
*ಚೊಚ್ಚಲ “ದಿನಕರಶ್ರೀ” ಪ್ರಶಸ್ತಿ ವಿಜೇತ ನಾಟಿ ವೈದ್ಯ ಹನುಮಂತ ಬೊಮ್ಮು ಗೌಡ*
ಬೆಳಂಬಾರ ಎಂದೊಡನೆ ತಕ್ಷಣ ನೆನಪಾಗುವುದು ಇಲ್ಲಿಯ ಪಾಶ್ವವಾಯುವಿಗೆ ನೀಡುವ ಔಷಧ. ಸುಮಾರು ೨೦೦ ವರ್ಷಗಳ ಇತಿಹಾಸ ಹೊಂದಿರುವ ಈ ನಾಟಿ ಔಷಧದ ಖ್ಯಾತಿಯಿಂದಲೇ ವಿಶ್ವದ ಭೂಪಟದಲ್ಲಿ ಬೆಳಂಬಾರ ಎಂಬ ಗ್ರಾಮ ಗುರುತಿಸಿಕೊಂಡಿದೆ. ದೇಶವಿದೇಶಗಳಿಂದಲೂ ಅದೇಷ್ಟೂ ಜನ ಪಾಶ್ವವಾಯುವಿಗೆ ಒಳಗಾದವರು ಇಲ್ಲಿಗೆ ಬಂದು ಗುಣಮುಖರಾಗಿದ್ದಾರೆ. ಪ್ರಸ್ತುತ ಈ ನಾಟಿ ವೈದ್ಯ ಪದ್ಧತಿಯ ನಾಲ್ಕನೇ ತಲೆಮಾರಿನವರಾದ ವೈದ್ಯ ಶ್ರೀ ಹನುಮಂತ ಬೊಮ್ಮು ಗೌಡ ಅವರು ಮುಂದುವರೆಸಿದ್ದಾರೆ.


ವೈದ್ಯ ಬೊಮ್ಮು ಶಿವು ಗೌಡ ಹಾಗೂ ಸಣ್ಣಮ್ಮ ಬೊಮ್ಮು ಗೌಡ ದಂಪತಿಗಳ ಎರಡನೇ ಮಗನಾಗಿ ೨೮-೦೩-೧೯೬೩ ರಲ್ಲಿ ಜನಿಸಿದ ಶ್ರೀಯುತ ಹನುಮಂತ ಬೊಮ್ಮು ಗೌಡ ಅವರೇ ನಾಲ್ಕನೇ ತಲೆಮಾರಿನವರಾಗಿದ್ದು ವಂಶಪಾರಂಪರ್ಯವಾಗಿ ಬಂದ ಈ ನಾಟಿ ವೈದ್ಯ ಪದ್ದತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.



ಹನುಮಂತ ಗೌಡ ಅವರು ಎಸ್. ಎಸ್. ಎಲ್. ಸಿ. ಯ ನಂತರ ಬೆಂಗಳೂರಿನಲ್ಲಿ ಮೂರು ವರ್ಷದ ಆಯುರ್ವೇದಿಕ್, ಯುನಾನಿ ತರಬೇತಿಯನ್ನು ಪಡೆದಿರುವ ಇವರು ವೈಜ್ಞಾನಿಕ ಪದ್ದತಿಯ ಮೂಲಕವೇ ತೈಲ, ಸೊಪ್ಪಿನ ಔಷಧದ ಜೊತೆಗೆ ಆಯುವೇ೯ದ ಮಾತ್ರೆಯನ್ನು ಕೂಡ ನೀಡುತ್ತಾರೆ. ತಂದೆ ಬೊಮ್ಮು ಗೌಡರ ಕಾಲದಲ್ಲಿ ನಿರ್ಮಾಣಗೊಂಡ *ಆರೋಗ್ಯಧಾಮ* ದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ. ಇಲ್ಲಿ ಹನುಮಂತ ಗೌಡರು ಗಿಡಮೂಲಿಕೆಯ ಔಷಧದ ಜೊತೆಗೆ ಶಾರೀರಿಕ ವ್ಯಾಯಾಮಕ್ಕಾಗಿ ಅನೇಕ ಹೊಸ ವೈಜ್ಞಾನಿಕ ಸಾಧನಗಳನ್ನು ಜೋಡಿಸಿದ್ದಾರೆ. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪಾಶ್ವವಾಯು ರೋಗಿಗಳು ಇಲ್ಲಿಗೆ ಬಂದು ಔಷದೋಪಚಾರಗಳನ್ನು ಪಡೆದುಕೊಳ್ಳುತ್ತಾರೆ.

ಕೇವಲ ನಾಟಿ ವೈದ್ಯರಾಗಿ ಮಾತ್ರವಲ್ಲದೆ ಹನುಮಂತ ಗೌಡ ಅವರು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಲವಾರು ವಷ೯ಗಳಿಂದ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿರುವ ಇವರು ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹೊನ್ನೆಬೈಲ್ ದೇವಾಲಯದ ಕೋಶಾದ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ. ಸಾರಾಯಿ ವಿರೋಧಿ ಆಂದೋಲನದಲ್ಲಿ , ಹಿಂದುಳಿದ ವರ್ಗಗಳ ಆಯೋಗದ ವಿಭಾಗಗಳ ಸದಸ್ಯರಾಗಿ , ವೆಸ್ಟರ್ನ್ ಗಾರ್ಡ ಪೊರೆಸ್ಟ ಪ್ರೊಡೆಕ್ಟ ಸದಸ್ಯರಾಗಿ , ಜೆ.ಸಿ. ಕ್ಲಬ್ ಸದಸ್ಯರಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದವರು. ಪ್ರತಿಭಾ ಪುರಸ್ಕಾರದ ಮೂಲಕ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ವಿವಿಧ ಹಂತಗಳಲ್ಲಿ ಬೆಂಗಳೂರು ಮತ್ತು ದೆಹಲಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಹೆಚ್ಚು ಶ್ರಮಿಸುತ್ತಿದ್ದಾರೆ.

ಶ್ರೀಯುತ ಹನುಮಂತ ಗೌಡ ಅವರ ಸಮಾಜಮುಖಿ ಕಾರ್ಯಗಳನ್ನು ಹಾಗೂ ವೈದ್ಯಕೀಯ ರಂಗದಲ್ಲಿ ಮಾಡಿದ ಸೇವೆಯನ್ನು ಗಮನಿಸಿ ಅನೇಕ ಪ್ರಶಸ್ತಿಗಳು ಇವರನ್ನರಸಿ ಬಂದಿವೆ. ವಿವಿಧ ಸಂಘ ಸಂಸ್ಥೆಯವರು ಹಲವಾರು ಬಿರುದು ಸನ್ಮಾನಗಳನ್ನು ನೀಡಿ ಗೌರವಿಸಿದ್ದಾರೆ. ೨೦೦೧ ರಲ್ಲಿ ಜೆಲ್ಲಾ ಯುವ ಪ್ರಶಸ್ತಿ, ೨೦೦೫ ರಲ್ಲಿ ದೆಹಲಿಯಲ್ಲಿ ಫೆಲೋಶಿಪ್ ಪ್ರಶಸ್ತಿ, ೨೦೦೫ ರಲ್ಲಿ ದೆಹಲಿಯಲ್ಲಿ ವೈದ್ಯರತ್ನ ಪ್ರಶಸ್ತಿ ಗೂ ಭಾಜನರಾಗಿದ್ದಾರೆ. ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ *ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ* ಯು ೨೦೧೪ ರಲ್ಲಿ ಶ್ರೀಯುತರಿಗೆ ದೊರಕಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತ ದಿನಕರ ವೇದಿಕೆ ಉತ್ತರ ಕನ್ನಡ ಇವರು ಕೊಡುವ ಚೊಚ್ಚಲ *ದಿನಕರ ಶ್ರೀ* ಪ್ರಶಸ್ತಿ ಶ್ರೀ ಹನುಮಂತ ಬೊಮ್ಮು ಗೌಡ ಇವರಿಗೆ ದೊರಕಿರುವುದು ಅಭಿನಂದನಾರ್ಹವಾಗಿದ್ದು ಶ್ರೀಯುತರ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿದೆ.

ಹಾಲಕ್ಕಿ ಒಕ್ಕಲು ಜನಾಂಗದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುವ ಡಾ. ದಿನಕರ ದೇಸಾಯಿ ಅವರು ಶೈಕ್ಷಣಿಕ, ಸಾಮಾಜಿಕ, ಆಥಿ೯ಕ ಮತ್ತು ರಾಜಿಕೀಯವಾಗಿ ಸಾಧನೆಯನ್ನು ಮಾಡುವಂತಾಗಲಿ ಎಂಬ ಆಶಯ ಹೊಂದಿದರು. ವಿಶೇಷತೆ ಎಂದರೆ ದಿನಕರ ವೇದಿಕೆ ಉತ್ತರ ಕನ್ನಡ ಇವರು ಕೊಡುವ ಚೊಚ್ಚಲ ದಿನಕರ ದೇಸಾಯಿ ಅವರ ಹೆಸರಿನಿಂದ ನೀಡುವ “ದಿನಕರಶ್ರೀ ಪ್ರಶಸ್ತಿ “ ಹಾಲಕ್ಕಿ ಒಕ್ಕಲು ಜನಾಂಗದಿಂದ ಬಂದು ಸಾಧನೆಗೈದಿರುವ ವೈದ್ಯ ಹನುಮಂತ ಬೊಮ್ಮು ಗೌಡ ಇವರಿಗೆ ಒಲಿದು ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಶ್ರೀ ಹನುಮಂತ ಬೊಮ್ಮು ಗೌಡ ಅವರ ಜನಪರ ಹೋರಾಟ, ಸಮಾಜ ಸೇವೆ, ವೈದ್ಯಕೀಯ ಸೇವೆ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ಇನ್ನಷ್ಟು ಬಿರುದು, ಪ್ರಶಸ್ತಿಗಳು ಇವರ ಮುಡಿಗೇರಲಿ ಎಂದು ಆಶಿಸುತ್ತೇವೆ.
ಮಾಹಿತಿ ಸಂಗ್ರಹಣೆ ಮತ್ತು ರಚನೆ: ಅಕ್ಷತಾ ಜಗದೀಶ್ (ಸಮಯಾ)


Leave a Reply