ಆಂಗ್ಲರು ನಿರ್ಮಿಸಿದ ಅಂಕೋಲೆಯ ಕಂದಾಯ ಕಚೇರಿ ಹಾಗೂ ಪೊಲೀಸ್ ಠಾಣೆ

Posted by

·

“”ನೆನಪಿನಂಗಳದಿ””

ಆಂಗ್ಲರು ನಿರ್ಮಿಸಿದ ಅಂಕೋಲೆಯ ಕಂದಾಯ ಕಚೇರಿ ಹಾಗೂ ಪೊಲೀಸ್ ಠಾಣೆ ಮತ್ತು ಪೊಲೀಸಪ್ಪ ಘರ್ಜಿಸುವ…

“”ಹೂ ಕಮ್ಡೊ, ಪೆಂಡೋಪ್ಪೋ””

ಅಂಕೋಲೆಯ ಕಂದಾಯ ಕಚೇರಿಯ ಸಂಕೀರ್ಣವು ಎಂದು ನಿರ್ಮಾಣಗೊಂಡಿತ್ತು ಎನ್ನುವ ನಿರ್ದಿಷ್ಟ ವರ್ಷದ ದಾಖಲೆ ಇಲ್ಲದಿದ್ದರೂ, ಇದು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ, ಆಗಾಗ ರಿಪೇರಿ ಕಂಡ ಸ್ವಾತಂತ್ರ ಪೂರ್ವದ ಮತ್ತು ಆ ನಂತರದ ಅಧಿಕಾರಿಗಳ ದರ್ಪವನ್ನು ಕಂಡ ಬೃಹತ್ ಕಟ್ಟಡವಾಗಿತ್ತು.

ತಮಗೆ ಗೊತ್ತಿರುವಂತೆ ಬ್ರಿಟಿಷ್ ಆಡಳಿತದ ವ್ಯವಸ್ಥೆಯಲ್ಲಿ ಕಂದಾಯ ವಸೂಲಿ ಕಚೇರಿ ಮತ್ತು ಪೊಲೀಸ್ ವ್ಯವಸ್ಥೆಯ ಕಚೇರಿಯು ಒಂದೇ ಕಟ್ಟಡದಲ್ಲಿ ಇರುತಿದ್ದವು. ಸ್ವತಂತ್ರ ಭಾರತದಲ್ಲಿಯೂ ಈ ವ್ಯವಸ್ಥೆ ಮುಂದುವರಿದಿತ್ತು. ಹೀಗಾಗಿ ಸಾಮಾನ್ಯವಾಗಿ ತಾಲೂಕು ದಂಡಾಧಿಕಾರಿ/ ತಹಸೀಲ್ದಾರ್ ಕಚೇರಿ ಮತ್ತು ಪೊಲೀಸ್ ಠಾಣೆಗಳು ಹಾಗು ಖಜಾನೆ ಒಂದೇ ಪರಿಸರದಲ್ಲಿ ವ ಕಟ್ಟಡದಲ್ಲಿ ಇರುವುದು ಸಾಮಾನ್ಯವಾಗಿತ್ತು. ನಮ್ಮ ಅಂಕೋಲೆಯ ಈಗಿನ ತಹಸೀಲ್ದಾರ್ ಕಚೇರಿಯ ಆವರಣವು, ಈ ಮೊದಲು ಬ್ರಿಟಿಷ್ ಕಾಲದ ಬೃಹದಾಕಾರದ ಹಂಚು ಚಾವಣಿಯ ಕಟ್ಟಡದಲ್ಲಿ ಪಸರಿಸಿತ್ತು. ಕಟ್ಟಡದ ಮಧ್ಯದಲ್ಲಿ ತಹಸೀಲ್ದಾರ್ ಕಚೇರಿ, ಪಶ್ಚಿಮ ದಿಕ್ಕಿನ ಭಾಗದಲ್ಲಿ ಪೊಲೀಸ್ ಠಾಣೆ ಮತ್ತು ಖಜಾನೆ ಕಛೇರಿ , ಪೂರ್ವ ದಿಕ್ಕಿನ ಭಾಗದಲ್ಲಿ ಕೈದಿಗಳ ಕೊಠಡಿ, ಖಜಾನೆಯ ಹಣ ಮತ್ತು ಬಾಂಡ್ ಕೊಠಡಿ, ಬಂದೂಕುಗಳನ್ನು ಇಡುವ ವಿಭಾಗ ಹೀಗೆ ಇಂಗ್ಲಿಷ್ ವರ್ಣಮಾಲೆಯ “”U”” ಆಕಾರದಲ್ಲಿ ಸಧೃಡ ಕಟ್ಟಡವಿತ್ತು. (ಇಂದು ಶ್ರೀ ಮಹಾಗಣಪತಿಯ ಕೃಪೆಯಿಂದ ಹಳೆಯ ತಹಸೀಲ್ದಾರ್ ಕಚೇರಿಯ ಹಂಚು ಚಾವಣಿಯ ದಕ್ಷಿಣದ ವಿಭಾಗ ಮಾತ್ರ ಉಳಿದು, ಹೊಸ ಕಚೇರಿ ನಿರ್ಮಾಣ ಆಗಿದೆ ). ಕೈದಿಗಳ ಸೆಲ್ ಪಕ್ಕದಲ್ಲಿ ಸ್ಟೋರ್ ರೂಮ್ ಇದ್ದು, ಸದಾ ದೇಸಿ ಸಾರಾಯಿ ಘಮ ಘಮ ಇರುತ್ತಿತ್ತು. ಏಕೆಂದರೆ ಪೊಲೀಸರು ದಾಳಿಗೆ ಹೋದಾಗ ಸಿಗುವ ಗುನ್ನೆ ಮಾಲನ್ನು ಇಲ್ಲಿಯೇ ಸಂಗ್ರಹಿಸಿ ಇಡುತ್ತಿದ್ದರು. ಹಬ್ಬ ಹರಿದಿನ ಹಾಗೂ ರಾಷ್ಟ್ರೀಯ ಹಬ್ಬದ ಸಮಯದಲ್ಲಿ ಊರಿನ ಆಗಿನ ಖ್ಯಾತ ಕಳ್ಳಭಟ್ಟಿ ವೀರರಾದ ಚಡಪ್ಪ, ಸೋಮೇಶ್ವರ, ಗಿರಿ, ಬೀದಿ ಮುಂತಾದವರನ್ನು ಮುಂಜಾಗ್ರತೆಗಾಗಿ ಅಲ್ಲಿ ಇಟ್ಟಿದ್ದನ್ನು ವಿದ್ಯಾರ್ಥಿಗಳಾದ ನಾವು ಆಗಸ್ಟ್ 15ರಂದು ಇಲ್ಲವೇ 26 ಜನೆವರಿಯಂದು ಕದ್ದುಮುಚ್ಚಿ ನೋಡುವುದು ವಿಶೇಷವಾಗಿತ್ತು.ಇಲ್ಲಿಯ ಗೋಡೆ ಗಣಪತಿ ದೇವರಂತೂ ಜನರ ಭಕ್ತಿಯ ಹಾಗೂ ಆಕರ್ಷಣೆಯ ಕೇಂದ್ರವಾಗಿದ್ದು, ಈ ಗಜಮುಖನಿಂದಾಗಿಯೇ ಹಳೆಯ ಕಟ್ಟಡದ ಆ ಭಾಗ ಇಂದು ಹಾಗೇ ಉಳಿದುಕೊಂಡಿದೆ.ಇಲ್ಲಿ ನಿತ್ಯಪೂಜೆ ಹಾಗೂ ಸಂಕಷ್ಟಿಯಂದು ವಿಶೇಷ ಪೂಜೆ ಜರುಗುತ್ತದೆ. ಈ ಹಿಂದೆ ಸಿವಿಲ್ ವ ಕ್ರಿಮಿನಲ್ ವ್ಯಾಜ್ಯಗಳು ತಾಲೂಕಾ ದಂಡಾಧಿಕಾರಿಯ ಮುಂದೆ ಜರುಗುವಾಗ, ಪಕ್ಷಗಾರರು ಆಣೆ ಪ್ರಮಾಣವನ್ನೂ ದೇವರ ಮುಂದೇಮಾಡಿ ಶಪಿಸುವುದನ್ನು ಕಾಣುವುದು ಸಾಮಾನ್ಯವಾಗಿತ್ತು.

ಅಂಕೋಲೆಯ ಹೋಳಿಹಬ್ಬದ ದೊಡ್ಡ ಸಂಭ್ರಮ ಜರುಗುವುದನ್ನು ನೋಡಲು ಕಚೇರಿಯ ಆವಾರದಲ್ಲಿ ಜನತುಂಬಿ ತುಳುಕುತ್ತಾರೆ. ಬೆಳಂಬಾರದ ಹಾಲಕ್ಕಿಗಳ ವಿಶಿಷ್ಟ ಸುಗ್ಗಿಕುಣಿತ, ಹಗ್ಗರಣಗಳು ಇಲ್ಲಿ ಪ್ರದರ್ಶಿಸಲ್ಪಟ್ಟು ತಾಲೂಕಾ ದಂಡಾಧಿಕಾರಿಯಿಂದ ಅವರಿಗೆ ವಿಶಿಷ್ಟ ಕಾಣಿಕೆನೀಡಿ ಗೌರವಿಸಲಾಗುತ್ತದೆ. ಸಮಾಜದಲ್ಲಿಯ ಅಂಕುಡೊಂಕುಗಳನ್ನು ತಮ್ಮ ಹಗ್ಗರಣದಲ್ಲಿ ಪ್ರದರ್ಶಿಸುವ ಆ ಅಣಕಭರಿತ ನಮೂನೆಗಳನ್ನು ನೋಡಿ, ಬ್ರಿಟಿಷರೇ ಬೆಳಂಬಾರದ ಹಿರಿಯ ಗೌಡರಿಗೆ ತಾಮೃಪತ್ರದ ಸನದನ್ನು ನೀಡಿರುವುದು ಮತ್ತು ಹೋಳಿಹಬ್ಬದಂದು ಸನದನ್ನು ಪ್ರದರ್ಶಿಸುವುದು ಸಂಪ್ರದಾಯ.

ಈ ಕಚೇರಿಯ ಎದುರು ಭಾಗದಲ್ಲಿ ಅಂದರೆ ಉತ್ತರಕ್ಕೆ ಕಚೇರಿಯ ದೊಡ್ಡದಾದ ಗೇಟ್ ಇತ್ತು. ಗೇಟಿಗೆ ಹೊಂದಿ ಒಂದು ಸಣ್ಣ ಸ್ವಾಗತಕೊಠಡಿಯಂಥ ಮಾಡು ಇತ್ತು. ಅದು ಬಹಳಹಿಂದೆ ಊರಿಗೆ ಬರುವ ಅಪರಿಚಿತರ ಮೇಲೆ ನಿಗಾ ಇಡಲು ನಿರ್ಮಿಸಲಾಗಿತ್ತಂತೆ. ನಂತರದ ವರ್ಷಗಳ ಇಲ್ಲಿ “ಪೀರಿ” ಎಂಬ ಮಾನಸಿಕವಾಗಿ ಅಸ್ವಸ್ತಳಾದ ಮಹಿಳೆ ವಾಸವಾಗಿದ್ದಳು. ಅದನ್ನು ಅವಳೇ ಅತಿಕ್ರಮಿಸಿ ತನ್ನ ವಾಸಸ್ಥಳ ಮಾಡಿಕೊಂಡಿದ್ದರೂ, ಯಾವುದೇ ಕಚೇರಿಯವರು ಅವಳನ್ನು ಹೊರಹಾಕಿರಲಿಲ್ಲ. ಅದನ್ನು ಊರವರು” ಪೀರಿ ಮನೆ ” ಎಂದೇ ಕರೆಯುವುದಿತ್ತು. ದಾರಿಹೋಕರು ಅವಳಿಗೆ ಅಣಕಿಸಿದಾಗ, ಕೂಯ್ ಎಂದು ಕೂಗಿದಾಗ ಇಲ್ಲವೇ ಕಲ್ಲು ಹೊಡೆದಾಗ ಅವಳ ರೌದ್ರಾವತಾರ ಮತ್ತು ಬೈಯ್ಯುವ ಭಾಷೆ ತಾರಕಕ್ಕೇರುತ್ತಿತ್ತು.ಉಳಿದ ಸಮಯದಲ್ಲಿ ಅವಳು ನಗುತ್ತ ಸರಿಯಾಗಿಯೇ ಇರುತ್ತಿದ್ದಳು. ಉದ್ದವಾದ ಕೂದಲನ್ನು ಬಿಟ್ಟು ತಲೆತುಂಬಾ ಹೂ ಮುಡಿದು, ಹಣೆಗೆ ದೊಡ್ಡ ಕುಂಕುಮ ಇಟ್ಟುಕೊಂಡ “ಪೀರಿಯ” ದರ್ಶನವಿಲ್ಲದೇ ಕಚೇರಿ ಆವರಣದ ಪ್ರವೇಶ ಸಾಧ್ಯವಿರಲಿಲ್ಲ.

ಹಾಂ, ಹಾಂ ಈಗ ನಾನು ಆರಂಭದಲ್ಲಿ ಹೇಳಿದ ಆ ಡೈಲಾಗ್ ಕಡೆ ಬರುತ್ತೇನೆ. ಆಗಿನ್ನೂ ಖಾಯಂ ಬಸ್ ನಿಲ್ದಾಣ ಇರಲಿಲ್ಲ. ಆದರೆ ಬರುವ ಖಾಸಗಿ ಇಲ್ಲವೇ ಸರಕಾರದ ಬಸ್ ಗಳು ಈಗಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿ, ಇಳಿಸಿ ಸಾಗುತ್ತಿದ್ದವು. ಅಂಕೋಲೆಯ ಪೋಸ್ಟ್ ಆಫಿಸ್ ಕಟ್ಟಡ ಇಂದಿನ ಸ್ಥಳದಲ್ಲಿರದೇ, ಬಿ. ಆರ್. ಪ್ರಭು ಮಾಲಿಕತ್ವದ, ಈಗಿನ “ಶಾರದಾ ಸ್ಟೋರ್ಸ್ “ಬಟ್ಟೆ ಅಂಗಡಿ ಕಟ್ಟದಲ್ಲಿತ್ತು. ಅಂಚೆಪತ್ರ ವ ಅವರ ಸಾಮಗ್ರಿ ಸಾಗಿಸುವ ಟಪಾಲು ಬಸ್ಸು ಮಾತ್ರ ಅಂಕೋಲಾ ಪಟ್ಟಣ ಪ್ರವೇಶಿಸಿ, ಅಂಚೆ ಕಚೇರಿಯಿಂದ ಟಪಾಲು ಚೀಲ ಪಡೆದು ಈಗಿನ ಬಂಡಿ ಬಜಾರದ ಆಡುವ ಕಟ್ಟೆಗೆ ಪ್ರದಕ್ಷಿಣೆ ತೆಗೆದು ವಾಪಸಾಗುತ್ತಿದ್ದವು.

ಪೊಲೀಸ್ ಠಾಣೆಯ ಸೆಂಟ್ರಿ ಅಂದರೆ ಕಾವಲು ಪೊಲೀಸನೊಬ್ಬ ಖಾಯಂ ಆಗಿ ಬಂದೂಕನ್ನು ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದ. ಸಂಜೆಯಿಂದ ಬೆಳಗಿನವರೆಗೆ ಅವನ ಪೂರ್ಣ ಕಣ್ಣು ಕಚೇರಿಯ ದ್ವಾರದ ಹೊರಗೆ ಓಡಾಡುವ, ರಾತ್ರಿ ಊರಿಗೆ ಬರುವ ವ್ಯಕ್ತಿಗಳಮೇಲಿರುತ್ತಿತ್ತು.ಆಗಿನ್ನೂ ಊರಿಗೆ ವಿದ್ಯುತ್ ದೀಪದ ವ್ಯವಸ್ಥೆ ಬಂದಿರಲಿಲ್ಲ. ಕತ್ತಲೆಯಲ್ಲಿ ಯಾರಾದರೂ ಊರು ಪ್ರವೇಶಿಸುವಾಗ, ಆಗಿನ ಅಗಲವಾದ ಖಾಕಿ ಚೆಡ್ಡಿ ಮತ್ತು ಅರ್ಧ ತೋಳಿನ ಸಮವಸ್ತ್ರ, ತಲೆಯ ಮೇಲೊಂದು ಅಗಲವಾದ ಮತ್ತು ಎತ್ತರವಾದ ಟೋಪಿ,ದಪ್ಪನೆಯ ಉಣ್ಣೆಯ ಸಾಕ್ಸ ಮತ್ತು ಭಾರದ ಬೂಟು, (ಆ ಟೋಪಿಯನ್ನು ನಾವು ಕೊಳಗದ ಟೊಪ್ಪಿ ಎಂದು ಕರೆಯುವುದಿತ್ತು. ಧಾನ್ಯ ಅಳೆಯಲು ಬಳಸುವ ಮಾಪನಕ್ಕೆ ಕೊಳಗ ಎಂದು ಕರೆಯುತ್ತಿದ್ದು, ಅದು ಪೊಲೀಸ್ ಟೋಪಿಯಂತೆ ಕಾಣುತ್ತಿತ್ತು) ಬಂದೂಕನ್ನು ಮತ್ತು ಟಾರ್ಚನ್ನು ಹಿಡಿದ ಪೊಲೀಸ್ ಕಾವಲುಗಾರನ ಕಣ್ಣು ತಪ್ಪಿಸಿ ರಾತ್ರಿ ರಸ್ತೆ ದಾಟಿ ಹೋಗುವಂತಿರಲಿಲ್ಲ.

ಅಂತಹ ರಾತ್ರಿ ಓಡಾಟ ಮಾಡುವ ಸಂಶಯಾಸ್ಪದ ವ್ಯಕ್ತಿಗಳನ್ನು ಕಂಡಕೂಡಲೇ, ಬಂದೂಕನ್ನು ಮೇಲೇರಿಸಿ, ಟಾರ್ಚನ್ನು ಬಿಟ್ಟು,ಸೀಟಿ ಹೊಡೆದು ಆರ್ಭಟಿಸುವ ಶಬ್ದವೇ “”ಹೂ ಕಮಡೋ? ಪೆಂಡೋಪ್ಪೋ “”: ಎನ್ನುವುದಾಗಿತ್ತು. ಪ್ರಯಾಣಿಕನು ಆಗ ನಿಂತಲ್ಲಿಯೇ ನಿಂತು ತನ್ನ ಪರಿಚಯ ಹಾಗೂ ತಾನು ಯಾರ ಮನೆಗೆ ಹೋಗುತ್ತೇನೆ ಎಂದು ಪರಿಚಯ ಹೇಳಿಯೇ ಮುಂದೆ ಸಾಗಬೇಕಿತ್ತು. ಚಿಕ್ಕಂದಿನಲ್ಲಿ ಕೇಳಿದ ನಾವು, ಇದು ಯಾವ ಭಾಷೆ ಎಂದು ಗೊತ್ತಿಲ್ಲದಿದ್ದರೂ ಅದು ಪೊಲೀಸ್ ಭಾಷೆ ಇರಬಹುದು ಎಂದು ನಾವೂ ಸಹ ಬಾಯಲ್ಲಿ ಸೀಟಿ ಹೊಡೆಯುವಾಗ, ಹುಡುಗಾಟಿಕೆಗೆ ಇದೇ ಡೈಲಾಗ್ ಹೊಡೆಯುತ್ತಿದ್ದೆವು.ನನ್ನ ಸಹಪಾಠಿ ಮಿತ್ರ ಅಂತೋನ್ ಫರ್ನಾಂಡಿಸ್ ಇವನ ತಂದೆ ಸಂತ್ಯಾವ್ ಸಹ ಪೊಲೀಸ್ ಆಗಿದ್ದು ಆ ಡೈಲಾಗಿನ ಅರ್ಥ ಏನು ಎಂದು ಕೇಳಿದರೂ ಗೊತ್ತಿಲ್ಲ ಎಂಬ ಉತ್ತರ ಸಿಕ್ಕಿ, ಅವನೂ ಅದೇ ಡೈಲಾಗ್ ಪುನರ್ ಉಚ್ಚರಿಸುತ್ತಿದ್ದ.

ಬಹಳ ವರ್ಷಗಳ ನಂತರ ಇದಕ್ಕೊಂದು ಸಮಂಜಸ ಉತ್ತರ ಸಿಕ್ಕಿತು. ಅದೇನೆಂದರೆ ಬ್ರಿಟಿಷ್ ವ್ಯವಸ್ಥೆಯಲ್ಲಿ ಯಾರೂ ಅನವಶ್ಯಕವಾಗಿ ಊರು ಪ್ರವೇಶಿಸುವಂತಿರಲಿಲ್ಲ. ಅಂತಹ ಸಂಶಯಾತ್ಮಕ ವ್ಯಕ್ತಿ ಕಂಡುಬಂದಲ್ಲಿ, ಪೊಲೀಸರು ಆ ವ್ಯಕ್ತಿಕಡೆಗೆ ಬಂದೂಕು ತೋರಿಸಿ, ಅವನನ್ನು ಅಲ್ಲಿಯೇ ನಿಲ್ಲಲು ಆದೇಶಕೊಟ್ಟು

“WHO COMES THERE ? FRIEND OR FOE ?””
ಎಂದುಗದರಿಸಿ ಕೇಳುವ ಪದ್ಧತಿ ಇತ್ತು. ಅಂದರೆ “ಯಾರು ಬರುತ್ತಿದ್ದೀರಿ ? ಮಿತ್ರನೋ ಶತ್ರುನೋ ?ಹೀಗೆ ಕೇಳಿದಾಗ ಆ ವ್ಯಕ್ತಿ ತನ್ನ ಪರಿಚಯ ಸರಿಯಾಗಿ ಹೇಳಿದಲ್ಲಿ ಮಾತ್ರ ಪುರ ಪ್ರವೇಶವಿತ್ತು. ಇಲ್ಲದಿದ್ದಲ್ಲಿ ಅವನಿಗೆ ಬಂಧಿಸುತ್ತಿದ್ದರು.

ಆನಂತರವೂ ಬೆಳಕಿನ ವ್ಯವಸ್ಥೆ ಬರುವವರೆಗೂ ಸಹ ನಮ್ಮ ಪೊಲೀಸರು ಈ ಪದ್ಧತಿ ಮುಂದುವರಿಸಿ, ಆ ನಂತರ ನಿಲ್ಲಿಸಿದರು. ಆದರೆ ಕೊಂಕಣಿ ಮತ್ತು ಕನ್ನಡ ಮಾತ್ರ ಬಲ್ಲ ವ ಇಂಗ್ಲಿಷ್ ಜ್ಞಾನವಿಲ್ಲದ ಆಗಿನ ಪೊಲೀಸರಿಗೆ ಅದರ ಅರ್ಥ ಮತ್ತು ಉಚ್ಚಾರಣೆ ತಿಳಿಯದೇ, ಮುಂದೆ ಅದು
“”ಹೂ ಕಮ್ಡೊ ? ಪೆಂಡೋಪ್ಪೋ ? ಎಂದು ರೂಪಾಂತರಗೊಂಡಿತು. (ಈ ಹಿಂದೆ ನಾವು ಗೋವಾ ರಾಜ್ಯದ ಕೆಲವು ಪ್ರದೇಶಗಳಿಗೆ ಹೋಗುವಾಗಲೂ ಗಡಿಯಲ್ಲಿದ್ದ ಪೊಲೀಸರು ಇಂಥಹ ನಿಘುಡ ಪೊರ್ತುಗಿಸ್ ಶಬ್ದ ಬಳಸಿ ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಎಲ್ಲಿಗೆ ಹೋಗುತ್ತೇವೆ ಎಂದು ಪ್ರಶ್ನಿಸುತ್ತಿದ್ದರು )

ನಮಗೆ ನಂತರ ಈ ಬಗ್ಗೆ ಅರ್ಥ ತಿಳಿದು ಜ್ಞಾನೋದಯವಾದಾಗ ನಕ್ಕು ನಕ್ಕು ಸುಸ್ತಾಗಿದ್ದುಂಟು. 😊😊

ರಚನೆ, ಮಾಹಿತಿ: ಸುಭಾಶ ನಾರ್ವೆಕರ, ವಕೀಲರು, ಅಂಕೋಲಾ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading