ಉತ್ತರ ಕನ್ನಡ ಎನ್ನುವ ಒಂದು ಜಿಲ್ಲೆಯಿದೆ ಎನ್ನುವುದು “ಇಂದಿಗೂ ಸಹ” ಹಲವರಿಗೆ ಗೊತ್ತೇ ಇಲ್ಲ. ಇದು ವಿಚಿತ್ರವಾದರೂ ಸತ್ಯ.
“ನಿಮ್ಮ ಊರು ಯಾವುದು” ಎಂದು ಕೇಳುತ್ತಾರೆ.
“ಉತ್ತರ ಕನ್ನಡ” ಎನ್ನುತ್ತೇವೆ ನಾವು.
“ಓಹ್.. ನಿಮ್ ಕಡೆ ಬಿಸಿಲು ಜಾಸ್ತಿ ಅಲ್ವಾ? ನಿಮ್ಮ ಊಟ ತುಂಬಾ ಖಾರ. ಆದ್ರೂ ಜೋಳದ ರೊಟ್ಟಿ ಚೆನ್ನಾಗಿರುತ್ತೆ” ಎನ್ನುತ್ತಾರೆ.
“ನೀವು ಹೇಳ್ತಾ ಇರೋದು ಉತ್ತರ ಕರ್ನಾಟಕದ ಬಗ್ಗೆ. ನಮ್ಮದು ಉತ್ತರ ಕನ್ನಡ ಜಿಲ್ಲೆ. ಉತ್ತರ ಕರ್ನಾಟಕ ಬೇರೆ, ಉತ್ತರ ಕನ್ನಡ ಬೇರೆ… ನಮ್ಮದು ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಹೊಂದಿದ ಜಿಲ್ಲೆ…ಮಾರಿಕಾಂಬಾ ದೇವಸ್ಥಾನ.. ರಾಮಕೃಷ್ಣ ಹೆಗಡೆ…” ಹೀಗೆ ಏನೇನೋ ಪ್ರಯತ್ನಪಟ್ಟು ವಿವರಿಸುತ್ತೇವೆ.
“ಅದೆಲ್ಲಿ ಬರುತ್ತೆ?” ಆಶ್ಚರ್ಯದಿಂದ ಕೇಳುತ್ತಾರೆ.
ಲ.ಸಾ.ಅ. ಮತ್ತು ಮ.ಸಾ.ಅ. ಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲು ಕನ್ನಡ ಶಾಲೆಯ ಗಣೀತ ಮೇಷ್ಟ್ರು ಎಷ್ಟು ಕಷ್ಟ ಪಡುತ್ತಾರೋ, ಅಷ್ಟೇ ಕಷ್ಟ ಪಟ್ಟು ವಿವರಿಸಲು ನೋಡುತ್ತೇವೆ. ಊಹೂಂ, ಆದರೂ ಸಹ ಕೆಲವರಿಗೆ ಅರ್ಥವಾಗುವುದೇ ಇಲ್ಲ. ತೀರಾ ವಿವರಿಸಿದ ಮೇಲೆ, “ಓಹ್ ಗೊತ್ತಾಯ್ತು ಬಿಡಿ, ಮಂಗಳೂರು ಹತ್ರ… ಮೀನು ತಿನ್ನೋವ್ರು ನೀವು” ಎಂದು ಬಿಡುತ್ತಾರೆ !
ಈ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ. ಕೇವಲ ಬೆಂಗಳೂರು ಮಾತ್ರವಲ್ಲ, ದಕ್ಷಿಣ ಕರ್ನಾಟಕದ ಜಿಲ್ಲೆಗಳ ಹಲವು ಜನರಿಗೆ ಉತ್ತರ ಕನ್ನಡದ ಬಗ್ಗೆ ಗೊತ್ತಿಲ್ಲ. ತೀರಾ ವಿಚಿತ್ರ ಎಂದರೆ ಕೆಲವು ಗೌರವಾನ್ವಿತ ಲೇಖಕರ ಕಥೆಗಳಲ್ಲೂ ಸಹ ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಒಂದೇ ಎನ್ನುವ ರೀತಿಯ ವರ್ಣನೆಗಳಿವೆ !
“ಉತ್ತರ ಕನ್ನಡ ಎನ್ನುವುದು ಒಂದು ಪ್ರತಿಷ್ಠಿತ ಜಿಲ್ಲೆ. ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಅರಣ್ಯ ಪ್ರದೇಶವನ್ನು “ಇನ್ನೂ” ಹೊಂದಿರುವ ಸಂಪದ್ಭರಿತ ಜಿಲ್ಲೆ. 85 ಪರ್ಸೆಂಟ್ ಗೂ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ಸುಶೀಕ್ಷಿತ ಜಿಲ್ಲೆ. ಜನಸಂಖ್ಯೆ ಕೇವಲ ಹದಿನೈದು ಲಕ್ಷ ವಾದರೂ ಎಲ್ಲ ಕ್ಷೇತ್ರಗಳಲ್ಲೂ ಸಾಧಕರನ್ನು ನಾಡಿಗೆ ನೀಡಿದ ಜಿಲ್ಲೆ….. ಸಾಮಾನ್ಯವಾಗಿ ನಮ್ಮ ಜಿಲ್ಲೆಯ ಹೆಚ್ಚಿನ ಜನರು ಶಾಂತ ಸ್ವಭಾವದವರು. ಅನಗತ್ಯ ಡಂಗುರ ಬಾರಿಸುವವರಲ್ಲ… ಬಹುಶಃ ಅದಕ್ಕೇ ನಿಮಗೆ ಗೊತ್ತಿಲ್ಲ..” ಹೀಗೆ ಪ್ರತಿಯೊಬ್ಬರ ಕಿವಿಯನ್ನೂ ಹಿಂಡಿ ಹೇಳಬೇಕು ಎನ್ನುವ ಆಸೆಯಾಗುತ್ತದೆ.
ಆದರೆ ಅದು ಸಾಧ್ಯವಿಲ್ಲ. ಆದ್ದರಿಂದಲೇ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಸುಮ್ಮನಾಗಿಬಿಡಬೇಕು !
✍️ ವಿನಯ್ ಭಟ್


Leave a Reply