ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ನಿತ್ಯವೂ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ, ಕೆಲವು ದೇವಾಲಯಗಳಲ್ಲಿ ದಿನವಿಡೀ ವಿವಿಧ ಸೇವೆಗಳು ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಆದರೆ, ಕಾರವಾರದ ಹಣಕೋಣದಲ್ಲಿರುವ ದೇವಾಲಯದಲ್ಲಿ ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ಬಾಗಿಲು ತೆರೆದು ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಹೌದು, ಇಂತಹದೊಂದು ವಿಭಿನ್ನ ದೇವಾಲಯ ಕಾರವಾರದ ಹಣಕೋಣದಲ್ಲಿ ಇದೆ. ಸಾತೇರಿ ದೇವಿ ಎಂದೇ ಕರೆಸಿಕೊಳ್ಳುವ ಈ ದೇವಾಲಯದಲ್ಲಿ ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ಪೂಜೆ ನಡೆಯುತ್ತದೆ. ಸಾತೇರಿ ದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರವೇ ಭಕ್ತರಿಗೆ ದರ್ಶನ ನೀಡುವ ಸಂಪ್ರದಾಯವಿದೆ.
ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ದರ್ಶನಕ್ಕೆ ಅವಕಾಶವಿರುವ ಈ ಸಾತೇರಿ ದೇವಿಗೆ ಒಂದು ಪೌರಾಣಿಕ ಇತಿಹಾಸವೂ ಇದೆ. ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯದ ಅಗತ್ಯವಿದ್ದಲ್ಲಿ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನು ನಿವಾರಿಸುತ್ತಿದ್ದಳು ಎನ್ನಲಾಗಿದೆ.

ಆಡಳಿತ ಮಂಡಳಿ ಸದಸ್ಯರ ಅಭಿಪ್ರಾಯ: ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನು ಬಾಚಿಕೊಳ್ಳುತ್ತಿದ್ದಾಗ, ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿತ್ತಂತೆ. ಅವನು ದೇವಿಯನ್ನು ತನ್ನವಳನ್ನಾಗಿಸಿಕೊಳ್ಳಲು ಬಂದಾಗ, ಆಕೆ ತನ್ನ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ, ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು, ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಗುಡಿ ಕಟ್ಟಿಸಿಕೊಡುವಂತೆ ಹೇಳಿದ್ದಳಂತೆ. ಅಲ್ಲದೆ, ವರ್ಷದಲ್ಲಿ ಏಳು ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ.
ದೇವಿಯ ಆದೇಶದಂತೆ ಈ ಜಾಗದಲ್ಲಿ ಚಿಕ್ಕ ಗುಡಿಯನ್ನು ಕಟ್ಟಲಾಯಿತು. ಇತಿಹಾಸದ ಪ್ರಕಾರ, ಇಲ್ಲಿಯವರೆಗೂ ನಂದನ ನಾಮ ಸಂವತ್ಸರ, ಭಾದ್ರಪದ ಮಾಸ, ಶುಕ್ಲ ಪಕ್ಷದಂದು ಸಾತೇರಿ ದೇವಿಯ ದೇವಸ್ಥಾನದ ಬಾಗಿಲು ತೆರೆದು ಏಳು ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ದೊರಕಿಸಿಕೊಡಲಾಗುತ್ತದೆ ಎಂದು ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಹೇಳುತ್ತಿದ್ದಾರೆ.
ಫೋಟೋ, ವಿಡಿಯೋ ತೆಗೆದರೆ ತಟ್ಟುವ ಶಾಪ: ಇನ್ನು ವರ್ಷಕ್ಕೆ ಏಳು ದಿನ ಮಾತ್ರ ದರ್ಶನ ಸಿಗುವ ಈ ದೇವಿಯ ಭಾವಚಿತ್ರವನ್ನು ಮಾರಾಟ ಮಾಡುವುದಾಗಲಿ, ಮೊಬೈಲ್ ಅಥವಾ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿಕೊಳ್ಳುವುದಕ್ಕಾಗಲಿ ದೇವಸ್ಥಾನದಲ್ಲಿ ಅವಕಾಶವಿಲ್ಲ. ಯಾರಾದರೂ ಫೋಟೋ ತೆಗೆದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಎನ್ನುವ ನಂಬಿಕೆಯಿದೆ. ದೇವಿಯ ದರ್ಶನಕ್ಕಾಗಿ ರಾಜ್ಯದಿಂದ ಮಾತ್ರವಲ್ಲದೆ, ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದು ವಿಶೇಷ.
ಜಾತ್ರಾ ದಿನದಂದು ಸರದಿ ಸಾಲಿನಲ್ಲಿ ನಿಂತು ಸಾತೇರಿ ದೇವಿಯನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಚಿನ್ನಾಭರಣಗಳಿಂದ ಕಂಗೊಳಿಸುವ ಮಾತೆಯ ಕಾಂತಿ ಭಕ್ತರನ್ನು ಮೂಕ ವಿಸ್ಮಿತರನ್ನಾಗಿ ಮಾಡುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಭಕ್ತರು ದೇವಿಗೆ ಭಕ್ತಿಯಿಂದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ನೀಡುವುದೂ ಉಂಟು. ಆದರೆ, ಕಾಣಿಕೆಯಾಗಿ ಬಂದ ಚಿನ್ನಾಭರಣವನ್ನು ಸವಾಲು ಹಾಕುವ ಮೂಲಕ ಇತರ ಭಕ್ತರು ದೇವಿಯ ಚಿನ್ನಾಭರಣ ಪಡೆಯಲು ಅವಕಾಶವಿದೆ.

ಜಾತ್ರಾ ದಿನದಂದು ವಿಶೇಷವಾಗಿ ಮಹಿಳೆಯರು ದೇವಿಗೆ ಉಡಿ ತುಂಬುವುದು ವಾಡಿಕೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ನೆಚ್ಚಿನ ಸಾತೇರಿ ದೇವಿಗೆ ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಉಡಿ ತುಂಬುವ ಮೂಲಕ ಭಕ್ತಿಯನ್ನು ಮೆರೆಯುತ್ತಾರೆ.

ಜಾತ್ರಾ ಮಹೋತ್ಸವಕ್ಕೆ ಮೊದಲು ಕುಳಾವಿ ಸಮುದಾಯದ ಮಾತೆಯರು ಮತ್ತು ಕುವರಿಯರಿಂದ ಅಡಿಕೆ, ಹಾಗೂ ಪುರುಷರಿಂದ ತಳಯ ಸಲ್ಲಿಸಲಾಗುತ್ತದೆ. ನಂತರವಷ್ಟೇ ಸಾತೇರಿ ದೇವಿಯ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಭಜನೆ ಮತ್ತು ಅನ್ನ ಪ್ರಸಾದ ವಿತರಣೆ ನಡೆಯುತ್ತದೆ. ಏಳನೇ ದಿನದಂದು ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ.


Leave a Reply