ಸಾಹಿತ್ಯ: ನನ್ನ ದೇಹದ ಬೂದಿ
ಕವಿ: ದಿನಕರ ದೇಸಾಯಿ
ನನ್ನ ದೇಹದ ಬೂದಿ – ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ;
ಬೂದಿ – ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ನನ್ನ ದೇಹದ ಬೂದಿ – ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ
ಮುಷ್ಠಿ ಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ನನ್ನ ದೇಹದ ಬೂದಿ – ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ
ಬೂದಿ ಕೆಸರನು ಕೂಡಿ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು.


Leave a Reply