
ಈ ಹೊಂಡೆ ಆಟದ ಬಗ್ಗೆ ನಾನು ಹೆಚ್ಚಾಗಿ ತಿಳಿದಿಲ್ಲ. ಪ್ರತಿ ವರ್ಷ ಬಲಿ ಪಾಡ್ಯಮಿಯ (ದೀಪಾವಳಿ ಹಬ್ಬದ) ದಿನ ಇಲ್ಲಿಯ ಕೆರೆಕಟ್ಟೆ, ಕುಂಬಾರಕೇರಿ ಮತ್ತು ಹೊನ್ನೇಕೇರಿ ಭಾಗದ ಕೋಮಾರಪಂತ ಸಮಾಜದ ಬಾಂಧವರು ಎರಡು ತಂಡಗಳಲ್ಲಿ ಎದುರು ಬದುರಾಗಿ ಕವಣೆಗಳಲ್ಲಿ ಹಿಂಡಲಕಾಯಿಗಳನ್ನು ಇಟ್ಟುಕೊಂಡು ಪರಸ್ಪರ ಎದುರಾಳಿಗಳ ಮೇಲೆ ಬೀಸುತ್ತಾ ಭೂಮ್ತಾಯಿ(ಶಾಂತಾದುರ್ಗಾ) ದೇವಸ್ಥಾನ ದಿಂದ ದೊಡ್ಡ ದೇವ್ರ(ವೆಂಕಟರಮಣ) ದೇವಸ್ಥಾನದ ವರೆಗೆ ವಾದ್ಯವೃಂದದೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಾರೆ. ಕೆರೆಕಟ್ಟೆ, ಕುಂಬಾರಕೇರಿಯವರು, ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟು ಹೊಂಡೆ ಹೊಂಡೆ ಎಂದು ಕೂಗುತ್ತ ಎದುರಾಳಿಯನ್ನು ಎದುರಿಸಲು ಶಾಂತಾದುರ್ಗ ದೇವಸ್ಥಾನದ ಎದುರಿಗೆ ಬರುತ್ತಾರೆ. ಅಲ್ಲಿ ಇವರ ಬರುವಿಯನ್ನು ಕಾಯುತ್ತಿರುವ ಹೊನ್ನೇಕೇರಿ ತಂಡಕ್ಕೆ ಎದುರಾಗುತ್ತಾರೆ. ಅಲ್ಲಿ ಎರಡೂ ಗ್ರಾಮದ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯುತ್ತದೆ. ಅಂಕೋಲೆಯ ಪೇಟೆಯುದ್ದಕ್ಕೂ ಕವಣೆಗಳಿಂದ ಬೀಸಿ ಬರುವ ಹಿಂಡಲಕಾಯಿಗಳ ಸದ್ದು ಇತಿಹಾಸ ಕಾಲದ ಕೋವಿಯ(ಬಂಧೂಕಿನ) ಸದ್ದನ್ನು ನೆನಪಿಸುತ್ತದೆ. ಎದುರು ತಂಡದಿಂದ ಬೀಸಿ ಬರುವ ಹಿಂಡಲಕಾಯಿಗಳನ್ನು ಪರಸ್ಪರರು ಬಹಳ ಚಾಣಾಕ್ಷತೆಯಿಂದ ತಪ್ಪಿಸಿಕೊಳ್ಳುತ್ತಾರೆ. ಆದರೂ ಒಂಮ್ಮೊಮ್ಮೆ ಯಾಮಾರಿದಾಗ ಏಟು ಬೀಳುವುದುಂಟು. ಈ ಆಟದ ನಿಯಮದಂತೆ ಮಂಡಿಯ ಕೆಳಭಾಗಕ್ಕೆ ಮಾತ್ರ ಹೊಡೆಯಬೇಕು. ಆದರೂ ಕೆಲವೊಮ್ಮೆ ಗುರಿತಪ್ಪಿ ಎದುರಾಳಿಯ ದೇಹದ ಇತರ ಕಡೆ ಹೊಡೆತ ಬೀಳುವ ಸಾಧ್ಯತೆ ಇದೆ. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ವಿಜಯಿಗಳು ಎನ್ನುವುದನ್ನು ಈ ನಿರ್ಣಾಯಕರು ನಿರ್ಧರಿಸುತ್ತಾರೆ. ಹೊಂಡೆ ಆಟದಲ್ಲಿ ಗೆದ್ದ ತಂಡಕ್ಕೆ ದೊಡ್ಡ ಮೊಗ್ಗೆಕಾಯಿಯನ್ನು ನೀಡಿದರೆ, ಸೋತ ತಂಡಕ್ಕೆ ಸಣ್ಣ ಮೊಗ್ಗೆಕಾಯಿಯನ್ನು ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ಹಿಂದೆ ಈ ಹೊಂಡೆಯಾಟ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತಂತೆ. ಇಂದು ಆ ಹಿಂದಿನ ವೈಭವ ಉಳಿದಿಲ್ಲ ಎನ್ನುವುದು ಹಿರಿಯರ ಅಭಿಪ್ರಾಯ.


ಕ್ಷಾತ್ರ ಸಂಪ್ರದಾಯದ ಒಂದು ಜನಪದ ಪಳೆಯುಳಿಕೆಯಂತೆ ಕಂಡುಬರುವ ಅಂಕೋಲೆಯ ಹೊಂಡೆಯಾಟ ಹಿಂದಿನ ರಾಜಸತ್ತೆಗಳ ಕಾಲದ ಹೋರಾಟ, ಆಕ್ರಮಣ-ಪ್ರತಿರೋಧ ಇತ್ಯಾದಿ ಯುದ್ಧ ಸಂಬಂಧೀ ಸ್ಮರಣೆಗಳ ಕುರುಹು ಆಗಿರಬಹುದೇ? ಎನ್ನುವುದು ನನ್ನ ಕುತೂಹಲ!
ಮೂಲ ಲೇಖಕರು: ಶ್ಯಾಮಸುಂದರ ಗೌಡ


Leave a Reply