
ಕಾರವಾರಿಗರ ಮತ್ತು ಗೋವನ್ನೆಯರ ಸ್ನೇಹ, ಬಾಂಧವ್ಯ ಹಾಗೂ ವ್ಯವಹಾರಿಕ ಸಂಭಂದಗಳ ಬೆಸುಗೆ ಕಾಳಿ ನದಿಯ ಕೊಡಿಬಾಗ್ ಬ್ರಿಡ್ಜ್ ಅಂದರೆ ತಪ್ಪಾಗಲಾರದು. ಆದರೆ ಈಗ ಇದು ಕುಸಿದು ಬಿದ್ದು ಜನರಲ್ಲಿ ಆತಂಕ ಮತ್ತು ಬೇಸರ ಮೂಡಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗಿನ ಸಂಪರ್ಕ ಈ ಸೇತುವೆಯ ಮೂಲಕವೇ ನಡೆದಿರುವುದು ಇತಿಹಾಸ.
ಕಾಳಿ ಸೇತುವೆಯ ಹಿನ್ನಲೆ
ಸೇತುವೆ ಆಗುವ ಮೊದಲು ಕಾರವಾರ ಜನತೆ ಪಕ್ಕದ ಸದಾಶಿವಘಡಕ್ಕೆ ಹೋಗಬೇಕೆಂದರೆ ಬಾರ್ಜ್ ಮೂಲಕ ತೆರಳುತ್ತಿದ್ದರು. ಸರಕು ವಾಹನಗಳು ಕೂಡ ಬಾರ್ಜ್ ಮೂಲಕವೇ ಹೋಗುತ್ತಿತ್ತು.
ಕಾಳಿ ನದಿ ಸೇತುವೆಯನ್ನು (ಕೊಡಿಬಾಗ್ ಬ್ರಿಡ್ಜ್) ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕಾಳಿ ನದಿಗೆ ಅಡ್ಡಲಾಗಿ 29-11-1955 ರಲ್ಲಿ 665 ಮೀಟರ್ ಉದ್ದದ ಸೇತುವೆ ನಿರ್ಮಾಣ ಶುರುವಾಗಿ 1983 ರಲ್ಲಿ ಕಾಮಗಾರಿ ಪೂರ್ಣಗೊಂಡಿತು. ಮೊದಲಿಗೆ ಈ ಸೇತುವೆ ಕಾಮಗಾರಿಯನ್ನು ಒಪ್ಪಿ ಮೂರು ಕಂಪನಿಗಳು ಮುಂದೆ ಬಂದಿತ್ತಾದರೂ ಅಂತಿಮವಾಗಿ ಹೆಸರಾಂತ ನಿರ್ಮಾಣ ಕಂಪನಿಯಾದ ಗ್ಯಾಮನ್ ಇಂಡಿಯಾ ಲಿಮಿಟೆಡ್ (Gammon India Limited) ಕಾಮಗಾರಿ ಉಸ್ತುವಾರಿಯನ್ನು ವಹಿಸಿಕೊಂಡು ಸೇತುವೆಯನ್ನು ನಿರ್ಮಿಸಿತು. ಈ ಸೇತುವೆಯು ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸೇರಿದ್ದು ಕರ್ನಾಟಕ ರಾಜ್ಯವನ್ನು ಗೋವಾದಿಂದ ರಸ್ತೆಯ ಮೂಲಕ ಸಂಪರ್ಕಿಸುತ್ತದೆ. ಕಾಳಿ ನದಿ ಸೇತುವೆಯನ್ನು ಆಗಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್. ಡಿ. ದೇವೇಗೌಡ ಅವರು 5-3-1984 ರಲ್ಲಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಕಾರವಾರ ಮತ್ತು ಜೋಯಿಡ ಕ್ಷೇತ್ರದ ಶಾಶಕರಾಗಿದ್ದ ಪ್ರಭಾಕರ್ ರಾಣೆ ಉಪಸ್ಥಿತರಿದ್ದರು.


ಸದಾಶಿವಗಡ ಕೋಟೆಯು ಈ ಸೇತುವೆಯ ಪಕ್ಕದಲ್ಲಿದ್ದು ನೋಡುಗರಿಗೆ ಸ್ವರ್ಗಕ್ಕೆ ಸೇತುವೆ ನಿರ್ಮಿಸದ ರೀತಿ ತೋರುತಿತ್ತು. ಆದರೆ ಈಗ ಅಂದಾಜು 40 ವರ್ಷ ಹಳೆಯದಾದ ಈ ಸೇತುವೆ ಆಗಸ್ಟ್ 7, 2024 ರಂದು ರಾತ್ರಿ 1.30 ರ ಸುಮಾರಿಗೆ ಅತಿಯಾದ ಮಳೆ ಹಾಗೂ ಇನ್ನಿತರ ತಾಂತ್ರಿಕ ದೋಷಗಳಿಂದ ಮುರಿದುಬಿದ್ದು ಇತಿಹಾಸ ಪುಟ ಸೇರಿರುವುದು ಬೇಸರದ ಸಂಗತಿ.
ಸುದೀರ್ಘ 40 ವರುಷಗಳ ಸೇವೆಯ ನಂತರವೂ ಯಾರಿಗೂ ಹಾನಿ ಮಾಡದೇ ಜನ ಓಡಾಟ ಕಡಿಮೆ ಇರುವ ಸಮಯದಲ್ಲಿ ಹೆಚ್ಚಿನ ನಷ್ಟವಂನ್ನುಟುಮಾಡದೆ ಕಾಳಿ ಮಾತೆಯ ಮಡಿಲನ್ನು ಸೇರಿ ಹಲವಾರು ಜನರ ಪ್ರಾಣವನ್ನು ಉಳಿಸಿ ಗತಕಾಲಕ್ಕೆ ಸೇರಿದೆ.
ಕೆಲವು ವರ್ಷಗಳ ಹಿಂದೆಯಷ್ಟೇ ಈ ಸೇತುವೆಯ ಸನಿಹದಲ್ಲೇ ಸಮಾನಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಇದನ್ನು ಚತುಷ್ಪಥ ಹೆದ್ದಾರಿಯಾಗಿ ಬದಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು, ಒಂದು ಸೇತುವೆಯಲ್ಲಿ ಹೋಗುವುದು ಮತ್ತು ಇನ್ನೊಂದು ಸೇತುವೆಯ ಮೂಲಕ ಬರುವ ಪದ್ದತಿಯನ್ನು ಅಳವಡಿಸಲಾಗಿತ್ತು. ಆದರೆ ಈಗ ಹಳೆಯ ಸೇತುವೆ ಮುರಿದಿದ್ದು ಹೊಸ ಸೇತುವೆ ನಿರ್ಮಾಣಗೊಂಡು ಉಪಯೋಗಕ್ಕೆ ಸಿಗುವುದನ್ನು ನಿರೀಕ್ಷಿಸಬೇಕಾಗಿದೆ.
ಕಾಳಿ ಸೇತುವೆಯ ನಿಜ ಸಂಗತಿಗಳು
✅ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದ ವರ್ಷ 1965
✅ ಆರಂಭಿಕ ನಿರ್ಮಾಣ ವೆಚ್ಚದ ಅಂದಾಜು 1 ಕೋಟಿ ರೂ.
✅ ಸೇತುವೆ ಒಟ್ಟೂ ಉದ್ದ 665.5 ಮೀಟರ್
✅ ಸೇತುವೆ ನಿರ್ಮಿಸಿದವರು: ಗ್ಯಾಮನ್ ಇಂಡಿಯಾ ಕಂಪನಿ
✅ ಸೇತುವೆ ನಿರ್ಮಾಣ: ನ್ಯೂಮಾಟಿಕ್ ಸಿಂಕಿಂಗ್
✅ ಸೇತುವೆಗೆ ಅಡಿಗಲ್ಲು ಹಾಕಿದ್ದು 1974
✅ ಸೇತುವೆಗೆ ಅಡಿಗಲ್ಲು ಹಾಕಿದವರು ಸಿಎಂ ವೀರೇಂದ್ರ ಪಾಟೀಲ್
✅ ಸೇತುವೆ ಉದ್ಘಾಟನೆ ವರ್ಷ: 1984 ಮಾರ್ಚ್ 5
✅ ಸೇತುವೆ ಉದ್ಘಾಟಿಸಿದವರು: ಎಚ್. ಡಿ. ದೇವೆಗೌಡ
✅ ಕಾಮಗಾರಿಗೆ ಒಟ್ಟೂ ವೆಚ್ಚ: 4 ಕೋಟಿ ರು.
✅ ಕಾಮಗಾರಿ ವೇಳೆಯೇ ಪ್ರಾಣ ಕಳೆದುಕೊಂಡವರು: 7 ಮಂದಿ
✅ ಸೇತುವೆಗೆ ಹಿಂಜ್ ಬೇರಿಂಗ್ ಸಮಸ್ಯೆಯಾದ ವರ್ಷ: 2009, ಅಕ್ಟೋಬರ್
✅ ಸೇತುವೆ ದುರಸ್ಥಿಗಾಗಿ 10 ದಿನ ಸಂಚಾರ ಸ್ಟಾಗಿತವಾದ ವರ್ಷ 2010, ಜನವರಿ
✅ ಎನ್. ಎಚ್. ಎ. ಐ.ಗೆ ಸೇತುವೆ ಹಸ್ತಾಂತರ ವರ್ಷ 2013
ಮುರಿದು ಬಿದ್ದಿರುವ ಕಾಳಿ ನದಿ ಸೇತುವೆಯ ಚಿತ್ರಗಳು




ಪ್ರಸ್ತುತ ಸುದ್ದಿ (7/8/2024):
ಮಹತ್ವದ ತಿಳಿವು:
ಕಾಳಿ ಸೇತುವೆ, ಗೋವಾ (GOA) ಮತ್ತು ಕಾರವಾರ (KARWAR) ಅನ್ನು ಸಂಪರ್ಕಿಸುವ ಸೇತುವೆ, ಇಂದು ರಾತ್ರಿ 1:30 ರ ಸುಮಾರಿಗೆ ಕುಸಿದಿದೆ. ಈ ಘಟನೆಯಲ್ಲಿ ಒಂದು ವಾಹನ (ಲಾರಿ) ಸಿಲುಕಿಕೊಂಡ್ಡಿದ್ದು, ಗಾಯಗೊಂಡ ವ್ಯಕ್ತಿಯನ್ನು, ತಮಿಳುನಾಡಿನ ಧರ್ಮಪುರಿಯ 37 ವರ್ಷದ ಬಾಲಮುರುಗನ್ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಸುರಕ್ಷಿತವಾಗಿದ್ದಾರೆ.
ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮತ್ತು ಸಾಧ್ಯವಾದರೆ ಈ ಪ್ರದೇಶವನ್ನು ತಪ್ಪಿಸಲು ನಾವು ವಿನಂತಿಸುತ್ತೇವೆ. ತಕ್ಷಣ ಕಾರ್ಯಚರಣೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ, ಸೇತುವೆಯ ಬಲವತ್ತತೆಯ ಪರಿಶೀಲನೆಗಾಗಿ ಮತ್ತು ಪ್ರದೇಶದಲ್ಲಿನ ಎಲ್ಲಾ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಅಧಿಕೃತ ಪತ್ರವನ್ನು ಕಳುಹಿಸಲಾಗಿದೆ.
ಸುರಕ್ಷಿತವಾಗಿರಿ ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಪ್ಡೇಟ್ಗಳನ್ನು ಅನುಸರಿಸಿ.
Deputy Commissioner Uttara Kannada
ಕಾಳಿ ನದಿ ಸೇತುವೆಯ ಹಳೆಯ ಚಿತ್ರಗಳು:



ಹೊಸದಾಗಿ ನಿರ್ಮಿಸಿದ ಇನ್ನೊಂದು ಸೇತುವೆ ಜೊತೆ ಹಳೆಯ ಸೇತುವೆ:




ಈಗ ನಮ್ಮ ಪ್ರೀತಿಯ, ಹೆಮ್ಮೆಯ ಕೊಡೀಬಾಗ್ ಬ್ರಿಡ್ಜ್ ಇನ್ನು ನೆನಪು ಮಾತ್ರ. ಅದೆಷ್ಟೋ ಸಿನಿಮಾಗಳ ಚಿತ್ರೀಕರಣಕ್ಕೆ ಪ್ರವಾಸಿಗರ ಫೋಟೋಶೂಟ್ ಗೆ ಕಾರಣವಾಗಿದ್ದ ಸೇತುವೆ ಇನ್ನು ಮುಂದೆ ನೋಡಲು ಸಿಗಲ್ಲ.


Leave a Reply