ಸ್ವಚ್ಛ ಭಾರತದ ರಾಯಾಭಾರಿಯಂತಿರುವ ಹಾಲಕ್ಕಿ ಮಹಿಳೆ – ಮೋಹಿನಿ‌ ಗೌಡ

Posted by

·

ಪ್ರಕೃತಿ ಸೊಬಗಿಗೆ, ನಿಸರ್ಗ ಸೌಂದರ್ಯಕ್ಕೆ, ಧುಮ್ಮಿಕ್ಕುವ ಜಲಪಾತಗಳಿಗೆ, ಮನಮೋಹಕ ಕಡಲಿಗೆ ಹೆಸರಾದ ಜಿಲ್ಲೆ ನಮ್ಮ ‌ಉತ್ತರ ಕನ್ನಡ. ಈ ಜಿಲ್ಲೆಯ ಅಂಕೋಲಾ ತಾಲೂಕು ತನ್ನದೇ ಆದ ಕಲೆ, ಸಂಸ್ಕೃತಿ, ಧಾರ್ಮಿಕ ತಾಣ, ಜಾನಪದ ಲೋಕಕ್ಕೆ ‌ಹೆಸರುವಾಸಿ‌ ಆಗಿದೆ. ಈ ತಾಲ್ಲೂಕಿನ ಹಾಲಕ್ಕಿ ಸಮುದಾಯದ ಎರಡು ಮಾಣಿಕ್ಯದಂತಿರುವ ಸುಕ್ರಜ್ಜಿ ಹಾಗೂ ತುಳಸಜ್ಜಿಗೆ ಪದ್ಮಶ್ರೀ ಪ್ರಶಸ್ತಿ ‌ದೊರಕಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ.

ಪ್ರಾಮಾಣಿಕತೆ, ನಿಷ್ಠೆ, ನಂಬಿಕೆಗೆ ಹೆಸರಾದ ಹಾಲಕ್ಕಿ ಸಮುದಾಯ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿ ಪ್ರಸಿದ್ಧಿಯನ್ನು ‌ಪಡೆದಿದೆ. ಇತ್ತಿಚೆಗೆ ಹಾಲಕ್ಕಿ ಮಹಿಳೆಯ ಸ್ವಚ್ಛ ಪರಿಸರ ಪ್ರೇಮದ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಸದ್ದಿಲ್ಲದೆ ಸ್ವಚ್ಛ ಭಾರತದ ಪ್ರಯತ್ನವನ್ನು ಈಕೆ ಸಾಕಾರಗೊಳಿಸುವಂತಿದೆ.

ಬೇಸಿಗೆಕಾಲ ಬಂತೆಂದರೆ ಅಂಕೋಲಾದಲ್ಲಿ ಮಾವಿನ ಹಣ್ಣು, ಕವಳೆ ಹಣ್ಣು, ಮುಳ್ಳಣ್ಣು, ನೇರಳೆ ಹಣ್ಣು ಮುಂತಾದ ಕಾಡಿನ ಹಣ್ಣುಗಳದ್ದೇ ಹಬ್ಬ. ಜೀವನ ನಿರ್ವಹಣೆಗಾಗಿ ಇಲ್ಲಿಯ ಹಳ್ಳಿ ‌ಮಹಿಳೆಯರು ಕಾಡಿನ ಹಣ್ಣುಗಳನ್ನು ಆರಿಸಿ ತಂದು ಅದನ್ನು ಎಲೆಗಳಲ್ಲಿ ಸುರುಳಿ ಮಾಡಿ ಆ ಸುರುಳಿಯಲ್ಲಿ ಹಣ್ಣನ್ನು ತುಂಬಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಗೆ ಆ ಹಣ್ಣುಗಳನ್ನು ಮಾರುತ್ತಾರೆ. ಅದು ಕೇವಲ ಇಂದಿನ ಮಾತಲ್ಲ. ನಾ ಕಂಡಂತೆ ಸುಮಾರು ಮೂವತ್ತು ವರುಷಗಳೇ ಸಂದಿದೆ. ಈ ಕಾಡಿನ ಹಣ್ಣುಗಳನ್ನು ತಿನ್ನಲೆಂದೆ ನಾವು ಅಂಕೋಲ ಬಸ್ ನಿಲ್ದಾಣಕ್ಕೆ ಹೋಗಿದ್ದು ಉಂಟು. ಈ ರೀತಿ ಮಾರಿದ ಹಣ್ಣನ್ನು ತಿಂದ ಪ್ರಯಾಣಿಕರು ಎಲೆಗಳನ್ನು ಕಿಟಕಿಯಿಂದ ಎಸೆಯುವುದು ಮಾಮೂಲಿ ಸಂಗತಿಯಾಗಿತ್ತು. ಸ್ವಚ್ಛತೆಯ ಅರಿವಿದ್ದವರು ಅದನ್ನು ಕಸದ ತೊಟ್ಟಿಗೆ ಎಸೆದರೆ ಇನ್ನುಳಿದಂತೆ ಹೆಚ್ಚಿನ‌ ಜನ ಕಿಟಕಿಯಿಂದ ಹೊರಗೆ‌ಎಸೆಯುವರು.

ಆದರೆ ಅಂಕೋಲಾ ಬಸ್ ನಿಲ್ದಾಣದಲ್ಲೊಬ್ಬಳು ತಾಯಿ ತಾನು ಮಾರಿದ ಹಣ್ಣನ್ನು ತಿಂದ ಜನ ಅದರ ಎಲೆಯನ್ನು ಹೊರಗೆ‌ ಎಸೆದದ್ದನ್ನು‌ ಕಂಡು ಆ ಎಲೆಗಳನ್ನು ಕಸದ ತೊಟ್ಟಿಗೆ ಹಾಕುವ ಕಾರ್ಯ ಮಾಡುವ ಮೂಲಕ ತನಗೆ ದಿನದ‌ ತುತ್ತು ನೀಡಿದ ನಿಲ್ದಾಣವನ್ನು ‌ತಾನೇ ಸ್ವಚ್ಛಗೊಳಿಸಿದ್ದು ಅಭಿನಂದನಾರ್ಹ.

ಯಾವುದೇ ಅಪೇಕ್ಷೆ ಇಲ್ಲದೇ ಸಾರ್ವಜನಿಕ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಡುವ ಹಾಲಕ್ಕಿ ಮಹಿಳೆಯ‌ ಹೆಸರು ಮೋಹಿನಿ ಕೃಷ್ಣ ‌ಗೌಡ. ಅಂಕೋಲಾ ತಾಲೂಕಿನ ‘ಬೆಳಸೆ’ಯವರು. ಪ್ರತಿನಿತ್ಯ ಕಾಡಿಗೆ ಹೋಗಿ ಹಣ್ಣನ್ನು ಆರಿಸಿತಂದು‌ ಅದನ್ನು ಎಲೆಯ ಸುರುಳಿಯಲ್ಲಿ ತುಂಬಿ ಅಂಕೋಲಾ ಬಸ್ ನಿಲ್ದಾಣಕ್ಕೆ ತಂದು ಪ್ರಯಾಣಿಕರಿಗೆ ಮಾರುತ್ತಾರೆ. ನೋಡಲು‌ ಅಪರೂಪವೇ ಆಗಿರುವ ಕಾಡಿನ ಹಣ್ಣನ್ನು ತಂದು ಮಾರುವ ಕಾರ್ಯ ಹಾಗೂ ತಿಂದು ಮುಗಿಸಿದ ನಂತರ ಎಸೆದ ಎಲೆಗಳನ್ನು ‌ಆರಿಸಿ ಕಸದ ತೊಟ್ಟಿಗೆ ಹಾಕುವ ಕಾರ್ಯ ನಿಜಕ್ಕೂ ಶ್ಲಾಘನೀಯ.

ಎಲೆಮರೆಯ ಕಾಯಿಯಂತಿರುವ ಸಾಧಕರನ್ನು‌ ಗುರುತಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಲಕ್ಕಿ ಮಹಿಳೆಯಾದ ಮೋಹಿನಿ ಕೃಷ್ಣ ಗೌಡ ಅವರು ಮಾಡಿದ ಸ್ವಚ್ಛ ಭಾರತ ಕಾಯಕವನ್ನು‌ ಅಭಿನಂದಿಸುವ ಮೂಲಕ ಆಕೆಯ ಸ್ವಚ್ಚತಾ ಕಾರ್ಯದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಿಜಕ್ಕೂ ಮೋಹಿನಿ‌ ಗೌಡ ರವರಂತ ಮಹಿಳೆ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಪರಿಸರ ಪ್ರೇಮ, ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು‌ ತಮ್ಮ ಕಾರ್ಯದ ಮೂಲಕ ಇಂದಿನ ಜನಾಂಗಕ್ಕೆ ತಿಳಿಸಿದ್ದಾರೆ. ಹಾಲಕ್ಕಿ ಸಮುದಾಯದ ಈ ತಾಯಿಯ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಈ‌ ಪ್ರಾಮಾಣಿಕ ಮನಸ್ಸಿಗೆ ನನ್ನದೊಂದು ಸಲಾಂ.

✍️ಅಕ್ಷತಾ ಜಗದೀಶ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading