ಶ್ರೀ ಕ್ಷೇತ್ರ ಗುಂಡಬಾಳ | ಯಕ್ಷ ಕಾಶಿ | ಯಕ್ಷಗಾನದ ತವರು

Posted by

·

ಈಗ ನೀವು ಈ ಮಾಹಿತಿಯನ್ನು ಸುಗ್ಗಿ ಸಂಪದ ಜಾಲತಾಣದಲ್ಲಿ ಕೇಳಬಹುದಾಗಿದೆ. 🎧

ವರ್ಷದಲ್ಲಿ ಐದು ತಿಂಗಳು, ಒಂದೇ ಕ್ಷೇತ್ರದ ಒಂದೇ ರಂಗಸ್ಥಳದಲ್ಲಿ ನಿರಂತರ ಹರಕೆಯ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ಕ್ಷೇತ್ರವೆಂದರೆ ಅದು ಗುಂಡಬಾಳ ಕ್ಷೇತ್ರ. ಈ ಕ್ಷೇತ್ರದಲ್ಲಿ ಮುಂದಿನ ಎಂಟು ವರ್ಷಗಳ ವರೆಗಿನ ಹರಕೆಯ ಸೇವೆಯಾಟವು ಈಗಾಗಲೇ ಮುಂಗಡವಾಗಿ ಬುಕ್ಕಿಂಗ್ ಆಗಿದೆ! ಹೌದು, ಗುಂಡಬಾಳ ಕ್ಷೇತ್ರ ಭಕ್ತರಿಗೆ ಹರಕೆಯ ತಾಣವಾದರೆ, ಕಿರಿಯ ಕಲಾವಿದರಿಗೆ ಕಲಿಕೆಯ ತಾಣ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿರುವ ಗುಂಡಬಾಳ ಕ್ಷೇತ್ರದ ಆರಾಧ್ಯ ದೇವತೆ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ.

ದೇಗುಲದ ಸರಿ ಎದುರಿನ ಬಯಲಿನಲ್ಲಿರುವ ರಂಗಸ್ಥಳದಲ್ಲಿ ಯಕ್ಷಗಾನ ಪ್ರಿಯನಾದ ಮುಖ್ಯಪ್ರಾಣ ದೇವರಿಗೆ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಿರುತ್ತದೆ. ಶರಾವತಿ ನದಿಯ ಉಪನದಿಯಾದ ಗುಂಡಬಾಳ ನದಿಯ ತಪ್ಪಲಿನ ಪಶ್ಚಿಮ ಘಟ್ಟದಲ್ಲಿರುವ ಈ ತಾಣವು ಯಕ್ಷ ಕಾಶಿ ಮತ್ತು ಯಕ್ಷಗಾನದ ತವರು ಎಂದೇ ಪ್ರಸಿದ್ಧಿ ಪಡೆದಿದೆ.

ಗುಂಡಬಾಳ ನದಿ

ಖಾಯಂ ಚೌಕಿ ರಂಗಸ್ಥಳವನ್ನು ಹೊಂದಿರುವ ಮತ್ತು ಯಕ್ಷಗಾನದ ಸೀಸನ್‌ನಲ್ಲಿ ಪ್ರತಿದಿನವೂ ತಪ್ಪದೇ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ತಾಣವೂ ಇದಾಗಿದೆ. ಇಂತಹ ರಂಗಭೂಮಿ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿಯೂ ಎಲ್ಲೂ ಇಲ್ಲ ಎನ್ನುತ್ತಾರೆ ಇಲ್ಲಿನ ದೇವಾಲಯದ ಟ್ರಸ್ಟಿಗಳಲ್ಲಿ ಒಬ್ಬರಾದ ಮಾರುತಿ ಪ್ರಭು.

ಯಕ್ಷಗಾನವೆನ್ನುವುದು ಇಲ್ಲಿ ವ್ಯವಹಾರಕ್ಕಾಗಿ ನಡೆಯುತ್ತಿಲ್ಲ, ತಲೆತಲಾಂತರಗಳಿಂದ ಭಕ್ತಿಯಿಂದ ನಡೆದು ಬಂದಿದೆ, ಮತ್ತು ಇನ್ನೂ ನಡೆಯುತ್ತಲೇ ಇದೆ. ಸಂಕಷ್ಟ ಎದುರಾದಾಗ ಇಲ್ಲಿ ಹರಕೆ ಹೊತ್ತು ಪರಿಹಾರ ಕಂಡುಕೊಂಡ ಸಾಕಷ್ಟು ಉದಾಹರಣೆಗಳನ್ನು ದೇವಾಲಯದ ಆಡಳಿತ ಮಂಡಳಿಯವರು ನೀಡುತ್ತಾರೆ. ಸುಮಾರು ಅಂದಾಜು 500 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಿದೆ.

ಗುಂಡಬಾಳ ಮೇಳದಲ್ಲಿ ಕಲಿಯುವ ಕಿರಿಯ ಕಲಾವಿದರೂ ಇದ್ದಾರೆ, ಹಿರಿಯ ಕಲಾವಿದರೂ ಇದ್ದಾರೆ. ಕಿರಿಯರು ಇಲ್ಲಿ ಶ್ರದ್ಧೆಯಿಂದ ಯಕ್ಷಗಾನ ಕಲಿತರೆ ಮುಂದೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂಬುದಕ್ಕೆ ಹಲವು ತಲೆಮಾರುಗಳ ಯಕ್ಷ ಸಾಧಕರೇ ಸಾಕ್ಷಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಬಡಗುತಿಟ್ಟಿನ ಕಲಾವಿದರೆಲ್ಲ ಇಲ್ಲಿ ಹೆಜ್ಜೆ ಹಾಕಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮ ಹೆಗಡೆ, ಕೃಷ್ಣ ಯಾಜಿಯವರಂಥ ಅತಿರಥ ಮಹಾರಥರು ಇಲ್ಲಿ ಯಕ್ಷಗಾನದ ಹರಕೆಯ ಸೇವೆ ಸಲ್ಲಿಸಿದ್ದಾರೆ. ಕರ್ಕಿ ಹಾಸ್ಯಗಾರ ಮೇಳದ ಕಲಾವಿದರು ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಲಾವಿದರು ಇಲ್ಲಿ ಹರಕೆಯ ಸೇವೆ ಸಲ್ಲಿಸಿದ್ದಾರೆ. ಈಗಲೂ ವೃತ್ತಿಪರ ಮೇಳಗಳಿಗೆ ಉತ್ತಮ ಕಲಾವಿದರನ್ನು ಇಲ್ಲಿಂದಲೇ ಆಯ್ಕೆ ಮಾಡಿ ಸೇರ್ಪಡೆಗೊಳಿಸಲಾಗುತ್ತಿದೆ.

ನಾಟಕಗಳ ಪ್ರದರ್ಶನವು ಮಾರ್ಗಶಿರ ಮಾಸದಲ್ಲಿ (ಹಿಂದೂ ಕ್ಯಾಲೆಂಡರ್ ತಿಂಗಳು), ಸಾಮಾನ್ಯವಾಗಿ ನವೆಂಬರ್ ಅಂತ್ಯ ಅಥವಾ ಡಿಸೆಂಬರ್‌ನಲ್ಲಿ, ಮಹಾಗಣಪತಿಯ ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಮೂರ್ತಿಯನ್ನು ಮುಖ್ಯ ದೇವಾಲಯದಿಂದ ಯಕ್ಷಗಾನ ವೇದಿಕೆಗೆ ಸ್ಥಳಾಂತರಿಸಲಾಗುತ್ತದೆ. ಸುಮಾರು ಆರು ತಿಂಗಳ ನಂತರ, ವೈಶಾಖ ಮಾಸದಲ್ಲಿ (ಸಾಮಾನ್ಯವಾಗಿ ಮೇ ತಿಂಗಳಲ್ಲಿ) ಮಹಾಗಣಪತಿ ಮೂರ್ತಿಗೆ ‘ಮಹಾಮಂಗಳಾರತಿ’ ನೆರವೇರಿಸಿ ನಾಟಕಗಳ ಪ್ರದರ್ಶನವನ್ನು ನಿಲ್ಲಿಸಲಾಗುತ್ತದೆ. ಮಳೆಗಾಲದಲ್ಲಿ ಯಾವುದೇ ನಾಟಕಗಳು ನಡೆಯುವುದಿಲ್ಲ. ಭಕ್ತರು ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸುತ್ತಾರೆ.

ಗುಂಡಬಾಳ ಕ್ಷೇತ್ರದಲ್ಲಿನ ಹರಕೆಗಳು:

ಈ ಕ್ಷೇತ್ರದಲ್ಲಿ ಯಕ್ಷಗಾನ ಆಡಿಸುವುದು ಒಂದು ಹರಕೆಯಾದರೆ, ಯಕ್ಷಗಾನ ನೋಡುವುದು ಸಹ ಇಲ್ಲಿ ಒಂದು ಹರಕೆಯೇ. ಒಂದು, ಅಥವಾ ಐದು ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತೇನೆ ಎಂದೂ ಇಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಇಲ್ಲಿಯೇ ಪ್ರಥಮವಾಗಿ ಕುಣಿದು ರಂಗಪ್ರವೇಶ ಮಾಡುವ ಬಗ್ಗೆಯೂ ಹರಕೆ ಹೊತ್ತುಕೊಂಡು, ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಕುಣಿದು ಧನ್ಯರಾಗುತ್ತಾರೆ. ರಂಗಸ್ಥಳದ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳುವ ಬಗ್ಗೆಯೂ ಹರಕೆ ಹೊತ್ತುಕೊಳ್ಳುತ್ತಾರೆ.

ಯಕ್ಷಗಾನ ಹರಕೆ ಸಲ್ಲಿಸುವ ವಿಧಾನ:

ಗುಂಡಬಾಳ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆ ಮಾಡಿಸಿ, ಅರ್ಚಕರ ಬಳಿ ಸಂಕಲ್ಪ ಹೇಳಬೇಕು. ಬಳಿಕ ದೇವಸ್ಥಾನದ ಕಚೇರಿಯಲ್ಲಿ ಯಕ್ಷಗಾನ ಬುಕಿಂಗ್‌ ಮಾಡಬೇಕು. ಸರದಿಯ ದಿನಾಂಕ ಬಂದಾಗ, ಕಚೇರಿಯಿಂದ ಬುಕಿಂಗ್ ಮಾಡಿದವರಿಗೆ ತಿಳಿಸಲಾಗುತ್ತದೆ. ಆ ದಿನ, ಅಂದರೆ ಯಕ್ಷಗಾನ ಪ್ರದರ್ಶನವಾಗುವ ದಿನ, 9900 ರೂಪಾಯಿ ವೀಳ್ಯದ ಹಣವನ್ನು ದೇವಸ್ಥಾನದ ಕೌಂಟರ್‌ನಲ್ಲಿ ನೀಡಿ ಸೇವೆಯಾಟವನ್ನು ಆಡಿಸಬೇಕು. ಹೀಗೆ ಹರಕೆಯ ಸಂಪ್ರದಾಯ ನಡೆದು ಬಂದಿದೆ.

ಆರಂಭದಲ್ಲಿ ದಿನಕ್ಕೆ ಒಂದೇ ಯಕ್ಷಗಾನ ನಡೆಯುತ್ತಿತ್ತು. ಆಗ ಹರಕೆಯ ಆಟ ಆಡಿಸಲು ತುಂಬಾ ವರ್ಷಗಳ ವರೆಗೆ ಕಾಯಬೇಕಿತ್ತು. 2002 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಈ ಕ್ಷೇತ್ರಕ್ಕೆ ಬಂದಿದ್ದಾಗ ದಿನಕ್ಕೆ ಎರಡು ಆಟ ಆಡಿಸುವಂತೆ ಸಲಹೆ ನೀಡಿದ್ದರು. ಅದರಂತೆ ದೇವರಲ್ಲಿ ಈ ಬಗ್ಗೆ ಪ್ರಸಾದ ಕೇಳಿದ ಬಳಿಕ, ದಿನಕ್ಕೆ ಇಬ್ಬರು ಹರಕೆದಾರರ ಹರಕೆಯಾಟವು ಪ್ರದರ್ಶನವಾಗುತ್ತಿದೆ. ಆದರೂ ಈಗ ಹೊಸದಾಗಿ ಯಕ್ಷಗಾನ ಹರಕೆ ಹೊತ್ತವರಿಗೆ ಯಕ್ಷಗಾನ ಪ್ರದರ್ಶನವಾಗಬೇಕೆಂದರೆ ಆರು-ಎಂಟು ವರ್ಷ ಕಾಯಲೇಬೇಕು. ಅಷ್ಟು ಆಟಗಳು ಬುಕ್ಕಿಂಗ್ ಆಗಿವೆ ಎನ್ನುತ್ತಾರೆ ಗುಂಡಬಾಳ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ಪ್ರಭಾಕರ ಚಿಟ್ಟಾಣಿಯವರು.

ಕ್ಷೇತ್ರಕ್ಕೆ ತಲುಪುವ ಮಾರ್ಗ

ಹೇಗೆ ತಲುಪುವುದು?

ಹೊನ್ನಾವರದಿಂದ ಗುಂಡಬಾಳಕ್ಕೆ 15 ಕಿಲೋಮೀಟರ್ ದೂರವಿದೆ. ಹೊನ್ನಾವರ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 9 ಕಿ.ಮೀ. ಸಾಗಿದ ನಂತರ ಹಡಿನಬಾಳ ಸಿಗುತ್ತದೆ. ಹಡಿನಬಾಳದಲ್ಲಿ ಗುಂಡಬಾಳದ ಮಹಾದ್ವಾರವಿದ್ದು, ಅಲ್ಲಿಂದ 6 ಕಿ.ಮೀ. ಸಾಗಿದರೆ ಶ್ರೀ ಗುಂಡಬಾಳ ಕ್ಷೇತ್ರವನ್ನು ತಲುಪಬಹುದು. ಹೊನ್ನಾವರ ಬಸ್‌ ನಿಲ್ದಾಣದಿಂದ ಬೆಳಿಗ್ಗೆಯಿಂದ ಸಂಜೆ 7 ಗಂಟೆಯ ವರೆಗೆ ಬಸ್‌ ವ್ಯವಸ್ಥೆ ಇದೆ. ಖಾಸಗಿ ಹಾಗೂ ಬಾಡಿಗೆ ವಾಹನಗಳ ಮೂಲಕವೂ ಇಲ್ಲಿಗೆ ತಲುಪಬಹುದು.

ಶ್ರೀ ಕ್ಷೇತ್ರದ ದೂರವಾಣಿ – 08387200441.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading