
ಗೌರೀಶ ಕಾಯ್ಕಿಣಿರವರ ‘ನನ್ನ ಬರಹ : ಪ್ರೇರಣೆ – ಪ್ರಚೋದನೆ’
ನನ್ನ ಬರಹಕ್ಕೆ ಪ್ರೇರಣೆ Inspirationಗಿಂತ ಹೆಚ್ಚಾಗಿ Irritation. ಬಹುಶಃ ಅಂತಃಸ್ಫುರಣೆ. ಈ ರೀತಿ ಒಂದು ತಿಮಿರು, ತುರಿಕೆ. Itch of writing ಅನ್ನುತ್ತಾರಲ್ಲ ಆ ರೀತಿ. ಇದಕ್ಕೆ ಸಾಮಾನ್ಯವಾಗಿ ಹೊರಗಿನ ಪ್ರಚೋದನೆ ಬೇಕು-ಬರೆಯಲು ಒತ್ತಾಯ ಅಥವಾ ಚಾಪಲ್ಯ. ಇದೂ ಒಂದು ego problem ಇರಬಹುದು.
ಆದರೆ ಮುಂದೆ ಮಾತ್ರ ತಕ್ಕ ಮನೋವೃತ್ತಿ mood. ಅದರಲ್ಲಿ ತುಸು ಚಿಂತನೆ, ಏಕಾಗ್ರತೆ, concentration ಅತ್ಯಗತ್ಯ.

ಕವನದ ಕುರಿತು ಒಮ್ಮಲೇ ಒಂದೆರಡು ಪದಪುಂಜ ಇಲ್ಲವೇ ಪಂಕ್ತಿ ತೋಚಬಹುದು. ಆದರೆ ಮುಂದೆಲ್ಲ ಪ್ರಯತ್ನಪೂವ೯ಕ ರಚನೆ. ಇನ್ನು ಆ ಮೊದಲು ತೋಚಿದ ಸಾಲುಗಳೇ ಕವನದ ಆರಂಭವಾಗಬೇಕೆಂದಿಲ್ಲ. ಅವು ಮುಂದಿನ ಯಾವುದೊಂದು ಸೊಲ್ಲಿನಲ್ಲಿ ಸೇರಬಹುದು. ನನ್ನ ಮಟ್ಟಿಗೆ ಬರೆದದ್ದೇ ಕಾವ್ಯವಲ್ಲ. ಅದನ್ನು ಸಾಕಷ್ಟು ತಿದ್ದಿ ಬರೆಯಬೇಕಾಗುತ್ತದೆ.
ಗದ್ಯ ಲೇಖನದಲ್ಲಿ ಆರಂಭದ ವಾಕ್ಯ ನನಗೆ ಮುಖ್ಯ. ಅದು ಚೆನ್ನಾಗಿ ಮೂಡಿಬಂದರೆ ಮುಂದೆಲ್ಲ ಸರಾಗವಾಗಿ ಬರೆಯುತ್ತ ಸಾಗುತ್ತೇನೆ-ಕೊನೆತನಕ. ಹಿಂದೆಲ್ಲ ಒಮ್ಮೆ ಬರೆದದ್ದೇ ಕೊನೆಯದಿತ್ತು. ಮತ್ತೆ ತಿದ್ದುವುದೆಂಬುದೇ ಇದ್ದಿಲ್ಲ. ಆದರೆ ಈಗ ವಯೋಮಾನದಿಂದಾಗಿ ಒಮ್ಮೆ ತೋಚಿದಂತೆ ಬರೆದು ಆನಂತರ ಅಲ್ಲಲ್ಲಿ ತಿದ್ದಿ ಬರೆಯುತ್ತೇನೆ.
ನನ್ನ ಬರಹಕ್ಕೆ ಒಳಗಿನ ಪ್ರೇರಣೆಗೆ ಹೊರಗಿನ ಪ್ರಚೋದನೆಯೂ ಬೇಕಾಗುತ್ತದೆ-ವಿಶೇಷತಃ ಗದ್ಯ ಲೇಖನಕ್ಕೆ. ಪ್ರಕಾಶಕರ, ಪತ್ರಿಕೆಗಳ ವಿಶೇಷ ಸಂಚಿಕೆ, ಸಂಸ್ಮರಣ ಸಂಚಿಕೆ, ದೀಪಾವಳಿ ಸಂಚಿಕೆ ಇತ್ಯಾದಿ ನಿಮಿತ್ತಗಳಿಂದ ನನ್ನ ಮೆಚ್ಚಿನ ವಿಷಯಗಳಲ್ಲಿ ಒಂದಲ್ಲ ಒಂದು ಆಯ್ಕೆಯಾಗಿ ಲೇಖನಕ್ಕೆ ಪ್ರೇರಣೆ ಒದಗುತ್ತದೆ; ಈ ‘ನಿಮಿತ್ತ’ ರೆಕಾಡ೯ನ್ನು ನುಡಿಸಲು ಹಚ್ಚಿದ ಪಿನ್ನಿನಂತೆ ಕೆಲಸ ಮಾಡುತ್ತದೆ. ಕೇವಲ ಅಂತಃಸ್ಫೂತಿ೯ಯೇ ನನ್ನ ಕೈಯಿಂದ ಬರೆಯಿಸುತ್ತದೆಂಬ ಮಾತಿನಲ್ಲಿ ನನಗೆ ನಂಬಿಕೆ ಇಲ್ಲ. ಇದೂ ಒಂದು agreed fiction.
ಇನ್ನು ಕವನಗಳಿಗೆ ಹೊರ ಒತ್ತಾಯಕ್ಕಿಂತ ಒಳತುಡಿತವೇ ಹೆಚ್ಚು ಪ್ರೇರಕ. ಆದರೆ ಇದೂ ತಾತ್ಕಾಲಿಕ ಕವಿತಾ ರಚನೆ ಈ ಸ್ಫೂತಿ೯ಯ ಕಾಯಕವಲ್ಲ. ನಾನು ತುಂಬ ಅವಧಾನವಿತ್ತು ಅದನ್ನು ರೂಪಿಸಬೇಕಾಗುತ್ತದೆ. ಇಡೀ ಕವನ ಏಕಾಕಾರವಾಗಿ ಏಕಾಏಕಿ ಮೂಡಿ ಮೈವೆತ್ತುವುದಿಲ್ಲ.
ಇನ್ನು motivation ದೃಷ್ಟಿಯಿಂದ ನನ್ನ ಲೇಖನಕ್ಕೆ ಮೊದಲು ಆತ್ಮ ಸಂತೋಷ . ಆನಂತರ ವಾಚಕ ವೃಂದದ, ವಿದ್ವಾಂಸರ, ರಸಿಕರ, ಸಹೃದಯರ ‘ಸಮಾನ ಧಮ೯’ರ ಪರಿತೋಷ-ಇದೇ ಪ್ರಧಾನ ಹೇತು. ಆಥಿ೯ಕ ಪ್ರಯೋಜನ ನಂತರದ್ದು. ನೋಡಿದ್ದು, ಓದಿದ್ದು, ಚಿಂತಿಸಿದ್ದು, ಅನುಭವಿಸಿದ್ದು ಅದರ ಸ್ವಾರಸ್ಯ ರಹಸ್ಯದೊಂದಿದೆ ಇತರರಿಗೆ ತಿಳಿಯಪಡಿಸುವುದೇ ನನ್ನ ಎಲ್ಲ ಬರಹಗಳ ಹಿಂದಿನ ಬಲವಾದ ಪ್ರೇರಣೆ ಮತ್ತು ಉದ್ದೇಶ.
— ವಿಷ್ಣು ನಾಯ್ಕ, ಸಂಪಾದಕ, ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ, ಸಂಪುಟ -10, ಶ್ರೀ ರಾಘವೇಂದ್ರ ಪ್ರಕಾನ, ಅಂಕೋಲಾ, ಉ.ಕ, 2002.
ಮಾಹಿತಿ ಸಂಗ್ರಹಣೆ: ಜಗದೀಶ್ ಗೌಡ

Leave a Reply