ಯಶಸ್ವಿ 84 ವರ್ಷ ಪೂರೈಸಿದ ಅಂಕೋಲೆಯ ಕಾಕರಮಠದ ಖ್ಯಾತ “ಕೈಮಗ್ಗ – ಪೈಮಗ್ಗ”

Posted by

·

ಅಂಕೋಲೆಯ ನೆಲದ ಕರಿ ಇಶಾಡ ಮಾವು, ಕೇಣಿಯ ಗೇರು ಬೀಜ, ಮೀನುಗಾರರ ವೊಣ ಮೀನು ವ ಶೆಟ್ಲೆ, ಸದಾ ಸಿಗುವ ಹಸಿರು ಉಕ್ಕಿಸುವ ಬಸ್ಲೆಸೊಪ್ಪು…. ಇತ್ಯಾದಿಗಳೊಂದಿಗೆ ನಂಟಿರುವ ಇನ್ನೊಂದು ಹೆಸರು ಕಾಕರಮಠದ ಪೈ ಮಗ್ಗದ ಪಂಜಿ (ವಾಲೆ) ಅಥವಾ ಟಾವೆಲ್. ಶಹರದ ಮಧ್ಯದ ಕಾಕರಮಠದಲ್ಲಿ ಹಾದು ಹೋಗುಕರಿಗೆ ಕಿವಿಗೆ “ಧಗ್ದಕ್ ಧಗ್ದಕ್” ಎಂಬ ಮಗ್ಗದ ಯಾoತ್ರಿಕ ಶಬ್ದ ಕೇಳಿಸದೇ ಇರದು. ಅದುವೇ 1937 ರಲ್ಲಿ ಶ್ರೀ ನಾರಾಯಣ ಮರ್ತು ಪೈ ಇವರಿಂದ ಸ್ಥಾಪೀತವಾದ ಪೈಕುಟುಂಬದ ಕೈಮಗ್ಗ.

ಸ್ನಾನಕ್ಕೆ ಅವಶ್ಯ ಬೇಕಾದ, ತಕ್ಷಣ ನೀರು ಹೀರಿಕೊಳ್ಳುವ ಸಾಮರ್ಥ್ಯದ, ಮಹಿಳೆಯರಿಗೆ ತಲೆಗೆ ಸುತ್ತಿಕೊಳ್ಳುವ, ಮಕ್ಕಳಿಗೆ ಮೈ ಸುತ್ತುವ.. ಕೊನೆಯಲ್ಲಿ ಮಸಣದ ಶಾಸ್ತ್ರಕ್ಕೂ ಅವಶ್ಯವಾಗಿ ಬೇಕಾದ ಅತ್ಯಂತ ತೆಳ್ಳಗಿನ ಹಾಗೂ ಹತ್ತಿಯಿಂದ ನವಿರಾಗಿ ತಯಾರಾಗುವ ಈ ಟಾವೆಲಗಳಿಗೆ ಅಂದಿನಿಂದ ಇಂದಿನವರೆಗೂ ಪೂರೈಸಲಾಗದ ಬೇಡಿಕೆ ಇದೆ. ಮುಂಬೈ ಕಡೆಯಿಂದ ಬಂದವರಂತೂ ಮರಳುವಾಗ ಡಜನ್ ಗಟ್ಟಲೆ ಪಂಚೆಗಳನ್ನು ತುಂಬಿಕೊಂಡು ಸಾಗುವುದು ಸಾಮಾನ್ಯ. ಅದಕ್ಕೆ ಕೊಂಕಣಿಯಲ್ಲಿ ಪಂಜಿ ಇಲ್ಲವೇ ವಾಲೆ ಎಂದು ಕರೆಯುವುದು ವಾಡಿಕೆ. ಅಂಕೋಲಾ, ಕುಮಟಾ, ಹೊನ್ನಾವರ, ಕಾರವಾರ ಹಾಗೂ ಗೋವಾದ ಜನರಿಗೆ ಇದು ವಿಶಿಷ್ಟ ಆಕರ್ಷಣೆಯ ವಸ್ತು. ಒಮ್ಮೆ ಈ ಬಟ್ಟೆಯನ್ನು ಉಪಯೋಗಿಸಲು ಆರಂಭಿಸಿದರೆ, ಅದರ ಗೀಳು ಅಂಟಿಕೊಳ್ಳುವುದು ಖಂಡಿತ. ಬೇಸಿಗೆಯ ಧಗೆಗೆ ಇದೊಂದು ಅಸ್ತ್ರಎಂಬಂತೆ ಬಗಲಿನಲ್ಲಿಟ್ಟುಕೊಳ್ಳುವ ಸಾಧನ.

ಇಂದು ಮೂರನೇ ತಲೆಮಾರಿನ ಕಾಯಕಯೋಗಿ, ಶಿಸ್ತಿನ ಸ್ವಯಂಸೇವಕ ಶ್ರೀ ವಿನಯ ಪೈ ಇವರು ನೇಕಾರರ ಕೊರತೆಯ ಮಧ್ಯೆಯೂ ಧೈರ್ಯದಿಂದ, ಹರಸಾಹಸಪಟ್ಟು ತಂದೆಯಾದ ಶ್ರೀ ರಾಯಾ ನಾರಾಯಣ ಪೈ ಇವರಿಂದ ಬಳುವಳಿಯಾಗಿ ಪಡೆದ ಈ ಗುಡಿ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಅವರೇ ವಿವರಿಸುವಂತೆ ಇಂದು ನೇಕಾರರು ಸಿಗುತ್ತಿಲ್ಲ. ಹಳೆಯ ತಲೆಮಾರಿನವರು ವ್ರದ್ಧರಾದರೆ, ಹೊಸ ತಲೆಮಾರಿನವರಿಗೆ ನೇಕಾರಿಕೆಯಲ್ಲಿ ಮನಸ್ಸಿಲ್ಲ. ಹೀಗಾಗಿ ಒಂದೊಂದೇ ಕೈಮಗ್ಗಗಳು ಬಂದು ಬೀಳುತ್ತಿದ್ದು, ನಿರುಪಾಯರಾಗಿ ವಿದ್ಯುತ್ ಮಗ್ಗಗಳಮೇಲೆ ಅವಲಂಬಿಸುವಂತಾಗಿದೆ. ಏನೇ ಎಂದರೂ ಆ ನೇಕಾರರ ಚಮತ್ಕಾರಿಕ ಬೆರಳುಗಳ ಜಾದುವಿನಿಂದ ತಯಾರಾಗುತ್ತಿದ್ದ ಬಟ್ಟೆಗಳ ಚೈತನ್ಯ, ವಿದ್ಯುತ್ ಮಗ್ಗಿನ ಬಟ್ಟೆಗಳಲ್ಲಿ ಖಂಡಿತ ಕಾಣಸಿಗದು (ಇಂದು ಬೆಂಗಳೂರಿನ ಹೆಚ್ಚಿನ ಖಾದಿ ಬಟ್ಟೆಗಳ ಭಂಡಾರ ಎಂದು ಬೋರ್ಡ್ ನೇತಾಡುವ ಅಂಗಡಿಗಳಲ್ಲಿ ಈ ವಿದ್ಯುತ್ ಮಗ್ಗದ ಬಟ್ಟೆಗಳನ್ನೇ “ಖಾದಿ ಬಟ್ಟೆ” ಎಂದು ಮಾರಾಟ ಮಾಡಲಾಗುತ್ತಿರುವುದು ದುರಂತ).

ಪೈ ಮಗ್ಗದಲ್ಲಿ ಮೂರು ಶೈಲಿಯ ಹಾಗೂ ಅಳತೆಯ ಟವಲ್ಗಳು/ಪಂಜಿಗಳು ತಯಾರಾಗುತ್ತಿದ್ದು, ತಯಾರಾದ ತಕ್ಷಣ ಅದನ್ನು ಖರೀದಿಸುವ ದೊಡ್ಡ ದಂಡೇ ಇದೆ. ಸ್ಥಳೀಯ ಕೆಲವು ಬಟ್ಟೆ ಅಂಗಡಿಗಳಲ್ಲೂ ಇವು ಲಭ್ಯ ಇರುತ್ತವಾದರೂ, ಹೆಚ್ಚಿನ ಬಾರಿ ಸ್ಟಾಕ್ ಇಲ್ಲ ಎಂಬ ಉತ್ತರ ಸಿಗುವುದು ಸಾಮಾನ್ಯ. ಹೀಗಾಗಿ ಈ ಬಟ್ಟೆ ಅಂಕೋಲೆಯ ವಿಶೇಷತೆಯೊಂದಿಗೆ ಸಮ್ಮಿಳಿತವಾಗಿದೆ.

ಹತ್ತಿಯನ್ನು ತಂದು ಬೆರ್ಪಡಿಸಿ, ಹಂಜಿ ಮಾಡುವುದು, ನೂಲನ್ನು ತಯಾರಿಸಿ ಅವಶ್ಯಕತೆಯಂತೆ ಬಣ್ಣಹಾಕುವುದು,
ಪಂಚೆ ತಯಾರಾದ ನಂತರ ಅದಕ್ಕೆ ನಾಜೂಕಾಗಿ ಬ್ಲೀಚ್ ಮಾಡುವುದು ಇತ್ಯಾದಿ ಎಲ್ಲವನ್ನೂ ಮಾಡುವ ನೈಪುಣ್ಯತೆ ವಿನಯ ಪೈ ಇವರಲ್ಲಿ ಕ್ರೂಢಿಕೃತವಾಗಿರುವುದು ಕಂಡರೆ ಹೆಮ್ಮೆ ಏನಿಸದೆ ಇರಲಾರದು. ಬಟ್ಟೆಯ ವಿವಿಧತೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದರೂ, ಅಂಕೋಲೆಯ ಈ “ಖ್ಯಾತ ಪೈ ಮಗ್ಗ” ದಿಂದ ಜನಬಯಸುವದು ಮಾತ್ರ ಅದೇ ಹಳೆಯ ಪದ್ಧತಿಯ ಬಟ್ಟೆಯನ್ನು.

ಇಲ್ಲಿ ಸುಮಾರು 60 ವರ್ಷ ಹಳೆಯದಾದ ಚರಕಾವನ್ನು ಇಂದಿಗೂ ಅದೇ ಸ್ಥಿತಿಯಲ್ಲಿ ಉಪಯೋಗಿಸುವುದನ್ನು ಕಾಣಬಹುದು.

ಮೂಲ ಲೇಖಕರು: ಸುಭಾಶ ನಾರ್ವೇಕರ, ವಕೀಲರು, ಅಂಕೋಲಾ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading