ಜೋಯಿಡಾ: ಬ್ರಿಟೀಷರ ವಿರುದ್ಧ ಸ್ವಾತಂತ್ರ ಸಂಗ್ರಾಮ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕುಣಬಿಗಳ ಪರಿಶಿಷ್ಟ ಪಂಗಡದ ಹೋರಾಟಗಾರ ಮತ್ತು ಎರಡು ಗ್ರಾಮದ ಮಾಜಿ ಪೊಲೀಸ್
ಪಟೇಲ್, ಮಾವಿನ ಎಲೆ ನೋಡಿ ಪಂಚಾಂಗ ಹೇಳುವ ಕುಣಬಿಗರ ಜ್ಯೋತಿಷಿ. ಅಜ್ಜ ಲಕ್ಷ್ಮಣ ಕುಷ್ಠ ವೆಳಿಪರಿಗೆ ಇದೀಗ 116 ವರ್ಷ.
1905 ರಲ್ಲಿ ಜೋಯಿಡಾ ತಾಲೂಕಿನ ಕರಂಜೋಯಿಡಾ ಗ್ರಾಮದ ಪೈಸೋಡಾ ಗ್ರಾಮದಲ್ಲಿ ಜನಿಸಿದ ಲಕ್ಷ್ಮಣ ಕುಣಬಿ ಶಿಕ್ಷಣದಿಂದ ದೂರ ಉಳಿದರೂ ಸಾಮಾಜಿಕ ಕಾರ್ಯದಲ್ಲಿ ಎಂದು ಹಿಂದೆ ಉಳಿದವರಲ್ಲ. 1930 ರಲ್ಲಿ ಬ್ರಿಟೀಷರ ವಿರುದ್ಧ ದೇಶಾದ್ಯಂತ ಉಪ್ಪಿನ ಸತ್ಯಾಗ್ರಹ ಚಳುವಳಿ ನಡೆಯುತಿದ್ದಾಗ ಕುಂಬಾರವಾಡಾದಲ್ಲಿ ಬ್ರಿಟೀಷರ ವಿರುದ್ದ ಮತ ಚಲಾಯಿಸಿದ ಕುಣಬಿಗಳಲ್ಲಿ ಇವರು ಪ್ರಮುಖರು. ಗಾಂಧೀಜಿಯವರು ಆಂಕೋಲಾಕ್ಕೆ ಬಂದು ಸ್ವಾತಂತ್ರ ಸಂಗ್ರಾಮದ ಚಳುವಳಿಗೆ ನಾಂದಿ ಹಾಡಿದಾಗ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಕುಣಬಿ ಮೊದಲಿಗರಾದ ಇವರು ಇಂದಿಗೂ ಆ ದಿನವನ್ನು ನೆನಪಿಸುತ್ತಾರೆ.
ಸುಮಾರು 20 ವರ್ಷಕ್ಕೂ ಹೆಚ್ಚು ವರ್ಷಗಳಕಾಲ ಜೋಯಿಡಾ
ತಾಲೂಕಿನ ಪಣಸಖಂಡ ಹಾಗೂ ಕರಂಜೋಯಿಡಾ ಗ್ರಾಮದ ಪೊಲೀಸ್ ಪಟೇಲರಾಗಿ ಭೂ ಚಳುವಳಿಯಲ್ಲಿ ಪಾಲ್ಗೊಂಡು ಧ್ವನಿ ಇಲ್ಲದವರ ಪರವಾಗಿ ನಿಂತಿದ್ದರು. ಅನೇಕರಿಗೆ ಜಮಿನು ಮಂಜೂರಿ, ಕುಮರಿ, ಕಾಡಿನ ಕಿರು ಉತ್ಪನ್ನಕ್ಕಾಗಿ ಸರಕಾರದ ವಿರುದ್ಧ ಧ್ವನಿ ಎತ್ತಿದ ಮೊದಲಿಗರು. ಆದರೆ ಈಗ ಪೊಲೀಸ್ ಪಟೇಲರಿಗೆ ನೀಡುವ ಗೌರವ ಧನ ಸರಿಯಾಗಿ ಸಿಗದೇ ತಹಶೀಲ್ದಾರ ಕಾರ್ಯಾಲಯ ಸುತ್ತುವಂತಾಗುತ್ತದೆ ಎಂದು ಬೇಸರದಿಂದಲೇ ಹೇಳುತ್ತಾರೆ.
1983-84 ರಲ್ಲಿ ಸೂಪಾ ಜಲಾಶಯದಿಂದ ತಾಲೂಕಿನ 40 ಹೆಚ್ಚು ಗ್ರಾಮಗಳು ಮುಳುಗಿದಾಗ ಇವರು ವಾಸವಿದ್ದ ಪೈಸೋಡಾ ಗ್ರಾಮವು ಮುಳುಗಡೆ ವ್ಯಾಪ್ತಿಯಲ್ಲಿ ಬರುತಿತ್ತು. ಆಗ ಸೂಪಾದಲ್ಲಿ ಜನರು ಮುಳುಗಿ ನಿರಾಶ್ರಿತರಾದರೆ ಬುಡಕಟ್ಟು ಕುಣಬಿಗಳು ಸಂಸ್ಕೃತಿಯಿಂದ ವಂಚಿತರಾಗುತ್ತಾರೆ ಎಂದು ಧ್ದನಿ ಎತ್ತಿದ್ದರು. ಜಲಾಶಯ ಕಟ್ಟಿ ಯಾರನ್ನೂ ನೀರಾಶ್ರಿತರಂತೆ ಮಾಡಬಾರದೆಂದು ಹೋರಾಟ ರೂಪಿಸಿದ್ದು ಅದಕ್ಕೆ ಅನೇಕರು ಧ್ವನಿಗೂಡಿಸಿದ್ದನ್ನು ನೆನಪಿಸುತ್ತಾರೆ.
ಅಜ್ಜ ಲಕ್ಷ್ಮಣರನ್ನು ಕುಣಬಿಗಳ ಸಂತ ಎಂದೇ ಕರೆಯಲಾಗುತ್ತದೆ. 116 ವರ್ಷ ಕಳೆದರೂ ಇಂದಿಗೂ ಮಾವಿನ ಎಲೆಯ ಮೇಲೆ ಪಂಚಾಂಗವನ್ನು ನೋಡುತಿದ್ದಾರೆ. ವರ್ಷದಲ್ಲಿ ಹತ್ತಾರು ಜನರ ಪಂಚಾಂಗ ನೋಡಿ ಗಂಡು ಹೆಣ್ಣುಗಳ ಸಂಬಂಧ ಜೋಡಿಸುವ ಕುಣಬಿ ಸಂಸ್ಕೃತಿಯ ಪ್ರತಿರೂಪವಾಗಿ ಇಂದಿಗೂ ಕಾಣುತ್ತಾರೆ.
ಸಣ್ಣ ಮಕ್ಕಳಿಗೆ ದೃಷ್ಟಿ ದೋಷವಾದಾಗ ಕಪ್ಪು ಮತ್ತು ಕೆಂಪು ದಾರವನ್ನು ಕುಣಬಿ ಪದ್ಧತಿಯಲ್ಲಿ ಮಾಡಿಕೊಡುತಿದ್ದಾರೆ. ಕಾಡಿನ ಕೆಲ ನಾಟಿ ಔಷಧಗಳನ್ನು ನೀಡುತ್ತಾರೆ. ನಾಗೋಡಾ ಕ್ರಾಸ್ ಕೃಷ್ಣ ಉತ್ಸವ ಸಮಿತಿಯವರು ಅಜ್ಜ ಲಕ್ಷಣ ಕುಷ್ಠ ವೆಳಿಪರಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಮಾಹಿತಿ ಮೂಲ: ಕರಾವಳಿ ಮುಂಜಾವು


Leave a Reply