ಅಂಕೋಲೆಯ ಶ್ವೇತವಸ್ತ್ರಧಾರಿ ವ್ಯಾಪಾರಿಗಳು

Posted by

·

ನೆನಪಿನಂಗಳದಿ
ಆ ಕಾಲವೇ ಹಾಗಿತ್ತು. ಜೀವನದಲ್ಲಿ ಮತ್ತು ತಮ್ಮ ತಮ್ಮ ವ್ಯವಹಾರದಲ್ಲಿ ಶುಭ್ರತೆಯು ಆ ಜನರ ನಿಜ ಜೀವನದಲ್ಲಿ ಎದ್ದುಕಾಣುತ್ತಿತ್ತು ಹಾಗೂ ಹಾಸುಹೊಕ್ಕಾಗಿತ್ತು.

ಹಾಂ, ನಾನು ವಿವರಿಸುತ್ತಿರುವದು ಅಂಕೋಲೆಯ ಆಗಿನ ಅಂಕೋಲೆಯ ಪ್ರಾಮಾಣಿಕ ವ್ಯಾಪಾರಿಗಳ ಕುರಿತು. ಅಂದಿನ ದಿನಗಳು ಈಗಿನಂತೆ ಪ್ಯಾಂಟ್ ಶರ್ಟಗಳ ಜಮಾನಾ ಆಗಿರಲಿಲ್ಲ. ಹಾಫ್ ಪ್ಯಾಂಟ್ ಚೆಡ್ಡಿ, ಪಾಯಜಾಮಾ, ಉದ್ದನೆಯ ಹಾಫ್ ಶರ್ಟ್, ಇಲ್ಲವೇ ಪೂರ್ಣ ತೋಳಿನ ಶರ್ಟ್, ಧೋತಿ, ಹಿರಿಯರಲ್ಲಿ ಗಾಂಧಿ ಟೋಪಿ, ಬಿಳಿ ಕಾಟನ್ ಇಲ್ಲವೇ ಮಲಮಲ್ ಬಟ್ಟೆ, ಇವೇ ಆಗಿನ ಫ್ಯಾಷನ್ಗಳಾಗಿದ್ದವು. ಕೇವಲ ನೌಕರಿ ವರ್ಗದವರಲ್ಲಿ ಮಾತ್ರ ಪ್ಯಾಂಟ್ ಶರ್ಟ್ ಕಾಣುವುದಿತ್ತು.

ಅಂಕೋಲೆಯ ಪೇಟೆಯ ಆರಂಭದಿಂದ ಕೊನೆವರೆಗೂ ಅಂಗಡಿಕಾರರು ಮಾತ್ರ ಈಗಿನ “ನಿರ್ಮಾ ” ಅಥವಾ “ಏರಿಯಲ್ ” ಹೊಳಪಿಂನಂತೆ ಶುಭ್ರ ಬಿಳಿಬಟ್ಟೆಧಾರಿಗಳಗಿದ್ದರು. ಹೆಚ್ಚಿನ ಹಿರಿಯರು ಮಹಾತ್ಮಾ ಗಾಂಧೀಜಿಯವರ ಆದರ್ಶದಿಂದ ಪ್ರೆರೇಪಿತರಾಗಿ ಖಾದಿ ಧರಿಸಿದರೆ, ಬಾಕಿ ವ್ಯಾಪಾರಿಗಳು ಕಾಟನ್ ಬಟ್ಟೆಯ ಪಾಯ್ಜಾಮ, ಶರ್ಟ್ ಹಾಕುತ್ತಿದ್ದರು.

ನಾ ಕಂಡಂತೆ ಕೆಳಗಿನ ಬಜಾರದಿಂದ ಆರಂಭಿಸಿದರೆ ಸಿಗುವ ಎಲ್ಲಾ ಕಿರಾಣಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಬಿಳಿಬಟ್ಟೆಯನ್ನೇ ತಮ್ಮ ಸಮವಸ್ತ್ರವಾಗಿಸಿಕೊಂಡಿದ್ದರು. ಎಲ್ಲರ ತಲೆಯಮೇಲೆ ಕಂಗೊಳಿಸುವ ಗಾಂಧಿಟೋಪಿಯು, ಅವರ ಸುಂದರತೆಯನ್ನು ಇಮ್ಮಡಿಸುತ್ತಿತ್ತು. ಕೆಲವು ವಿಶಿಷ್ಟ ವ್ಯಾಪಾರಿಗಳು ಮನೆಯಿಂದ ಅಂಗಡಿಗೆ ಬರುವಾಗ ಮತ್ತು ಮರಳುವಾಗ ಕೋಟನ್ನು ಧರಿಸಿ ಕಂಗೊಳಿಸುತ್ತಿದ್ದರು. ಕಾಕರಮಠದ ಹೆಚ್ಚಿನ ವ್ಯಾಪಾರಿಗಳು” ಪುಸ್ತಕದ ಮಾರುತಿ ಹೆಗ್ಡೆ ” ಯವರಂತೆ ಶಿಸ್ತಾಗಿ ಕೋಟು,ಧೋತಿ ಧರಿಸುತ್ತಿದ್ದರು.

ನಾನು ನೆನಪಿಸುವ ಅಂಗಡಿಗಳ ವರ್ಣನೆಯಲ್ಲಿ ಬರುವ ಎಲ್ಲಾ ಮಹನೀಯರು ತಮ್ಮ ತಮ್ಮ ಕಾಯಕದಲ್ಲಿ ಹೆಸರುವಾಸಿಯಾಗಿದ್ದು, ಕೆಲವೊಮ್ಮೆ ಅಂತಹ ಅಂಗಡಿಯನ್ನು ವ್ಯಾಪಾರಿಗಳ ಹೆಸರಿನಿಂದ, ಇಲ್ಲವೇ ಅವರ ಮೂಲ ಪೂರ್ವಜರ ಹೆಸರಿನಿಂದ ಇಲ್ಲವೇ ಅಂಗಡಿಯಲ್ಲಿ ನಡೆಸುವ ವ್ಯವಹಾರದಿಂದಲೇ ಕರೆಯುತ್ತಿದ್ದರು. ಉದಾಹರಣೆಗೆ “ಕಡ್ಲೆ ಲಕ್ಷಮಣ ” ಅಂಗಡಿ, “ಪುಡಿ ಗಣಪತಿ ಅಂಗಡಿ”, “ಬೀಡಿ ಪಾಂಡುರಂಗನ” ಅಂಗಡಿ ಹೀಗೆ.

ಗಂಗಾವಳಿ ರಸ್ತೆಗೆ ಹೊಂದಿದ ಹೋಟೆಲಗಳ ಮಾಲೀಕರು, ಕಡ್ಲೆ ಲಕ್ಷಮಣ, ಪುಡಿ ಗಣಪತಿ, ಪ್ರಮಾಣಕಟ್ಟೆ ಪಕ್ಕದ ವೆಂಕಟ್ರಮಣ ಶೆಟ್ಟಿ, ಪೀರು, ಬಂಡೀಬಜಾರ್ ರಸ್ತೆಯ ಗೋವಿಂದ್ ಶೆಟ್ಟಿ, ಶಿವ ಶೆಟ್ಟಿ, ಮಹಾಬಲೇಶ್ವರ ಹಾರ್ವಾಡೆಕರ್, ರಾಮಚಂದ್ರ ನಾಗರಕಟ್ಟೆ, ಗಜಾನನ ಕರ್ಕಿ, ಹರಿಯಪ್ಪ ಶೆಟ್ಟಿ, ಫೋ0ಡು ಪ್ರಭು ಹಾಗೂ ಸಹೋದರರು,ಹೇರ್ ಕಟಿಂಗ್ ಗೋವಿಂದ ಮಹಾಲೆ ಹಾಗೂ ಸಹೋದರರು,ಸೈಕಲ್ ನಾಗೇಶ್ ಶೆಟ್ಟಿ,ವಾಮಾನ ಮಹಾಲೆ, ರಾಮಾ ಅಂಕೋಲೆಕರ್, ಅಂಬರಕೊಡ್ಲ ಮಹದೇವ್ ಶೆಟ್ಟಿ, ರಾಮಕೃಷ್ಣ ಮರಬಳ್ಳಿ,ಮೈಕ್ ಶೆಟ್ಟಿ,ಸುಬ್ರಾಯ ಶೆಟ್ಟಿ,. ಬೆಣ್ಣೆ ನಾರಾಯಣ ಶೆಟ್ಟಿ ಹಾಗೂ ಅವರ ಇಬ್ಬರು ಮಕ್ಕಳಾದ ಗೋವಿಂದ, ಭಿಕ್ಕಪ್ಪ, ಅಚ್ಚುತ್ ಭಟ್, ಅಕ್ಕಿ ಶಿವರಾಮ ಶೆಟ್ಟಿ, ಪಾಂಡುರಂಗ ಭಟ್, ಅಚ್ಚುತ್ ಭಟ್, ಅವಲು ಭಟ್,ದುರ್ಗಾ ಶೆಟ್ಟಿ, ಕಂತ್ರಿ ಇಂಗ್ಲಿಷ್ ಗಣಪತಿ ಶೆಟ್ಟಿ, ಗರಂ ಮಸಾಲಾ ಪದ್ಮನಾಭ ಶೆಟ್ಟಿ, ಆನಂದ್ ಭಟ್, ದರ್ಜಿ ಸೀತಾರಾಮ್ ನಾರ್ವೆಕರ್, ಟೈಲರ್ ಶಿವಾನಂದ ಶೆಟ್ಟಿ, ವಿಠಲ್ ಶೆಟ್ಟಿ ಕಾಂಜನ್, ಅನಂತ ಬಾಳೆಹಿತ್ತಲ, ಎಲೆಕ್ಟ್ರಿಕಲ್ ಪುಂಡಲೀಕ್ ಶೆಟ್ಟಿ, ಅನಂತ ಶೆಟ್ಟಿ ಮಾಸ್ಟರ್, ಉರಿಯಪ್ಪ ಟೇಲರ್, ಮಷಿನ್ ಬೀರಪ್ಪ, ಅನಂತ ರೈಕರ, ವಿಠಲ್ ರೇವಣ್ಕರ್, ಟೈಲರ್ ಶಂಕರ ಕೇಣಿ, ಎಲ್ಲಾ ಹೋಟೆಲ್ ಶೆಟ್ಟರು, ಕಡ್ಲೆ ಪೀರು,ಗೋವಿಂದ ರೈಕರ, ಕೇಶವ್ ರೈಕರ,ಮಿಲ್ ದುರ್ಗಾ ಶೆಟ್ಟಿ, ಶಾಂಬಾ ವಿ ಶೆಟ್ಟಿ, ದರ್ಜಿ ವೆಂಕಟ್ರಮಣ ನಾಯಕ, ಭಟ್ ಟೈಲರ್, ದೇವ್ ಫಾತರ್ಪೆಕರ್, ಪಾಪ್ಯುಲರ್ ಸ್ಟೋರ್ಸ್ನ ಡಿ. ಆರ್. ರೈಕರ ಹಾಗೂ ಅವರ ಸಹೋದರ, ದರ್ಜಿ ರಾಮಚಂದ್ರ ಶೆಟ್ಟಿ, ಮುಸುಂಬಿ ಮಾಧವ್, ವೆಂಕಟ್ರಮಣಕಾಳೆ, ದೋಬಿಅಂಗಡಿ ಮಾಲೀಕರು, ಕಾಮತ್ ಹೋಟೆಲ್ ಮಾಲೀಕರು, ಶಂಬಾ ಮಹಾಲೆ, ಉಪ್ಪಿನ ವ್ಯಾಪಾರಿ ಮಂಜಾ ಶೆಟ್ಟಿ, ವಾಸುದೇವ ಹೆಗ್ಡೆ, ನಾಗಪ್ಪ ಶೆಟ್ಟಿ, ಹೊಸಮೆಲ್ಕರ್, ಶಾಂಬಾ ವಿಠೋಬ್ ಶೆಟ್ಟಿ, ಒನಮ್ ಶೆಟ್ಟಿ, ವೆಂಕಟ್ರಮಣ ಕಿಣಿ, ಜಿ. ಬಿ. ಭಟ್, ಗುಂಡ್ ಬಾಳೆಕರ್, ಪುಂಡಲೀಕ್ ಕಾಮತ್, ರೈಕರ, ಶೇಷಗಿರಿ ಕಾಮತ್, ವಾಡಿಬೋಗ್ರಿ ಕಾಮತ್, ಜಿ.ಎನ್. ಮಹಾಲೆ, ನರಸಿಂಹ ಶೆಟ್ಟಿ, ಜನ್ನು ಮಾಸ್ಟರ್, ಬೀಡಿ ರಾಮ್, ರಾಮಕೃಷ್ಣ ಶೆಟ್ಟಿ, ಬೊರ್ಕರ್,…, ಯಜ್ಞೆಶ್ವರ್ ಶೆಟ್ಟಿ, ಖಾದಿ ಭಂಡಾರದ ಪೈಗಳು, ದಾಮೋದರ ಶೆಟ್ಟಿ, ದರ್ಜಿ ವಿನಾಯಕ ಶೇನ್ವಿ, ಪುಂಡಲೀಕ್ ಮಹಾಲೆ, ಬೀಡಿ ಬಾಂದೇಕರ್, ಗೋವಿಂದ ಶೆಟ್ಟಿ, ವಸಂತ್ ಪ್ರಭು, ತಿಮ್ಮಯ್ಯ ಶೆಟ್ಟಿ, ರಾಮ್ ಶೆಟ್ಟಿ, ತಂಬೂರಿ ಶೇನ್ವಿ, ಕೇಶವ್ ನಾಯಕ (ಕೇಳಿ ಕೇಶವ್ ), ಬುಕ್ ಸ್ಟಾಲ್ ನ ಅನಂತ್ ಪೈ …. ಹೀಗೆ ಊರಿನ ಉದ್ದಗಲಕ್ಕೂ ಬಿಳಿಬಟ್ಟೆ ಧಾರಿಗಳು ಕಂಗೊಳಿಸುತ್ತಿದ್ದರು. ತಮ್ಮ ತಮ್ಮ ವ್ಯಾಪಾರ ವಹಿವಾಟಿನಲ್ಲೂ ಪ್ರಾಮಾಣಿಕತೆಯಿಂದ ಮೆರೆಯುತ್ತಿದ್ದರು. ಆ ಪಳಿವುಲಿಕೆಯ ಪೈಕಿ ಕೊನೆಯದಾಗಿದ್ದವರು ಇತ್ತಿಚೆಗೆ ಅಗಲಿದ ಗೋವಿಂದ ಶೆಟ್ಟಿ. ( ಎಲ್ಲಾ ಹೋಟೆಲ್ ಗಳ ಮಾಲೀಕರು ಶುಭ್ರವಸ್ತ್ರ ಧಾರಿಗಲಾಗಿದ್ದು, ನನ್ನ ಈ ಮೊದಲಿನ ಅಂಕಣದಲ್ಲಿ ನಾನು ಈ ಬಗ್ಗೆ ವರ್ಣಿಸಿರುತ್ತೇನೆ )

ಇಲ್ಲಿ ವಿಶೇಷವಾಗಿ ನೆನಪಿಗೆ ಬರುವವರು ಫೊ0ಡು ಪ್ರಭು ಹಾಗೂ ಅವರ ಸಹೋದರರಾದ ಬಾಬುರಾಯ್ ಮತ್ತು ವಿಠೋಬ್ ಪ್ರಭು ಮತ್ತು ಅದೇ ರೀತಿ ಬೆಣ್ಣೆ ನಾರಾಯಣ ಶೆಟ್ಟಿ ಹಾಗೂ ಅವರ ಮಕ್ಕಳಾದ ಗೋವಿಂದ ಮತ್ತು ಭೀಕ್ಕಪ್ಪ ಶೆಟ್ಟಿ. ಈ ಇಬ್ಬರೂ ಅಂಗಡಿಕಾರರು ತಮ್ಮ ಅಂಗಡಿಗಳನ್ನು ಬಂದು ಮಾಡುತ್ತಿದ್ದುದು ರಾತ್ರಿ ಹನ್ನೆರಡು ಗಂಟೆಗೆ. ಅಂಗಡಿ ಮುಚ್ಚಿದ ನಂತರ ಗಾಂಭಿರ್ಯದಿಂದ ಆ ಮೂರರ ಜೋಡಿಗಳು ರಸ್ತೆಯಲ್ಲಿ ಸಾಗುವದನ್ನು, ನಾವು ಸೆಕೆಂಡ್ ಶೋ ಸಿನೆಮಾ ನೋಡಿ ಮರಳಿ ಬರುವಾಗ ನೋಡುವುದೇ ಖುಷಿ ನೀಡುತ್ತಿತ್ತು. ಬೆಣ್ಣೆ ನಾರಾಯಣ ಶೆಟ್ಟಿ ಕೈಯಲ್ಲಿ ಒಂದು ಹಳೇ ಲಾಟನ್ ಇರುತ್ತಿತ್ತು.ಹಾಗೂ ಫೋoಡು ಪ್ರಭು ಇವರ ಕೈಯಲ್ಲಿ ದೊಡ್ಡ ಕಟ್ಟಿಗೆ ಕೊಡೆ ಖಾಯಂಆಗಿ ಇರುತ್ತಿತ್ತು.

ಇನ್ನೊಂದು ವಿಶೇಷವೆಂದರೆ ನಾನಾಗಲೇ ವಿವರಿಸಿದಂತೆ ಶಿಸ್ತಿನ ಕೋಟುಧಾರಿಗಳು… ಕಾಕರಮಠದ ಬುಕ್ ಸ್ಟಾಲ್ ಅನಂತ್ ಪೈ, ಪುಸ್ತಕದ ಹೆಗಡೆ, ಪುಂಡಲೀಕ್ ಕಾಮತ್, ಅವಲು ಭಟ್, ಅಚ್ಚುತ್ ಭಟ್, ಪಾಂಡುರಂಗ ಭಟ್, ದತ್ತಾತ್ರೇಯ್ ಭಟ್,.. ಹಾಗೆ ಕೆಲವು ಹಿರಿಯರಾದ ಜಿ. ಎನ್ ಮಹಾಲೆ, ದುರ್ಗಾ ಶೆಟ್ಟಿ, ವಿಠೋಬ್ ಶೆಟ್ಟಿ, ಕಾಂಜನ್ ವಿಠಲ್ ಶೆಟ್ಟಿ, ವೆಂಕಟ್ರಮಣ ಕಾಳೆ, ಶಾಂಬಾ ವಿಠೋಬ್ ಶೆಟ್ಟಿ ಇತ್ಯಾದಿ ಹಿರಿಯರೂ ಖಾದಿ ಕೋಟುಧಾರಿಗಳಾಗಿದ್ದರು ಮತ್ತು ನಿತ್ಯವೂ ಕೋಟು ಧರಿಸುತ್ತಿದ್ದರು. ಹೀಗೆ ಅವರ ನಡೆಯನ್ನು, ಗತ್ತನ್ನು, ಸ್ಟೈಲನ್ನು ನೋಡುವುದೇ ಖುಷಿ ನೀಡುತ್ತಿತ್ತು.

ಆದರೆ ಇಂದಿನ ವ್ಯಾಪಾರಿಗಳು ಹೊಸ ಹೊಸ ಫ್ಯಾಷನ್ ಬದಲಾವಣೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಆ ಬಿಳಿ ಬಟ್ಟೆಯ, ಗಾಂಧಿ ಟೋಪಿಯ ಶುಭ್ರತಯ ಕೊಂಡಿಯು ಅಂತ್ಯಕಂಡಿದೆ. ಅಂಕೋಲೆಯ ಹೆಚ್ಚಿನ ಹೊಸ ಅಂಗಡಿಗಳು ಇಂದಿನ ದಿನಗಳಲ್ಲಿ ಹೊರಗಿನವರ ವ್ಯಾಪಾರಿ ಕೇಂದ್ರವಾಗಿದೆ. ಆದರೆ ಕುಟುಂಬದ ವೃತ್ತಿಯನ್ನು ಊರಿಗೆ ಸೇವೆ ಎಂಬಂತೆ ಮುಂದುವರೆಸಿರುವ ಈಗಿನ ಯುವ ಮುಖಗಳು ಶ್ಲಾಘನೆಗೆ ಅರ್ಹ ವಾಗಿದ್ದು, ತಮ್ಮ ಹಿರಿಯರನ್ನು ನೆನಪಿಸುವಂತಿವೆ. ಇಂದಿಗೂ ಸಂಜಯ್ ಪ್ರಭು ಕುಳಿತುಕೊಂಡ ಅಂಗಡಿ “ವಿಠೋಬ ಪ್ರಭು” ಅಂಗಡಿ ಎಂದೂ, ಬಾಬುಲಿ ಅಂಗಡಿ “ಬೀಡಿ ಪಾಂಡುರಂಗ “ಅಂಗಡಿ ಎಂದೂ, ಅನಿಲ್ ಮಂಜುನಾಥ್ ಶೆಟ್ಟಿ ವ್ಯವಹಾರಿಸುವ ಅಂಗಡಿ “ನರಸಿಂಹ ಶೆಟ್ಟಿ ಅಂಗಡಿ” ಎಂದೂ, ಅವರ ಹಿರಿಯರ ಹೆಸರಿನಿಂದ ಕರೆಯಲ್ಪಡುತ್ತದೆ.

ಅಂಕೋಲೆಯ ವ್ಯಾಪಾರಿಗಳ ಜಗತ್ತಿಗೆ ತಮ್ಮದೇ ಚಾಪನ್ನು ನೀಡಿದ ಆ ಆತ್ಮಗಳು ಇಂದಿಗೂ ನೆನಪಿಗೆ ಬರುತ್ತವೆ.

ಮೂಲ ಲೇಖಕರು: ಸುಭಾಷ್ ನಾರ್ವೆಕರ, ವಕೀಲರು, ಅಂಕೋಲಾ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading