ಅಡುಕಲವು ಅಕ್ಕಿ ದಾಸ್ತಾನು ಮಾಡುವ ಒಂದು ದೊಡ್ಡ ಮಡಕೆ ಅನ್ನುವುದಕ್ಕಿಂತ ಕರಾವಳಿಯ ಬೇಸಾಯಗಾರರ ಧಾರ್ಮಿಕ ಭಾವನೆಗಳನ್ನು ತುಂಬಿಕೊಂಡಿರುವ ಭಂಡಾರ ಎನ್ನುವುದು ಸಮಂಜಸವಾದೀತು. ಕುಂಬಾರಿಕೆ ಪಾರಿಭಾಷಿಕ ಕೋಶದಲ್ಲಿ, ಕನ್ನಡ ಶಬ್ದಕೋಶಗಳಲ್ಲಿ ಅಡಕಲು ಗಡಿಗೆ ಎಂದರೆ ಗ್ರಾಮೀಣರು ಕಾಳು-ಕಡಿ, ಹಣ ಆಹಾರಪದಾರ್ಥಗಳನ್ನು ಹಾಕಿಡಲು ಒಂದರ ಮೇಲೊಂದು ಮಡಕೆಗಳನ್ನು ಏರಿಸಿಡುವುದೆಂದು ಹೇಳಿದೆ.

ಅಂಕೋಲೆ ಕಡೆಯ ಅಡುಕಲ (ಇಡಕಲು) ಒಂದು ಮೂಡೆ ಅಕ್ಕಿ ಹಿಡಿಯುವಷ್ಟು ಗಾತ್ರದ, ಅಗಲ ಬಾಯಿಯ ದೊಡ್ಡ ಗಡಿಗೆ. ಒಂದು ಮಾನಿಗೆ (15 ಕೊಳಗ) ಹತ್ತು ಕೊಳಗದ ಅಡುಕಲಗಳೂ ಇರುತ್ತವೆ. ಅದಕ್ಕೆ ನೆಲದ ಮೇಲೆ ಅಲುಗಾಡದೆ ನಿಲ್ಲಲು ತಳಭಾಗದಲ್ಲಿ ಕಂಠ ಇರುತ್ತದೆ.

ಅಡುಕಲನ್ನು ಇಡುವ ಜಾಗ ಮನೆಯ ಒಳಭಾಗದಲ್ಲಿ ನೆಲಕ್ಕಿಂತ ಸ್ವಲ್ಪ ಎತ್ತರವಾಗಿರುತ್ತದೆ ಹಾಗೂ ಹಿಂಬದಿಯ ಗೋಡೆಯನ್ನು ರಂಗೋಲಿಯಿಂದ ಅಲಂಕರಿಸಿರುತ್ತಾರೆ. ಹಲಿ ರಂಗೋಲಿಯ ಈ ಗೋಡೆಯನ್ನು ಹಸೆ (ರಂಗೋಲಿ) ಗೋಡೆ ಎನ್ನುವುದೂ ಇದೆ. ಹೊಸ ಮನೆಯ ಪ್ರವೇಶದಂದು ಈ ಅಡುಕಲನ್ನು ಗೌರವಪೂರ್ವಕವಾಗಿ ಮನೆಯೊಳಗೆ ತಂದು ಈ ಹಸೆಗೋಡೆಯ ಬಳಿ ಇಟ್ಟಿರುತ್ತಾರೆ. ಅದಕ್ಕೆ ಮುಂಚೆಯೇ ಮನೆದೇವರುಗಳನ್ನು ಪ್ರತಿನಿಧಿಸುವ ಕೋಳ್ಗಂಬವನ್ನು ಅಲ್ಲಿ ನೆಟ್ಟಿರುತ್ತಾರೆ. ಧಾನ್ಯಗಳನ್ನು ಅಳೆಯುವ ಸಾಧನಗಳಾದ ಕೊಳಗ, ಸಿದ್ದೆಗಳನ್ನು ಇದರ ಜೊತೆಯಲ್ಲೇ ಇಡುತ್ತಾರೆ.
ಬೇಸಾಯಗಾರ ಸಮುದಾಯಗಳ ಮನೆಗಳಲ್ಲಿ (ಹಿಂದೆ ಹುಲ್ಲುಹೊದೆಸಿದವು, ನಾಡಹಂಚಿನವು ಇರುತ್ತಿದ್ದವು) ದೇವರಕೋಣೆ ಅಂತ ಪ್ರತ್ಯೇಕ ಸ್ಥಳ ಇರುವುದಿಲ್ಲ. ಮನೆಯಂಗಳದ ತುಳಸಿಕಟ್ಟೆಯೇ ಅಧಿಕೃತ ಮನೆದೇವರು. ಮನೆಯೊಳಗೆ ಎಲ್ಲ ಮಂಗಳಕಾರ್ಯಗಳಿಗೆ ಈ ಅಡುಕಲು ಅಥವ ಇಡುಕಲು ದೇವರಕೋಣೆಯ ಸ್ಥಾನ ಪಡೆಯುತ್ತದೆ. ಹಬ್ಬಹರಿದಿನಗಳಲ್ಲಿ, ಮಗೆ (ಮೃಗ) ಮಳೆಯ ಆರಂಭದ ಬೆಚ್ಚಿನ ಸಂಕ್ರಾಂತಿ, ನಾಗರಪಂಚಮಿ (ಹಾವಿನ ಹಬ್ಬ), ಗೌರಿಹಬ್ಬ, ಹೊಸತಿನ ಕದಿರು ಕಟ್ಟುವ ಹಬ್ಬ, ದೀಪಾವಳಿ (ಗೋವಿನ ಹಬ್ಬ) ಸಂಕ್ರಾಂತಿಗಳಂದು ಅಡುಕಲವನ್ನು ಮುಚ್ಚಿದ ಮಡಕೆಯಲ್ಲಿ ಹಬ್ಬದ ರೊಟ್ಟಿಯನ್ನು ಇಟ್ಟು ಕೈಮುಗಿದ ಬಳಿಕವೇ ಮನೆಯವರಿಗೆ ನೀಡುವುದು. ಹಸೆಗೋಡೆಯನ್ನು ದೀಪಾವಳಿ ಹಬ್ಬ ಬಂದಾಗ ಸಾರಿಸಿ ರಂಗೋಲಿ ಚಿತ್ತಾರ ಎಳೆಯುವರು. ತ್ರಯೋದಶಿಯ ಬೋರಜ್ಜಿ ಆಚರಣೆ ನಡೆಯುವುದೂ ಇಲ್ಲಿಯೇ. ಹೀಗೆ ವಿವಿಧ ಸಂದರ್ಭಗಳಲ್ಲಿ ಅಡುಕಲಿಗೆ ಪೂಜೆ ಸಲ್ಲುತ್ತದೆ.
ಹೊಸತಿನ ಹಬ್ಬದಂದು ಭತ್ತದ ಗದ್ದೆಯಿಂದ ತಂದ ಕದಿರನ್ನು ಪಂಡರಹರಿವೆ ಮಾವಿನ ಎಲೆ ಜೊತೆ ಅಡುಕಲ ಕಂಠಕ್ಕೆ ಕಟ್ಟುತ್ತಾರೆ. ಜೊತೆಯಲ್ಲಿರುವ ಕೋಳ್ಗಂಬಕ್ಕೂ ಕದಿರು ಕಟ್ಟುತ್ತಾರೆ. ದೀಪಾವಳಿಯ ತ್ರಯೋದಶಿಯಂದು ಗೊಂಡೆಹೂವಿನ ಜೊತೆ ಬಳ್ಳಿಯ ಸಮೇತ ಹಿಂಡಲಕಾಯಿ ಕಟ್ಟುತ್ತಾರೆ. ಅಷ್ಟೇ ಅಲ್ಲ, ಗ್ರಾಮದೇವರ ಗುಡಿ ಅಥವ ಬೇರೆ ದೇವಸ್ಥಾನದಿಂದ ಮನೆಗೆ ತಂದ ಪ್ರಸಾದ ತೆಂಗಿನಕಾಯಿಯನ್ನು ಮನೆಯವರಿಗೆಲ್ಲ ಹಂಚುವ ಮೊದಲು ಈ ಅಡುಕಲ ಮುಚ್ಚಿದ ಮಡಕೆಯಲ್ಲಿ ಅಥವ ಹಸೆಗೋಡೆಯ ಮುಂದೆ ಇಟ್ಟು ಹರಕೆ ಮಾಡುವುದು ಪದ್ದತಿ. ನವವಧುವನ್ನು ಮನೆತುಂಬಿಸಿಕೊಂಡಾಗ ಮದುಮಕ್ಕಳಿಬ್ಬರನ್ನೂ ಈ ಅಡುಕಲ ಎದುರಾಗಿ ಕುಳ್ಳಿರಿಸಿ ಶಾಸ್ತ್ರ ಮಾಡುತ್ತಾರೆ.
ಅಡುಕಲದಲ್ಲಿ ಇನ್ನೂ ಕೆಲವು ಪ್ರಕಾರಗಳಿವೆ. ಅಂಗಳದ ಬದಿಯಲ್ಲಿ ಸದಾಕಾಲವೂ ಒಲೆಯ ಮೇಲಿರುವ, ನೀರು ಕಾಯಿಸಲು ಇಡುವ ಅಡುಕ್ಲ. ಅದರಲ್ಲಿ ಒಂದು ತೆಂಗು ಸಹ ಇರುತ್ತದೆ, ತೆಂಗು (ತಿಂಗ್) ಅಂದರೆ ದೊಡ್ಡ ಗಾತ್ರದ ತೆಂಗಿನ ಚಿಪ್ಪಿಗೆ ಕೋಲು ಸಿಕ್ಕಿಸಿ ನೀರು ಮೊಗೆಯಲು ಮಾಡಿದ ಸೌಟುಕೈ. ಪಕ್ಕದಲ್ಲಿ ಚಿಕ್ಕದೊಂದು ಹಾಸುಗಲ್ಲು. ಅದರ ಬಳಿಯೇ ತೆಂಗಿನ ಸೋಗೆಗಳಿಂದ ಮರೆ ಮಾಡಿದ ನಾಣಿಗೆ ಕೊಟ್ಗೆ, ಅಂದರೆ ಬಚ್ಚಲು ಮನೆ. ಮನೆಗೆ ಬಂದವರು ಅಂಗಳದ ಹೊರಗಡೆಯೇ ತೆಂಗಿನಿಂದ ನೀರು ಎತ್ತಿ ಕಲ್ಲಿನ ಮೇಲೆ ಕಾಲು ತೊಳೆದು ಬರಬೇಕು. ಇನ್ನೊಂದು ಬಗೆಯ ಅಡುಕಲು ಎಂದರೆ ಬಾನಿ, ಒಮ್ಮೊಮ್ಮೆ ಕಂಠವಿಲ್ಲದ ಬೋಸಿಯಂತಿರುವ, ದನಕರುಗಳಿಗೆ ಕಲಗಚ್ಚು ಹಾಕಿಡುವ ಅಗಲ ಬಾಯಿಯ ದೊಡ್ಡ ಮಡಕೆ ಇದರಲ್ಲೂ ಒಂದು ತೆಂಗು ಇರುತ್ತದೆ, ನಾರುವ ಕಲಗಚ್ಚು ಕೈಗೆ ಹತ್ತಬಾರದೆಂದು.
ಸ್ನಾನದ ನೀರು ಕಾಯಿಸುವ ಅಡುಕಲನ್ನು ತರುವುದು ದೀಪಾವಳಿ ಹಬ್ಬದ ಕಾಲಕ್ಕೆ. ದೀಪಾವಳಿಯ ಮೂರ್ನಾಲ್ಕು ದಿನ ಮುಂಚೆ ಕುಂಬಾರನು ಕೊಪ್ಪಕ್ಕೆ ಬಂದು ಯಾರಿಗಾದರೂ ಬೇಕೆ ಅಂತ ವಿಚಾರಿಸಿ ಬೇಕಾದಷ್ಟೇ ಅಡುಕಲುಗಳನ್ನು ಆವಿಗೆ ಹಾಕಿ ಸುಡುತ್ತಾನೆ. ನೀರು ತುಂಬುವ ದಿನ ಮುಂಜಾನೆದ್ದು ಕುಂಬಾರನ ಮನೆಗೆ ಹೋಗಿ ತಮ್ಮ ಹೊಸ ಅಡುಕಲನ್ನು ತರುವಾಗ ದೇಪೊಳಿ ಹಬ್ಬದ ಸಂಭ್ರಮವೂ ಜೊತೆಗೆ ಬರುತ್ತದೆ.
ಮೂಲ ಮಾಹಿತಿ: ನಂದನ್ ಐಗಳ್
ಪ್ರೇರಣೆ: ಸುಕುಮಾರ ನಾಯ್ಕರೊಂದಿಗಿನ ಚರ್ಚೆ. ಚಿತ್ರಕೃಪೆ: ಆಲದಮನೆ ಹಾಗೂ Smitha Vivek Gaonkar ANKOLA-CULTURE HISTORY AND ECOLOGY ಗ್ರೂಪನಲ್ಲಿ ಹಂಚಿಕೊಂಡದ್ದು.
ಆಧಾರ: ಕುಗ್ವೆ ಹುಚ್ಚಪ್ಪ ಮಾಸ್ತರರ “ದೀವರ ಸಾಂಸ್ಕೃತಿಕ ಸಂಕಥನ” (ಕನ್ನಡ ಪುಸ್ತಕ ಪ್ರಾಧಿಕಾರ, 2016). ಮಾಸ್ತರರು ಕೆಳದಿ ಸೀಮೆ ಹಾಗೂ ಮಲೆನಾಡ ದೀವರಲ್ಲಿ ಇಡಕಲು ಕುರಿತ ಆಚರಣೆಯ ಅನೇಕ ಸಂದರ್ಭಗಳನ್ನು ಉಲ್ಲೇಖಿಸಿದ್ದಾರೆ.
ಕುಂಬಾರಿಕೆ ವೃತ್ತಿ ಪದಕೋಶ – ಬಸವರಾಜ ಕುಂಚೂರು (ಕಸಾಪ, 2007)
ನಾಡವರ ಒಂದು ಸಾಂಸ್ಕೃತಿಕ ಅಧ್ಯಯನ – ಡಾ. ಎನ್. ಆರ್.ನಾಯಕ, ಗೋಧೂಳಿ ಪ್ರಕಾಶನ 2012.


Leave a Reply