುರಾಮ ಸೃಷ್ಟಿ ಉತ್ತರಕನ್ನಡ ಅಂತ ನಮ್ಮ ಕಡೆ ಹೇಳುತ್ತಾರೆ. ಭೂಕಂಪ ಆಗಬಾರದು, ಅತಿವೃಷ್ಟಿ ಆಗಬಾರದು, ಅನಾವೃಷ್ಟಿ ಆಗಬಾರದು ಹೀಗಂತ ಪರಶುರಾಮ ಆಜ್ಞೆ ಮಾಡಿದ್ದನಂತೆ. ಬಹುತೇಕ ಇದು ಇಲ್ಲಿಯವರೆಗೆ ಸತ್ಯವೇ ಆಗಿದೆ. ಮಹಾಸುನಾಮಿಯ ಸಮಯದಲ್ಲೂ ಉತ್ತರಕನ್ನಡದ ಕರಾವಳಿ ನಲುಗದೇ ನಿಂತಿತ್ತು. ಉತ್ತರಕನ್ನಡ ಅನ್ನೋದು ಮಲೆನಾಡು ಕರಾವಳಿ ಮಿಶ್ರ ಜಿಲ್ಲೆ ಮತ್ತು ಉತ್ತರಕರ್ನಾಟಕ ಅನ್ನೋದು ಬಯಲುಸೀಮೆ ಮತ್ತು ಇವೆರಡು ಬೇರೆ ಬೇರೆ ಅಂತ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಅದನ್ನು ಒತ್ತಾಯಿಸಿ ತಿಳಿಹೇಳದೇ, ಸುಮ್ಮನೇ ಇರ್ಲಿ ಬಿಡಿ ಅನ್ನೋ ಅತೀ ಒಳ್ಳೇ ‘ಬುಧ್ಧಿವಂತ’ ಜನ ನನ್ನ ಜಿಲ್ಲೆಯವರು.
ಏನು ಬೇಕು ಅದೆಲ್ಲವೂ ಇಲ್ಲಿದೆ. ಕತ್ತಲೆ ಕಾನಿನ ಕಾಡುಗಳು, ದಟ್ಟ ಅಭಯಾರಣ್ಯದ ಮಲೆನಾಡು, ಅರಣ್ಯದಲ್ಲಿ ಹುದುಗಿರುವ ಸಾವಿರಾರು ಹಳ್ಳಿಗಳು, ಕಾಳಿ, ಶರಾವತಿ, ಅಘನಾಶಿನಿಯರ ಹರಿವು, ಲೆಕ್ಕಕ್ಕೇ ಸಿಗದಷ್ಟು ಜಲಪಾತ, ಅದಿರು ಮೊಗೆದಷ್ಟೂ ಸಿಗುವ ಜಾಗ ಒಂದು ಕಡೆಯಾದರೆ ಈಶ್ವರನ ಪ್ರಾಣಲಿಂಗ ಸ್ಥಾಪಿತವಾದ ಜಾಗ ಇನ್ನೊಂದು ಕಡೆ!!! ಚಂದದ ಕರಾವಳಿ, ಕಷ್ಟಪಟ್ಟು ದುಡಿಯುವ ಜನರಿರುವ ಅರೆಬಯಲುಸೀಮೆ ಪ್ರದೇಶ, ಕರ್ನಾಟಕದ ಅಣುಸ್ಥಾವರ ಇರುವ ಕೈಗಾ!! ಗುಡ್ಡಗಾಡು ಜನಾಂಗ, ಅಸಮಾನ್ಯ ಪರಿಶ್ರಮದ ಮೊಗೇರರು, ಹಾಲಕ್ಕಿ ಗೌಡರು, ಸಿಧ್ಧಿ ಜನಾಂಗ, ವಿಶಿಷ್ಟ ಪರಂಪರೆಯ ಅನೇಕ ಗುಂಪುಗಳು… ವರ್ಣನೆ ಅಸಾಧ್ಯ!!! ಇಂತಹ ಮಿಶ್ರಣಗಳ ಜಿಲ್ಲೆ ಕರ್ನಾಟಕದಲ್ಲಿ ಉತ್ತರಕನ್ನಡ ಒಂದೇ!!!
ಪುಣ್ಯ ಭಾರತದಲ್ಲಿ ಹುಟ್ಟುವುದೇ ಪುಣ್ಯವಾದರೆ, ಸ್ವರ್ಗದ ತವರು ಉತ್ತರಕನ್ನಡದಲ್ಲಿ ಹುಟ್ಟುವುದು ಇನ್ನೂ ಪುಣ್ಯ. ಹೋದಲೆಲ್ಲಾ ತಂಪು ಸೂಸುವ ತವರು ಸದಾ ತಣ್ಣಗಿರಲಿ 😊


Leave a Reply