



ದಕ್ಷಿಣ ಆಫ್ರಿಕಾ ಮೂಲದ ಸಿದ್ದಿಗಳು ಪೋರ್ಚುಗೀಸರ ಕಾಲದಲ್ಲಿ ಗೋವಾದ ಮೂಲಕ ಕರ್ನಾಟಕ ತಲುಪಿದವರು. ಪೋರ್ಚುಗೀಸರ ಕಾಲದಲ್ಲಿ ಗುಲಾಮರಾಗಿ ಸಾಗಿಸಲಾದ ಇವರು ಇದೀಗ ಉತ್ತರ ಕನ್ನಡದ ಅನೇಕ ತಾಲ್ಲೂಕುಗಳಲ್ಲಿ ಕಂಡು ಬರುತ್ತಾರೆ. ಮುಖ್ಯವಾಗಿ ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ. ದಕ್ಷಿಣ ಆಫ್ರಿಕಾ ಮೂಲದವರಾದ ಸಿದ್ದಿಯವರು ಸಹಜವಾಗಿಯೇ ನಿಗ್ರೋಯಿಡ್ ಸಂತತಿಯ ಮೈಕಟ್ಟು, ಬಲಾಢ್ಯ ದೇಹ ಹೊಂದಿದವರಾಗಿದ್ದಾರೆ. ಮಿರುಗುವ ಕಪ್ಪು ಬಣ್ಣ ಗುಂಗುರು ಕೂದಲು, ದಪ್ಪ ತುಟಿ, ಮೊಂಡು ಮೂಗು ಇವು ಅವರ ಮುಖ್ಯ ಚಹರೆಗಳು. ಇದೀಗ ಇವರು ಇಸ್ಲಾಂ ಧರ್ಮ, ಕೈಸ್ತ ಧರ್ಮ ಹಾಗೂ ಹಿಂದೂ ಧರ್ಮಗಳ ಅನುಯಾಯಿಗಳಾಗಿದ್ದಾದೆ. ಆದರೆ ಇವು ಯಾವುದೂ ಅವರ ಮೂಲ ಧರ್ಮವಾಗಿರದೆ ಹೊರಗಿನ ಒತ್ತಡದಿಂದ ಹೇರಲಾಗಿರುವಂತಹದ್ದು. ಕೊಂಕಣಿ, ಮರಾಠಿ, ಕನ್ನಡವನ್ನು ಸಾಂದರ್ಭಿಕವಾಗಿ ಮಾತಾಡುವ ಇವದು ಬಹುತೇಕವಾಗಿ ಕೊಂಕಣಿ-ಮರಾಠಿ-ಕನ್ನಡಗಳ ಮಿಶ್ರಭಾಷೆಯನ್ನಾಡುತ್ತಾರೆ.
ಪುಗಡಿ ಕುಣಿತ : ಇವರು ಪ್ರದರ್ಶಿಸುವ ‘ಪುಗಡಿ’ ಕುಣಿತ
ಒಂದು ಪ್ರಭಾವಿ ಕಲೆ. ಉತ್ತರ ಕನ್ನಡದ ಮೀನುಗಾರ ಮುಹಿಳೆಯರಲ್ಲಿ ಹಾಗೂ ಗೌಳಿಗರ ಮಹಿಳೆಯರಲ್ಲಿ ಪ್ರಚಲಿತವಿರುವ ಈ ಕಲೆಯನ್ನು ಸಿದ್ದಿಯರು ಎರವಲು ಪಡೆದಿದ್ದಾರೆ. ಕೊಮಾರಪಂತ ಜನಾಂಗದವರು ಇದೇ ಕಲೆಯನ್ನು ಇನ್ನಷ್ಟು ಭಿನ್ನವಾಗಿ ಪ್ರದರ್ಶಿಸುತ್ತಾರೆ. ಸಮಸಂಖ್ಯೆಯ ಹೆಣ್ಣುಮಕ್ಕಳು ಎದುದು ಬದಿರು ನಿಂತು, ಕೈಯಲ್ಲಿ ಬರಿದಾದ ಕೊಡ ಹಿಡಿದು ಊದುತ್ತಾ ಹಿಮ್ಮೇಳದ ಹಾಡು ಹಾಗೂ ಗುಮಟೆಯ ತಾಳಕ್ಕೆ ತಕ್ಕಂತೆ ಬಾಗಿ ಬಾಗಿ ಕುಣಿಯುತ್ತಾರೆ. ಹಾಡು ಬದಲಾದಾಗ ಹೆಜ್ಜೆಯೂ, ನರ್ತನದ ಗತಿಯೂ ಬದಲಾಗುತ್ತದೆ. ಇದನ್ನು ಒಂದು ರೀತಿಯ ಕೊಡದ ಕುಣಿತವೆಂದೂ ಕರೆಯಬಹುದು. ಇಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ, ಕೊಂಕಣಿ ಸಂಪ್ರದಾಯದ ಕೊಡ ಹಾಗೂ ಹಾಲಕ್ಕಿ ಒಕ್ಕಲಿಗರ ಸಂಪ್ರದಾಯದ ಗುಮಟೆ ಒಟ್ಟಾಗಿ ಸೇರಿರುವುದು. ಕೊಡದ ಊದಿನ ಶಬ್ದದ ಜೊತೆಗೆ ಗುಮಟೆಯ ಲಯಬದ್ಧ ನಾದ ಸೇರಿ ಸುಮಧುರ ಹಿನ್ನೆಲೆಯನ್ನು ಉಂಟುಮಾಡುತ್ತದೆ. ಇತರೆ ಜನಾಂಗಗಳು ಕುಣಿತವನ್ನು ಸಾಮಾನ್ಯವಾಗಿ ಚೌತಿ ಹಬ್ಬದಲ್ಲಿ ಪ್ರದರ್ಶಿಸುತ್ತಾರೆ. ಸಿದ್ದಿಯರು ಚೌತಿ ಹಬ್ಬದ ಜೊತೆಗೆ ಮನರಂಜನಾ ಸಂದರ್ಭದಲ್ಲೂ ಪ್ರದರ್ಶಿಸುತ್ತಾರೆ. ಇದಕ್ಕೆ ಕಾರಣ ಇವರಿಗೆ ಈ ಕಲೆ ಆರಾಧನೆಯ ಒಂದು ಭಾಗ ಎನ್ನುವುದಕ್ಕಿಂತ ಒಂದು ಮನರಂಜನೆ ಎಂಬುದು ಮುಖ್ಯವಾಗುತ್ತದೆ.
ಡಮಾಮಿ ಕುಣಿತ : ಸಿದ್ದಿಯರ ಸ್ವಂತಿಕೆಯನ್ನು ಹೆಚ್ಚು ತೋರಿಸುವ ಒಂದು ಪ್ರಮುಖ ಕಲೆ ‘ಡಮಾಮಿ ಕುಣಿತ’. ಪುಗಡಿ ಕುಣಿತವನ್ನು ಗಣೇಶನ ಹಬ್ಬದಲ್ಲಿ ಕುಣಿದರೆ ಡಮಾಮಿ ನವರಾತ್ರಿಯ ಕಲೆ ಎಂದು ಅವರೇ ಹೆಳುತ್ತಾರೆ. ಆದರೆ ಈ ಡಮಾಮಿ ಕುಣಿತ ಅವರ ಹಿರಿಯರ ಹಬ್ಬಗಳಲ್ಲೂ, ಇತರೆ ಮನರಂಜನೆಯ ಸಂದರ್ಭಗಳಲ್ಲೂ ಪ್ರದರ್ಶಿಸಲ್ಪಡುತ್ತದೆ. ಈ ಕಲೆಯಲ್ಲಿ ಸಿದ್ದಿಗಳ ಸ್ವಂತಿಕೆ ಹೆಚ್ಚಿದೆ ಎಂದು ಹೇಳಲು ಕಾರಣಗಳಿವೆ. ಮುಖ್ಯವಾಗಿ ಮಹಾಲಯ ಅಮಾವಾಸ್ಯೆ ಹಾಗೂ ನವರಾತ್ರಿಯಲ್ಲಿ ಈ ಪ್ರದರ್ಶನ ಕಂಡು ಬರುತ್ತದೆ. ಅಲ್ಲದೆ, ಇವರ ‘ಡಮಾಮಿ’ ಎಂಬ ಚರ್ಮವಾದ್ಯ ಇಲ್ಲಿನ ಯಾವ ಜನಾಂಗಗಳಲ್ಲೂ ಬಳಕೆಯಲಿಲ್ಲ. ಬಹುಶಃ ಇದಕ್ಕೆ ಆಫ್ರಿಕಾದ ಮೂಲವಿರಬಹುದೇ ಎಂಬ ಸಂಶಯಗಳಿವೆ. ಹಿಮ್ಮೇಳದಲ್ಲಿ ಒಬ್ಬನು ಡಮಾಮಿ ಬಡಿಯುವಾಗ ಇಬ್ಬರು ಮಹಿಳೆಯರು ಅಥವಾ ಸೀರೆಯುಟ್ಟ ಗಂಡಸರು ನವಿಲುಗರಿ ಮತ್ತು ತೆಂಗಿನಕಾಯಿಯ ಬುರುಡೆ ಹಿಡಿದು ಕುಣಿಯುತ್ತಾರೆ. ನವಿಲುಗರಿ ನಮ್ಮ ಕೊಡುಗೆಯಾದರೂ ತೆಂಗಿನಕಾಯಿಯ ಬುರುಡೆಯನ್ನು ಅಲ್ಲಾಡಿಸುತ್ತಾ ಕುಣಿಯುವುದು ಸಿದ್ದಿಯರ ಸ್ವಂತ ಕೊಡುಗೆ. ಹೀಗಾಗಿ ಮೂರು ಅಂಶಗಳು ಮುಖ್ಯವಾಗಿ ಈ ಕಲೆಯನ್ನು ಆಫ್ರಿಕಾದ ಕಡೆಗೆ ಸೆಳೆಯುತ್ತವೆ. ಒಂದು; ಹಿರಿಯರ ಪೂಜೆಯ ಸಂದರ್ಭದಲ್ಲಿ ಈ ಕುಣಿತ ನಡೆಯುವುದು. ಎರಡು; ಡಮಾಮಿ ಎಂಬ ಅಪರೂಪದ ವಾದ್ಯ ವಿಶೇಷ. ಮೂರು; ‘ಮುಚಾಕೆ’ ಎಂಬ ತೆಂಗಿನಕಾಯಿಯ ಬುರುಡೆ. ಈ ಕುಣಿತದ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾದವರಿಗೆ ‘ಮೈಮೇಲೆ’ ಬರುವುದೂ ಉಂಟು. ಅಂಥ ಸಂದರ್ಭದಲ್ಲಿ ಸಮಸ್ಯೆಗಳಿಗೆ ಪರಿಹಾರ
ಕೇಳುವ ಪ್ರತೀತಿಯೂ ಉಂಟು. ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ‘ಮೊಹರಂ ಕುಣಿತ’ ಹಾಗೂ ಉತ್ತರ ಕನ್ನಡದ ಮರಾಠಿ ಜನರಲ್ಲಿ ಹೆಚ್ಚು ಪ್ರಚಲಿತವಿರುವ ‘ಹೋಳಿ ಸಿಗ್ಮಾ’ ಕುಣಿತವನ್ನು ಸಿದ್ದಿಯರು ಪ್ರದರ್ಶಿಸುತ್ತಾರಾದರೂ ಇದರಲ್ಲಿ ಹೆಚ್ಚಿನ ವಿಶೇಷವೇನೂ ಇಲ್ಲ.
ಮಾಹಿತಿ ಮೂಲ: ಕರ್ನಾಟಕ ಜನಪದ ಕಲೆಗಳ ಕೋಶ, ಸಂಪಾದಕ – ಹಿ. ಚಿ. ಬೋರಲಿಂಗಯ್ಯ

Leave a Reply