
ಹಚ್ಚ ಹಸಿರಿನಿಂದ ಆವೃತ್ತವಾಗಿರುವ ಎತ್ತರದ ಗಿರಿ ಶ್ರೇಣಿಯ ಪ್ರದೇಶದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ ನೆಲೆಸಿರುವ ಶ್ರದ್ಧಾ ಭಕ್ತಿಯ ತಾಣ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿದೆ. ಸಿದ್ದಾಪುರ ಪಟ್ಟಣದಿಂದ ಕುಮಟಾ ಮಾರ್ಗದಲ್ಲಿ ಕೇವಲ ೮ ಕಿ.ಮಿ. ಕ್ರಮಿಸಿದರೆ ಕನ್ನಡಾಂಬೆಯ ದೇವಾಲಯ ಕಾಣಸಿಗುತ್ತದೆ. ೩೦೦ ಅಡಿ ಎತ್ತರದ ಭುವನಗಿರಿಯ ಮೇಲಿರುವ ಮೂರು ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ೩೫೦ ಮೆಟ್ಟಿಲುಗಳನ್ನು ಏರಿದ ನಂತರ ತಲುಪಬಹುದಾಗಿತ್ತು. ಕೆಲ ದಶಕಗಳ ಹಿಂದೆ ದೇವಾಲಯದ ಬಯಲಿನವರೆಗೆ ರಸ್ತೆ ನಿರ್ಮಿಸಿರುವುದರಿಂದ ಈಗ ೧೨೫ ಮೆಟ್ಟಿಲುಗಳನ್ನು ಹೊಂದಿರುವುದರಿಂದ ಭಕ್ತಾದಿಗಳಿಗೆ ಅನುಕೂಲವಾಗಿದೆ. ರಸ್ತೆ ಪಕ್ಕದಲ್ಲಿಯೇ ವಿಶಾಲವಾದ ಪುಷ್ಕರಣಿ ಇದೆ.

ಮಲೆನಾಡಿನ ಅಚ್ಚಹಸಿರಿನಿಂದ ಕೂಡಿರುವ ಈ ಮಂದಿರಕ್ಕೆ ಐತಿಹಾಸಿಕ ಹಿನ್ನೆಲೆಯು ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಬಿಳಗಿಯ ರಾಜರ ಪರಂಪರೆಯ ಕೊನೆಯ ಅರಸ ಬಸವೇಂದ್ರ ೧೬೯೨ ರಲ್ಲಿ ಭುವನಗಿರಿಯ ಬೆಟ್ಟದ ಮೇಲೆ ದೇಗುಲವನ್ನು ಹಾಗೂ ಬೆಟ್ಟದ ಕೆಳಗೆ ವಿಶಾಲವಾದ ಪುಷ್ಕರಣಿಯನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಬಿಳಗಿ ಸಾಮ್ರಾಜ್ಯವು ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ, ಉಡುಪಿ ಜಿಲ್ಲೆಯ ಗಂಗೊಳ್ಳಿ ನದಿಯವರೆಗೆ ಹರಡಿತ್ತು. ಬಿಳಗಿಯ ಆಡಳಿತಗಾರರು ಕನ್ನಡ ಭಾಷೆಯ ಧೀಮಂತ ಮತ್ತು ಮಹಾನ್ ಅಭಿಮಾನಿಗಳಾಗಿದ್ದರಿಂದ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಎಂದು ಪುರಾವೆಗಳು ಹೇಳುತ್ತವೆ. ಈ ಪ್ರದೇಶವು ಹವ್ಯಕ ಸಮುದಾಯಕ್ಕೆ ಸೇರಿದ ಜನರಿಂದಾಗಿರುವುದರಿಂದ ದೇವಸ್ಥಾನದ ಆಡಳಿತವನ್ನು ಅವರೆ ನೋಡಿಕೊಳ್ಳುತ್ತಾರೆ.

ಭುವನೇಶ್ವರಿ ಮಾತೆಯ ದೇಗುಲವನ್ನು ಅತ್ಯಂತ ಪುರಾತನ ಮಾದರಿಯ ಶಿಲೆಗಳಿಂದ ನಿರ್ಮಿಸಲಾಗಿದ್ದು, ದೇವಾಲಯದ ಅಕ್ಕಪಕ್ಕದಲ್ಲಿರುವ ನಂದಿಶ್ವರ, ರಂಗನಾಥ ಮುಂತಾದ ವಿಗ್ರಹಗಳು ಸೂಕ್ಷ್ಮ ಕೆತ್ತನೆಗೆ ಸಾಕ್ಷಿಗಳಾಗಿದ್ದು ಆಕರ್ಷಕವಾಗಿದೆ. ಮಾತೆಯ ಎದುರಿಗಿರುವ ಸಿಂಹದ ಮೂರ್ತಿಯು ಅತಿಸೂಕ್ಷ್ಮ ಕೆತ್ತನೆಯಿಂದ ಕಣ್ಮನ ಸೆಳೆಯುತ್ತದೆ. ದೇವಾಲಯದ ಚಾವಣಿಯು ಸಹ ಆಕರ್ಷಕವಾಗಿದೆ.
ಇಲ್ಲಿಯ ಹಿರಿಯರ ಪ್ರಕಾರ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಿಜಯನಗರದ ಅರಸರು ಪ್ರತಿಷ್ಠಾಪಿಸಿರುವ ಭುವನೇಶ್ವರಿ ದೇವಿಯ ವಿಗ್ರಹವಿದ್ದರೂ ಭುವನಗಿರಿಯಲ್ಲಿ ಭುವನೇಶ್ವರಿ ಮಾತೆ ತನ್ನದೇ ಆದ ದೇವಾಲಯವನ್ನು ಹೊಂದಿರುವ ರಾಜ್ಯದ ಏಕೈಕ ಸ್ಥಳವಾಗಿದೆ.
ಭುವನೇಶ್ವರಿ ದೇವಿಯನ್ನು ಕನ್ನಡ ಮಾತೆಯೆಂದು ೪ನೇ ಶತಮಾನದಲ್ಲಿ ಮೊದಲ ಕನ್ನಡ ಸಾಮ್ರಾಜ್ಯ ಕದಂಬರು ಕಲ್ಪಿಸಿದ್ದರು. ಈಗಲೂ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಭುವನೇಶ್ವರಿ ದೇವಿಗೆ ಅಗ್ರ ಪೂಜೆ. ಭುವನೇಶ್ವರಿಗೆ ಇರುವ ದೇವಾಲಯಗಳ ಸಂಖ್ಯೆ ಕಡಿಮೆಯಿದ್ದರೂ ಕೆಲವು ದೇವಾಲಯಗಳು ಐತಿಹಾಸಿಕ ಹಿನ್ನೆಲೆ ಹೊಂದಿದವುಗಳಾಗಿವೆ. ಈ ರೀತಿ ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇಗುಲ ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಒಲಿದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವಾಗಿದೆ.
ರಚನೆ: ಅಕ್ಷತಾ ಜಗದೀಶ್ (ಸಮಯಾ)
Video credits- roving_kannadiga


Leave a Reply