“”ನೆನಪಿನಂಗಳದಿ””
ಆಯುರ್ವೇದ ಪಾಂಡಿತ್ಯದ “ಅಚ್ಯುತ್ ಪಂಡಿತ್ ” ಮತ್ತು ಅವರ ಆಸ್ಪತ್ರೆಗಳು ಹಾಗೂ ನಮ್ಮ ಅಂಕೋಲೆಯ ಕಣ್ಮಣಿಯಾದ ಡಾಕ್ಟರ “ಪ್ರಭಾಕರ ಪಂಡಿತರು “.

ಕೇರಳದ ಸುಪ್ರಸಿದ್ಧ ಆಯುರ್ವೇದ ಪಂಡಿತರಾದ ಅಚ್ಯುತ್ ಪಂಡಿತರು ತಮ್ಮ ಕೈಗುಣ ಹಾಗೂ ಆಯುರ್ವೇದಿಕ ಚಿಕಿತ್ಸಾ ಪದ್ಧತಿಯಿಂದ ನಾಮಾoಕಿತರಾಗಿದ್ದರು. ಅವರ ಖ್ಯಾತಿಯು ಕೇವಲ ಕೇರಳ ರಾಜ್ಯಕ್ಕೆ ಸೀಮಿತವಾಗದೇ, ನಮ್ಮ ಜಿಲ್ಲೆಗೂ ವ್ಯಾಪಿಸಿತ್ತು. ಮುಂದೆ ಅವರ ಮಕ್ಕಳಾದ ಡಾ ಪ್ರಭಾಕರ ಪಂಡಿತರು ಅಂಕೋಲಾದಲ್ಲಿ, ಡಾ ರಾಮದಾಸ ಹಾಗೂ ಡಾ ಸುರೇಶ ಪಂಡಿತರು ಕುಮಟಾದಲ್ಲಿ, ಡಾ ಗಣೇಶ ಸಿದ್ದಾಪುರದಲ್ಲಿ ಹಾಗೂ ಸಂಬಂಧಿ ಡಾ. ದಾಮೋದರ ಇವರು ಹೊನ್ನಾವರದಲ್ಲಿ , “ಅಚ್ಯುತ್ ಪಂಡಿತ ಮೆಮೋರಿಯಲ್ ಆಸ್ಪತ್ರೆಗಳನ್ನು “ಸ್ಥಾಪಿಸಿ, ಜನಸೇವೆ ಆರಂಭಿಸಿ ಕ್ಷಣಾರ್ಧದಲ್ಲಿ ಖ್ಯಾತನಾಮರಾದರು.

ಕೇವಲ ಬೆರಳೆಣಿಕೆಯ ಸರಕಾರಿ ಆಸ್ಪತ್ರೆಗಳಿರುವ ಮತ್ತು ಕ್ವಚಿತ್ತಾಗಿರುವ ಖಾಸಗಿ ವೈದ್ಯರ ಕ್ಲಿನಿಕ್ಕುಗಳ ಕಾಲದಲ್ಲಿ ಈ ಪಂಡಿತ್ ಆಸ್ಪತ್ರೆಗಳು ಸಂಜೀವಿನಿಯಂಥಹ ಔಷಧಿಯನ್ನು ನೀಡಿ, ಆಯುರ್ವೇದ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡಿ ಪ್ರಸಿದ್ಧಿಗೆ ಬಂದಿದ್ದವು. “ಅಚ್ಯುತ್ ಪಂಡಿತ್ ಸ್ಮಾರಕ “
ಚಿಕಿತ್ಸೆಯಾಲಯಗಳು ನಾಡಿನಲ್ಲಿಯೇ ಖ್ಯಾತಿಪಡೆದಿದ್ದವು.
ಮೊದ ಮೊದಲು ಕೇರಳದಿಂದ ಸಂಗ್ರಹಿಸಿ ತಂದ ವಿಶಿಷ್ಟ ಶಕ್ತಿಯ ತೊಗಟೆ, ಸೊಪ್ಪುಗಳು, ದ್ರವ್ಯಗಳು, ತೈಲಗಳು ಇವರ ಔಷಧಿ ತಯಾರಿಕೆಯ ಪ್ರಮುಖ ಭಾಗವಾಗಿರುತ್ತಿತ್ತು. ಕ್ರಮೇಣ ಸ್ಥಳೀಯವಾಗಿಯೂ ಅವುಗಳ ಲಭ್ಯತೆಯ ಅನುಸಾರ ಔಷಧ ತಯಾರಿಸಲಾಗುತ್ತಿತ್ತು. ಈ ಆಸ್ಪತ್ರೆಗಳ ಪ್ರವೇಶ ದ್ವಾರದಲ್ಲಿಯೇ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಔಷಧ ಕುದಿಸುವುದು, ಅರೆಯುವ ಕಲ್ಲುಗಳಲ್ಲಿ ಅರಿಯುವುದು, ತೊಗಟೆ, ಸೊಪ್ಪುಗಳನ್ನು ಪ್ರತ್ಯೇಕಿಸುವುದು ಇತ್ಯಾದಿ ಸತತ ಕಾರ್ಯವನ್ನು ಕಾಣಬಹುದಿತ್ತು. ಅದರಿಂದ ಹೊರಸೂಸುವ ಘಾಟು ಘಮ ಘಮವಂತೂ ವಿಶಿಷ್ಟ ಅನುಭವ ನೀಡುತ್ತಿತ್ತು.

ಅಂಕೋಲೆಯಲ್ಲಿ ಅತೀ ಜನಪ್ರಿಯರಾದ ವೈದ್ಯರುಗಳಲ್ಲಿ, ಡಾಕ್ಟರ ಪ್ರಭಾಕರ ಪಂಡಿತರು ತಮ್ಮ ಸೌಮ್ಯ ಸ್ವಭಾವದಿಂದ ಹಾಗೂ ಕೈಗುಣದಿಂದ ಮಾಂತ್ರಿಕರೆಂದೇ ಖ್ಯಾತಿಯಾಗಿದ್ದರು. ಹಳ್ಳಿಗರಿಗೆ, ಬಡಜನರಿಗೆ ಅವರು ದೇವರಂತಿದ್ದರು. ಅವರು ಬಡವರ ಬಂಧು ಎಂದೂ ಕರೆಯಲ್ಪಡುತ್ತಿದ್ದರು.ಕೊಟ್ಟಸ್ಟನ್ನು, ಮತ್ತೆ ಕೇಳದೇ ಕಿಸೆಗೆ ಸೇರಿಸುವ ಸಭ್ಯರಾಗಿದ್ದರು.ನಂತರದ ದಿನಗಳಲ್ಲಿ ಸ್ಥಳೀಯವಾಗಿ ಔಷಧಿತಯಾರಿಸುವ ಪ್ರಕ್ರಿಯೆ ನಿಂತುಹೋಯಿತು. ಕೇರಳದಿಂದ ಇಲ್ಲವೇ ಕಂಪನಿಗಳಿಂದ ಔಷಧತರಿಸಲಾಗುತ್ತಿತ್ತು. ತಮ್ಮ ಜೀವನದ ಅಂತಿಮದಿನದವರೆಗೂ ಸಹ ಅಂಕೋಲಿಗರಿಗೆ ಅವರ ಸೇವೆ ಅದಮ್ಯವಾಗಿತ್ತು.
ಅದರಂತೆ, ಪಂಡಿತ್ ಡಾಕ್ಟರರು ಉದಾರ ದಾನಿಗಳೂ ಆಗಿ ಯಾವುದೇ ಸತ್ಕಾರ್ಯಕ್ಕೆ ಮನ:ಪೊರ್ವಕವಾಗಿ ತಮ್ಮ ಕೊಡುಗೆ ನೀಡುತ್ತಿದ್ದರು. ನಾನು ಅವರಲ್ಲಿ ಅನೇಕಬಾರಿ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಕೈಚಾಚಿದಾಗ, “ಎಷ್ಟು ನೀಡಲಿ” ಎಂದು ನನ್ನಿಂದಲೇ ಕೇಳಿಸಿ, ನಗುಮುಖದಿಂದಲೇ ಡ್ರಾವರಿಗೆ ಕೈಹಾಕಿ ನೀಡುವ ಆ ವ್ಯಕ್ತಿತ್ವವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ.
ಹೆಚ್ಚಾಗಿ ಮಡಚಿದ ತೋಳಿನ ಶರ್ಟುಗಳಲ್ಲಿ ಮಿಂಚುತ್ತಿದ್ದ, ಗುಂಗುರು ಕೂದಲಿನ, ಗೋಲ್ ಚಷ್ಮಾದ, ಕುತ್ತಿಗೆಗೆ ಸದಾ ಸ್ಟೇಟಸ್ಕೊಪ್ ತೂಗಾಡಿಸುಕೊಳ್ಳುತ್ತಿದ್ದ, ಬೆರಳುಗಳ ತುಂಬಾ ಉಂಗುರುಗಳಿಂದ ಕಂಗೊಳಿಸುತ್ತಿದ್ದ ಪಂಡಿತರದು ಸೌಮ್ಯ ಸ್ವಭಾವ ಮತ್ತು ವಿಶಿಷ್ಟ ವ್ಯಕ್ತಿತ್ವ. ನಾನು ಬಾಲ್ಯದಲ್ಲಿ ನೋಡಿದಂತೆ,ಕಾರಿನಲ್ಲಿ ಓಡಾಡುತ್ತಿದ್ದ ವೈದ್ಯರು ನಂತರ ಜೀಪನ್ನು ಹೊಂದಿ ರೋಗಿಗಳು ಕರೆದಲ್ಲಿ, ಹಗಲಿರಲಿ, ರಾತ್ರಿಯಿರಲಿ ತಕ್ಷಣ ಹೋಗಿ ಉಪಚರಿಸುತ್ತಿದ್ದರು. ಹೀಗೆ ಶಿಸ್ತಿನಿಂದ ಮಿಂಚುತ್ತಿದ್ದ ಪಂಡಿತರ ವಾಹನಕ್ಕೆ ಮೊದಲು ರೋಹಿದಾಸ, ವೆಂಕಪ್ಪಾ ಇವರು ಚಾಲಕರಾಗಿದ್ದು, ನಂತರದ ದಿನಗಳಲ್ಲಿ ಆಯಪ್ಪ ಆಗೇರ ಇವನು ಚಾಲಕನಾಗಿ ನೆರಳಿನಂತಿದ್ದು ಸೇವೆ ಸಲ್ಲಿಸಿದರು.
ಹೀಗೆ ಅಹರ್ನಿಷಿ ಸೇವೆ ಸಲ್ಲಿಸಿದ ಪಂಡಿತರು 11-2-2014 ರಲ್ಲಿ ನಮ್ಮನ್ನಗಲಿದರು.
ನಿನ್ನೆ ಹೀಗೆಯೇ ಕಾರವಾರ ರಸ್ತೆಯಲ್ಲಿ ಸಾಗುತ್ತಿರುವಾಗ ವೈದ್ಯ ಪಂಡಿತರ ಐತಿಹಾಸಿಕ ಆಸ್ಪತ್ರೆ ಕಟ್ಟಡ ನೆಲಸಮವಾಗುತ್ತಿರುವುದನ್ನು ನೋಡಿದಾಗ, ಆ ಗತವೈಭವದ ವೈದ್ಯರ ಸೇವೆಯ ದಿನಗಳು ಕಣ್ಮುಂದೆಹಾದು ಅವರಿಗೆ ಮನದಲ್ಲಿಯೇ ನೆನಪಿಸಿ ಸ್ಮರಿಸಿದೆ. ವೈದ್ಯರುಗಳ ಸೇವೆಯ ಅಂದಿನ ಮತ್ತು ಇಂದಿನ ದಿನಗಳಲ್ಲಿಯ ಚಿಕಿತ್ಸೆಯ ಅಜಗಜಾoತರ ಅಂತರವನ್ನು ಗಮನಿಸಿದಾಗ, ಬದಬಲ್ಲಿದರ ಮನೆ ಬಾಗಿಲಿಗೇ ಬಂದು ಚಿಕಿತ್ಸೆನೀಡುವ ವೈದ್ಯರಿದ್ದರೆಂನ್ನುವುದನ್ನು ಇಂದಿನ ಜನಾಂಗ ನಂಬಲು ಸಾಧ್ಯವಿಲ್ಲ ಅಲ್ಲವೇ? 🙏🏼🙏🏼🙏🏼.
ಮೂಲ ಮಾಹಿತಿ: ಶುಭಾಶ ನಾರ್ವೇಕರ, ವಕೀಲರು, ಅಂಕೋಲಾ


Leave a Reply