ಮನಸೂರೆಗೊಳಿಸುವ ಸೂರ್ಯಾಸ್ತಗಳು

Posted by

·

ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧

ಕರಾವಳಿ ನಾಡಲ್ಲಿ ಸೂರ್ಯ ತಂಪಾಗುವ ಹೊತ್ತನ್ನು ಕಣ್ತುಂಬಿಸಿಕೊಳ್ಳುವುದೇ ಸೊಗಸು. ಕೆಂಪೇರಿದ ಆಗಸವನ್ನು ನೋಡುತ್ತಾ ಆಯಾಸವನ್ನೆಲ್ಲಾ ಮರೆಯುತ್ತಾ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಇಂಗಿತ ಇದ್ದರೆ ಕರಾವಳಿ ನಾಡಿನ ಈ ತಾಣಗಳತ್ತ ಹೆಜ್ಜೆಹಾಕಿ…

ಜೇನುಕಲ್ಲು ಗುಡ್ಡ

ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಡಿದಾದ ಬೇಡ್ತಿ ಕಣಿವೆ. ಹಸಿರು ಹೊದ್ದುಕೊಂಡ ಪರ್ವತಗಳು. ದಟ್ಟ ಅರಣ್ಯ, ಇಲ್ಲಿ ಸೂರ್ಯಾಸ್ತದ ಸೊಬಗು ವರ್ಣಿಸಲು ಅಸಾಧ್ಯ. ಪ್ರವಾಸಿಗರು ಹೇರಳ ಸಂಖ್ಯೆಯಲ್ಲಿ ಬರುತ್ತಾರೆ. ಯಲ್ಲಾಪುರದಿಂದ ಮಾಗೋಡು ರಸ್ತೆಯಲ್ಲಿ 16 ಕಿಲೋ ಮೀಟರ್ ದೂರದಲ್ಲಿದೆ. ಸೂರ್ಯಾಸ್ತ ವೀಕ್ಷಣೆಗೆ ವೀಕ್ಷಣಾ ಗೋಪುರವನ್ನೂ ನಿರ್ಮಿಸಲಾಗಿದೆ. ಹುಬ್ಬಳ್ಳಿಯಿಂದ 116 ಕಿಲೋ ಮೀಟರ್ ದೂರದಲ್ಲಿದೆ.

ಟಾಗೋರ್ ಕಡಲತೀರ

ಕಾರವಾರ ನಗರದಲ್ಲೇ ಇರುವ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಸೂರ್ಯಾಸ್ತದ ಸೊಬಗು ನೋಡಲು ಪ್ರತಿದಿನ ಸಾವಿರಾರು ಜನರು ಸೇರುತ್ತಾರೆ. ಅರಬ್ಬಿ ಸಮುದ್ರದಲ್ಲಿ ಸೂರ್ಯ ಮುಳುಗಿದಂತೆ ಭಾಸವಾಗುತ್ತದೆ. ಆಗಸ ಹಾಗೂ ಕಡಲಿನಲ್ಲಿ ಬಣ್ಣ ಬಣ್ಣದ ಚಿತ್ತಾರ ಬರೆದಂತೆ ಕಾಣುವ ಈ ನೋಟಕ್ಕೆ ಪ್ರವಾಸಿಗರು ಮುಗಿ ಬೀಳುತ್ತಾರೆ. ಬೆಂಗಳೂರಿಂದ ಕಾರವಾರ 480 ಕಿಲೋ ಮೀಟರ್ ದೂರದಲ್ಲಿದೆ. ಕಾರವಾರ ನಗರಕ್ಕೆ ಹೊಂದಿಕೊಂಡಂತೆ ಕಡಲ ತೀರ ಇದೆ. ವಿಶ್ವಕವಿ ರವೀಂದ್ರನಾಥ ಠಾಗೋರ್ ಈ ಕಡಲತೀರದಲ್ಲಿ ವಿಹರಿಸಿದ್ದು, ಅವರ ಕಾವ್ಯಕ್ಕೂ ಇಲ್ಲಿ ಸ್ಪೂರ್ತಿ ಸಿಕ್ಕಿರುವುದರಿಂದ ಈ ಕಡಲತೀರಕ್ಕೆ ರವೀಂದ್ರನಾಥ ಟಾಗೋರ್ ಕಡಲ ತೀರ ಎಂದು ಹೆಸರಿಸಲಾಗಿದೆ.

ಕಾಳಿ ಸಂಗಮದಲ್ಲಿ ಸೂರ್ಯಾಸ್ತದ ನೋಟ

ಕಾರವಾರದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಸದಾಶಿವಗಡದಲ್ಲಿ ಕಾಳಿ ಹಾಗೂ ಅರಬ್ಬಿ ಸಮುದ್ರದ ಸಂಗಮ ಇದೆ. ಸದಾಶಿವರಾಯ ಕಟ್ಟಿಸಿದ ಕೋಟೆಗಳ ಕುರುಹು ಇರುವ ಸದಾಶಿವಗಡದ ಗುಡ್ಡದ ಮೇಲಿನಿಂದ ಈ ಕಾಳಿ ಸಂಗಮದಲ್ಲಿ ಕಾಣಿಸುವ ಸೂರ್ಯಾಸ್ತದ ನೋಟ ಆಪ್ಯಾಯಮಾನ. ಈ ಸೊಬಗನ್ನು ನೋಡಲು ಸಾಕಷ್ಟು ಜನರು ಆಗಮಿಸುತ್ತಾರೆ. ಎತ್ತರದ ಸ್ಥಳದಲ್ಲಿ ನಿಂತು ಸಮುದ್ರದಲ್ಲಿ ಸೂರ್ಯ ಭಾಸವಾಗುತ್ತದೆ. ಕಾರವಾರದಿಂದ ಗೋವಾಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರದಿಂದ 5 ಕಿಲೋ ಮೀಟರ್ ದೂರದಲ್ಲಿದೆ.

ಓಂ ಬೀಚ್

ಗೋಕರ್ಣದ ಓಂ ಬೀಚ್ ನಲ್ಲಿನ ಸೂರ್ಯಾಸ್ತದ ನೋಟ ಅಪ್ಯಾಯಮಾನ. ಓಂ ಆಕೃತಿಯ ಕಡಲತೀರದಲ್ಲಿ ನಿಂತು ಸಮುದ್ರದಲ್ಲಿ ಮುಳುಗುವಂತೆ ಭಾಸವಾಗುವ ಸೂರ್ಯನನ್ನು ನೋಡಲು ಪ್ರತಿದಿನ ಸಂಜೆ ಸಾಕಷ್ಟು ಜನರು ಆಗಮಿಸುತ್ತಾರೆ. ಗೋಕರ್ಣದಿಂದ 5 ಕಿಲೋ ಮೀಟರ್ ದೂರ ಇದೆ. ಕುಮಟಾ ತಾಲೂಕಿಗೆ ಸೇರಿರುವ ಈ ಕಡಲ ತೀರ ತಾಲೂಕು ಕೇಂದ್ರದಿಂದ 40 ಕಿಲೋ ಮೀಟರ್ ದೂರದಲ್ಲಿದೆ.

ಅಪ್ಸರಕೊಂಡ

ಅಪ್ಸರಕೊಂಡ ಸಮುದ್ರ, ದೇವಾಲಯ, ಜಲಪಾತ ಹಾಗೂ ಸೂರ್ಯಾಸ್ತದ ನೋಟಕ್ಕೆ ಪ್ರಸಿದ್ಧವಾದದ್ದು. ಎತ್ತರದ ಪ್ರದೇಶದಲ್ಲಿ ನಿಂತು ಬಾನು ಹಾಗೂ ಕಡಲಿನಲ್ಲಿ ಬಣ್ಣ ಬಣ್ಣದ ಚಿತ್ತಾರ ಬರೆಯುವ ಸೂರ್ಯಾಸ್ತದ ಸೊಬಗು ನೋಡಿಯೇ ಸವಿಯಬೇಕು. ಇದು ಹೊನ್ನಾವರ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿದೆ. ಹೊನ್ನಾವರ – ಭಟ್ಕಳ ನಡುವಣ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಸರಕೋಡಿನಿಂದ ಕೇವಲ 3 ಕಿಲೋ ಮೀಟರ್ ದೂರದಲ್ಲಿದೆ.

ಭೀಮನವಾರೆ ಗುಡ್ಡ

ಇದು ಸಿದ್ದಾಪುರ ತಾಲೂಕಿನಲ್ಲಿದೆ. ಅಘನಾಶಿನಿ ಕೊಳ್ಳದ ನೋಟ ಇಲ್ಲಿದೆ. ಗುಡ್ಡದ ತುದಿಯಲ್ಲಿ ನಿಂತು ಸೂರ್ಯಾಸ್ತದ ನೋಟ ಅಪ್ಯಾಯಮಾನ, ಮಲೆನಾಡಿನ ಚಿರಾಪುಂಜಿ ಎಂದೇ ಕರೆಯುವ, ನಿಲ್ಕುಂದ ಗ್ರಾಮದಿಂದ 2 ಕಿಲೋ ಮೀಟರ್ ದೂರದಲ್ಲಿ ಭೀಮನವಾರೆ ಗುಡ್ಡ ಇದ್ದು, ಸಮುದ್ರ ಮಟ್ಟದಿಂದ ಸುಮಾರು 636 ಮೀಟರ್ ಎತ್ತರದಲ್ಲಿದೆ. ಎಲ್ಲೆಡೆ ಕಣ್ಣು ಹಾಯಿಸಿದಷ್ಟೂ ದಟ್ಟವಾದ ಅರಣ್ಯ, ಅಘನಾಶಿನಿ ನದಿ ಕಣಿವೆಯ ನೋಟ ಮನಸ್ಸಿಗೆ ಸಂತೋಷ ನೀಡುತ್ತದೆ. ಸೂರ್ಯಾಸ್ತದ ದೃಶ್ಯ ಅನುಪಮ. ಇದು ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪ ಇದೆ. ಸಿದ್ದಾಪುರದಿಂದ 35 ಕಿಲೋ ಮೀಟರ್ ದೂರ ಇದೆ. ಹೆಗ್ಗರಣಿಯಿಂದ 5 ಕಿಲೋ ಮೀಟರ್ ಸಿದ್ದಾಪುರ – ಹೆಗ್ಗರಣಿ – ಶಿರಸಿ ರಸ್ತೆಯಲ್ಲಿ ಸಾಗಿದರೆ ಭೀಮನವಾರೆ ಗುಡ್ಡಕ್ಕೆ ಹೋಗಬಹುದು.

ಕೈಲಾಸ ಗುಡ್ಡ

ಸಮುದ್ರ ಮಟ್ಟದಿಂದ 674 ಮೀಟರ್ ಎತ್ತರದಲ್ಲಿರುವ ಕೈಲಾಸ ಗುಡ್ಡದಲ್ಲಿ ಶಿವನ ಲಿಂಗ ಇದೆ. ಇದು ಭಕ್ತರನ್ನು, ಪ್ರವಾಸಿಗರನ್ನು, ಪರಿಸರ ಆಸಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಬೆಟ್ಟ, ಗುಡ್ಡ, ಕಾಡು, ಅಡಿಕೆ ತೋಟ, ಸೂರ್ಯಾಸ್ತದ ದೃಶ್ಯ ಎಲ್ಲವೂ ಸೇರಿ ಪ್ರವಾಸಿಗರಿಗೆ ಪ್ರಿಯವಾಗುವ ಸಂಗತಿಗಳನ್ನು ಒಳಗೊಂಡಿದೆ. ಗುಡ್ಡದ ತುಂಬ ಆವರಿಸಿರುವ ಹೊಂಬಣ್ಣದ ಬೆಳಕು ಇಲ್ಲಿಯ ವಿಶೇಷ. ದೈತ್ಯಾಕಾರದ ಮರಗಳು, ಔಷದೀಯ ಸಸ್ಯಗಳು, ಕೆಲವು ಪ್ರಾಣಿ – ಪಕ್ಷಿಗಳ ಪ್ರಭೇದಗಳು ಕೂಡಾ ಇಲ್ಲಿವೆ. ಶಿರಸಿ – ಯಲ್ಲಾಪುರ ರಸ್ತೆಯಲ್ಲಿ 10 ಕಿಲೋ ಮೀಟರ್ ಸಾಗಿ ನಂತರ 5 ಕಿಲೋ ಮೀಟರ್ ಕಚ್ಚಾ ರಸ್ತೆಯಲ್ಲಿ ಸಾಗಬೇಕು. ಶಿರಸಿಯಿಂದ 15 ಕಿಲೋ ಮೀಟರ್ ದೂರ ಇದೆ.

ಹನಿ ಬೀಚ್

ಹನಿ ಬೀಚ್ ಸುಂದರವಾದ ಸಣ್ಣ ಕಲ್ಲಿನ ಪರ್ವತಗಳಿಂದ ಸುತ್ತುವರೆದಿದೆ. ಅರಬ್ಬೀ ಸಮುದ್ರದ ಸುಂದರವಾದ ನೋಟ ಮತ್ತು ಪ್ರಕೃತಿಯ ಸುಂದರವಾದ ದೃಶ್ಯ ಇಲ್ಲಿದೆ. ಅದರಲ್ಲೂ ಸೂರ್ಯಾಸ್ತದ ನೋಟದ ಸೊಬಗೇ ಬೇರೆ. ಇದು ಅಂಕೋಲಾ ತಾಲೂಕಿನಲ್ಲಿದ್ದು. ಅಂಕೋಲಾ ತಾಲೂಕು ಕೇಂದ್ರದಿಂದ 8 ಕಿಲೋ ಮೀಟರ್ ದೂರದಲ್ಲಿದೆ.

ನದಿಭಾಗ ಕಡಲತೀರ

ಕಡಲ ಅಲೆಗಳ ನಿರಂತರ ಭೋರ್ಗರೆತ, ತಣ್ಣನೆಯ ಗಾಳಿ, ದೋಣಿಗಳ ತೂಗುಯ್ಯಾಲೆ, ಸೂರ್ಯಾಸ್ತದ ಚೆಲುವು, ವಿಶಾಲವಾಗಿ ಹಬ್ಬಿರುವ ಕಲ್ಲುಬಂಡೆ, ಪ್ರಕೃತಿಯನ್ನು ನೋಡಲು ಎತ್ತರವಾದ ಗುಡ್ಡಗಳು ಹೀಗೆ ಎಲ್ಲವೂ ಇಲ್ಲಿ ಮೇಳೈಸಿವೆ. ಒಂದು ಚಿಕ್ಕ ನದಿ ಸಮುದ್ರವನ್ನು ಸೇರುವ ದೃಶ್ಯ ಆಕರ್ಷಣೀಯ. ಹೀಗಾಗಿ ಇದಕ್ಕೆ ನದಿಬಾಗ ಬೀಚ್ ಎಂದು ಹೆಸರು ಬಂದಿದೆ. ಅಂಕೋಲಾ ತಾಲೂಕಿನಲ್ಲಿದ್ದು, ಅಂಕೋಲದಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ 480 ಕಿಲೋ ಮೀಟರ್ ದೂರದಲ್ಲಿದೆ.

ರಾಮನಗಿಂಡಿ ಕಡಲತೀರ

ರಾಮನಗಿಂಡಿ ಕಡಲ ತೀರದಲ್ಲಿ ಪಶ್ಚಿಮ ಘಟ್ಟ ಹಾಗೂ ಕಡಲ ತೀರ ಎರಡೂ ಇಲ್ಲಿ ಸೇರಿರುವುದರಿಂದ ಇದರ ಸೌಂದರ್ಯಕ್ಕೆ ಇನ್ನಷ್ಟು ಮೆರಗು ತುಂಬಿದೆ. ಕಡಲ ತೀರದಲ್ಲಿ ಸ್ವಚ್ಚಂದ ಪರಿಸರದಲ್ಲಿ ಓಡಾಡುತ್ತಾ, ಗುಡ್ಡಗಳನ್ನು ಇಳಿದು ಕೂಡ ಕಡಲಿನ ಸೌಂದರ್ಯವನ್ನು ಸವಿಯಬಹುದು. ಬಸವರಾಜ ಹತ್ತಿ ದುರ್ಗ ಎಂಬ ಐತಿಹಾಸಿಕ ದ್ವೀಪವನ್ನು ಕೂಡ ಇಲ್ಲಿಂದ ಕಾಣಬಹುದು. ಇಲ್ಲಿನ ಸೂರ್ಯಾಸ್ತದ ಸೊಬಗು ಅಪ್ಯಾಯಮಾನ. ಹೊನ್ನಾವರದಿಂದ 10 ಕಿಲೋ ಮೀಟರ್ ದೂರ ಇದೆ. ಬೆಂಗಳೂರಿನಿಂದ 440 ಕಿಲೋ ಮೀಟರ್ ದೂರ ಇದೆ.

ಕುಡ್ಲೆ ಕಡಲತೀರ

ಏಕಾಂತ ಬಯಸುವ ವಿದೇಶಿಗರಿಂದ ಈ ಕಡಲತೀರ ಹೊರಜಗತ್ತಿಗೆ ಪರಿಚಯವಾಯಿತು.ಗೋಕರ್ಣದ ಓಂ ತೀರದ ಪಕ್ಕದಲ್ಲಿ ಇರುವ ಇದೂ ಕೂಡಾ ಸುಂದರವಾಗಿದೆ. ಯಾವಾಗಲೂ ಪ್ರವಾಸಿಗರಿಂದ ತುಂಬಿಕೊಂಡಿರುತ್ತದೆ. ಓಂ ಹಾಗೂ ಕುಡ್ಲೆ ಕಡಲ ತೀರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೋಮ್ ಸ್ಟೇ, ರೆಸಾರ್ಟ್ ಗಳು, ಹೋಟೆಲ್ ಗಳು ಇವೆ. ಇದು ರಮಣೀಯ ಕಡಲ ತೀರವಾಗಿದ್ದು, ಸೂರ್ಯಾಸ್ತ ವೀಕ್ಷಿಸಲು ಅತ್ಯುತ್ತಮವಾಗಿದೆ. ಗೋಕರ್ಣದಿಂದ 5 ಕಿಲೋ ಮೀಟರ್ ದೂರದಲ್ಲಿದೆ ಹಾಗೂ ಕುಮಟಾ ತಾಲೂಕು ಕೇಂದ್ರದಿಂದ 35 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ 480 ಕಿಲೋ ಮೀಟರ್ ದೂರದಲ್ಲಿದೆ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading