ರೋಚಕ ಸತ್ಯ ಭಾರತ ವಶಪಡಿಸಿಕೊಂಡ ಕೊನೆಯ ದ್ವೀಪ ಕಾರವಾರದ ಅಂಜುದೀವ್‌ ದ್ವೀಪ

Posted by

·

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಅರಬ್ಬೀ ಸಮುದ್ರದ ದ್ವೀಪ ಅಂಜುದೀವ್. ಈ ದ್ವೀಪವನ್ನು 1961ರಲ್ಲಿ ಭಾರತ ಪೋರ್ಚುಗೀಸ್‌‌ರಿಂದ ವಶಪಡಿಸಿ ಕೊಂಡಿತ್ತು. ದ್ವೀಪದ ವಿಸ್ತಾರ 1.5 ಚದರ ಕಿ.ಮೀ. ಇದೆ. 1998ರ ಬಳಿಕ ಇದು ಭಾರತೀಯ ನೌಕಾಪಡೆಯ ಸೊತ್ತಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದೆ.

1947ರಲ್ಲಿ ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರವೂ 1.5 ಚದರ ಕಿಲೋ ಮೀಟರ್‌ಗಳಷ್ಟು ವಿಸ್ತಾರವಾದ ಅಂಜುದೀವ್ ದ್ವೀಪವು 1961ರವರೆಗೂ ಪೋರ್ಚುಗೀಸರ ವಶದಲ್ಲಿತ್ತು. ಪೋರ್ಚುಗೀಸರು ಈ ದ್ವೀಪವನ್ನು 1498ರಲ್ಲೇ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಕೋಟೆ ಮತ್ತು ಚರ್ಚ್ ಅನ್ನು ಅಂಜುದೀವ್ ದ್ವೀಪದಲ್ಲಿ ನಿರ್ಮಿಸಿದ ಪೋರ್ಚುಗೀಸರು, ಗೋವಾವನ್ನು ವಶಪಡಿಸಿಕೊಳ್ಳುವುದನ್ನು ಈ ದ್ವೀಪದಿಂದಲೇ ಪ್ರಾರಂಭಿಸಿದ್ದರು.

ಅಂಜುದೀವ್ ದ್ವೀಪವನ್ನು ವಶಪಡಿಸಿಕೊಳ್ಳಲು ಭಾರತೀಯ ನೌಕಾಪಡೆಯು ಆಗಿನ ಲೆಫ್ಟಿನೆಂಟ್ ಕಮಾಂಡರ್ ಅರುಣ್ ಆಡಿಟ್ಟೊ ನೇತೃತ್ವದಲ್ಲಿ ‘ಆಪರೇಷನ್ ವಿಜಯ್’ ಅನ್ನು 18ನೇ ಡಿಸೆಂಬರ್ 1961ರಂದು ಕೈಗೊಂಡಿತು. ಈ ಸಂದರ್ಭದಲ್ಲಿ ಐಎನ್ಎಸ್ ಮೈಸೂರು ಮತ್ತು ಐಎನ್ಎಸ್ ತ್ರಿಶೂಲ್ ಯುದ್ಧ ನೌಕೆಗಳು ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ವೇಳೆ ಅಂತಿಮವಾಗಿ ಏಳು ನಾವಿಕರು ಪ್ರಾಣ ತ್ಯಾಗವನ್ನು ಮಾಡಿದರೆ, ಇಬ್ಬರು ಅಧಿಕಾರಿಗಳು ಮತ್ತು ಹದಿನೇಳು ನಾವಿಕರು ಗಾಯಗೊಂಡರು. ನೌಕಾ ಕಾರ್ಯಪಡೆ ಅಂಜುದೀವ್ ದ್ವೀಪವನ್ನು ಕೊನೆಗೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆಯನ್ನು ಕೊನೆಗೊಳಿಸಿ, ಭಾರತ ವಿದೇಶಿಗರಿಂದ ವಶಪಡಿಸಿಕೊಂಡ ಕೊನೆಯ ದ್ವೀಪವಾಗಿ ಅಂಜುದೀವ್ ಉಳಿಯಿತು.

ಈ ಹಿಂದೆ ಪೊರ್ಚುಗೀಸರ ಆಡಳಿತ ಇದ್ದ ಸಂದರ್ಭದಲ್ಲಿ ಕಾರವಾರ, ಗೋವಾ ಭಾಗದ ಕ್ರಿಶ್ಚಿಯನ್ನರು ಪ್ರತಿವರ್ಷ ಒಂದು ದಿನ ದ್ವೀಪಕ್ಕೆ ಆಗಮಿಸಿ ಚರ್ಚ್ ನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ತೆರಳುತ್ತಿದ್ದರು. ಅಲ್ಲದೇ ಸ್ಥಳೀಯ ಮೀನುಗಾರರು ಹಾಗೂ ವಿವಿಧ ಸಮುದಾಯದವರು ಇಲ್ಲಿನ ಆರ್ಯದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು.

1991ರಲ್ಲಿ ಕಾರವಾರದಲ್ಲಿ ಕದಂಬ ನೌಕಾನೆಲೆ ಯೋಜನೆ ವ್ಯಾಪ್ತಿಗೆ ದ್ವೀಪ ಹಸ್ತಾಂತರವಾಗಿದ್ದು, ಕಾಮಗಾರಿ ವೇಳೆ ಸಾರ್ವಜನಿಕರಿಗೆ ದ್ವೀಪಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಬಳಿಕ 2000ರ ನಂತರ ಕದಂಬ ನೌಕಾನೆಲೆ ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರಿಗೆ ನಿರ್ಬಂಧವನ್ನು ವಿಧಿಸಿತ್ತು.

ಅದರಂತೆ ಅಲ್ಲಿನ ಚರ್ಚ್ ಹಾಗೂ ದೇವಸ್ಥಾನಗಳಿಗೂ ಸಾರ್ವಜನಿಕರು ಆಗಮಿಸದಂತೆ ನಿಷೇಧವನ್ನು ಹೇರಿದೆ. ಆದರೆ ಆ ಪ್ರದೇಶ ಧಾರ್ಮಿಕ ಭಾವನೆಯಿಂದ ಕೂಡಿದ್ದು, ವರ್ಷಕ್ಕೆ ಎರಡು ಬಾರಿಯಾದರೂ ತಮಗೆ ಪ್ರಾರ್ಥನೆ ಸಲ್ಲಿಸಿ ತೆರಳಲು ಅವಕಾಶ ನೀಡಬೇಕು ಎಂದು ಗೋವಾ ಮೂಲದ ಕ್ರಿಶ್ಚಿಯನ್ ಸಮುದಾಯದವರು ಮನವಿ ಮಾಡಿದ್ದಾರೆ.

ಇಲ್ಲಿ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣವಾಗಿದ್ದ ಅವರ್ ಲೇಡಿ ಆಫ್ ಬ್ರೋಥಾಸ್ ಚರ್ಚ್ ಇದ್ದು, ಪ್ರತಿವರ್ಷ ಫೆಬ್ರುವರಿ 2ರಂದು ಗೋವಾ ಕ್ರಿಶ್ಚಿಯನ್ನರು ಹಾಗೂ ಸ್ಥಳೀಯರು ಸೇರಿ ಫೆಸ್ಟ್ ಆಚರಿಸುತ್ತಿದ್ದರು. ಆದರೆ ನೌಕಾನೆಲೆ ಬಂದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಧಾರ್ಮಿಕ ಆಚರಣೆಗೆ ಅಡ್ಡಿಯುಂಟಾದಂತಾಗಿದೆ. ವರ್ಷಕ್ಕೊಮ್ಮೆ ನೌಕಾ ದಿನದಂದು ನೌಕಾನೆಲೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಅದರಂತೆ ಫೆಸ್ಟ್ ಸಂದರ್ಭದಲ್ಲಿ ತಮಗೆ ದ್ವೀಪಕ್ಕೆ ಆಗಮಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನೌಕಾನೆಲೆ ಅಧಿಕಾರಿಗಳಿಗೆ ಗೊವನ್ನರು ಮನವಿ ಮಾಡಿದ್ದಾರೆ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading