“ನೆನಪಿನಂಗಳದಿ”
ಹಾಂ, ಅಂಕೋಲೆಯಲ್ಲೊಂದು “ಧರ್ಮಶಾಲೆ ” ಇತ್ತು ಎಂಬ ವಿಷಯವು ಸಾಕಷ್ಟು ಜನರಿಗೆ ಅದರಲ್ಲೂ ಇಂದಿನ ಹೊಸ ಪೀಳಿಗೆಗೆ ಗೊತ್ತಿರಲಿಕ್ಕಿಲ್ಲ. ಹಿರಿಯರನ್ನು ಬಿಟ್ಟರೆ, ಹೆಚ್ಚಿನವರು ಅದನ್ನು ನೋಡಿರಲಿಕ್ಕಿಲ್ಲ. ಆಗಿನ ಕಾಲದಲ್ಲಿ ಇಂದಿನಂತೆ ವಾಸ್ತವ್ಯಕ್ಕೆ ಹೋಟೆಲ್, ಲಾಡ್ಜ್ ಇತ್ಯಾದಿಗಳಿರಲಿಲ್ಲ. ಹೊರಗಿನವರು, ಅಂದರೆ ಸ್ಥಳೀಯವಾಗಿ ಸಮ್ಮಂದಿಗಳು, ಮನೆ ಮಠ ಇತ್ಯಾದಿ ಇಲ್ಲದವರಿದ್ದರೆ, ಅಕಸ್ಮಾತ್ ಆಗಿ ಬಂದ ಪ್ರಯಾಣದ ಸುಸ್ತನ್ನು ನಿವಾರಿಸಿಕೊಂಡು ಹಂಗಾಮಿಯಾಗಿ ವಾಸ್ತವ್ಯ ಮಾಡುವ ಪ್ರಸಂಗಬಂದರೆ ಇರುವ ಏಕೈಕ ಆಶ್ರಯತಾಣ ಊರ ಮಧ್ಯದಲ್ಲಿರುವ ಈ ‘ಧರ್ಮಶಾಲೆ ‘ ಆಗಿತ್ತು. ಆಗಿನ ನಮ್ಮ ಊರಿನ ಸಜ್ಜನ ದಾನಿಗಳ ಕೃಪೆಯಿಂದ,ಇದು ಕಟ್ಟಲ್ಪಟ್ಟಿತ್ತು ಹಾಗೂ ನಂತರದ ದಿನಗಳಲ್ಲಿ ಆಗಿನ ತಾಲೂಕಾ ಬೋರ್ಡಿನಿಂದ ನಿರ್ವಹಿಸಲ್ಪಟ್ಟಿತ್ತು.
ಇಂದಿನ ಪೇಟೆಯ ಮಧ್ಯದ ಸಿಂಡಿಕೇಟ್ ಬ್ಯಾಂಕ್ (ಈಗ ಕೆನರಾ ಬ್ಯಾಂಕ್ )ಇರುವ ಸ್ಥಳದಲ್ಲಿಯೇ ಬೃಹದಾಕಾರದ ಹಂಚಿನ ಛಾವಣಿಯ, ಮಣ್ಣು ಹಾಗೂ ಭಾಗಶಹ ಕಲ್ಲು ಗೋಡೆಯ ಈ ಕಟ್ಟಡವೇ ಬಡವರ ವ ಪ್ರವಾಸಿಗಳ ಆಶ್ರಯದ ಧರ್ಮಶಾಲೆ ಆಗಿತ್ತು. ಕಟ್ಟಡವು ಹಿಂಭಾಗದಲ್ಲಿ ಅಂದರೆ ದಕ್ಷಿಣಕ್ಕಿದ್ದು, ಮುಂದಿನ ರಸ್ತೆಗೆ ಹೊಂದಿದ ಖುಲ್ಲಾ ಸ್ಥಳದಲ್ಲಿ ಹಳ್ಳಿಗಳಿಂದ ತಂದಂತಹ ತರಕಾರಿಗಳು ಮಾರಲ್ಪಡುತ್ತಿದ್ದವು. ಅದು ನಂತರದ ದಿನಗಳಲ್ಲಿ ತರಕಾರಿ ಮಾರ್ಕೆಟ್ ಆಗಿತ್ತು. ಬೇಸಿಗೆಯಲ್ಲಿ ತರಕಾರಿ ಮಾರಾಟಗಾರರ ರಕ್ಷಣೆಗೆ ಮಡ್ಲಿನ ಚಪ್ಪರ ಹಾಕಲ್ಪಡುತ್ತಿತ್ತು.
ಕಟ್ಟಡದವೊಳಭಾಗದಲ್ಲಿ ಒಂದು ಹಾಲ್ ಹಾಗೂ ಕೆಲ ಕೊಣೆಗಳಿದ್ದು, ಹೊರಗಿನಿಂದ ಬಂದವರು ಅಲ್ಲಿ ಹಂಗಾಮಿಯಾಗಿ ಉಳಿದು, ಕೆಲವರು ಅಲ್ಲಿಯೇ ಬೆಂಕಿಮಾಡಿ ಬೇಯಿಸಿ ತಿಂದುಂಡು ಹೋಗುತ್ತಿದ್ದರು. ಪಕ್ಕದಲ್ಲಿಯೇ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ನೀರಿನ ಬಾವಿ ಇದ್ದು, ಅಡಿಗೆಗೆ, ಕುಡಿಯಲು ಇತ್ಯಾದಿ ನೀರಿಗೆ ತೊಂದರೆ ಇರಲಿಲ್ಲ. ಈ ಬಾವಿಯು ಇಂದಿಗೂ ಊರಿಗೆ ವಿಫುಲವಾಗಿ ನೀರೋದಗಿಸುತ್ತಾ ಬಂದಿದೆ. ಹಿಂಭಾಗದಲ್ಲಿದ್ದ ಕೊಂಡವಾಡೆ (ಅಂದರೆ ಬೀಡಾಡಿ ದನಗಳನ್ನು ಕಟ್ಟುವ ಸ್ಥಳ) ನಡೆಸುವ ಅಂಕೋಲೇಕರ್ ಕುಟುಂಬದವರು ಕೇಳಿದವರಿಗೆ ಅಡಿಗೆ ಪಾತ್ರೆ ವಗೈರೆ ನೀಡಿ ಸಹಾಯಮಾಡುತ್ತಿದ್ದರು. ಹೀಗೆ ಈ ಛತ್ರವು ಪರ ಊರಿನಿಂದ ಬಂದಂಥಹ ಅತಿಥಿಗಳಿಗೆ ಆಶ್ರಯತಾಣವಾಗಿತ್ತು. ಅದರಲ್ಲೂ ವಿಶೇಷವಾಗಿ ಗೋಕರ್ಣ ಜಾತ್ರೆಯ ಅಂದರೆ ಶಿವರಾತ್ರಿಯ ಸಂದರ್ಭದಲ್ಲಿ ಪ್ರವಾಸಿಗರ ಜನದಟ್ಟಣೆ ಇರುತಿತ್ತು. ಕ್ರಮೇಣ ಊರಲ್ಲಿ ಹೋಟೆಲ್, ವಸತಿಗ್ರಹ ಇತ್ಯಾದಿ ಆರಂಭವಾಗುತ್ತಿದಂತೆ, ಈ ಕಟ್ಟಡವು ಭೀಕ್ಷುಕರು ವಾಸಿಸುವ ಕೇಂದ್ರವಾಯಿತು. ಅನೇಕ ಭಿಕ್ಷುಕರು ಇಲ್ಲಿಯೇ ಖಾಯಂ ಆಗಿ ಉಳಿಯತೊಡಗಿದಂತೆ, ಗಲೀಜು, ಮಲೀನತೆ ಹೆಚ್ಚಾಗಿ, ಪ್ರವಾಸಿಗರು ಬರುವದು ನಿಂತುಹೋಯಿತು. ಕೆಲವು ಭೀಕ್ಷುಕರು ಅಲ್ಲಿಯೇ ಹೆಣ್ಣನ್ನು ( ಭಿಕ್ಷುಕಿ) ಆಯ್ಕೆಮಾಡಿ ಮದುವೆಯಾಗಿ ದಿನನಿತ್ಯವೂ ಮಧುಚಂದ್ರ ಕಾಣುತ್ತಿದ್ದರು. “ಎಣ್ಣೆ” ನೆತ್ತಿಗೇರಿದಾಗ, ನಡೆಯುವ ಗಲಾಟೆ, ಮಾತಿನವರಸೆ, ಹೊಡೆದಾಟ ಇವೆಲ್ಲವೂ ತರಕಾರಿ ಖರೀದಿಸಲು ಬಂದವರಿಗೆ, ದಾರಿಹೋಕರಿಗೆ ಕೆಲವೊಮ್ಮೆ ಮನೋರಂಜನೆ ನೀಡಿದರೆ ಇನ್ನೂ ಹೆಚ್ಚಿನಬಾರಿ ಕಿರಿ ಕಿರಿ ಅನುಭವ ನೀಡುತ್ತಿತ್ತು. ಅಲ್ಲಿ “ಕಣ್ಣನ್ ” ಎಂಬ ಭೀಕ್ಷುಕನಿದ್ದ. ಅವನ ಅಸಲಿನಾಮ ಏನೆಂದು ಗೊತ್ತಿಲ್ಲದಿದ್ದರೂ, ಕೇರಳದ ಕಡೆಯ ಮಲ್ಯಾಳಿಆಗಿದ್ದ. ಅವನ ಸದಾ ಕೆಂಪಾಗಿರುವ ಕಣ್ಣನ್ನು ನೋಡಿ ಬಹುಷಃ ಆ ಹೆಸರಿಟ್ಟಿದ್ದರೋ ಏನೊ. ಅವನು ಪ್ರತಿ ಶನಿವಾರ ನಮ್ಮ ಮನೆಗೆ ಭಿಕ್ಷೆಕೇಳಿ ಬರುತ್ತಿದ್ದ. ಆಗಿನ ಸಮಯದಲ್ಲಿ ಪ್ರತಿಮನೆಯಲ್ಲೂ ಶನಿವಾರ ಮಾತ್ರ ಹಿಡಿ ಅಕ್ಕಿ ಇಲ್ಲವೇ ಹಣ ನೀಡುವ ಪದ್ಧತಿ ಇತ್ತು. ಒಂದುದಿನ ಶನಿವಾರ ಕಣ್ಣನ್ ನಮ್ಮ ಮನೆಯ ಹೊರಗಿನ ಜಗುಲಿಯಲ್ಲಿ ಕುಳಿತು ಹಸಿವಿಗಾಗಿ ಏನಾದರೂ ತಿನ್ನಲು ನೀಡುವಂತೆ ನನ್ನ ತಾಯಿಯಲ್ಲಿ ವಿನಂತಿಸಿಕೊಂಡ. ಆದಿನ ರಜಾ ಇದ್ದುದರಿಂದ, ನಾನೂ ಕಬ್ಬಿನರುಚಿ ಸವಿಯುತ್ತ ಜಗುಲಿಯಲ್ಲಿ ಕುಳಿತ್ತಿದ್ದೆ. ಕಣ್ಣನ್ ತನ್ನ ಚೀಲವನ್ನು ಬಿಚ್ಚಿ, ಅದರಿಂದ ನಾಣ್ಯಗಳನ್ನು ಹೊರಹಾಕಿ ಅಳೆಯುತ್ತಿದ್ದ. ಆ ಚಿಲ್ಲರೆ ರಾಶಿಯಲ್ಲಿ ನನ್ನನ್ನು ಆಕರ್ಷಸಿದ್ದು ಅವನಲ್ಲಿದ್ದ ತಾಮ್ರದ ತೂತು ಬಿಲ್ಲಿಗಳು (ಬ್ರಿಟಿಷ್ ಸಾಮ್ರಾಜ್ಯದ ಆರನೇ ಜೋರ್ಜ್ ಇವನ 1943 ರಿಂದ 1947 ರವರೆಗೆ ಮುದ್ರಿಸಲ್ಪಟ್ಟ ಒಂದು ಪೈಸೆ ನಾಣ್ಯಗಳು ) ಮತ್ತು ಸ್ವತಂತ್ರ ಭಾರತದ ಒಂದು ಪೈಸೆಗಳು. ನನಗೇನಾಯಿತೋ ಗೊತ್ತಿಲ್ಲ. ನಾನು ಕಬ್ಬಿನ ತುಂಡನ್ನು ಅಲ್ಲಿಯೇ ಬಿಟ್ಟು ಮನೆಯೊಳಗಿದ್ದ ನನ್ನ ಮಮ್ಮಾಳಿಗೆ ದುಂಬಾಲು ಬಿದ್ದು, ಆ ತಾಮ್ರದ ನಾಣ್ಯಗಳನ್ನು ಪಡೆಯೋಣ ಎಂದು ಬೇಡಿಕೊಂಡೆ. ಗೊತ್ತಿಲ್ಲದಂತೆ ಹಠಮಾಡಿದೆ. ನನ್ನ ಬೇಡಿಕೆಗೆ ಸ್ಪಂದಿಸಿ ಮಮ್ಮಾ ಹೊರಬಂದು,ಕಣ್ಣನ್ ಇವನಿಗೆ ತಿಂಡಿ ನೀಡಿ, ಆ ತಾಮ್ರದ ನಾಣ್ಯಗಳನ್ನು ನೀಡುವಂತೆ ವಿನಂತಿಸಿ ಅವುಗಳಿಗೆ ಪ್ರತಿಯಾಗಿ ಬೇರೆ ಪ್ರಚಲಿತವಿದ್ದ ನಾಣ್ಯವನ್ನು ನೀಡಿ ನನಗೆ ನೀಡಿದಳು. ಅವುಗಳನ್ನು ತೊಳೆದು ಮನೆಯೊಳಗೆ ತರುವಂತೆ ಹೇಳಿದಳು. ನನ್ನ ಖುಷಿಗೆ ಮಿತಿಯೇ ಇರಲಿಲ್ಲ. ಅಂದಿನಿಂದ ನಾನು ನನಗೆ ನೀಡುವ ಪೊಕೆಟ್ ಮನಿ ಖರ್ಚುಮಾಡದೇ ಕಣ್ಣನ್ ಗಾಗಿ ಮೀಸಲಿಡುತ್ತಿದ್ದೆ. ಆ ನಂತರ ಪ್ರತಿ ಶನಿವಾರ ಅವನು ತನಗೆ ಸಿಕ್ಕಿದ ಅಂತಹ ನಾಣ್ಯಗಳನ್ನು ನೀಡುವುದು ವಾಡಿಕೆಯಾಗಿ, ನಿಜವಾದ ಅರ್ಥದಲ್ಲಿ ಇಂದಿನ ನನ್ನ ವಿಪುಲವಾದ “ನಾಣ್ಯ ಸಂಗ್ರಹಕ್ಕೆ ಪೀಠಕೆಹಾಕಿದ ಮೊದಲ ಗುರುವಾದ “.
ನಾನು ಕನ್ನಡ ಒಂದನೇ ನಂಬರ್ ಶಾಲೆಯ ವಿದ್ಯಾರ್ಥಿಯಾದಾಗ, ನನ್ನ ಹೆಚ್ಚಿನ ಸಹಪಾಠಿ ಮಿತ್ರರು ಈ ಧರ್ಮಶಾಲೆಯ ಹಿಂಭಾಗದ ಅಂದರೆ ಕೊಂಡಾವಾಡೆ ಕ್ಷೇತ್ರದವರಾಗಿದ್ದರಿಂದ, ಮಧ್ಯಾಹ್ನದ ಶಾಲೆ ಬಿಟ್ಟಮೇಲೆ ಆಗಾಗ ಗುಡಿಗಾರಗಲ್ಲಿಯಿಂದ ವೊಳರಸ್ತೆಹಿಡಿದು, ಧರ್ಮಶಾಲೆ ಮಾರ್ಗವಾಗಿ ಮುಖ್ಯರಸ್ತೆಗೆ ಬರುತ್ತಿದ್ದೆವು. ಮಿತ್ರರೆಲ್ಲರೂ ಸೇರಿ ನಮ್ಮಲ್ಲಿರುವ ಒಂದು ಪೈಸೆ, ಎರಡು ಪೈಸೆ ಕೂಡಿಸಿ, ಐದು ಇಲ್ಲವೇ ಹತ್ತು ನಯಾಪೈಸೆಗೆ ಸಿಗುವ ಕಲ್ಲಂಗಡಿ ಹಣ್ಣನ್ನೋ ಇಲ್ಲವೇ ಪೈಸೆಗೆ ಒಂದು ಅಥವಾ ಎರಡು ಸಿಗುವ ಸೌತೆಕಾಯಿಯನ್ನು ಆ ಧರ್ಮಶಾಲೆಯ ಎದುರು ಕುಳಿತ ನಮ್ಮೂರಿನ ತರಕಾರಿ ಮಾರಾಟಗಾರರಿಂದ ಖರೀದಿಸಿ ಅಲ್ಲಿಯೇ ತುಂಡುಮಾಡಿ, ಹಂಚಿಕೊಂಡು ಧರ್ಮಶಾಲೆಯ ಎದುರಿನ ಜಗುಲಿಯ ಮೇಲೆ ಕುಳಿತು ತಿಂದು ಚಪ್ಪರಿಸುತ್ತಿದ್ದೆವು. ಆ ಮಜಾ, ನಂತರದ ಜೀವನದಲ್ಲೆಂದೂ ಬರಲೇಇಲ್ಲ. ಆಗ ಅಲ್ಲಿ ಕುಳಿತು ತಿನ್ನುವ ಅಲ್ಪ ಸಮಯದಲ್ಲಿ ಅಲ್ಲಿದ್ದ ಭೀಕ್ಷುಕರ “ಡೈಲಾಗುಗಳು” ಕೇಳುವುದೇ ನಮಗೆ ದೊಡ್ಡ ಹಾಗೂ ಫುಕ್ಕಟೆ ಸಿಗುವ ಮನೋರಂಜನೆಯಾಗಿತ್ತು.
ಅಂಥಹ ಆ “ಧರ್ಮಶಾಲೆಯು” ಕ್ರಮೇಣ ಜೀರ್ಣಗೊಂಡಂತೆ, ಸದ್ರಿ ಜಮೀನನ್ನು ಕಟ್ಟಡಸಮೇತ ಆಗಿನ ಅಂಕೋಲೆಯ ಜನರ ಅಚ್ಚುಮೆಚ್ಚಿನ “ಸಿಂಡಿಕೇಟ್ ಬ್ಯಾಂಕ್ ” ನಿರ್ಮಾಣಕ್ಕೆ ನೀಡಲ್ಪಟ್ಟಿತು. ಸಿಂಡಿಕೇಟ್ ಬ್ಯಾಂಕಿನ ಸುಂದರ ಕಟ್ಟಡ ನಿರ್ಮಾಣವಾಗಿ ಅದು ಜನಸೇವಾ ಕೇಂದ್ರವೆಂದು ಗುರುತಿಸಲ್ಪಟ್ಟಿತು. ಅಳಿದುಳಿದ ಭಾಗದ ಕಟ್ಟಡದ ಹಂಚುಗಳು ಅಕ್ಕ ಪಕ್ಕದ ಜನರ ಮಾಡಿಗೆ ಹಾರಿಹೋಗಿ ಸಿಕ್ಕಿ, ಇದ್ದ ಅಲ್ಪ ಜಮೀನು ಸರಕಾರದ ಖಾತೆಗೆ ಸೇರಿತು.
ಹೀಗೆ ಅಂಕೋಲೆಯ “ಧರ್ಮ ಶಾಲೆ ” ಆಶ್ರಯಬೇಡಿಬಂದವರಿಗೆ ತನ್ನ ದೀರ್ಘಸೇವೆ ಸಲ್ಲಿಸಿ, ಕಾಲ ಬದಲಾದಂತೆ ತನ್ನ ಅಂತ್ಯ ಕಂಡಿತು.ನಮಗೆ ಬಾಲ್ಯದ ಪಠ್ಯದಲ್ಲಿದ್ದ “”ತಿರುಕನೋರ್ವ ಊರ ಮುಂದೆ ಮುರುಕು ಧರುಮಶಾಲೆಯಲ್ಲಿ”” ಎಂಬ ಕವಿತೆಯನ್ನು ಹೇಳುವಾಗ ಈ ಧರ್ಮಶಾಲೆಯ ಕಟ್ಟಡವೇ ಕಣ್ಣೆದುರು ಬರುತ್ತಿತ್ತು. ಆದರೆ ನನಗೆ ಆ ಬಾಲ್ಯದ ದಿನಗಳು, ಮುದ್ದು ಪೆದ್ದ ದಿನಗಳು, ಆ ಚಿತ್ರಣಗಳು, ನನ್ನ ನಾಣ್ಯ ಗುರು ಕಣ್ಣನ್…..ಈ ಎಲ್ಲಾ ಚಿತ್ರಗಳು ಮರೆಯಲು ಸಾಧ್ಯವಾಗದಂತೆ ಮನಃಪಠಳದಲ್ಲಿ ಶಾಶ್ವತವಾಗಿ ಅಚ್ಚಾಗಿವೆ.
ಮಾಹಿತಿ ಮತ್ತು ರಚನೆ: ಸುಭಾಶ ನಾರ್ವೆಕರ, ವಕೀಲರು, ಅಂಕೋಲಾ


Leave a Reply