ANKOLA-CULTURE HISTORY AND ECOLOGY Facebook ಗ್ರೂಪನಲ್ಲಿ ಕಾವಿಕಲೆಯ ಕುರಿತ ಸಂಗತಿಗಳನ್ನು ಹಲವು ಸಲ ಹಂಚಿಕೊಂಡಿದ್ದಿದೆ. ಕಾವಿಕಲೆಯು ಅವನತಿಯ ಅಂಚಿನಲ್ಲಿದೆ ಎಂಬ ಚಿಂತೆಯನ್ನೇ ವ್ಯಕ್ತಪಡಿಸಿದೆವು. ಆದರೆ ಈಗ ಕಾವಿಕಲೆಯ ಪುನರುಜ್ಜೀವನದ ಸುದ್ದಿ ನಿಜಕ್ಕೂ ಹರ್ಷದಾಯಕವಾಗಿ ಬಂದಿದೆ. ನವರಾತ್ರಿಯಲ್ಲಿ ಅವರ್ಸೆಯ ಶ್ರೀಕಾತ್ಯಾಯಿನಿ ಬಾಣೇಶ್ವರ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಮೇಲ್ಛಾವಣಿ ಹಾಗೂ ಮುಂಭಾಗದಲ್ಲಿ ಕಾವಿ ಚಿತ್ತಾರಗಳನ್ನು ಪುನಃ ರಚಿಸಿರುವುದು ಕಂಡಿತು. ದೇವಸ್ಥಾನದ ಆಡಳಿತ ಮಂಡಳಿಯ ತೀವ್ರತರವಾದ ಕಾಳಜಿಯ ಪರಿಣಾಮ ಅಲ್ಲಿಯ ಗೋಡೆ ಹಾಗೂ ಮೇಲ್ಛಾವಣಿಯಲ್ಲಿ ತರಹೇವಾರಿ ಬಣ್ಣಗಳಿಂದ ಹಾಳಾಗಿದ್ದ ಕಾವಿ ಚಿತ್ತಾರಗಳು ಮರಳಿ ಬರುತ್ತಿವೆ.

ಈ ಕಲಾಮಾಧ್ಯಮದ ಬಗ್ಗೆ ಇದ್ದ ಏಕೈಕ ಪುಸ್ತಕವೆಂದರೆ ಡಾ.ಕೃಷ್ಣಾನಂದ ಕಾಮತರ “ಕಾವಿಕಲೆ” (ಕರ್ನಾಟಕ ಲಲಿತಕಲಾ ಅಕಾಡೆಮಿ, 1993) ಅದರ ಕೊಂಕಣಿ (ಕನ್ನಡ ಲಿಪಿ) ಅನುವಾದವೂ ಇದೆ (ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರ 2000) ದೇವನಾಗರೀ ಲಿಪಿಯಲ್ಲಿ “ಕೊಂಕಣ್ಯಾಲೀ ಕಾವಿಕಲಾ” (ಗೋವ ಕೊಂಕಣಿ ಅಕಾದೆಮಿ). ಕೆಲವು ಅಪೂರ್ಣ ಬಿಡಿಲೇಖನಗಳು.
ಈ ವರ್ಷ ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದಡಿ ಶ್ರೀಯುತ ಹಾವಂಜೆ ಜನಾರ್ದನ ಅವರ ಹಲವಾರು ವರ್ಷಗಳ ಅಧ್ಯಯನ ಮತ್ತು ಕ್ಷೇತ್ರಕಾರ್ಯದ ಫಲಸ್ವರೂಪ ಮಂಗಳೂರು ವಿಶ್ವವಿದ್ಯಾಲಯಕ್ಕೆ ಅವರು ಸಲ್ಲಿಸಿದ ಕಾವಿಕಲೆ ಕುರಿತ ಸಂಶೋಧನ ಸಂಪ್ರಬಂಧಕ್ಕೆ ಡಾಕ್ಟರೇಟ್ ಸಂದಿರುವುದು ಅಭಿನಂದನೀಯ ಸಂಗತಿ. ಕರ್ನಾಟಕ, ಗೋವೆ, ಮಹಾರಾಷ್ಟ್ರದ ಕರಾವಳಿಯಲ್ಲಿ ವ್ಯಾಪಕ ಸಂಚಾರ ಕೈಗೊಂಡು ಕಾವಿಕಲೆಯು ಉಳಿದುಕೊಂಡಿರುವ ಕಟ್ಟಡಗಳನ್ನು ಪರಿಶೀಲಿಸಿದ್ದಷ್ಟೇ ಅಲ್ಲದೆ ಈ ಕಲಾಪ್ರಕಾರದಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ. ಹತ್ತು ಜನ ಕಲಾವಿದರು ಮತ್ತು ಹನ್ನೆರಡು ಮೇಸ್ತ್ರಿಗಳ ತಂಡವನ್ನು ಸಂಘಟಿಸಿ ದೇವಸ್ಥಾನಗಳ ಕಾವಿಕಲೆಯ ಚಿತ್ತಾರಗಳನ್ನು ಪುನರ್ರಚಿಸುವ ಕಾರ್ಯವನ್ನು ಕೈಗೊಳ್ಳಲು ಸಿದ್ಧರಾಗಿದ್ದಾರೆ.

ಅವರ್ಸೆಯ ಕಾತ್ಯಾಯಿನಿ-ಬಾಣೇಶ್ವರ ದೇವಾಲಯದ ಕಾವಿಕಲೆಯ ಪುನರುತ್ಥಾನದ ರೂವಾರಿಗಳು ಇವರೇ. ಈ ಕಾರ್ಯಕ್ಕೆ ಅನುಕೂಲ ಒದಗಿಸಿದ ದೇವಸ್ಥಾನದ ಆಡಳಿತ ಮಂಡಳಿಯ ಕಲಾಭಿರುಚಿಯೂ ಅಭಿನಿಂದನೀಯವಾಗಿದೆ. ತಮ್ಮ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಕಾವಿಕಲೆಯ ಕೆಲಸವನ್ನು ಹಿಂದಿನ ಶತಮಾನದಲ್ಲಿ ನಿರ್ವಹಿಸುತ್ತಿದ್ದ ಕಲಾವಿದರ ಕುಟುಂಬಗಳನ್ನು ಗುರುತಿಸಿ ಸಂಪರ್ಕಿಸಿದ್ದಾರೆ. ಈ ಗ್ರೂಪನಲ್ಲಿ ಹಂಚಿಕೊಂಡ ಕಾವಿಚಿತ್ರಗಳಿಗೆ ಜನಾರ್ದನರಾಯರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರುತ್ತ ಹಲವು ಸಲ ಫೋನನಲ್ಲಿ ಸಂಪರ್ಕಿಸಿ ವಿವರ ಪಡೆಯುತ್ತಿದ್ದರೂ ಅವರಿಗೆ ಸಾಕಷ್ಟು ಸಹಾಯ ಒದಗಿಸಲಿಕ್ಕಾಗದ ಬೇಸರ ಇದ್ದೇ ಇದೆ.

ಕಾವಿಕಲೆಗೆ ಬಳಸುವ ಪರಿಕರಗಳು ಕರಾವಳಿಯಲ್ಲೇ ಸ್ಥಳೀಯವಾಗಿ ಲಭ್ಯವಾಗುವಂತಹವು. ಕಪ್ಪೆಚಿಪ್ಪು(ಸಿಂಪಿ, ಚಿಪ್ಪಿ)ಗಳನ್ನು ಸುಟ್ಟು ತಯಾರಿಸಿದ ಸುಣ್ಣಕ್ಕೆ ಹುಳಿಬೆಲ್ಲ, ಮರಳು ಬೆರೆಸಿ ಹದಿನೈದು ದಿನ ಕೊಳೆ ಹಾಕಿದ ಬಳಿಕ ಒರಳಿನಲ್ಲಿ ಕುಟ್ಟಿ ಹದಗೊಳಿಸಿ ಮುರಕಲ್ಲಿನ ಗೋಡೆಗೆ ಗಿಲಾವು ಮಾಡಿದ ಗಾರೆಯನ್ನು ಗೋಡೆಯ ಮೇಲೆ ಒರಟಾಗಿ ಬಳಿದು, ಅದು ಒಣಗಿದ ಬಳಿಕ, ಮತ್ತೆ ನುಣುಪಾಗಿ ಗಿಲಾವು ಮಾಡಬೇಕು ಹಾಗೂ ಮುರ(ಚಿರೆ)ಕಲ್ಲು ಗಣಿಯಲ್ಲಿ ದೊರೆಯುವ ನಯವಾದ ಹುಡಿಯಿಂದ ಮಾಡಿದ ಕೆಂಪು ಕಾವಿ (ಉರಿಮಂಜಿ) ಜೊತೆ ಬಿಲ್ವಕಾಯಿಯ ಅಂಟು, ಲೋಳೆಸರ, ಕಾಚು ಮತ್ತಿತರ ವಸ್ತುಗಳನ್ನು ಸೇರಿಸಿ ಗಾರೆಯ ಜೊತೆ ಗಿಲಾವು ಮಾಡಬೇಕು. ಈ ಕಾವಿ ಗಾರೆಯು ಹಸಿಯಾಗಿರುವಂತೆಯೇ ದಬ್ಬಣದಂತಹ ಎಚ್ಚಣೆಯ ಚಾಣದಿಂದ ಕಾವಿ ಗಿಲಾವಿನ ಮೇಲೆ ಚಿತ್ರ ಬರೆಯಬೇಕು. ಹಿಂದಿನ ಕಾಲದಲ್ಲಿ ಈ ಚಿತ್ರರಚನೆಯ ಕೆಲಸವನ್ನು ಗುಡಿಗಾರರು ಮಾಡುತ್ತಿದ್ದರು. ಅವರ ಸಂಯೋಜನೆಯಲ್ಲಿ ಜ್ಯಾಮಿತೀಯ ವರ್ತುಳಗಳು, ಎಲೆಬಳ್ಳಿಯ ಚಿತ್ತಾರ, ನಾಗಬಂಧ ಹಾಗೂ ದಶಾವತಾರ ದೃಶ್ಯಗಳು ಸುಂದರವಾಗಿ ಮೂಡಿಬರುತ್ತಿದ್ದವು. ಕಾವಿಕಲೆಯ ನಿರ್ದಿಷ್ಟವಾದ ಶೈಲಿ ಅದನ್ನು ಆಕರ್ಷಕ ಕಲಾಮಾಧ್ಯಮವನ್ನಾಗಿಸಿದೆ.

ಇದುವರೆಗೆ ಕಾವಿಕಲೆಯ ದೇವಸ್ಥಾನಗಳಿಗೆ ಕಲಾ ವಿದ್ಯಾರ್ಥಿಗಳನ್ನು ಕರೆತಂದು ಅವುಗಳ ಪ್ರತಿಗಳನ್ನು ಕಾಗದದ ಮೇಲೆ ಮೂಡಿಸುವ ಕಾರ್ಯಾಗಾರಗಳ ಬಗ್ಗೆ ಕೇಳಿದ್ದೇವೆ. ಆದರೆ ಅವರ್ಸೆಯ ಈ ದೇವಾಲಯದಲ್ಲಿ ಕೈಗೊಂಡ ಕಾರ್ಯದಿಂದ ಕಾವಿಕಲೆಯ ಪ್ರತ್ಯಕ್ಷದರ್ಶಿ ಕಾರ್ಯಾಗಾರ ನಡೆಸುವುದು ಸಾಧ್ಯ. ನಮ್ಮ ಕಡೆಯ ಇತರ ದೇವಸ್ಥಾನಗಳ ಕಾವಿ ಚಿತ್ತಾರಗಳ ಕಾಯಕಲ್ಪಕ್ಕೆ ಆಸಕ್ತ ಪ್ರಾಯೋಜಕರು ಮುಂದೆ ಬರಬಹುದೆಂಬ ಅಪೇಕ್ಷೆ ಇದೆ.

ಸಂಪರ್ಕಿಸುವ ವಿಳಾಸ: ಡಾ. ಜನಾರ್ದನ ಹಾವಂಜೆ: “ಕಾವಿ ಭಿತ್ತಿ”, ಕಾವಿ ಆರ್ಟ ರೀಸರ್ಚ ಸೆಂಟರ್ , ಭಾಸ ಗ್ಯಾಲರಿ ಆಂಡ್ ಸ್ಟುಡಿಯೋ, ಹಾವಂಜೆ, ಬ್ರಹ್ಮಾವರ, ಉಡುಪಿ- 576124. ಮೊಬೈಲ್ ಸಂಖ್ಯೆ- 9845650544.
ಮಾಹಿತಿ, ರಚನೆ: ನಂದನ್ ಐಗಳ್


Leave a Reply